ಕನ್ನಡ ಸುದ್ದಿ  /  Karnataka  /  Complaint To Ec Against Dk Shivakumar Who Threw Notes At Artists During Road Show In Mandya

DK Shivakumar: ರೋಡ್ ಶೋ ವೇಳೆ ಕಲಾವಿದರ ಮೇಲೆ ನೋಟು ಎಸೆದ ಡಿಕೆ ಶಿವಕುಮಾರ್ ವಿರುದ್ಧ ಇಸಿಗೆ ದೂರು

ಶ್ರೀರಂಗಪಟ್ಟಣ ನಡೆದ ‘ಪ್ರಜಾಧ್ವನಿ ಯಾತ್ರೆ’ಯ ರೋಡ್ ಶೋ ವೇಳೆ ಡಿಕೆ ಶಿವಕುಮಾರ್ ಕಲಾವಿದರ ಮೇಲೆ ಹಣ ಎಸೆದ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಎಸೆಯುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು.

ಮಂಡ್ಯದಲ್ಲಿ ನಡೆದ ರೋಡ್ ಶೋ ವೇಳೆ ನೋಟು ಎಸೆಯುತ್ತಿರುವುದು
ಮಂಡ್ಯದಲ್ಲಿ ನಡೆದ ರೋಡ್ ಶೋ ವೇಳೆ ನೋಟು ಎಸೆಯುತ್ತಿರುವುದು

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 500 ರೂಪಾಯಿಯ ನೋಟುಗಳನ್ನ ಕಲಾವಿದರ ಮೇಲೆ ಎಸೆದಿದ್ದ ಆರೋಪ ಕೇಳಿಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಡಿಕೆಶಿ ವಿರುದ್ಧ ಪೊಲೀಸರು ದೂರ ದಾಖಲಿಸಿಕೊಂಡಿದ್ದಾರೆ.

ನೋಟುಗಳನ್ನು ಎಸೆದಿದ್ದಾರೆ ಈ ಸಂಬಂಧ ಡಿಕೆ ಶಿವಕುಮಾರ್ ವಿರುದ್ಧ ಆರ್‌ಸಿ ಆಕ್ಟ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಪಿ. ಅಶೋಕ್ ಎಂಬ ವ್ಯಕ್ತಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಪ್ರಕಾರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ‘ಪ್ರಜಾಧ್ವನಿ ಯಾತ್ರೆ’ಯ ವೇಳೆ ಕಾಂಗ್ರೆಸ್ ನಾಯಕರು ನಗದು ಹಂಚಿದ್ದಾರೆ ಮತ್ತು ಹಣವನ್ನ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿಲ್ಲ. ಗುರುತಿಸಲಾಗದ ಅಪರಾಧವನ್ನು ಕೈಗೆತ್ತಿಕೊಳ್ಳಲಾಗಿದ್ದು, ನಿರ್ದೇಶನವನ್ನು ಕೋರಿ ನ್ಯಾಯಾಲಯದ ಮುಂದೆ ಪ್ರಕರಣವನ್ನು ಮಂಡಿಸಲಾಗುವುದು ಎಂದು ಮಂಡ್ಯ ಎಸ್ಪಿ ಯತೀಶ್ ಎನ್. ತಿಳಿಸಿದ್ದಾರೆ.

ನಾನ್-ಕಾಗ್ನೈಸಬಲ್ ಅಪರಾಧವು ಒಂದು ಅಪರಾಧವಾಗಿದ್ದು, ಪೊಲೀಸ್ ಅಧಿಕಾರಿಗಳು ವಾರೆಂಟ್ ಇಲ್ಲದೆ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಇರುವುದಿಲ್ಲ.

ಚುನಾವಣಾ ಆಯೋಗವು ರಾಜ್ಯದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಒಂದು ದಿನ ಮೊದಲು, ಡಿಕೆ ಶಿವಕುಮಾರ್ ಬಸ್‌ನ ಮೇಲ್ಛಾವಣಿಯಿಂದ ಪ್ರೇಕ್ಷಕರ ಮೇಲೆ, ಕಲಾವಿದರ ಮೇಲೆ 500 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಎಸೆದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಡಿಕೆ ಶಿವಕುಮಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಹೆಸರುವಾಸಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ನೋಟುಗಳನ್ನು ಎಸೆಯುವ ಮೂಲಕ ಡಿಕೆ ಶಿವಕುಮಾರ್ ಮತ್ತು ಅವರ ಪಕ್ಷದವರು ರಾಜ್ಯದ ಜನರನ್ನ ಭಿಕ್ಷುಕರೆಂದು ಭಾವಿಸಿದ್ದಾರೆ. ಇದೇ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಶಾಸಕರಿಗೆ ಟಿಕೆಟ್ ಆಸೆ ತೋರಿಸಿ ಕಾಂಗ್ರೆಸ್ ಸೆಳೆಯುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಆ ಮೂಲಕ ಆಮಿಷವೊಡ್ಡುತ್ತಿದ್ದಾರೆ ಅಂತಲೂ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಳೆದ ಎರಡು ಮೂರು ದಿನಗಳಿಂದ ಇನ್ನೂ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸದೆ, ನಮ್ಮ ಶಾಸಕರಿಗೆ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದರೆ ನಾವು ನಿಮಗೆ ಟಿಕೆಟ್ ನೀಡುತ್ತೇವೆ ಎಂದು ಅವರು ಹೇಳಿಕೆ ನೀಡುತ್ತಿದ್ದಾರೆ ಎಂದ ಸಿಎಂ ದೂರಿದ್ದಾರೆ.

ಹಣ ಹಂಚುತ್ತಿದ್ದಾರೆಂಬ ಆರೋಪ ತಳ್ಳಿಹಾಕಿದ ಡಿಕೆಶಿ

ಪಕ್ಷದ ಪ್ರಚಾರದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಶಿವಕುಮಾರ್ ಹಣ ನೀಡಿದ್ದಾರೆ. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೂ ಮುನ್ನ ಮತದಾರರಿಗೆ ಆಮಿಷವೊಡ್ಡಲು ಹಣ ಹಂಚಿದ್ದಾರೆ ಎಂಬ ಆರೋಪವನ್ನು ಡಿಕೆಶಿ ತಳ್ಳಿ ಹಾಕಿದ್ದಾರೆ.

ಅಲ್ಲಿನ ಪಕ್ಷದ ಕಾರ್ಯಕರ್ತರು ಹೇಳುವ ಪ್ರಕಾರ, ಶಿವಕುಮಾರ್ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಜೆಡಿಎಸ್ ನ ಭದ್ರಕೋಟೆ ಎಂದು ಹೇಳಲಾಗುವ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯದಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರಂತೆ.

ಕಳೆದ ಶನಿವಾರ (ಮಾರ್ಚ್ 25) ಕಾಂಗ್ರೆಸ್ 124 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಶಿವಕುಮಾರ್ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

IPL_Entry_Point

ವಿಭಾಗ