Kannada News  /  Karnataka  /  Assembly Election 2023 First List Of Congress Candidates On Ugadi Says Ex Cm Siddaramaiah
ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Siddaramaiah on Congress List: ಯುಗಾದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವಿಪಕ್ಷ ನಾಯಕ ಸಿದ್ದರಾಮಯ್ಯ

18 March 2023, 17:19 ISTHT Kannada Desk
18 March 2023, 17:19 IST

ರಾಜ್ಯ ವಿಧಾನಸಭೆಗೆ ಏಪ್ರಿಲ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾರ್ಚ್ 22 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಜನತಾದಳ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳ ಹೆಸರು ಘೋಷಣೆೆ ಬಾಕಿ ಇದೆ. ಕೆಲವು ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚಿನ ಆಕಾಂಕ್ಷಿಗಳು ಇರುವುದೇ ಪಟ್ಟಿ ಘೋಷಣೆ ತಡವಾಗಿರುವುದಕ್ಕೆ ಕಾರಣ ಎಂದು ಹೇಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್ 22 ರಂದು ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಯುಗಾದಿ ಹಬ್ಬದ ದಿನವನ್ನ ಕನ್ನಡಿಗರು ಹೊಸ ವರ್ಷವೆಂದು ಆಚರಿಸುತ್ತಾರೆ. ಅಂದೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

ದೆಹಲಿಯಲ್ಲಿ ನಿನ್ನೆ (ಮಾ.17, ಶುಕ್ರವಾರ) ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಕಾರ್ಯತಂತ್ರ ಮತ್ತು ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ರಾಜ್ಯ ಮಟ್ಟದ ‘ಯುವ ಕ್ರಾಂತಿ’ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಮಾರ್ಚ್ 20 ರಂದು ಬೆಳಗಾವಿಗೆ ಬರಲಿದ್ದಾರೆ. ಇದರ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಚರ್ಚೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯುಗಾದಿ ಹಬ್ಬದ ದಿನದಂದು ಅಂದರೆ ಮಾರ್ಚ್ 22 ರಂದು ಬೆಳಿಗ್ಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯು ದೆಹಲಿಯಲ್ಲಿ ಸಭೆ ನಡೆಸಿತ್ತು. ವರದಿಗಳ ಪ್ರಕಾರ 71 ಹಾಲಿ ಕಾಂಗ್ರೆಸ್ ಶಾಸಕರನ್ನು ಒಳಗೊಂಡಂತೆ 125 ಅಭ್ಯರ್ಥಿಗಳ ಮೊದಲ ಪಟ್ಟಿಗೆ ಚುನಾವಣಾ ಸಮತಿ ಅಂತಿಮಗೊಳಿಸಿದೆ.

ಪಕ್ಷದ ಸ್ಕ್ರೀನಿಂಗ್ ಸಮಿತಿಯು ಈ ತಿಂಗಳ ಆರಂಭದಲ್ಲಿ ಟಿಕೆಟ್ ಆಕಾಂಕ್ಷಿಗಳ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ್ದು, ಸಮಿತಿಯ ಅಭಿಪ್ರಾಯವನ್ನು ಅಂತಿಮ ಪರಿಶೀಲನೆಗಾಗಿ ಎಐಸಿಸಿಯ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿತ್ತು.

ನಿನ್ನೆ ರಾತ್ರಿ ಸುಮಾರು 3 ಗಂಟೆಗಳ ಸುದೀರ್ಘ ಸಭೆಯ ನಂತರ ಮಾಹಿತಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯ ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳ ಬಗ್ಗೆ ಸಿಇಸಿ ಚರ್ಚಿಸಿ ಹೆಸರುಗಳನ್ನು ಅನುಮೋದಿಸಿದ್ದು, ಎಐಸಿಸಿ ಪಟ್ಟಿಯನ್ನು ಪ್ರಕಟಿಸುತ್ತದೆ ಎಂದು ಹೇಳಿದ್ದಾರೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗಬಹುದು ಎಂದ ಡಿಕೆಶಿ, ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಂಬಂಧ ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ವೀರಪ್ಪ ಮೊಯ್ಲಿ, ಡಾ ಜಿ ಪರಮೇಶ್ವರ್, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಶಾಸಕರು ಇರುವ ಹರಿಹರ (ಆರ್.ರಾಮಪ್ಪ), ಕುಂದಗೋಳ (ಕುಸುಮಾ ಶಿವಳ್ಳಿ), ಪಾವಗಡ (ವೆಂಕಟರಮಣಪ್ಪ), ಲಿಂಗಸುಗೂರು (ಡಿಎಸ್ ಹೂಲಗೇರಿ), ಅಫಜಲಪುರ (ಎಂ.ವೈ.ಪಾಟೀಲ್) ಹಾಗೂ ಬೆಂಗಳೂರಿನ ಪುಲಿಕೇಶಿನಗರ (ಅಖಂಡ ಶ್ರೀನಿವಾಸ ಮೂರ್ತಿ) ಅಭ್ಯರ್ಥಿಗಳನ್ನು ಪರಿಶೀಲನಾ ಸಮಿತಿ ಶಿಫಾರಸು ಮಾಡಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಹೊಸಕೋಟೆ ಹಾಗೂ ಮುಳಬಾಗಿಲು ಶಾಸಕ ಎಚ್ ನಾಗೇಶ್ ಅವರಿಗೆ ಮಹದೇವಪುರದಲ್ಲಿ ಟಿಕೆಟ್ ಸಿಗಲಿದೆ ಎಂದು ಮೂಲಗಳು ಹೇಳಿವೆ.