ಕನ್ನಡ ಸುದ್ದಿ  /  Karnataka  /  Mangaluru News Many Women Will Miss Free Bus Travel In Dakshina Kannada And Udupi Due To Lack Of Ksrtc Bus Mgb

Dakshina Kannada-Udupi: ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ; ಘೋಷಣೆಯಾದ ಕರಾವಳಿಯಲ್ಲೇ ಬಹುತೇಕರು ಇದರಿಂದ ವಂಚಿತರಾಗುವುದು ಯಾಕೆ?

Free bus travel for women: ಕಾಂಗ್ರೆಸ್ ಅಧಿಕಾರಕ್ಕೆ ಬರಲೂ ಇಂಥ ಗ್ಯಾರಂಟಿ ಘೋಷಣೆಯ ವೈಖರಿಯೂ ಕಾರಣವಾಗಿತ್ತು. ಆದರೆ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಲು ಇದೀಗ ಕಂಡೀಶನ್ ಗಳನ್ನೂ ಹಾಕಲಾಗಿದೆ. ಆದರೆ ಯಾವ ನೆಲದಲ್ಲಿ ಪ್ರಿಯಾಂಕಾ ಘೋಷಣೆ ಮಾಡಿದ್ದರೋ ಅಲ್ಲಿ ಸರ್ಕಾರಿ ಬಸ್ಸುಗಳೇ ವಿರಳ.

ಮಂಗಳೂರು ಖಾಸಗಿ ಬಸ್​ ನಿಲ್ದಾಣ
ಮಂಗಳೂರು ಖಾಸಗಿ ಬಸ್​ ನಿಲ್ದಾಣ

ಮಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರದ ಭರಾಟೆಯ ಸಂದರ್ಭ ಮಂಗಳೂರು ಹೊರವಲಯದಲ್ಲಿ ನಡೆದ ರಾಜಕೀಯ ಸಭೆಯೊಂದರ ಭಾಷಣದ ಕೊನೆಯ ಭಾಗವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿಕೆಯೊಂದನ್ನು ನೀಡಿ, ಇಡೀ ರಾಜ್ಯವಷ್ಟೇ ಅಲ್ಲ, ದೇಶದ ‘ಉಚಿತ’ ಘೋಷಣೆಗಳ ಪೈಕಿ ಕ್ರಾಂತಿಕಾರಿ ಮೈಲಿಗಲ್ಲನ್ನು ನೆಟ್ಟಿದ್ದರು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಪ್ರಮಾಣವಚನ ಸ್ವೀಕರಿಸುವ ದಿನದಿಂದಲೇ ಇಡೀ ರಾಜ್ಯದಲ್ಲಿ ಮಹಿಳೆಯರು ಎಲ್ಲಿಗೆ ಬೇಕಾದರೂ ಓಡಾಡಿ, ಆದರೆ ಉಚಿತವಾಗಿ ಓಡಾಡಿ ಎಂಬ ಆಫರ್ ಅನ್ನು ನೀಡಿದ್ದು ಗ್ಯಾರಂಟಿಗಳ ಪೈಕಿ ಜನಪ್ರಿಯವೆನಿಸುವ ಗ್ಯಾರಂಟಿಯಾಗಿತ್ತು.

ಕಾಂಗ್ರೆಸ್ ಅಧಿಕಾರಕ್ಕೆ ಬರಲೂ ಇಂಥ ಗ್ಯಾರಂಟಿ ಘೋಷಣೆಯ ವೈಖರಿಯೂ ಕಾರಣವಾಗಿತ್ತು. ಆದರೆ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಲು ಇದೀಗ ಕಂಡೀಶನ್ ಗಳನ್ನೂ ಹಾಕಲಾಗಿದೆ. ಆದರೆ ಯಾವ ನೆಲದಲ್ಲಿ ಪ್ರಿಯಾಂಕಾ ಘೋಷಣೆ ಮಾಡಿದ್ದರೋ ಅಲ್ಲಿ ಸರ್ಕಾರಿ ಬಸ್ಸುಗಳೇ ವಿರಳ. ಅದರಲ್ಲೂ ಮಂಗಳೂರು ಸಿಟಿಯಲ್ಲಿ ಉದ್ಯೋಗಸ್ಥ ಮಹಿಳೆಯರು ಸಂಚರಿಸುವುದು ಖಾಸಗಿ ಸಿಟಿ ಬಸ್ಸುಗಳಲ್ಲಿ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಕೆಲವೊಂದು ರಸ್ತೆಗಳಲ್ಲಿ ಸರ್ಕಾರಿ ಬಸ್​​ಗಳು ಸಂಚಾರ ನಡೆಸುತ್ತಿವೆ. ಮಂಗಳೂರಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಸರ್ಕಾರಿ ಬಸ್​​​ಗಳೇ ಇವೆ. ಸರ್ಕಾರಿ ಬಸ್​​ಗಳಲ್ಲೂ 30 ಶೇಕಡಾ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಮೂಲಕ ಸರ್ಕಾರದ ಯೋಜನೆಗಳು ಈ ಭಾಗದ ಜನರಿಗೆ ಉಪಯೋಗವಾಗಬಹುದು. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಮಹಿಳಾ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲೇ ಸಂಚರಿಸುತ್ತಾರೆ.

ಕರಾವಳಿಯಲ್ಲಿ ಖಾಸಗಿ ಮತ್ತು ಕೆಎಸ್​​ಆರ್​ಟಿಸಿ ಬಸ್ ಎಷ್ಟಿವೆ?

ಲೆಕ್ಕಾಚಾರದ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳೆರಡರಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಖಾಸಗಿ ಬಸ್​​ಗಳು ಸಂಚರಿಸುತ್ತಿವೆ. ಇವುಗಳ ಪೈಕಿ ಉಡುಪಿಯಲ್ಲಂತೂ ಖಾಸಗಿ ಬಸ್ ಗಳದ್ದೇ ಪಾರಮ್ಯ, ಹಾಗೂ ಉತ್ತಮ ಸೇವೆಯನ್ನೂ ನೀಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಎಸ್​​ಆರ್​ಟಿಸಿ ಬಸ್​​ಗಳು ಮಂಗಳೂರು ವಿಭಾಗದಲ್ಲಿ 564 ಮತ್ತು ಪುತ್ತೂರು ವಿಭಾಗದಲ್ಲಿ 502 ಇವೆ. ಆದರೆ ಖಾಸಗಿ ಬಸ್ಸುಗಳಲ್ಲಿ ಮಂಗಳೂರಲ್ಲೇ ಸಿಟಿ ಬಸ್ ಗಳು 328, ಸರ್ವೀಸ್ ಬಸ್ಸುಗಳು 1,670, ಒಪ್ಪಂದ ಸಾರಿಗೆ ಬಸ್ಸುಗಳು 57 ಇವೆ. ಮಂಗಳೂರಿನಿಂದ ಉಡುಪಿ, ಕುಂದಾಪುರ, ಕೊಲ್ಲೂರು,. ಕಾರ್ಕಳ ಕಡೆಗಳಿಗೆ ಸುಮಾರು 5 ನಿಮಿಷಕ್ಕೊಂದರಂತೆ ಖಾಸಗಿ ಬಸ್ ಗಳಿದ್ದು, ಶೇ.95 ಮಂದಿ ಇದನ್ನೇ ನಂಬಿದ್ದಾರೆ. ಹಾಗೆಯೇ ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳಲೂ ಖಾಸಗಿ ಬಸ್ಸುಗಳೇ ಇರೋದು.

ಖಾಸಗಿಯಲ್ಲೂ ಪಾಸ್ ಇದೆ:

ಕರಾವಳಿಯ ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಲು ಕಾರ್ಕಳ ಶಾಸಕ ಸುನೀಲ್ ಕುಮಾರ್ ಸರಕಾರವನ್ನು ಒತ್ತಾಯಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ಈ ಕುರಿತು ಗಮನ ಸೆಳೆದಿದ್ದಾರೆ. ಈಗಾಗಲೇ ಖಾಸಗಿ ಬಸ್ ಗಳು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಪ್ರಯಾಣಿಕರ ಪಾಸ್ ಅನ್ನು ನೀಡಿದೆ. ಈ ಮೂಲಕ ವಾರ್ಷಿಕ 15 ಕೋಟಿ ರೂ. ಬಸ್ ಮಾಲಕರ ಸಂಘದಿಂದಲೇ ಭರಿಸಲಾಗುತ್ತದೆ. ಕೆಎಸ್​​ಆರ್​ಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶುಲ್ಕವನ್ನು ಸರ್ಕಾರ ಭರಿಸುವ ರೀತಿ ಖಾಸಗಿ ಬಸ್ ಗೂ ನೀಡಿದ್ದಲ್ಲಿ ನಮ್ಮಲ್ಲೂ ಉಚಿತ ಪ್ರಯಾಣದ ಅವಕಾಶ ನೀಡಲು ಬಸ್ ಮಾಲೀಕರೂ ಸಿದ್ಧರಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಕೆಎಸ್​​ಆರ್​ಟಿಸಿ ಬಸ್ಸುಗಳು​ ಕೊರೊನಾ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಉಭಯ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಕೆಎಸ್​​ಆರ್​ಟಿಸಿ ಬಸ್ಸುಗಳು ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ. ಅದೇ ರೀತಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರೂ ಅಭಿಯಾನವನ್ನೇ ಆರಂಭಿಸಿದ್ದಾರೆ. ಯಾವ ಭಾಗದಲ್ಲಿ ಸರ್ಕಾರಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದವೋ ಅಲ್ಲೆಲ್ಲಾ ಆರಂಭಗೊಳಿಸಲು ಒತ್ತಡ ಹೇರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕರಾವಳಿ ಭಾಗದಲ್ಲೀಗ ಸರ್ಕಾರಿ ಬಸ್ ಬೇಕು ಅಥವಾ ಖಾಸಗಿಯಲ್ಲಿ ಮಹಿಳೆಯರಿಗೆ ಉಚಿತ ಪಾಸ್ ಅನ್ವಯಿಸಬೇಕು ಎಂಬ ಅಭಿಯಾನ ನಿಧಾನವಾಗಿ ಶುರುವಾಗುತ್ತಿದೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point