ಕನ್ನಡ ಸುದ್ದಿ  /  Karnataka  /  Bengaluru Drum Murder: 3 Held For Killing Woman, Hunt On For 5 More Accused

Bengaluru drum murder: ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಪತ್ತೆಯಾದ ಶವ, ಕೊಲೆಯಾದವಳು ತಮನ್ನಾ, ಮೂವರು ಆರೋಪಿಗಳ ಬಂಧನ

ಮಹಿಳೆಯ ಕತ್ತುಹಿಸುಕಿ ಕೊಂದು ಆಕೆಯ ಮೃತ ದೇಹವನ್ನು ಈ ಆರೋಪಿಗಳು ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ತುಂಬಿ ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಬಳಿ ಇಟ್ಟು ಪರಾರಿಯಾಗಿದ್ದರು.

Bengaluru drum murder: ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಪತ್ತೆಯಾದ ಶವ
Bengaluru drum murder: ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಪತ್ತೆಯಾದ ಶವ

ಬೆಂಗಳೂರು: ಇದೇ ಭಾನುವಾರ ಬೆಳಗ್ಗೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಪತ್ತೆಯಾದ ಮಹಿಳೆಯ ಶವದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನುಳಿದ ಐವರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

ಮಹಿಳೆಯ ಕತ್ತುಹಿಸುಕಿ ಕೊಂದು ಆಕೆಯ ಮೃತ ದೇಹವನ್ನು ಈ ಆರೋಪಿಗಳು ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ತುಂಬಿ ಬೈಯಪ್ಪನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಬಳಿ ಇಟ್ಟು ಪರಾರಿಯಾಗಿದ್ದರು.

ಈ ಆರೋಪಿಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದು, ಉಳಿದ ಐವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಕೊಲೆಗಡುಕರು ಮೃತಪಟ್ಟ ಮಹಿಳೆಗೆ ಮೊದಲೇ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕಮಾಲ್‌, ತನ್ವೀರ್‌, ಶಕೀಬ್‌ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಾದ ನವಾಬ್‌, ಜಮಾಲ್‌, ಮಝರ್‌, ಅಸ್ಸಾಬ್‌, ಸಬೂಲ್‌ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಎಲ್ಲಾ ಆರೋಪಿಗಳು ಬಿಹಾರ ಮೂಲದವರು. ಅವರು ಬೆಂಗಳೂರಿನ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಮೃತಪಟ್ಟ ಮಹಿಳೆಯೂ ಬಿಹಾರ ಮೂಲದವಳು. ಆಕೆಯ ಹೆಸರು ತಮನ್ನಾ, ವಯಸ್ಸು ಸುಮಾರು 27 ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಾರಣದಿಂದ ಈಕೆಯ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮನ್ನಾ ತನ್ನ ಪತಿ ಅಪ್ರೋಜ್‌ ಗೆ ಡಿವೋರ್ಸ್‌ ನೀಡಿದ್ದಳು. ಅಪ್ರೋಜ್‌ ವಿಶೇಷ ಚೇತನ ವ್ಯಕ್ತಿಯಾಗಿದ್ದು, ಆತನ ಕಸೀನ್‌ ಇಂತಿಕಾಬ್‌ನನ್ನು ಈಕೆ ಮದುವೆಯಾಗುತ್ತಾಳೆ.

ಅಪ್ರೋಜ್‌ನನ್ನು ಬಿಟ್ಟು ಇಂತಿಕಾಬ್‌ನನ್ನು ಮದುವೆಯಾದ ಈಕೆಯ ಕುರಿತು ಅಪ್ರೋಜ್‌ ಕುಟುಂಬ ಕೋಪಗೊಂಡಿತ್ತು. ಆಕೆಗೆ ಒಂದು ಗತಿ ಕಾಣಿಸಲು ಈ ಕುಟುಂಬ ಪ್ಲ್ಯಾನ್‌ ಮಾಡಿತ್ತು.

ಮಾರ್ಚ್‌ 12ರಂದು ಈಕೆಯನ್ನು ಊಟಕ್ಕೆ ಆರೋಪಿಗಳು ಕರೆದಿದ್ದರು. ಆಕೆಯನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಸಾಯಿಸಿದ್ದರು. ರಾತ್ರಿಯಾದ ಬಳಿಕ ಈಕೆಯ ಶವವನ್ನು ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಹಾಕಿ ಹೊರಸಾಗಿಸಿದ್ದರು.

ಇದು ಸೀರಿಯಲ್‌ ಕಿಲ್ಲಿಂಗ್‌ ಅಪರಾಧವಲ್ಲ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧೀಕ್ಷಕಿ ಎಸ್‌ಕೆ ಸೌಮ್ಯಲತಾ ಹೇಳಿದ್ದಾರೆ. ಡಿಸೆಂಬರ್‌ ಬಳಿಕ ಇದೇ ರೀತಿ ಹಲವು ಶವಗಳು ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಪತ್ತೆಯಾಗಿದ್ದವು.

"ಡ್ರಮ್‌ನಲ್ಲಿ ಸಿಕ್ಕ ಸ್ಟಿಕ್ಕರ್‌ ಕರ್ನಾಟಕದ ರೈಲ್ವೆ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚಲು ನೆರವಾಯಿತು. ಈಕೆಯನ್ನು ಮದುವೆಯಾಗದಂತೆ ಇಂತಿಕಾಬ್‌ನ ಮನವೋಲಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಸ್ನೇಹಿತರ ಸಹಾಯದಿಂದ ಆಕೆಯನ್ನು ಕೊಲೆ ಮಾಡಿದ್ದಾರೆ. ಸಂತ್ರಸ್ತೆಯ ಶವ ಡ್ರಮ್‌ನಲ್ಲಿ ಹೊಂದಿಕೊಳ್ಳುವಂತೆ ಮಾಡಲು ಕಾಲುಗಳನ್ನು ಮುರಿಯಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಡ್ರಮ್‌, ಚೀಲದಲ್ಲಿ ಮಹಿಳೆಯರ ಶವಗಳು ಪತ್ತೆಯಾಗಿದ್ದವು.

ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ಲಾಟ್‌ಫಾರ್ಮ್‌ 1ರಲ್ಲಿ ಬಾಕ್ಸ್‌ವೊಳಗೆ ಸೀಲ್‌ ಮಾಡಿರುವ ಪ್ಲಾಸ್ಟಿಕ್‌ ಕವರ್‌ನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು.

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಡಿಸೆಂಬರ್‌ 2022ರಲ್ಲಿಯೂ ಒಂದು ಮೃತದೇಹ ಪತ್ತೆಯಾಗಿತ್ತು. ಕೆಜಿಎಫ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು.

IPL_Entry_Point