ಸೇಡಿನ ಸಮರದಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್; ಹಾರ್ದಿಕ್ ಪಾಂಡ್ಯ ಪಡೆಗೆ 6ನೇ ಸೋಲು
ಐಪಿಎಲ್ 2024ರ ಆವೃತ್ತಿಯ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಗಳಿಸಿದೆ. ಕಳೆದ ಪಂದ್ಯದಲ್ಲಿ ಎದುರಿಸಿದ ಸೋಲಿಗೆ ರಿಷಬ್ ಪಂತ್ ಬಳಗ ಸೇಡು ತೀರಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಿಷಬ್ ಪಂತ್ ಬಳಗ ಸೋಲು ಕಂಡಿತ್ತು. ಇದೀಗ ತನ್ನ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಾಖಲೆಯ ಮೊತ್ತ ಕಲೆ ಹಾಕುವುದರೊಂದಿಗೆ ಡೆಲ್ಲಿ 10 ರನ್ ಅಂತರದಿಂದ ರೋಚಕವಾಗಿ ಗೆದ್ದು ಬೀಗಿದೆ. ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಅಂತಿಮವಾಗಿ ಗೆಲುವು ಆತಿಥೇಯ ತಂಡದ್ದಾಗಿದೆ. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಅತ್ತ ಹಾರ್ದಿಕ್ ಪಾಂಡ್ಯ ಬಳಗವು ಆರನೇ ಸೋಲು ಕಂಡು ಪ್ಲೇ ಆಫ್ ಆಸೆ ಮತ್ತಷ್ಟು ಕುಂಠಿತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಮುಂಬೈ ತಂಡವು 9 ವಿಕಟ್ ನಷ್ಟಕ್ಕೆ 247 ರನ್ ಗಳಿಸಲಷ್ಟೇ ಶಕ್ತವಾಯ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಪ್ರದರ್ಶನ ನೀಡಿತು. ಆರಂಭಿಕ ಆಟಗಾರರಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ಭರ್ಜರಿ 114 ರನ್‌ಗಳ ಜೊತೆಯಾಟವಾಡಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಫ್ರೇಸರ್, ಅಂತಿಮವಾಗಿ ಕೇವಲ 27 ಎಸೆತಗಳಲ್ಲಿ 84 ರನ್ ಸಿಡಿಸಿ ಔಟಾದರು. ಬರೋಬ್ಬರಿ 311.11ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, ಒಟ್ಟು 11 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು. ಇವರಿಗೆ ಜೊತೆಯಾದ ಅಭಿಷೇಕ್ 27 ಎಸೆತಗಳಲ್ಲಿ 36 ರನ್ ಪೇರಿಸಿದರು.
ಇದನ್ನೂ ಓದಿ | ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್
ಮೂರನೇ ಕ್ರಾಮಂಕದಲ್ಲಿ ಮೈದಾನಕ್ಕಿಳಿದ ಶಾಯ್ ಹೋಪ್, 17 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 41 ರನ್ ಒಟ್ಟುಗೂಡಿಸಿದರು. ನಾಯಕ ರಿಷಬ್ ಪಂತ್ 29 ರನ್ ಗಳಿಸಿದರೆ, ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಸ್ಟಬ್ಸ್ 25 ಎಸೆತ ಎದುರಿಸಿದ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಅಕ್ಸರ್ ಪಟೇಲ್ 11 ರನ್ ಗಳಿಸಿದರು.
ಮುಂಬೈ ಪರ ಲ್ಯೂಕ್ ವುಡ್ 68 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಬುಮ್ರಾ 8.80ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರೆ, ಚಾವ್ಲಾ 9.00 ರ ಎಕಾನಮಿ ಕಾಯ್ದುಕೊಂಡು ಡೆಲ್ಲಿ ಪಾಲಿಗೆ ತುಸು ಕಠಿಣ ಬೌಲರ್ ಎನಿಸಿಕೊಂಡರು.
ಯಶಸ್ವಿ ಚೇಸಿಂಗ್‌ಗೆ ವಿಫಲವಾದ ಮುಂಬೈ ಇಂಡಿಯನ್ಸ್
ಬೃಹತ್ ಮೊತ್ತ ಚೇಸಿಂಗ್ ಮಾಡಲು ಮುಂದಾದ ಮುಂಬೈ ಕೂಡಾ ಉತ್ತಮ ಆರಂಭ ಪಡೆಯಿತು. 3 ಓವರ್‌ಗಳಲ್ಲಿ 35 ರನ್ ಬಂದರೂ, ಮರುಕ್ಷಣವೇ ಅನುಭವಿ ಆಟಗಾರ ರೋಹಿತ್ ಶರ್ಮಾ ಔಟಾದರು. ಮಾಜಿ ನಾಯಕನ ಗಳಿಕೆ ಕೇವಲ 8 ರನ್. ಉತ್ತಮ ಲಯದಲ್ಲಿರುವಂತೆ ಕಂಡ ಇಶಾನ್ ಕಿಶನ್ ಆಟ 20 ರನ್‌ಗಳಿಗೆ ಅಂತ್ಯವಾಯ್ತು. ಮೈದಾನಕ್ಕೆ ಬರುತ್ತಿದ್ದಂತೆಯೇ ಅಬ್ಬರ ಶುರುವಿಟ್ಟ ಸೂರ್ಯಕುಮಾರ್ ಯಾದವ್ 26 ರನ್ ಸಿಡಿಸಿ ಖಲೀಲ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ನಾಯಕನಾಟವಾಡಲು ಬಂದ ಹಾರ್ದಿಕ್ ಪಾಂಡ್ಯ ವೇಗದ ಆಟಕ್ಕೆ ಮುಂದಾದರು. ಆದರೆ 24 ಎಸೆತದಲ್ಲಿ 3 ಸಿಕ್ಸರ್ ಸಹಿತ 46 ರನ್ ಪೇರಿಸಿದ್ದಾಗ ರಾಸಿಕ್‌ಗೆ ವಿಕೆಟ್ ಒಪ್ಪಿಸಿದರು. ನೆಹಾಲ್ ವಧೇರಾ ಬಂದ ವೇಗದಲ್ಲೇ ಡಗೌಟ್ ಸೇರಿಕೊಂಡರು.
ತಿಲಕ್ ವರ್ಮಾ ಹೋರಾಟ
ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ, ಆಕರ್ಷಕ ಅರ್ಧಶತಕ ಸಿಡಿಸಿದರು. ಟಿಮ್ ಡೇವಿಡ್ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. ಇಬ್ಬರ ನಡುವೆ 29 ಎಸೆತಗಳಲ್ಲಿ 70 ರನ್ ಜೊತೆಯಾಟ ಬಂತು. ವೇಗದ ಆಟವಾಡಿದ ಟಿಮ್ ಡೇವಿಡ್ 17 ಎಸೆತಗಳಲ್ಲಿ 37 ರನ್ ಪೇರಿಸಿ ಔಟಾದರು. ತಂಡವನ್ನು ಗೆಲುವಿನ ದಡ ಸೇರಿಸುವ ಲೆಕ್ಕಾಚಾರ ಹಾಕಿದ್ದ ತಿಲಕ್ ವರ್ಮಾ 32 ಎಸೆತಗಳಲ್ಲಿ 63 ರನ್ ಸಿಡಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.