ಡೆಲ್ಲಿಗೆ ಶರಣಾದ ಮುಂಬೈ ಇಂಡಿಯನ್ಸ್ಗೆ ಇನ್ನೂ ಇದೆ ಪ್ಲೇಆಫ್ ಪ್ರವೇಶಿಸುವ ಅವಕಾಶ; ಒಂದು ಸೋತರೂ ಮನೆಗೆ!
Mumbai Indian Qualification scenario: 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಏನು ಮಾಡಬೇಕು? ಇಲ್ಲಿದೆ ವಿವರ.
ಸೀಸನ್-17ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ 6ನೇ ಸೋಲಿಗೆ ಶರಣಾಯಿತು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 258 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಲು ವಿಫಲವಾಯಿತು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಇದರೊಂದಿಗೆ 10 ರನ್ಗಳಿಂದ ಸೋಲನುಭವಿಸಿತು. ಈ ಸೋಲಿನಿಂದ ಮುಂಬೈ ಪ್ಲೇಆಫ್ ಅರ್ಹತೆ ಅತಂತ್ರವಾಗಿದೆ.
ರೋಹಿತ್ ಶರ್ಮಾ (8), ಇಶಾನ್ ಕಿಶನ್ (20) ಮತ್ತು ಸೂರ್ಯಕುಮಾರ್ ಯಾದವ್ (26) ಅವರು ಬೇಗನೆ ಕಳೆದುಕೊಂಡಿದ್ದರಿಂದ ಮುಂಬೈ ವೇಗ ಪಡೆಯಲಿಲ್ಲ. ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಇನ್ನೊಂದು ತುದಿಯಲ್ಲಿ ಹೋರಾಡಿದರೂ ಸಾಧ್ಯವಾಗಲಿಲ್ಲ. ಹಾರ್ದಿಕ್ 24ಕ್ಕೆ 46 ರನ್ ಬಾರಿಸಿದರೆ, ತಿಲಕ್ 32 ಎಸೆತಗಳಲ್ಲಿ 64 ರನ್ ಸಿಡಿಸಿದರು. ಡೇವಿಡ್ 17 ಬಾಲ್ಗಳಲ್ಲಿ 37 ರನ್ ಚಚ್ಚಿದರು.
ಕೊನೆಯ ಓವರ್ನಲ್ಲಿ ಗೆಲುವಿಗೆ ಮುಂಬೈಗೆ 25 ರನ್ಗಳ ಅಗತ್ಯ ಇತ್ತು. ಆದರೆ ತಿಲಕ್ ವರ್ಮಾ ರನೌಟ್ ಆದರು. 2 ಸಿಕ್ಸರ್ ಹೊರತಾಗಿಯೂ ಡಿಸಿ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆಡಿರುವ 10 ಪಂದ್ಯಗಳಲ್ಲಿ 5 ಸೋಲು, 5 ಗೆಲುವು ದಾಖಲಿಸಿದೆ. 10 ಅಂಕ ಪಡೆದಿದೆ. ಸೋತ ಹಾರ್ದಿಕ್ ಪಾಂಡ್ಯ ಪಡೆ, ಆಡಿರುವ 9 ಪಂದ್ಯಗಳಲ್ಲಿ 6 ಸೋಲು ಕಂಡಿದ್ದು, 3 ಗೆಲುವು ಸಾಧಿಸಿದೆ. 6 ಅಂಕ ಪಡೆದು 9ನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಹೇಗೆ?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ನಂತರ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪುವ ಸಾಧ್ಯತೆಗಳು ಅತ್ಯಂತ ಕಠೋರವಾಗಿವೆ. ಟಾಪ್ 4 ಗೆ ಅರ್ಹತೆ ಪಡೆಯಲು ತಂಡಕ್ಕೆ ಎಂಟು ಗೆಲುವುಗಳ ಅಗತ್ಯವಿದೆ. ಮುಂಬೈ ಇದುವರೆಗೆ ಕೇವಲ 3 ಗೆಲುವು ಸಾಧಿಸಿದೆ. ಮುಂಬೈಗೆ ಇನ್ನೂ 5 ಪಂದ್ಯಗಳು ಉಳಿದಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯಲು ಅವರ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಗೆಲ್ಲುವುದಷ್ಟೇ ಅಲ್ಲದೆ, ನೆಟ್ ರನ್ ರೇಟ್ ಅನ್ನೂ ಹೆಚ್ಚಿಸಿಕೊಳ್ಳಬೇಕು. ದೊಡ್ಡ ಗೆಲುವು ಸಾಧಿಸಿದರಷ್ಟೇ ಇದು ಸಾಧ್ಯವಾಗುತ್ತದೆ. ಆದರೆ ಉಳಿದ ಐದು ಪಂದ್ಯಗಳಲ್ಲಿ ಇನ್ನೂ ಒಂದು ಪಂದ್ಯವನ್ನು ಸೋತರೂ 5 ಬಾರಿಯ ಚಾಂಪಿಯನ್ ಎಂಐ, ಟೂರ್ನಿಯಿಂದ ಹೊರಬೀಳುವುದು ಖಚಿತ. ಆದಾಗ್ಯೂ, 4ನೇ ಸ್ಲಾಟ್‌ಗಾಗಿ ಅನೇಕ ತಂಡಗಳು ಪೈಪೋಟಿ ನಡೆಸುತ್ತಿವೆ. ಆದರೆ ಅಂಕಗಳಲ್ಲಿ ಟೈ ಆಗುವ ಪರಿಸ್ಥಿತಿ ಬಂದರೆ, ಎಂಐ ಉತ್ತಮವಾದ ರನ್ರೇಟ್ ಮೂಲಕ ಅವಕಾಶ ಪಡೆಯಬಹುದು.
ಜೇಕ್ ಫ್ರೇಜರ್ ವೇಗದ ಅರ್ಧಶತಕ
ಮೊದಲು ಟಾಸ್ ಗೆದ್ದ ಎಂಐ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜೇಕ್ ಫ್ರೇಜರ್ ಮೆಕ್‌ಗುರ್ಕ್, ಮುಂಬೈ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿದರು. ಕೇವಲ 27 ಎಸೆತಗಳಲ್ಲಿ 84 ರನ್ ಗಳಿಸಿದ ಮೆಕ್‌ಗುರ್ಕ್, 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ದಾಖಲೆ ಬರೆದರು. 17 ಎಸೆತಗಳಲ್ಲಿ 41 ರನ್ ಗಳಿಸಿದ ಶಾಯ್ ಹೋಪ್ ಅವರ ಆಕ್ರಮಣಕಾರಿ ಆಟದ ನಂತರ, ರಿಷಬ್ ಪಂತ್ 19 ಎಸೆತಗಳಲ್ಲಿ 29 ರನ್ ಗಳಿಸಿದರು. ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ 48 ರನ್ ಸಿಡಿಸಿದರು. ಪರಿಣಾಮ ಡಿಸಿ 257/4 ಬೃಹತ್ ಸ್ಕೋರ್ ದಾಖಲಿಸಿತು.
ಇದು ಐಪಿಎಲ್ 2024ರಲ್ಲಿ ಇದುವರೆಗಿನ 8ನೇ 250+ ಸ್ಕೋರ್ ಆಗಿದೆ. ಏತನ್ಮಧ್ಯೆ, ಈ ಗೆಲುವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಿಸಿದೆ. ಇದು ಐಪಿಎಲ್-2024 ರಲ್ಲಿ ಡೆಲ್ಲಿಯ ಐದನೇ ಗೆಲುವಾಗಿದ್ದು, ಅರ್ಹತೆ ಪಡೆಯಲು ಇನ್ನೂ ಮೂರು ಗೆಲುವು ಅಗತ್ಯ ಇದೆ. ಆದರೆ ಉಳಿದಿರುವುದು ನಾಲ್ಕು ಪಂದ್ಯಗಳು ಮಾತ್ರ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ