ಆರ್‌ಸಿಬಿ vs ಟೈಟಾನ್ಸ್ ಕದನಕ್ಕೆ ಕೇನ್ ವಿಲಿಯಮ್ಸನ್ ಇನ್; ಗೆಲುವಿನ ಬಳಿಕ ಹೀಗಿರಲಿದೆ ಬೆಂಗಳೂರು ಆಡುವ ಬಳಗ
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲೆಸೆಯುತ್ತಿದೆ. ಕೊನೆಯ ಪಂದ್ಯದಲ್ಲಿ ಗೆದ್ದಿರುವ ಆರ್‌ಸಿಬಿ ಜಯದ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.
ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಹಳಿಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮುಂದಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಸವಾಲು ಎದುರಿಸಲು ಸಜ್ಜಾಗಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಜಿಟಿ, ಐಪಿಎಲ್ 2024ರಲ್ಲಿ ಐದನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಪ್ಲೇಆಫ್‌ಗೆ ಏರಲು ಗೆಲ್ಲುವುದೊಂದೇ ದಾರಿ ಎಂಬಂತಿರುವ ಆರ್‌ಸಿಬಿ, ಟೂರ್ನಿಯಲ್ಲಿ 3ನೇ ಗೆಲುವು ಕಾಣುವ ಕನಸಿನಲ್ಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ತಂಡಗಳನ್ನು ನೋಡೋಣ.
ಆತಿಥೇಯ ಗುಜರಾತ್ ತಂಡವು ಆಡಿದ ಕೊನೆಯ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಂದೀಪ್ ವಾರಿಯರ್ ಬದಲಿಗೆ ಸಾಯಿ ಸುದರ್ಶನ್ ಅವರನ್ನು ಆಡುವ ಬಳಗಕ್ಕೆ ಕರೆತಂದಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಆಧಾರದಲ್ಲಿ ಮುಂದಿನ ಪಂದ್ಯಗಳಲ್ಲೂ ಇದೇ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅವರುನ್ನು ಹೊರಗಿಟ್ಟರೂ ಅಚ್ಚರಿಯಿಲ್ಲ. ಅತ್ತ ಈ ಹಿಂದೆ ತಂಡದಲ್ಲಿ ಅವಕಾಶ ಸಿಕ್ಕಾಗ ಮಂಕಾಗಿದ್ದ ಕಿವೀಸ್ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್, ಮತ್ತೆ ಆಡುವ ಬಳಗಕ್ಕೆ ಮರಳುವ ಸಾಧ್ಯತೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಂತ್ರ
ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಜಯದ ಹಳಿಗೆ ಮರಳಿರುವ ಆರ್‌ಸಿಬಿ, ಟೈಟಾನ್ಸ್ ವಿರುದ್ಧದ ಮುಖಾಮುಖಿಗೆ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಕೊನೆಯ ಪಂದ್ಯದಲ್ಲಿ ತಂಡದ ಬೌಲಿಂಗ್ ತಂತ್ರ ಫಲ ಕೊಟ್ಟಿತ್ತು. ದ್ವಿತೀಯಾರ್ಧದಲ್ಲಿ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕಿಳಿದಿದ್ದರು. ರಜತ್ ಪಾಟೀದಾರ್ ತಂಡದಿಂದ ಹೊರಹೋದರು. ಈ ತಂತ್ರ ತಂಡಕ್ಕೆ ಪ್ರಯೋಜನವಾಯ್ತು.
ಇದನ್ನೂ ಓದಿ | ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ ಪಂದ್ಯ; ಹೀಗಿದೆ ಪಿಚ್ ಹಾಗೂ ಹವಾಮಾನ ವರದಿ
ಸ್ವಪ್ನಿಲ್ ಒಂದೇ ಓವರ್‌ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ಡೇಂಜರಸ್ ಹೆನ್ರಿಚ್ ಕ್ಲಾಸೆನ್ ವಿಕೆಟ್ ಪಡೆದು ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟರು. ತಂಡಕ್ಕೆ ಗಾಯಾಳುಗಳ ಸಮಸ್ಯೆ ಇಲ್ಲ. ಕೆಲ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಈ ಪಂದ್ಯಕ್ಕೆ ಮರಳುವ ಸಾಧ್ಯತೆ ಕಡಿಮೆ ಇದೆ.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಅಜ್ಮತುಲ್ಲಾ ಒಮರ್ಜಾಯ್ / ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಸಾಯಿ ಕಿಶೋರ್, ರಶೀದ್ ಖಾನ್, ರಶೀದ್ ಖಾನ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಸಂದೀಪ್ ವಾರಿಯರ್ (ಇಂಪ್ಯಾಕ್ಟ್ ಆಟಗಾರ).
ಆರ್‌ಸಿಬಿ ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್ (ಇಂಪ್ಯಾಕ್ಟ್ ಆಟಗಾರ).