Bengaluru Crime: ಇನ್‌ಸ್ಪೆಕ್ಟರ್ ಜೀಪ್‌ಗೆ ಡ್ಯಾಶ್ ಕ್ಯಾಮೆರಾ ಅಳವಡಿಕೆ, ಆಜಾನ್ ವೇಳೆ ಹನುಮಾನ್ ಚಾಲೀಸಾ; ಪ್ರತಿದೂರು ದಾಖಲು
Dash Cams: ಡ್ಯಾಶ್ ಕ್ಯಾಮೆರಾ ಅಳವಡಿಸುವುದರಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಸಹಕಾರಿಯಾಗಲಿದೆ. ಜೀಪುಗಳ ಕ್ಯಾಮೆರಾದಲ್ಲಿ ದಾಖಲಾಗುವ ಎಲ್ಲ ದೃಶ್ಯಗಳನ್ನು ಕಮಾಂಡ್ ಕೇಂದ್ರದಿಂದಲೇ ವೀಕ್ಷಿಸಬಹುದಾಗಿದೆ. (ವರದಿ: ಮಾರುತಿ ಎಚ್.)
ಬೆಂಗಳೂರು: ನಗರದಲ್ಲಿ ಇನ್‌ಸ್ಪೆಕ್ಟರ್, ಎಸಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಬಳಸುವ ಜೀಪ್‌ಗಳಿಗೆ ಡ್ಯಾಶ್ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಡ್ಯಾಶ್ ಕ್ಯಾಮೆರಾ ಅಳವಡಿಸುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಾಹಿತಿ ನೀಡಿದರು. ಹೊಯ್ಸಳ ಪೊಲೀಸರ ಗಸ್ತು ವಾಹನಗಳಿಗೆ ಈಗಾಗಲೇ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬೆಳವಣಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪೊಲೀಸರು ಬಳಸುವ ಎಲ್ಲ ಜೀಪುಗಳಿಗೆ ಡ್ಯಾಶ್ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಡ್ಯಾಶ್ ಕ್ಯಾಮೆರಾ ಅಳವಡಿಸುವುದರಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಸಹಕಾರಿಯಾಗಲಿದೆ. ಜೀಪುಗಳ ಕ್ಯಾಮೆರಾದಲ್ಲಿ ದಾಖಲಾಗುವ ಎಲ್ಲ ದೃಶ್ಯಗಳನ್ನು ಕಮಾಂಡ್ ಕೇಂದ್ರದಿಂದಲೇ ವೀಕ್ಷಿಸಬಹುದಾಗಿದೆ. ಪೊಲೀಸರು ಕರ್ತವ್ಯಲೋಪ ಎಸಗಿದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಭಾವಿಸಲಾಗಿದೆ.
ಆಜಾನ್ ವೇಳೆ ಹನುಮಾನ್ ಚಾಲೀಸಾ ಹಾಡು ಪ್ರಕರಣ, ಪ್ರತಿದೂರು ದಾಖಲು
ಬೆಂಗಳೂರಿನ ನಗರ್ತಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಆಜಾನ್ ವೇಳೆ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಮಳಿಗೆ ಮಾಲೀಕ ಮುಖೇಶ್ ವಿರುದ್ಧವೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆಜಾನ್ ವೇಳೆ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಆರೋಪಿಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮೊಬೈಲ್ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ದರು. ನನ್ನನ್ನು ಕೊಳ್ಳಲು ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿ ಮುಖೇಶ್ ದೂರು ನೀಡಿದ್ದರು.
ಈ ದೂರಿನ ನಂತರ ರಾಜಧಾನಿಯಲ್ಲಿ ಕೋಲಾಹಲವೇ ಉಂಟಾಗಿತ್ತು. ಆರೋಪಿಗಳಾದ ಸುಲೇಮಾನ್, ಶಹನವಾಜ್, ರೋಹಿತ್, ತರುಣ್‌ನನ್ನು ಬಂಧಿಸಲಾಗಿತ್ತು. ಈಗ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ಸಂಬಂಧ ಆರೋಪಿ ಸುಲೇಮಾನ್ ಅವರ ತಾಯಿ ಜಬೀನಾ ಅವರು ಪ್ರತಿದೂರು ನೀಡಿದ್ದರು. ಗಂಭೀರವಲ್ಲದ ಪ್ರಕರಣ ಎಂದು (ಎನ್‌ಸಿಆರ್ ) ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ನ್ಯಾಯಾಲಯವೂ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ. ಆದ್ದರಿಂದ, ಆರೋಪಿ ಮುಖೇಶ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃಷ್ಣ ಟೆಲಿಕಾಂ ಮಳಿಗೆ ಮಾಲೀಕ ಮುಖೇಶ್, ಕೆಲವು ದಿನಗಳಿಂದ ಜೋರಾಗಿ ಹನುಮಾನ್ ಚಾಲಿಸಾ ಹಾಡು ಹಾಕುತ್ತಿದ್ದ. ಇದನ್ನು ಗಮನಿಸಿದ್ದ ನನ್ನ ಮಗ ಸುಲೇಮಾನ್ ಹಾಗೂ ಆತನ ಸ್ನೇಹಿತರಾದ ಶಹನವಾಜ್, ರೋಹಿತ್, ದಡಿಯಾ ಅಲಿಯಾಸ್ ತರುಣ್, ಮೊಬೈಲ್ ಅಂಗಡಿಗೆ ಹೋಗಿ ಬಳಿ ಶಬ್ಧವನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರು. ಒಂದು ವೇಳೆ ಶಬ್ದ ಜೋರಾಗಿದ್ದರೆ ರಂಜಾನ್ ಪ್ರಾರ್ಥನೆ ಸಲ್ಲಿಸಲು ಆಗಮಿಸುವ 3,000 ಜನರಿಗೆ ಪ್ರಾರ್ಥನೆ ಮಾಡಲು ತೊಂದರೆ ಆಗುತ್ತದೆ ಎಂದು ನನ್ನ ಮಗ ಹೇಳಿದ್ದ. ಇಷ್ಟು ಹೇಳಿದ್ದಕ್ಕೆ ಮುಖೇಶ್ ನನ್ನ ಮಗ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಲೇಮಾನ್ ತಾಯಿ ಜಬೀನಾ ದೂರಿನಲ್ಲಿ ತಿಳಿಸಿದ್ದಾರೆ.
ವೃತ್ತಿ ವೈಷಮ್ಯ, ಸಹೋದ್ಯೋಗಿ ಮೇಲೆ ಹಲ್ಲೆ, ಆರೋಪಿಗಳ ಬಂಧನ
ವೃತ್ತಿ ವೈಷಮ್ಯದ ಹಿನ್ನಲೆಯಲ್ಲಿ ಖಾಸಗಿ ಕಂಪನಿಯೊಂದರ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿಯಲ್ಲಿ ಸಹೋದ್ಯೋಗಿ ಸೇರಿ ಐವರನ್ನು ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಸ್ತೂರಿ ನಗರದ ಉಮಾಶಂಕರ್ ರೆಡ್ಡಿ, ಕೆಆರ್ ಪುರ ಟಿಸಿ ಪಾಳ್ಯದ ಅನುಷ್ ಕ್ಯಾಲ್ವೀನ್, ಮುತ್ತು ಮತ್ತು ಕಲ್ಯಾಣನಗರದ ವಿನೀಷ್ ಬಂಧಿತ ಆರೋಪಿಗಳು. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಚ್ 31ರಂದು ಸಂಜೆ ಹೆಣ್ಣೂರು ಸಮೀಪದ ಹೊರ ವರ್ತುಲ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಈ ದೃಶ್ಯವನ್ನು ಸೆರೆ ಹಿಡಿದಿದ್ದ ಸಾರ್ವಜನಿಕರೊಬ್ಬರು, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೊ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೀಡಾಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಹೇಳಿಕೆ ಪಡೆಯಲಾಗಿದೆ. ಅವರು, ಕಂಪನಿಯೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಮಾಶಂಕರ್ ರೆಡ್ಡಿ ಎಂಬ ನೌಕರ ವೃತ್ತಿ ವೈಷಮ್ಯ ಸಾಧಿಸುತ್ತಿದ್ದ. ತಾನು ಕ್ಯಾಷಿಯರ್ ಆಗಬೇಕು ಎಂದು ಬಯಸಿದ್ದ. ಹಾಗಾಗಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.