HD Kumaraswamy: ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವೆ; ರಾಷ್ಟ್ರೀಯ ಪಕ್ಷಗಳನ್ನ ನಂಬಿ ಮತ್ತೆ ಮೋಸ ಹೋಗಬೇಡಿ: ಹೆಚ್ಡಿಕೆ
ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ಸರ್ಕಾರ ಮೋಸ ಮಾಡಿತು. ನಾನು ಅಧಿಕಾರಕ್ಕೆ ಬಂದರೆ ಈ ಮೋಸಕ್ಕೆ ಒಳಗಾದ ಎಲ್ಲ ಕುಟುಂಬಗಳ ಸಾಲ ಮನ್ನಾ ಮಾಡುವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಘೋಷಿಸಿದ್ದಾರೆ.
ವಿಜಯಪುರ: ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವಿಜಯಪುರ ಜಿಲ್ಲೆಗೆ ಆಗಮಿಸಿದ್ದು, ದೇವರ ಹಿಪ್ಪರಗಿ ಹಾಗೂ ಕಲಕೇರಿಯಲ್ಲಿ ಭರ್ಜರಿ ಜನ ಸ್ಪಂದನೆ ಸಿಕ್ಕಿದೆ.
ಟ್ರೆಂಡಿಂಗ್ ಸುದ್ದಿ
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಕಲಕೇರಿಯಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೆರೆ ಬಂದಾಗ ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡುತ್ತೇವೆ ಎಂದರು. ಮೂರು ವರ್ಷ ಆಯಿತು, ಪರಿಹಾರ ಕೊಡಲಿಲ್ಲ. ಕೋವಿಡ್ ಗೆ ಬಲಿಯಾದ ಪ್ರತಿ ಒಬ್ಬರಿಗೂ ಪರಿಹಾರ ಕೊಡುತ್ತೇವೆ ಎಂದು ಸುಳ್ಳು ಹೇಳಿದರು. ಆ ಪರಿಹಾರ ಬರಲೇ ಇಲ್ಲ ಎಂದು ಹೇಳಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜನರು ಸಾಲ ಮಾಡಿಕೊಂಡು ಕಷ್ಟದಲ್ಲಿ ಇದ್ದಾರೆ. ಸಾಲಕ್ಕೆ ಹೆದರಿ ನೇಣಿಗೆ ಶರಣಾಗುತ್ತಿದ್ದಾರೆ. ಯಾರು ಅಂತ ಆತುರದ ನಿರ್ಧಾರ ಮಾಡುವುದು ಬೇಡ. ನಿಮ್ಮ ಕಷ್ಟಕ್ಕೆ ನಾನಿದ್ದೇನೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತರಿಗೆ ನೆರವಾಗುವೆ ಹೆದರಬೇಡಿ
ಮುಂದಿನ ಚುನಾವಣೆಯಲ್ಲಿ ತಮಗೆ ಅವಕಾಶ ಮಾಡಿಕೊಟ್ಟರೆ ರಾಜ್ಯದ 6 ಸಾವಿರ ಗ್ರಾಮ ಪಂಚಾಯಿಗಳಲ್ಲಿ ಎಲ್ಲ ಸೌಲಭ್ಯ ಮಾಡುತ್ತೇನೆ. ಕೃಷಿ, ಆರೋಗ್ಯ ಶಿಕ್ಷಣ, ಉದ್ಯೋಗ ಎಂದು ಯಾರೂ ಸಾಲ ಮಾಡಬೇಕಾಗಿಲ್ಲ. ಜನರ ಪ್ರತಿ ಸಮಸ್ಯೆಗೂ ಸರ್ಕಾರವೇ ಪರಿಹಾರ ಕಲ್ಪಿಸಿ ಕೊಡುತ್ತೆ. ನನ್ನ ಸರ್ಕಾರ ಬಂದರೆ ಪಂಚರತ್ನ ಯೋಜನೆಗಳು ಜಾರಿ ಆಗುತ್ತವೆ. ಆಗ ಇಡೀ ರಾಜ್ಯದ ಚಿತ್ರಣವೇ ಬದಲಾಗುತ್ತದೆ. ರೈತರಿಗೆ ನಾನು ನೆರವಾಗುವೆ, ಹೆದರಬೇಡಿ ಎಂದು ಅನ್ನದಾತರಿಗೆ ಧೈರ್ಯ ತುಂಬಿದ್ದಾರೆ.
ಬಿಜೆಪಿ ಸರ್ಕಾರ ಮೋಸ ಮಾಡಿತು
ನಾನು 25,000 ಕೋಟಿ ಸಾಲ ಮನ್ನಾ ಮಾಡಿದೆ. ಅಷ್ಟೂ ಹಣವನ್ನು ತೆಗೆದಿಟ್ಟು ಬಂದೆ. ಆದರೆ, ನನ್ನ ಸರ್ಕಾರ ತೆಗೆದು ಬಂದ ಬಿಜೆಪಿ ಸರ್ಕಾರ ಎರಡು ಲಕ್ಷ ಕುಟುಂಬಗಳ ಸಾಲ ಮನ್ನಾ ಹಣ ಬಿಡುಗಡೆ ಮಾಡಲಿಲ್ಲ. ಬೇರೆ ಬಾಬತ್ತಿಗೆ ಬಳಕೆ ಮಾಡಿಕೊಂಡಿತು. ಎರಡು ಲಕ್ಷ ಕುಟುಂಬಗಳಿಗೆ ಅನ್ಯಾಯ ಆಯಿತು, ಬಿಜೆಪಿ ಸರ್ಕಾರ ಮೋಸ ಮಾಡಿತು. ನಾನು ಅಧಿಕಾರಕ್ಕೆ ಬಂದರೆ ಈ ಮೋಸಕ್ಕೆ ಒಳಗಾದ ಎಲ್ಲ ಕುಟುಂಬಗಳ ಸಾಲ ಮನ್ನಾ ಮಾಡುವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಘೋಷಿಸಿದ್ದಾರೆ.
ನಾನು ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುತ್ತೇನೆ. ಇದನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮಾಡಲ್ಲ. ರಾಷ್ಟ್ರೀಯ ಪಕ್ಷಗಳನ್ನು ನಂಬಿ ಮತ್ತೆ ಮತ್ತೆ ಮೋಸ ಹೋಗಬೇಡಿ. ನಂಗೆ ಒಮ್ಮೆ ಐದು ವರ್ಷ ಅಧಿಕಾರ ಕೊಡಿ. ಕಲಕೇರಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವೆ. ಪೂರ್ಣ ಅಭಿವೃದ್ಧಿ ಮಾಡುವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ.