ಕನ್ನಡ ಸುದ್ದಿ  /  Karnataka  /  Bbmp Budget 2023: Bbmp Budget Presentation Today Budget Presented By Officials Live Broadcast Of Budget And Other Details

BBMP Budget 2023: ಇಂದು ಬಿಬಿಎಂಪಿ ಬಜೆಟ್‌ ಮಂಡನೆ; ಅಧಿಕಾರಿಗಳೇ ಮಂಡಿಸುವ ಆಯ-ವ್ಯಯದ ನೇರ ಪ್ರಸಾರ ಮತ್ತು ಇತರೆ ವಿವರ

BBMP Budget 2023: ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಇಂದು ಪೂರ್ವಾಹ್ನ 11.30ಕ್ಕೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ನಡೆಯಲಿದೆ. ಸಾರ್ವಜನಿಕರಿಗೆ ಬಜೆಟ್‌ ಮಂಡನೆ ಸ್ಥಳಕ್ಕೆ ಪ್ರವೇಶ ಇರಲ್ಲ. ಆದರೆ, ಇದರ ಆನ್‌ಲೈನ್‌ ನೇರ ಪ್ರಸಾರವೂ ಇರಲಿದೆ.

ಬಿಬಿಎಂಪಿ (ಸಾಂಕೇತಿಕ ಚಿತ್ರ)
ಬಿಬಿಎಂಪಿ (ಸಾಂಕೇತಿಕ ಚಿತ್ರ) (HT)

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲ. ಆದ್ದರಿಂದ ಕಳೆದ ಎರಡು ವರ್ಷವೂ ಅಧಿಕಾರಿಗಳೇ ಆಯ-ವ್ಯಯ ಮಂಡಿಸಿದ್ದರು. ಈ ವರ್ಷವೂ ಅದೇ ಸಂಪ್ರದಾಯ ಮುಂದುವರಿದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಬೇಕಾದ ಕಾರ್ಯಗಳು, ಕಾಮಗಾರಿಗಳು ಅನೇಕ ಇವೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆ, ಸುವ್ಯವಸ್ಥಿತ ರಸ್ತೆ ಸೇರಿ ನಿರೀಕ್ಷೆಗಳು ಹಲವಾರು ಇದ್ದರೂ ಬಜೆಟ್‌ನಲ್ಲಿ ಏನೇನು ಘೋಷಣೆ ಆಗಲಿವೆ ಎಂಬ ಕುತೂಹಲವಿದೆ.

ಕಳೆದ ಸಲ ಮಧ್ಯರಾತ್ರಿ ಬಜೆಟ್‌ ಮಂಡನೆ ಆಗಿತ್ತು. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಈ ಸಲ ಬಜೆಟ್‌ ಮಂಡನೆ ಪುರಭವನಕ್ಕೆ ಶಿಫ್ಟ್‌ ಆಗಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಇಂದು ಪೂರ್ವಾಹ್ನ 11.30ಕ್ಕೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ನಡೆಯಲಿದೆ. ಸಾರ್ವಜನಿಕರಿಗೆ ಬಜೆಟ್‌ ಮಂಡನೆ ಸ್ಥಳಕ್ಕೆ ಪ್ರವೇಶ ಇರಲ್ಲ. ಆದರೆ, ಇದರ ಆನ್‌ಲೈನ್‌ ನೇರ ಪ್ರಸಾರವೂ ಇರಲಿದೆ.

ರಾಜ್ಯ ಸರ್ಕಾರದ ಮುಂಗಡಪತ್ರದಲ್ಲಿ ಬೆಂಗಳೂರು ಅಭಿವೃದ್ಧಿಗೆ 6,000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದ್ದರಿಂದ ಬಿಬಿಎಂಪಿ ಬಜೆಟ್‌ ಗಾತ್ರ 10,000 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ಅನುದಾನ, ವಸತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣ ಹಾಗೂ ಶ್ರವಣ ಕುಮಾರ ಹೆಸರಿನಲ್ಲಿ ನಿರಾಶ್ರಿತ ವೃದ್ಧರಿಗೆ ವಸತಿ ವ್ಯವಸ್ಥೆ ಸೇರಿ ಪ್ರಮುಖ ಯೋಜನೆ ಘೋಷಣೆ ಆಗುವ ನಿರೀಕ್ಷೆ ಇದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ನೀಡುವುದು, ಪ್ರವಾಹ ತಡೆಗೆ ಚರಂಡಿ ಅಭಿವೃದ್ಧಿಗಾಗಿ 1800 ಕೋಟಿ ರೂಪಾಯಿ ಅನುದಾನ , ಕೆರೆಗಳಿಗೆ ತಡೆ ಗೇಟು ನಿರ್ಮಾಣ, ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ 273 ಕೋಟಿ ರೂಪಾಯಿ, ಪ್ರಮುಖ 74 ಜಂಕ್ಷನ್ಗಳ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಿರುವ ನಿರೀಕ್ಷೆ ಇದೆ.

ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 5 ಕಿಮೀ ಎಲಿವೇಟೆಡ್ ರಸ್ತೆ, 110 ಗ್ರಾಮಗಳ ರಸ್ತೆಗಳ ಪುನರ್ ನಿರ್ಮಾಣ, ಪ್ರತಿ ವಾರ್ಡಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ ಹಾಗೂ ಬಿಬಿಎಂಪಿ ಆಸ್ತಿ ರಕ್ಷಣೆ ವಿಚಾರಗಳು ಬಿಬಿಎಂಪಿ ಮುಂಗಡಪತ್ರದಲ್ಲಿ ಉಲ್ಲೇಖವಾಗಲಿವೆ.

ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿ ಆಚರಣೆಗೆ ಅನುದಾನ, ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಕ್ರಮ ಮುಂತಾದವು ಕೂಡ ಬಜೆಟ್‌ನಲ್ಲಿ ಘೋಷಣೆ ಆಗುವ ನಿರೀಕ್ಷೆ ಇದೆ. ಈಗಾಗಲೇ ಬಿಬಿಎಂಪಿ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಹಲವು ಸಭೆಗಳು ನಡೆದು ಬಜೆಟ್‌ ಕರಡು ಅಂತಿಮಗೊಂಡಿದೆ. ಅದಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ಕೂಡ ಕೊಟ್ಟಿದೆ.

ಬಜೆಟ್‌ ಮಂಡನೆಯ ನೇರ ಪ್ರಸಾರ ವೀಕ್ಷಣೆಗೆ ಇಲ್ಲಿ ಗಮನಿಸಿ

ಬಿಬಿಎಂಪಿ ಬಜೆಟ್‌ನ ಗಾತ್ರ ಪ್ರತಿ ಬಾರಿ ಚರ್ಚೆಗೆ ಗ್ರಾಸವಾಗುತ್ತದೆ. ಆಯ-ವ್ಯಯದಲ್ಲಿ ತೋರಿಸುವ ತೆರಿಗೆ ಆದಾಯಕ್ಕೂ, ವಾಸ್ತವದಲ್ಲಿ ಸಂಗ್ರಹವಾಗುವ ತೆರಿಗೆ ಆದಾಯಕ್ಕೂ ಹೊಂದಿಕೆ ಆಗುವುದೇ ಇಲ್ಲ. ತೆರಿಗೆ ಸಂಗ್ರಹದ ಗುರಿ ತಲುಪುವುದಕ್ಕೆ ಪಾಲಿಕೆಗೆ ಸಾಧ್ಯವಾಗದೇ ಇರುವುದು ಇದರ ಮೂಲ ಕಾರಣ.

ಈಗ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಿಗಳ ವಿತ್ತೀಯ ಹೊಣೆಗಾರಿಕೆ ಕಾಯಿದೆ-2003 ಅನ್ವಯವಾಗಿದ್ದು, ಈ ಕಾಯಿದೆಯ ಆಶಯಗಳಿಗೆ ಅನುಗುಣವಾಗಿಯೇ ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ) ನಿಯಮಗಳು-2021 ರೂಪುಗೊಂಡಿದೆ. ಇದರ ಆಶಯಗಳಿಗೆ ಅನುಗುಣವಾಗಿ ಬಜೆಟ್‌ ರೂಪಿಸಬೇಕಾದ ಹೊಣೆಗಾರಿಕೆ ಬಿಬಿಎಂಪಿ ಮೇಲಿದೆ.

IPL_Entry_Point