ಕನ್ನಡ ಸುದ್ದಿ  /  Karnataka  /  Karnataka Latest News Cm Siddaramaiah Led Congress Govt To Accept Caste Wise Social Educational Survey Report Mgb

Caste wise survey: ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕರಿಸಲಿರುವ ಸಿದ್ದರಾಮಯ್ಯ ಸರ್ಕಾರ

CM Siddaramaiah: ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗದ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ
ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗದ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ

ಬೆಂಗಳೂರು: ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದರು.

ಅವರು ಇಂದು (ಜೂನ್​ 7) ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗವನ್ನು ಭೇಟಿ ಮಾಡಿ ಮಾತನಾಡಿದರು. ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅತಿ ಅಗತ್ಯ. ಈ ಉದ್ದೇಶದಿಂದ ಜಾತಿವಾರು ಸಮೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾವಳ್ಳಿ ಶಂಕರ್, ಪ್ರೊ.ರವಿ ವರ್ಮಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ್ ಸೇರಿ 150 ಕ್ಕೂ ಹೆಚ್ಚು ಮಂದಿ ನಾನಾ ಜಾತಿಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು

ಹಲವು ಶತಮಾನಗಳಿಂದ ಅವಕಾಶ ವಂಚಿತರಾದವರಿಗೆ ಈಗ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿದ್ದ ಬೊಮ್ಮಾಯಿ ಸರ್ಕಾರ

ಈ ವರ್ಷ ಮಾರ್ಚ್​ 24 ರಂದು ಸಚಿವ ಸಂಪುಟ ಸಭೆ ನಡೆಸಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಅಂದಿನ ರಾಜ್ಯ ಬಿಜೆಪಿ ಸರ್ಕಾರ, ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಹಾಗೂ ಈ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲು ನಿರ್ಧರಿಸಿತ್ತು. 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಣೆ ಮಾಡಿತ್ತು. ಈ ನಿರ್ಧಾರದಿಂದಾಗಿ, 2ಸಿಯಲ್ಲಿರುವ ಒಕ್ಕಲಿಗರಿಗೆ ಶೇ. 4ರಿಂದ ಶೇ. 6ರಷ್ಟು ಹಾಗೂ 2ಡಿಯಲ್ಲಿರುವ ವೀರಶೈವ ಹಾಗೂ ಲಿಂಗಾಯತರಿಗೆ ಶೇ. 5ರಿಂದ ಶೇ. 7ರಷ್ಟು ಮೀಸಲಾತಿ ಹೆಚ್ಚಳವಾಗುವುದರಲ್ಲಿತ್ತು.

IPL_Entry_Point