Gruhalakshmi yojana: ಗೃಹಲಕ್ಷ್ಮಿ ಯಾರು? ಅತ್ತೆಯಾ ಸೊಸೆಯಾ; ಗೊಂದಲ ಬೇಡ ಅಂದ್ರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Gruhalakshmi yojana: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರೆಂಟಿಗಳ ಪೈಕಿ ಒಂದು ಗೃಹಲಕ್ಷ್ಮಿ. ಮನೆಯೊಡತಿಗೆ 2,000 ರೂಪಾಯಿ ನೀಡುವ ಯೋಜನೆ ಇದು. ಮನೆಯಲ್ಲಿ ಮನೆಯೊಡತಿ ಯಾರು? ಈ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಅದನ್ನು ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ನಿವಾರಿಸಿದ್ದು ಹೀಗೆ.
ಕಾಂಗ್ರೆಸ್ ಗ್ಯಾರೆಂಟಿ(Congress Guarantee)ಯ ಗೃಹಲಕ್ಷ್ಮಿ ಯೋಜನೆ (Gruhalakshmi yojana)ಯ 2,000 ರೂಪಾಯಿ ಯಾರಿಗೆ? ಹೀಗೊಂದು ಪ್ರಶ್ನೆ ಭಾರಿ ಸದ್ದು ಮಾಡಿತ್ತು. ಗೃಹಲಕ್ಷ್ಮಿ ಯೋಜನೆಯ ಪ್ರಕಾರ ನೀಡುವ 2,000 ರೂಪಾಯಿ ಅತ್ತೆಗಾ ಅಥವಾ ಸೊಸೆಗಾ ಎಂಬ ಪ್ರಶ್ನೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಅದಕ್ಕೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಸತೀಶ್ ಜಾರಕಿಹೊಳಿ (Satish Jarkiholi) ಸ್ಪಷ್ಟೀಕರಣ ನೀಡಿದ್ದು, ಗೊಂದಲ ಬಗೆಹರಿಸಿದ್ದಾರೆ.
ಮನೆಯೊಡತಿಯೇ ಗೃಹಲಕ್ಷ್ಮಿ. ಅವರಿಗೇ 2,000 ರೂಪಾಯಿ ಎಂದು ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಪ್ರಕಟಿಸಿತ್ತು. ಆದರೆ ಮನೆಯೊಡತಿ ಯಾರು? ಅತ್ತೆಯಾ ಅಥವಾ ಸೊಸೆಯಾ ಎಂಬುದು ಗೊಂದಲಕ್ಕೆ ಕಾರಣವಾಗಿತ್ತು.
ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಗೃಹಲಕ್ಷ್ಮಿ ಯೋಜನೆಗೆ ಅತ್ತೆಯೇ ಮನೆಯೊಡತಿ. ಅವರಿಗೇ ಗೃಹಲಕ್ಷ್ಮೀ ಯೋಜನೆಯ ಹಣ ಸಿಗಲಿದೆ ಎಂದು ಸ್ಪಷ್ಟಪಡಸಿದರು.
ಬೆಳಗಾವಿಯಲ್ಲಿ ಇಂದು(ಮೇ30) ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ನಮ್ಮ ಸಂಪ್ರದಾಯದ ಪ್ರಕಾರ, ಅತ್ತೆಯೇ ಮನೆಯ ಒಡತಿ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರ್ಕಾರ ಅತ್ತೆಗೆ ನೀಡಲಿದೆ. ಆ ಹಣವನ್ನು ಅತ್ತೆ ಬೇಕಾದರೆ ಪ್ರೀತಿಯಿಂದ ಸೊಸೆಗೆ ನೀಡಿದರೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲಿಗೆ ಗೃಹಲಕ್ಷ್ಮಿ ಯಾರು? ಅತ್ತೆಯಾ ಸೊಸೆಯಾ ಎಂಬ ದೊಡ್ಡ ಗೊಂದಲ ನಿವಾರಣೆ ಆದಂತೆ ಆಗಿದೆ.
ಈ ನಡುವೆ, ಈ ಗ್ಯಾರೆಂಟಿ ಯೋಜನೆ ಜೂನ್ ತಿಂಗಳಲ್ಲೇ ಅನುಷ್ಠಾನವಾಗಲಿದೆ. ಇದಕ್ಕೆ ಸಂಬಂಧಿಸಿ ಅಧಿಕಾರಿಗಳ ಜತೆಗೆ ಬುಧವಾರ (ಮೇ 31) ಸಭೆ ನಡೆಸಿ ಅನುಷ್ಠಾನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದರು.
ಗೃಹಲಕ್ಷ್ಮಿ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟೀಕರಣ
ಕಾಂಗ್ರೆಸ್ ಗ್ಯಾರೆಂಟಿಯ ಪ್ರಮುಖ ಯೋಜನೆ ಗೃಹಲಕ್ಷ್ಮಿ. ಇದರ ಫಲಾನುಭವಿ ಮನೆಯೊಡತಿ. ಅಂದರೆ ಅತ್ತೆಯೇ ಈ ಯೋಜನೆಯ ಫಲಾನುಭವಿ. ಅವರಿಗೆ ತಿಂಗಳಿಗೆ 2,000 ರೂಪಾಯಿ ಸಿಗಲಿದೆ ಎಂದು ಸಚಿವ ಸತೀಶ್ ಜಾರಕಿ ಹೊಳಿ ಸ್ಪಷ್ಟಿಪಡಿಸಿದರು.
ಕಾಂಗ್ರೆಸ್ ಗ್ಯಾರೆಂಟಿಯ ಕೆಲವು ಯೋಜನೆಗಳು ಜೂನ್ ತಿಂಗಳಲ್ಲೇ ಜಾರಿಯಾಗಲಿದೆ. ಇನ್ನುಳಿದಂತೆ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಇನ್ನಿತರ ಭರವಸೆ ಈಡೇರಿಕೆಗೆ ಕೆಲಕಾಲ ಬೇಕಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಗೆಹರಿಯದ ಗೊಂದಲ
ಮನೆಯೊಡತಿ ಅತ್ತೆ ಎಂದು ಸ್ಪಷ್ಟವಾದ ಬಳಿಕ, ಈಗ ಇನ್ನೊಂದಿಷ್ಟು ಪ್ರಶ್ನೆಗಳು ಎದುರಾಗಿವೆ. ಅವಿಭಜಿತ ಕುಟುಂಬಗಳಲ್ಲಿ ಅತ್ತೆಯೇ ಮನೆಯೊಡತಿ ಎಂಬುದು ಸ್ಪಷ್ಟವಾಯಿತು.
ಸಣ್ಣ ಕುಟುಂಬಗಳಲ್ಲಿ ಗಂಡ, ಹೆಂಡತಿ ಮಾತ್ರ ಇದ್ದು ಆಗ ಮನೆಯೊಡತಿ ಯಾರು? ಹೆಣ್ಣು ಮಕ್ಕಳು ಮಾತ್ರ ಇರುವ ಪಾಲಕರ ಮನೆಯಲ್ಲಿ ಮನೆಯೊಡತಿ ತಾಯಿ ಆಗಿರುತ್ತಾರೆ. ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಅಗುವುದು ಸಾಧ್ಯವೇ ಅಥವಾ ಇಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.