ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದ ಪಿಜಿಗಳ ವಿರುದ್ದ ಕ್ರಮಕ್ಕೆ ಮುಂದಾದ ಜಲಮಂಡಳಿ
Bengaluru Water Crisis: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಈ ನಡುವೆ, ಕೆಲವೊಂದು ಪಿಜಿಗಳಲ್ಲಿ ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದುಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಜಲಮಂಡಳಿಗೆ ನಷ್ಟವಾಗುತ್ತದೆ. ಇಂಥ ಪಿಜಿಗಳ ವಿರುದ್ದ ಜಲಮಂಡಳಿ ಕ್ರಮಕ್ಕೆ ಮುಂದಾಗಿದೆ.
ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ ಪಿಜಿಗಳ ವಿರುದ್ದ ಕ್ರಮ ಜರುಗಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಡುಗೋಡಿ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಮತ್ತು ಒಳಚರಂಡಿ ಸಂಪರ್ಕ ಪಡೆದು 43 ಪಿಜಿಗಳನ್ನು ನಡೆಸಲಾಗುತ್ತಿವೆ ಎಂದು ಅಲ್ಲಿನ ಸ್ಥಳೀಯ ನಿವಾಸಿಯೊಬ್ಬರು ಜನಸ್ಪಂದನ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿದರು.
ದೂರಿಗೆ ಕೂಡಲೇ ಸ್ಪಂದಿಸಿದ ಅಧ್ಯಕ್ಷರು, ನಗರದ ಹಲವಾರು ಭಾಗಗಳಿಂದ ಇಂಥ ದೂರುಗಳು ಬರುತ್ತಿವೆ. ವಾಣಿಜ್ಯ ಉದ್ದೇಶದ ಸಂಪರ್ಕ ಪಡೆದುಕೊಂಡು ಪಿಜಿಗಳನ್ನು ನಡೆಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದುಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಕಾನೂನು ಬಾಹಿರ ಚಟುವಟಿಕೆಯಾಗುತ್ತದೆ. ಇದರಿಂದ ಜಲಮಂಡಳಿಗೆ ನಷ್ಟವಾಗುತ್ತದೆ. ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಜಲಮಂಡಳಿ ಜೊತೆ ಕೈಜೋಡಿಸಿದ ಸಂಚಾರಿ ಪೊಲೀಸರು
ಕಾವೇರಿ 5ನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಲಮಂಡಳಿಗೆ ಅಗತ್ಯ ಸಹಕಾರ ನೀಡುವುದಾಗಿ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಭರವಸೆ ನೀಡಿದೆ ಎಂದು ಜಲಮಂಡಳಿ ತಿಳಿಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಅವರೊಂದಿಗೆ ಸಭೆ ನಡೆಸಿದರು.
ಇದನ್ನೂ ಓದಿ | Bangalore Rain: ಬಿಸಿಲಿಗೆ ತತ್ತರಿಸಿದ ಬೆಂಗಳೂರು ಜನರಿಗೆ ಸಿಹಿ ಸುದ್ದಿ; ಯುಗಾದಿ ನಂತರ ನಗರದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಚಾರ ವಿಭಾಗದಿಂದ ಅಗತ್ಯವಿರುವ ಸಹಕಾರ ಕುರಿತು ಚರ್ಚಿಸಲಾಗಿದೆ. ವಜ್ರಹಳ್ಳಿ 100 ಫೀಟ್ ರಸ್ತೆಯಿಂದ ಕನಕಪುರ ಮುಖ್ಯ ರಸ್ತೆಯಲ್ಲಿ 112 ಮೀಟರ್‌ಗಳ ಪೈಪ್‌ಲೈನ್ ಅಳವಡಿಸುವ ಕಾಮಗಾರಿ, ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅಂಜನಾಪುರ 80 ಅಡಿ ರಸ್ತೆಯ ಕಾಮಗಾರಿ, ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಕೊಲಿಫಾರಂ ಗಾರೆ ರಸ್ತೆ ಜಂಕ್ಷನ್‌ನಲ್ಲಿ ನಡೆಸಬೇಕಾಗಿರುವ 78 ಮೀಟರ್‌ಗಳ ಪೈಪ್‌ಲೈನ್ ಅಳವಡಿಕೆ ಕಾರ್ಯ, ಬಸಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಬೇಕಾಗಿರುವ 394 ಮೀಟರ್ ಪೈಪ್ಪ್‌ಲೈನ್ ಕಾಮಗಾರಿ, ಹೊಸ ರೋಡ್ ಜಂಕ್ಷನ್‌ನಲ್ಲಿ ಪೈಪ್‌ಲೈನ್ ಅಳವಡಿಕೆಯ ಕಾರ್ಯ, ಕೂಡ್ಲು ರಸ್ತೆಯಲ್ಲಿ 200 ಮೀಟರ್ ಪೈಪ್‌ಲೈನ್ ಅಳವಡಿಸುವ ಕಾರ್ಯ, ಮುನ್ನೇಕೊಳ್ಳಾಲ - ಹೆಚ್ ಎಎಲ್ ರಸ್ತೆಯ ಜಂಕ್ಷನ್ ನಲ್ಲಿ 450 ಮೀಟರ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳ ಕುರಿತು ಚರ್ಚೆ ನಡೆದಿದೆ.
ಕೆಲವು ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸುವ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿರುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಜಲಮಂಡಳಿ ತಿಳಿಸಿದೆ.
ಕಾವೇರಿ 5ನೇ ಹಂತದ ಕಾಮಗಾರಿಯ ಪೈಪ್‌ಲೈನ್ ಅಳವಡಿಕೆಯನ್ನು ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.