ಕನ್ನಡ ಸುದ್ದಿ  /  Karnataka  /  Dharwad Congress Mlas Lobby For Minister Post Vinayk Kulkarni Santosh Lad Prasad Abbayya Konaraddy Mgb

Dharwad Congress MLAs: ಯಾರಿಗೆ ಒಲಿಯಲಿದೆ ಧಾರವಾಡ ಪೇಡಾ? ಸಚಿವ ಸ್ಥಾನಕ್ಕೆ ಶಾಸಕರ ಲಾಭಿ

Dharwad Congress MLAs: ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ ಕುಲಕರ್ಣಿ, ಕಲಘಟಗಿ ಕ್ಷೇತ್ರದಿಂದ ಸಂತೋಷ ಲಾಡ್, ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಪ್ರಸಾದ ಅಬ್ಬಯ್ಯ ಹಾಗೂ ನವಲಗುಂದ ಎನ್.ಎಚ್. ಕೋನರಡ್ಡಿ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಸದ್ಯ ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ.

ಧಾರವಾಡ ಕಾಂಗ್ರೆಸ್​ ಶಾಸಕರು
ಧಾರವಾಡ ಕಾಂಗ್ರೆಸ್​ ಶಾಸಕರು

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಗೆದ್ದ ಅಭ್ಯರ್ಥಿಗಳು ಈಗ ಸಚಿವ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ. ಧಾರವಾಡ ಪೇಡಾ ಯಾರಿಗೆ ಒಲಿಯಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ ಕುಲಕರ್ಣಿ, ಕಲಘಟಗಿ ಕ್ಷೇತ್ರದಿಂದ ಸಂತೋಷ ಲಾಡ್, ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಪ್ರಸಾದ ಅಬ್ಬಯ್ಯ ಹಾಗೂ ನವಲಗುಂದ ಎನ್.ಎಚ್. ಕೋನರಡ್ಡಿ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಸದ್ಯ ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ.

ಈ ಮೊದಲು ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್ ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದವರು. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಮೊದಲ ಬಾರಿಗೆ ಕೈ ಶಾಸಕರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆ ಆಗಿ ಪ್ರಸಾದ ಅಬ್ಬಯ್ಯ ಹ್ಯಾಟ್ರಿಕ್ ಗೆಲುವು ಸಾಧಿಸಿದವರು. ಈ ಎಲ್ಲರೂ ರಾಜಕೀಯ ವಲಯದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದವರು. ಹೈಕಮಾಂಡ್ ಒಲವು ಈ ನಾಲ್ವರಲ್ಲಿ ಯಾರ ಮೇಲಿದೆ ಎಂಬುದು ಜಿಲ್ಲೆಯಲ್ಲಿ ಬಹು ಚರ್ಚಿತ ವಿಷಯ.

ವಿನಯ ಕುಲಕರ್ಣಿ:

ಐದು ವಿಧಾನಸಭಾ ಚುನಾವಣೆಗಳಲ್ಲಿ ಮೂರು ಬಾರಿ ಗೆಲುವು ಸಾಧಿಸಿದವರು. ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಗಣಿ ಮತ್ತು ಭೂ ವಿಜ್ಙಾನ ಸಚಿವರಾಗಿ ಸೇವೆ ಸಲ್ಲಿದ್ದಾರೆ. ಜತೆಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಕೂಡ ಅವರಿಗಿದೆ. ಪ್ರಬಲ ಲಿಂಗಾಯತ ಸಮಾಜಕ್ಕೆ ಸೇರಿರುವ ವಿನಯ ಕುಲಕರ್ಣಿ ಮತ್ತೊಮ್ಮೆ ಸಚಿವರಾಗುವ ಹೊಸ್ತಿಲಲ್ಲಿ ಇದ್ದಾರೆ. ಅವರ ಮೇಲಿರುವ ಕೊಲೆ ಆರೋಪದಿಂದ ಧಾರವಾಡ ಜಿಲ್ಲೆ ಪ್ರವೇಸಿಸದೇ ಕ್ಷೇತ್ರದ ಹೊರಗಿದ್ದೇ ಗೆದ್ದು ಬಂದವರು. ಇದು ಸಚಿವ ಸ್ಥಾನಕ್ಕೆ ಹಿನ್ನಡೆ ಆಗುತ್ತಾ ಅಥವಾ ಹೈಕಮಾಂಡ ಅವರಿಗೆ ಧಾರವಾಡ ಫೇಡೆ ನೀಡಿ ಸಿಹಿ ಸುದ್ದಿ ನೀಡುತ್ತದೆಯೇ ಕಾದು ನೋಡಬೇಕಿದೆ. ವಿನಯಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳ ಕೂಗು ಜೋರಾಗಿ ಕೇಳಿಬರುತ್ತಿದೆ.

ಸಂತೋಷ ಲಾಡ್

ಐದು ವಿಧಾನಸಭಾ ಚುನಾವಣೆ ಎದುರಿಸಿರುವ ಮಾಜಿ ಸಚಿವ ಸಂತೋಷ ಲಾಡ್ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಸಂಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನ ಸಭಾ ಮೆಟ್ಟಿಲು ಏರಿದ್ದ ಲಾಡ್, ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಕಾಂಗ್ರೆಸ್ ಸೇರಿದ್ದರು. ಅಲ್ಲದೇ ಕ್ಷೇತ್ರ ಮರುವಿಂಗಡನೆ ಆದ ಮೇಲೆ ಕಲಘಟಗಿ ಕ್ಷೇತ್ರದಿಂದ ಸ್ಫರ್ಧಿಸಿ ಸತತ ಎರಡು ಬಾರಿ ಗೆಲುವು ಸಾಧಿಸಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಾಹಿತಿ ಮತ್ತು ಮೂಲಸೌಕರ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವರಾಗಿದ್ದ ವೇಳೆ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿ ರಾಜ್ಯದ ಜನರನ್ನು ರಕ್ಷಿಸಿ ಹೆಸರು ಗಳಿಸಿದವರು. ಕಲಘಟಗಿ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆ ಆಗಿರುವ ಸಂತೋಷ ಲಾಡ್ ಸಿದ್ದರಾಮಯ್ಯರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೊಮ್ಮೆ ಸಚಿವರಾಗಿ ಸೇವೆ ಸಲ್ಲಿಸುವ ಕಾತುರದಲ್ಲಿರುವ ಲಾಡ್ ಅವರಿಗೆ ಹೈಕಮಾಂಡ್ ಮಣೆ ಹಾಕಲಿದೆಯೇ ಎಂಬುದು ಕಾದು ನೋಡಬೇಕಿದೆ.

ಪ್ರಸಾದ ಅಬ್ಬಯ್ಯ:

ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಸಾದ ಅಬ್ಬಯ್ಯ ಸರಳ-ಸಜ್ಜನಿಕೆ ರಾಜಕಾರಣಿ ಎಂದು ಹೆಸರು ಗಳಿಸಿದವರು. ಎಸ್.ಸಿ ಸಮುದಾಯಕ್ಕೆ ಸೇರಿರುವ ಪ್ರಸಾದ ಅಬ್ಬಯ್ಯ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳೂ ಕೂಡ ಆಗಿದ್ದಾರೆ. ಕಳೆದ ಬಾರಿ ಧಾರವಾಡ ಜಿಲ್ಲೆಯಿಂದ ಗೆದ್ದ ಏಕೈಕ್ ಕಾಂಗ್ರೆಸ್ ಅಭ್ಯರ್ಥಿ ಕೂಡ ಹೌದು. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕೀರ್ತಿ ಅವರಿಗಿದೆ. ಪ್ರಸಾದ ಅಬ್ಬಯ್ಯ ಅವರಿಗೆ ಎಸ್.ಸಿ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಎನ್.ಚ್.ಕೋನರಡ್ಡಿ:

ಜೆಡಿಎಸ್ ತೊರೆದು ಕಾಂಗ್ರೆಸ್ ಗೆದ್ದಿರುವ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಹದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ರೈತರ ಪರ ಸದಾ ಧ್ವನಿ ಮೊಳಗಿಸುವ ಕೋನರಡ್ಡಿ ಅವರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು. ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಅವರಿಗೆ ಸಚಿವ ಸ್ಥಾನ ದೂರದ ಬೆಟ್ಟವಾದರೂ ಕೋನರೆಡ್ಡಿ ಅವರ ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಿದರೂ ಅಚ್ಚರಿ ಎನಿಲ್ಲ.

ಜಗದೀಶ ಶೆಟ್ಟರ್​:

ಟಿಕೆಟ್ ನೀಡದಿದ್ದಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೋಲುಂಡಿದ್ದಾರೆ. ಶೆಟ್ಟರ ಅವರ ಹಿರಿತನ ಹಾಗೂ ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಜಗದೀಶ ಶೆಟ್ಟರ್​ ಅವರಿಗೆ ಸಚಿವ ಸ್ಥಾನ ನೀಡಿ ಲಿಂಗಾಯತ ಮತಗಳನ್ನು ಸೆಳೆಯುವ ಹಾಗೂ ಕಾಂಗ್ರೆಸ್ ಲಿಂಗಾಯತರ ಪರವೂ ಇದೆ ಎಂಬ ವಿಷಯಗಳು ಹೈಕಮಾಂಡ್ ಗಮನದಲ್ಲಿದೆ. ಕೆಲವು ಆಯಾಮಗಳನ್ನು ಅನುಸರಿಸಿ ಜಗದೀಶ ಶೆಟ್ಟರ್​ ಅವರನ್ನು ಸಚಿವರನ್ನಾಗಿಸುವ ಆಲೋಚನೆಗಳು ವರಿಷ್ಠರ ಮುಂದಿವೆ. ಇದು ಎಷ್ಟರ ಮಟ್ಟಿಗೆ ಸಾಧ್ಯಾಸಾಧ್ಯತೆ ಎಂಬುದು ಕಾದು ನೋಡಬೇಕಿದೆ.

ವರದಿ: ಪ್ರಹ್ಲಾದಗೌಡ ಗೊಲ್ಲಗೌಡರ

IPL_Entry_Point