ಕನ್ನಡ ಸುದ್ದಿ  /  Karnataka  /  Mangaluru News Dancing Frogs Are Going Extinct In Western Ghats Due To Rising Temperature News In Kannada Hsm

Mangaluru News: ಅಳಿವಿನಂಚಿನಲ್ಲಿವೆ ಕುಣಿಯುವ ಕಪ್ಪೆ; ಡ್ಯಾನ್ಸಿಂಗ್ ಫ್ರಾಗ್ ಗೆ ತಾಪಮಾನ ಏರಿಕೆ ಬಿಸಿ

Dancing Frog: ಜಾಗತಿಕ ತಾಪಮಾಣ ಏರಿಕೆಯ ಬಿಸಿ ನದಿ, ತೊರೆಗಳ ಬಳಿ ವಾಸಿಸುವ ಈ ಜಾತಿಯ ಕಪ್ಪೆಗಳಿಗೂ ತಟ್ಟಿದೆ. ಇದೇ ರೀತಿ ವಾತಾವರಣದ ಉಷ್ಣತೆ ಹೆಚ್ಚಾಗತೊಡಗಿದರೆ, ಈ ಕಪ್ಪೆಗಳನ್ನು ಇನ್ನು ಚಿತ್ರದಲ್ಲಷ್ಟೇ ನೋಡಬಹುದು.

ಅಳಿವಿನಂಚಿನಲ್ಲಿವೆ ಕುಣಿಯುವ ಕಪ್ಪೆ; ಡ್ಯಾನ್ಸಿಂಗ್ ಫ್ರಾಗ್ ಗೆ ತಾಪಮಾನ ಏರಿಕೆ ಬಿಸಿ
ಅಳಿವಿನಂಚಿನಲ್ಲಿವೆ ಕುಣಿಯುವ ಕಪ್ಪೆ; ಡ್ಯಾನ್ಸಿಂಗ್ ಫ್ರಾಗ್ ಗೆ ತಾಪಮಾನ ಏರಿಕೆ ಬಿಸಿ

ಮಂಗಳೂರು: ಕೇವಲ ಪಶ್ಚಿಮ ಘಟ್ಟದಲ್ಲಷ್ಟೇ ಇರುವ Micrixalus kottigeharensis ಡ್ಯಾನ್ಸಿಂಗ್ ಫ್ರಾಗ್ ಈಗ ಅಳಿವಿನಂಚಿನಲ್ಲಿದೆ. ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಪ್ರಕಾರ, ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಉಭಯಜೀವಿಗಳ ಮೌಲ್ಯಮಾಪನದ ಎರಡನೇ ಆವೃತ್ತಿಯ ಆಧಾರದ ಮೇಲೆ ಈ ಕಪ್ಪೆ ಕುಲವೇ ನಾಶವಾಗುವ ಸಾಧ್ಯತೆ ಇದೆ.

ಜಾಗತಿಕ ತಾಪಮಾಣ ಏರಿಕೆಯ ಬಿಸಿ ನದಿ, ತೊರೆಗಳ ಬಳಿ ವಾಸಿಸುವ ಈ ಜಾತಿಯ ಕಪ್ಪೆಗಳಿಗೂ ತಟ್ಟಿದೆ. ಇದೇ ರೀತಿ ವಾತಾವರಣದ ಉಷ್ಣತೆ ಹೆಚ್ಚಾಗತೊಡಗಿದರೆ, ಈ ಕಪ್ಪೆಗಳನ್ನು ಇನ್ನು ಚಿತ್ರದಲ್ಲಷ್ಟೇ ನೋಡಬಹುದು.

ಹುಲಿ ಮರಕ್ಕೆ ಉಗುರಿನಿಂದ ಗೀರಿ/ಮೂತ್ರ ಹೊಯ್ದು ಗಡಿ ಗುರುತಿಸಿದರೆ, ಗಂಡು ಶ್ವಾನಗಳು ಎಲ್ಲೆಂದರಲ್ಲಿ, ಆಗಾಗ ಕಾಲೆತ್ತಿ ಮೂತ್ರ ಮಾಡಿ ತಮ್ಮ ಜಾಗದ ಗಡಿ ಕಾಯ್ದುಕೊಳ್ಳುತ್ತವೆ. ಹುಲಿ, ಶ್ವಾನಗಳಂತೆ ಗಂಡು ಕಪ್ಪೆಗಳೂ ಕುಣಿಯುವ ರೀತಿಯಲ್ಲಿ ತಮ್ಮ ಕಾಲೆತ್ತಿ ತಮಗೆ ಸೇರಿದ ಜಾಗ ಇಷ್ಟೆಂದು ಗಡಿ ಗುರುತನ್ನು ಅನ್ಯ ಕಪ್ಪೆಗಳಿಗೆ ತೋರಿಸುತ್ತವೆ. ಹೀಗಾಗಿ ಇದನ್ನು ಡ್ಯಾನ್ಸಿಂಗ್ ಫ್ರಾಗ್ ಎನ್ನಲಾಗುತ್ತಿದೆ. ಹೆಣ್ಣು ಕಪ್ಪೆಗಳ ಜತೆಗಿನ ಮಿಲನಕ್ಕೂ ಈ ಗಡಿ ಮುಖ್ಯವಾಗಿದ್ದು ವ್ಯಾಪ್ತಿ ಕೇವಲ 30ಚದರ ಸೆಂ. ಮೀ. , ಗಡಿ ಪ್ರದೇಶದೊಳಗೆ ಅನ್ಯ ಗಂಡು ಕಪ್ಪೆಗಳು ಬಂತೆಂದರೆ ಕಾಲಲ್ಲೇ ಒದ್ದು ಓಡಿಸುತ್ತವೆ. ಕಾಲಿನ ನೆಲೆಯಲ್ಲಿ ಆವಾಸ ಸ್ಥಾನ ಗುರುತಿಸುವ ಕಪ್ಪೆ ಪ್ರಭೇದವೆಂದರೆ ಅದು ಡ್ಯಾನ್ಸಿಂಗ್ ಫ್ರಾಗ್ ಮಾತ್ರ. ಸಸ್ಯ,ಜೀವ ಸಂಪತ್ತಿನ ಶ್ರೀಮಂತಿಕೆ ತುಂಬಿದ ಪಶ್ಚಿಮಘಟ್ಟದಲ್ಲಷ್ಟೇ ಇರುವ 24 ಪ್ರಭೇದಗಳ ಡ್ಯಾನ್ಸಿಂಗ್ ಫ್ರಾಗ್ (ಕುಣಿವ ಕಪ್ಪೆಗಳು) ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಪರಿಣಾಮ, ಅಸ್ತಿತ್ವಕ್ಕೇ ಸಂಚಕಾರ ಎದುರಿಸುತ್ತಿವೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳ್ನಾಡು ವ್ಯಾಪ್ತಿಯ ಪಶ್ಚಿಮ ಘಟ್ಟದಲ್ಲಿರುವ ಡ್ಯಾನ್ಸಿಂಗ್ ಫ್ರಾಗ್ನ 24 ಪ್ರಭೇದಗಳ ಪೈಕಿ ಎರಡು ಪ್ರಭೇದಗಳು ವಿನಾಶದಂಚಿನಲ್ಲಿದ್ದರೆ, 15 ಪ್ರಭೇದಗಳು ಅಪಾಯದಂಚಿನಲ್ಲಿವೆ.

ದೇಶದ 30 ಉಭಯ ಜೀವಿಗಳ ಕುರಿತು ವಿಷಯ ತಜ್ಞರು ಇತ್ತೀಚೆಗೆ ಅಧ್ಯಯನ ನಡೆಸಿದ್ದು ನೇಚರ್ ಪತ್ರಿಕೆಯಲ್ಲಿ ಪ್ರಕಟಿತ ಸಂಶೋಧನಾ ಲೇಖನದ ಸಹ ಲೇಖಕ, ಬೆಂಗಳೂರಿನ ಮಾಹೆಯ ಸೃಷ್ಟಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಕಪ್ಪೆ ಸಂಶೋಧಕ ಡಾ. ಗುರುರಾಜ ಕೆ. ವಿ. ಪ್ರಕಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೀಲ್‍ವಾಸೆಯಲ್ಲಿ ಪತ್ತೆಯಾದ ಕಪ್ಪೆಗೆ ನೀಲ್‍ವಾಸೆ ಕುಣಿವ ಕಪ್ಪೆ ಹಾಗೂ ಕೊಟ್ಟಿಗೆಹಾರದಲ್ಲಿ ಪತ್ತೆಯಾದ ಕಪ್ಪೆಗೆ ಕೊಟ್ಟಿಗೆಹಾರ ಕುಣಿವ ಕಪ್ಪೆ ಹೆಸರಿಡಲಾಗಿದೆ. ಇವು ವಿನಾಶದ ಅಂಚಿನಲ್ಲಿವೆ.

ಮೂಡಿಗೆರೆ, ಕೊಡಗಿನಲ್ಲೂ ಮೊದಲ ಬಾರಿ ಕುಣಿವ ಕಪ್ಪೆಗಳ ಹೊಸ ಪ್ರಭೇದ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ, ಮಾಳ ಸಹಿತ ಹಲವು ಪ್ರದೇಶಗಳಲ್ಲಿ ಕುಣಿವ ಕಪ್ಪೆಗಳು ಮೇಲ್ಭಾಗ ದಟ್ಟವಾಗಿ ಹರಡಿದ ಮರ, ಕೆಳಗಡೆ ನಿರಂತರವಾಗಿ ಹರಿವ ತೊರೆಗಳ ಬಳಿ ಕಾಣ ಸಿಗುತ್ತವೆ. ತಂಪು ಪರಿಸರವೇ ಕುಣಿವ ಕಪ್ಪೆಗಳ ಜೀವಾಳವಾಗಿದ್ದು ಕೀಟಗಳೇ ಆಹಾರ. ತೆಳುವಾಗಿ ಹರಿವ ನೀರ ಮಣ್ಣಲ್ಲಿ ಗುಂಡಿ ಮಾಡಿ ಮೊಟ್ಟೆಯಿಡುವ ಹೆಣ್ಣು ಕಪ್ಪೆ ಮಣ್ಣು ಮುಚ್ಚಿ ಕುಣಿದು, ಮರಳ ಕವಚವನ್ನು ರೂಪಿಸುವುದೇ ಕುಣಿವ ಕಪ್ಪೆಗಳ ವೈಶಿಷ್ಟ್ಯ.

ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಿಂದಾಗಿ ಶೀತ ರಕ್ತ ಪ್ರಾಣಿ ಹಾಗೂ ನೀರು/ನೆಲ ಉಭಯ ಜೀವಿಗಳಾದ ಕಪ್ಪೆಗಳು ಸೂಕ್ಷ್ಮ ಜೀವಿಗಳಾಗಿದ್ದು ಪರಿಸರದಲ್ಲಿ ಉಷ್ಣತೆ ಹೆಚ್ಚಿದರೆ ಒಣಗುತ್ತವೆ, ಹೀಗಾಗಿ ತಂಪು ಜಾಗ ಅರಸಿ ತೆರಳುತ್ತವೆ. ತಂಪು ಪ್ರದೇಶವಿಲ್ಲದಿದ್ದರೆ ಮೊಟ್ಟೆಗಳೂ ಒಣಗಬಹುದು, ಕಪ್ಪೆಗಳ ಪ್ರಭೇದವೂ ನಾಶವಾಗಬಹುದು. ಬರ, ನೆರೆ, ಅಕಾಲಿಕ ಮಳೆಯೂ ಪಶ್ಚಿಮಘಟ್ಟದಲ್ಲಿರುವ ಕುಣಿವ ಕಪ್ಪೆಗಳ ಮೇಲೆ ಪರಿಣಾಮ ಬೀರುತ್ತಿದೆ. ಉಭಯವಾಸಿಗಳ ರಕ್ಷಣೆ.

ಅಧ್ಯಯನ ಏನು ಹೇಳುತ್ತದೆ?

ದೇಶದಲ್ಲಿ 426 ಕಪ್ಪೆಗಳ ಸಹಿತ ಉಭಯ ಜೀವಿಗಳ ಅಧ್ಯಯನವನ್ನು ಮಾಡಲಾಗಿದ್ದು, ಇದರಲ್ಲಿ 139 (ಶೇ. 41)ಪ್ರಭೇದಗಳು ಅಪಾಯದಂಚಿನಲ್ಲಿವೆ ಕೇರಳ ರಾಜ್ಯದ 178 ಉಭಯ ಜೀವಿಗಳಲ್ಲಿ 84 ಪ್ರಭೇದಗಳು ಅಪಾಯದಂಚಿನಲ್ಲಿವೆ. ತಮಿಳುನಾಡಿನಲ್ಲಿ 128 ಉಭಯಜೀವಿಗಳ ಪೈಕಿ 54 ಅಪಾಯದಂಚಿನಲ್ಲಿವೆ. ಕರ್ನಾಟಕದಲ್ಲಿ 100 ಉಭಯಜೀವಿಗಳ ಪೈಕಿ 30 ಅಪಾಯದಂಚಿನಲ್ಲಿವ ಎಂದು ಅಧ್ಯಯನ ಹೇಳಿದೆ.

ಪರಿಸರದಲ್ಲಿ ಅತ್ಯಂತ ಸೂಕ್ಷ್ಮ ಜೀವಿಗಳಾದ ಕಪ್ಪೆಗಳ ಬಗ್ಗೆ ಅರಿವು ಅತಿ ಮುಖ್ಯ. ವಾಸಸ್ಥಾನ, ಹವಾಮಾನ ವೈಪರೀತ್ಯದ ಪರಿಣಾಮ, ಗುಣಲಕ್ಷಣ ಸಹಿತ ವಿಕಸನದ ಬಗ್ಗೆ ವೈಜ್ಞಾನಿಕ ಅಧ್ಯಯನ ಅತಿ ಮುಖ್ಯ. ರಾಜ್ಯ, ಕೇಂದ್ರ ಸರಕಾರ ಉಭಯಜಿವಿ ಸಂರಕ್ಷಣಾ ನೀತಿ ಜಾರಿಗೆ ತರುವ ಅಗತ್ಯವಿದ್ದು ರಾಜ್ಯ ಕಪ್ಪೆಗಳನ್ನು ಹಾಗೂ ರಾಷ್ಟ್ರ ಕಪ್ಪೆಗಳನ್ನು ಗುರುತಿಸಿ ಜನಸಾಮಾನ್ಯರೂ ಕೂಡ ಉಭಯಜೀವಿಗಳ ಅಧ್ಯಯನದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂಬ ಅಭಿಪ್ರಾಯವನ್ನು ಕಪ್ಪೆ ಸಂಶೋಧಕ ಡಾ. ಗುರುರಾಜ್ ಕೆ.ವಿ. ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

(ವರದಿ: ಹರೀಶ ಮಾಂಬಾಡಿ)

IPL_Entry_Point