ಕನ್ನಡ ಸುದ್ದಿ  /  Karnataka  /  Pradeep Eshwar Profile Vyakthi Vyakthithva Parishrama Neet Coaching Chikkaballapur Mla Congress Motivational Speaker Uks

Pradeep Eshwar: ಅದೃಷ್ಟ ನಂಬದ ಪರಿಶ್ರಮಿ ಈ ಮಾತಿನ ಮಲ್ಲ; ಪರಿಶ್ರಮದ ಪ್ರದೀಪ್‌ ಈಶ್ವರ್‌

Pradeep Eshwar: ಮಾತು ಮಾತು ಮಾತು. ಅದೃಷ್ಟದ ಬಗ್ಗೆ ನಂಬಿಕೆಯೇ ಇಲ್ಲ. ಪರಿಶ್ರಮವೇ ಎಲ್ಲ. ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು ಶಾಸಕರಾದ ಮೋಟಿವೇಶನಲ್‌ ಸ್ಪೀಕರ್‌ ಅನ್ನು ಪರಿಚಯಿಸುವ ಪ್ರಯತ್ನ ಚೊಚ್ಚಲ ʻವ್ಯಕ್ತಿ ವ್ಯಕ್ತಿತ್ವʼ ಅಂಕಣದ ಮೂಲಕ ಮಾಡುತ್ತಿದ್ದೇವೆ.

ಪ್ರದೀಪ್‌ ಈಶ್ವರ್‌
ಪ್ರದೀಪ್‌ ಈಶ್ವರ್‌ (HT Kannada)

ಪೆರೇಸಂದ್ರ ಪ್ರದೀಪ್‌ ಈಶ್ವರ್‌ ಅಯ್ಯರ್‌ (Peresandra Pradeep Eshwar Ayyar). ಹೀಗಂದ್ರೆ ಯಾರಿಗೂ ತತ್‌ಕ್ಷಣಕ್ಕೆ ಗೊತ್ತಾಗಲ್ಲ. ಸಿಂಪಲ್ಲಾಗಿ ಪ್ರದೀಪ್‌ ಈಶ್ವರ್‌ (Pradeep Eshwar) ಎಂದೋ ಪರಿಶ್ರಮ ನೀಟ್‌ ಅಕಾಡೆಮಿಯ ಪ್ರದೀಪ್‌ ಈಶ್ವರ್‌ (Parishrama NEET Academy Pradeep Eshwar) ಎಂದೋ ಹೇಳಿದರೆ ಕೂಡಲೇ ಕರ್ನಾಟಕದ ಜನತೆ ಕಿವಿನೆಟ್ಟಗಾಗುತ್ತದೆ. ವಾಟ್ಸ್‌ಆಪ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಯೂಟ್ಯೂಬ್‌ನಲ್ಲೋ ಅವರ ಮಾತುಗಳ ವಿಡಿಯೋ ಬಂತೆಂದರೆ ಕೂಡಲೇ ಅದನ್ನೊಮ್ಮೆ ನೋಡಿ ಬಿಡೋಣ ಎಂಬ ಸಹಜ ಕುತೂಹಲ ಸೃಷ್ಟಿಯಾಗಿಬಿಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಹೌದು ಪ್ರದೀಪ್‌ ಈಶ್ವರ್‌ ಈಗ ಚಿಕ್ಕಬಳ್ಳಾಪುರ ಶಾಸಕ. ಪ್ರಭಾವಿ, ಶ್ರೀಮಂತ ರಾಜಕಾರಣಿ, ಮಾಜಿ ಸಚಿವ ಡಾ.ಸುಧಾಕರ್‌ ವಿರುದ್ಧ ಗೆದ್ದು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಡಾ.ಸುಧಾಕರ್‌ ಹಣ ಬಲ ಮತ್ತು ರಾಜಕೀಯ ಅನುಭವದ ಎದುರು ಪ್ರದೀಪ್‌ ಈಶ್ವರ್‌ ಏನು ಮಾಡಿಯಾರು ಎಂಬ ಪ್ರಶ್ನೆಯೇ ಚುನಾವಣೆಗೆ ಮೊದಲು ಓಡಾಡುತ್ತಿತ್ತು.

ಪ್ರದೀಪ್‌ ಈಶ್ವರ್‌ ಅವರ ಚುನಾವಣಾ ಪ್ರಚಾರದ ಭಾಷಣದ ತುಣುಕುಗಳನ್ನು ದೂರದಲ್ಲಿದ್ದು ನೋಡಿದವರಿಗೆ ಬಹಳ ಆದರ್ಶದ ಮಾತುಗಳನ್ನು ಆಡುತ್ತಿದ್ದಾರೆ. ಈ ರೀತಿ ಮಾತನಾಡಿದರೆ ಮತದಾರ ಒಲಿಯುವನೇ ಎಂಬ ಭಾವ ಅನೇಕರನ್ನು ಕಾಡಿತ್ತು. ಅವರ ಮಾತುಗಳು ರಾಜಕೀಯ ಎದುರಾಳಿಗಳ ಕೈಗೆ ಸಿಕ್ಕು ಟ್ರೋಲ್‌ ಆಗಿದ್ದೂ ಇದೆ. ಇಷ್ಟೆಲ್ಲ ಆದರೂ ಮತದಾರರು ಡಾ.ಸುಧಾಕರ್‌ ಅವರನ್ನು ಸೋಲಿಸಿ, ಪ್ರದೀಪ್‌ ಈಶ್ವರ್‌ ಅವರನ್ನು ಗೆಲ್ಲಿಸಿದರು. ಅಲ್ಲಿಗೆ ಪ್ರದೀಪ್‌ ಈಶ್ವರ್‌ ಜೇಂಟ್‌ ಕಿಲ್ಲರ್‌ ಎನಿಸಿಕೊಂಡರು. ಪ್ರದೀಪ್‌ ಈಶ್ವರ್‌ ಮಾತುಗಳಲ್ಲೇ ಹೇಳುವುದಾದರೆ ʻರಣಬೇಟೆಗಾರʼ ಎನಿಸಿಕೊಂಡರು.

ಚುನಾವಣಾ ರಾಜಕೀಯ ಸೆಳೆದ ಬಗೆ...

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಸಿಕ್ಕಿದ್ದು ಅಚಾನಕ್‌ ಆಗಿ ಎಂಬುದನ್ನು ಪ್ರದೀಪ್‌ ಈಶ್ವರ್‌ ಇತ್ತೀಚೆಗೆ ಮಾಧ್ಯಮ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದನ್ನು ಅವರ ಮಾತಿನಲ್ಲೇ ಉಲ್ಲೇಖಿಸುವುದಾದರೆ, "ಚಿಂತಾಮಣಿ ಟೈಗರ್‌, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರ ಮನೆಗೆ ಜನ್ಮದಿನಕ್ಕೆ ಶುಭಕೋರಲು ಹೋಗಿದ್ದೆ. ಆಗ ಅವರು ಏನ್‌ ಮಾಡ್ತಿದ್ದೀಯಾ ಅಂದ್ರು. ಟ್ಯೂಷನ್‌ ಸೆಂಟರ್‌ ನಡೆಸ್ತಾ ಇದ್ದೇನೆ ಅಂದೆ. ಎಂಎಲ್‌ಎ ಆಗ್ತೀಯಾ? ಅಂತ ಕೇಳಿದ್ರು. ನಾನಾ ಅಂತ ಕೇಳಿದೆ. ಹೌದು, ಚಿಕ್ಕಬಳ್ಳಾಪುರದಿಂದ ಅಂತ ಹೇಳಿದ್ರು. ಒಂದೆರಡು ದಿನ ಟೈಮ್‌ ಕೊಡಿ ಅಂತ ಕೇಳಿದೆ. ನಂತರ ಶಿವಶಂಕರ ರೆಡ್ಡಿ ಸಾಹೇಬ್ರು, ವೀರಪ್ಪ ಮೊಯ್ಲಿ ಸಾಹೇಬ್ರು, ರಮೇಶ್‌ ಕುಮಾರ್‌ ಸಾಹೇಬ್ರು ಜತೆಗೂ ಮಾತುಕತೆ ಆಯಿತು. ಸುಧಾಕರ್‌ ವಿರುದ್ಧ ಗೆಲ್ಲೋದಕ್ಕೆ ರಾಜಕೀಯ ಗೊತ್ತಿಲ್ಲದವರೇ ಆಗಬೇಕು ಅಂದ್ರು. ಮನೆಗೆ ಬಂದು ವಿಚಾರ ಹೇಳಿದೆ. ಸುಧಾಕರ್‌ ವಿರುದ್ಧ ಗೆಲ್ಲೋದಕ್ಕೆ ಆಗುತ್ತಾ ಅಂತ ಪ್ರಶ್ನೆ ಮಾಡಿದ್ರು. ಯಾರ ಬಳಿ ಹೇಳಿದ್ರೂ ಅದೇ ಪ್ರಶ್ನೆ ಎದುರಾಯಿತು. ಕೊನೆಗೆ ಮನಸ್ಸು ಮಾಡಿದೆ. ಸಿದ್ದರಾಮಯ್ಯ ಅವರ ಮನೆಗೆ ಹೋದೆ. ಡಿಕೆಶಿವಕುಮಾರ್‌ ಅವರನ್ನೂ ಭೇಟಿ ಮಾಡಿದೆ. ಬಿ.ಫಾರಂ ಸಿಕ್ಕಿತು. ಚುನಾವಣೆಗೆ ನಿಂತು ಗೆದ್ದೆ" ಎಂದು ವಿವರಣೆ ನೀಡಿರುವುದು ಗಮನಸೆಳೆಯುತ್ತದೆ.

ಧನಾತ್ಮಕ ಚಿಂತನೆ ಮತ್ತು ಮಾತು ಅವರ ಬಂಡವಾಳ

ಈ ಗೆಲುವಿನ ಬಳಿಕ ಅವರು ರಾಜ್ಯದ ಗಮನಸೆಳೆಯತೊಡಗಿದ್ದಾರೆ. ಕ್ಷೇತ್ರದಲ್ಲಿ ಇದ್ದರೆ ಇಂತಹ ಶಾಸಕ ಇರಬೇಕು ಎಂಬ ಭಾವನೆ ಉಳಿದ ಕ್ಷೇತ್ರಗಳ ಮತದಾರರಲ್ಲೂ ಮೂಡತೊಡಗಿದೆ. ಕಾರಣ ಅವರ ನುಡಿ ಮತ್ತು ನಡೆ. ಹೌದು, ಮಾತೇ ಅವರ ಬಂಡವಾಳ. ಅದಕ್ಕೆ ಪೂರಕ ಅವರ ಧನಾತ್ಮಕ ಚಿಂತನೆ, ಮನಸ್ಥಿತಿ. ಅದು ಅವರ ಮಾತು ಮಾತಿನಲ್ಲೂ ದೃಢವಾಗುತ್ತ ಸಾಗುತ್ತದೆ.

ಅವರ ಮೇಲೆ ಅವರಿಗೇ ಇರುವಂತಹ ಆ ಅದಮ್ಯ ವಿಶ್ವಾಸ ಅದು ಒಮ್ಮೆಲೇ ಬಂದಿರುವಂಥದ್ದಲ್ಲ. ಅವರ ಮಾತುಗಳಲ್ಲೇ ಅದು ವ್ಯಕ್ತವಾಗುತ್ತದೆ. ಪಿಯುಸಿ ಓದಿ, ಪದವಿ ಪೂರ್ಣಗೊಳಿಸಲಾಗದೇ ಇದ್ದರೂ ಹೊಟ್ಟೆಪಾಡಿಗಾಗಿ ಟ್ಯೂಷನ್‌ ವೃತ್ತಿ ಆರಂಭಿಸಿದವರು. ಕಾಲಾನುಕ್ರಮದಲ್ಲಿ ಅದರಲ್ಲಿ ಯಶಸ್ವಿಯಾಗಿ, ಪರಿಶ್ರಮ ನೀಟ್‌ ಅಕಾಡೆಮಿ ಶುರುಮಾಡಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಪ್ರದೀಪ್‌.

ಆದರ್ಶದ ಮಾತುಗಳನ್ನು ಆಲಿಸುವುದೇ ಚೆಂದ

ಪ್ರದೀಪ್‌ ಈಶ್ವರ್‌ ಅವರ ಮಾತು ಸೂಜಿಗಲ್ಲಿನಂತೆ ಎಲ್ಲರನ್ನೂ ತಮ್ಮೆಡೆಗೆ ಸೆಳೆಯುತ್ತಿದೆ. ಅವರ ಮನಸ್ಸಿನ ಭಾವ ಬಿಂಬಿಸಬಹುದೆಂಬ ಆಶಯದೊಂದಿಗೆ ಅವರ ಅಂತಹ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ.

"ಅಧಿಕಾರ ಒಬ್ಬರ ಸೊತ್ತಾ? ಹೊಸಬರು ಬರಬೇಕು. ಪಾರ್ಟಿ ನನಗೆ ಕೊಟ್ರೂ ನಿಲ್ತೇನೆ. ಆದರೆ ಪ್ರದೀಪ್‌ ಈಶ್ವರೇ ಸತ್ತುಹೋಗುವವರೆಗೂ ಎಂಎಲ್‌ಎ ಆಗಬೇಕಾ? ನನಗೊಂದು ಅವಧಿ. ನಾನೇನು ಅಂತ ತೋರಿಸ್ತೇನೆ. ಇನ್ನೊಬ್ಬ ಸಮರ್ಥ ಯುವಕನನ್ನು ಕಣಕ್ಕೆ ಇಳಿಸಿದರೆ ಹೆಗಲಮೇಲೆ ಕೂರಿಸಿ ಪ್ರಚಾರ ಮಾಡಿ ಗೆಲ್ಲಿಸ್ತೇನೆ. ಬರಬೇಕು ಹೊಸ ಹುಡುಗರು" - ಈ ರೀತಿಯಾಗಿ ನೇರಾನೇರಾ ಜನಸಾಮಾನ್ಯರ ಮನದ ಮಾತನ್ನು ಹೇಳುತ್ತ ಎಲ್ಲರ ಹುಬ್ಬೇರುವಂತೆ ಮಾತನಾಡುತ್ತಿದ್ದಾರೆ ಪ್ರದೀಪ್‌ ಈಶ್ವರ್.‌

ಚುನಾವಣೆ ಗೆದ್ದ ಬಳಿಕ ದಿನಕ್ಕೆ ಆರು ತಾಸು ಬಿಡುವು ಮಾಡಿಕೊಂಡು ಕ್ಷೇತ್ರದಲ್ಲಿ ಮನೆ ಮನೆಗೆ ಭೇಟಿ ನೀಡುವ ಕೆಲಸ ಮಾಡಿದ್ದಾರೆ ಪ್ರದೀಪ್‌. ಅನೇಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನೂ ಕೊಟ್ಟಿದ್ದಾರೆ. ಅಲ್ಲೂ ಅಷ್ಟೇ, ಅವರ ಮಾತುಗಳೇ ಗಮನಸೆಳೆಯುತ್ತಿದೆ. ಭಾವನಾತ್ಮಕವಾಗಿ ಜನರ ಮನಸ್ಸನ್ನು ಮುಟ್ಟುವ ಕೆಲಸವನ್ನು ಪ್ರದೀಪ್‌ ಮುಂದುವರಿಸಿದ್ದಾರೆ. ಅರ್ಥಾತ್‌ ಜನರಿಗೆ ಸ್ಪಂದಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ಕಾರಣ ಪ್ರದೀಪ್‌ ಗಮನ ಸೆಳೆಯುತ್ತಿದ್ದಾರೆ.

ಸಾರ್ವಜನಿಕ ಬದುಕಿನ ಬಯಲಿಗೆ ಬಂದರೆ ಅಲ್ಲಿ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಮಿಥ್ಯಾರೋಪ, ಚಾರಿತ್ರ್ಯ ಹರಣ ಸೇರಿ ಎಲ್ಲ ರೀತಿಯ ಅನಾಚಾರಗಳನ್ನೂ ಎದುರಿಸಬೇಕಾಗುತ್ತದೆ. ಇದನ್ನೆಲ್ಲ ಎದುರಿಸುವುದಕ್ಕೆ ಸಾಧ್ಯವಾಗದೇ ಇದ್ದವರು ಸಾರ್ವಜನಿಕ ಬದುಕಿಗೆ ಬರಬಾರದು ಎಂಬ ಮಾತನ್ನೂ ಅವರು ಕೆಲವೊಂದು ಕಡೆ ಹೇಳಿದ್ದಾರೆ.

ಹೀಗೆ, ಅವರ ಜೀವನಾದರ್ಶದ ಮಾತುಗಳನ್ನು ಆಲಿಸುವುದೇ ಮುದ ನೀಡುವ ಕೆಲಸ. ಆ ಆದರ್ಶಗಳಂತೆ ಬದುಕು ರೂಪಿಸುವುದು ಸಾಧ್ಯವಾ? ಸಮಸ್ಯೆಗಳು ಬಗೆಹರಿಯುವುದೇ ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರಿಸುವುದು ಕಷ್ಟದ ಕೆಲಸ. ಆದರೆ, ಪ್ರದೀಪ್‌ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ಖುಷಿಯಲ್ಲಿದ್ದಾರೆ ಅವರ ಕ್ಷೇತ್ರದ ಜನ.

ಸಾರ್ವಜನಿಕವಾಗಿ ಮುಂಚೂಣಿಗೆ ಬಂದ ಸಂದರ್ಭ...

ಒಬಿಸಿ ಬಲಿಜ ಸಮುದಾಯದವರಾದ ಪ್ರದೀಪ್‌ ಈಶ್ವರ್‌, 2016ರಲ್ಲಿ ದೇವನಹಳ್ಳಿ ಸಮೀಪದ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಅದು ವಿಫಲವಾಯಿತು. ಸ್ಥಳೀಯ ಟಿವಿ ಚಾನೆಲ್‌ ಒಂದರಲ್ಲಿ ನಿರೂಪಕರಾದರು. ಮುಂದೆ, 2018ರ ವಿಧಾನಸಭೆ ಚುನಾವಣೆ ವೇಳೆ ಅಂದು ಶಾಸಕರಾಗಿದ್ದ ಡಾ ಕೆ ಸುಧಾಕರ್‌ ಅವರನ್ನು ಎದುರು ಹಾಕಿಕೊಂಡರು. ಅವರ ವಿರುದ್ಧ ನಾನಾ ವಿಡಿಯೋಗಳನ್ನು ಯೂಟ್ಯೂಬ್‌ಗೆ ಅಪ್ಲೋಡ್‌ ಮಾಡಿದ್ದರು. ಸುಧಾಕರ್‌ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್‌ಕಿರಣ್‌ ಪರ ಭರ್ಜರಿ ಪ್ರಚಾರ ಮಾಡಿ ಗಮನಸೆಳೆದಿದ್ದರು. ಪ್ರದೀಪ್‌ ಅವರೇ ನೀಡಿದ ಹೇಳಿಕೆ ಪ್ರಕಾರ, 22 ಕೇಸ್‌ಗಳು ಅವರ ವಿರುದ್ಧ ದಾಖಲಾಗಿದ್ದವು.

ಬಾಲ್ಯದ ಬದುಕು ಸಂಕಷ್ಟದ ಹಾದಿ...

ಅವರ ವೈಯಕ್ತಿಕ ಬದುಕು ಸುಗಮವಾದುದು ಆಗಿರಲಿಲ್ಲ. ಬಾಲ್ಯದಲ್ಲೇ ಅಪ್ಪ, ಅಮ್ಮನನ್ನು ಕಳೆದುಕೊಂಡ ಅವರು ಅನಾಥರಾಗಿದ್ದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಈ ವಿಚಾರ ಗಮನಸೆಳೆದಿತ್ತು. ಪ್ರದೀಪ್‌ ಅವರ ಅಪ್ಪ ಮತ್ತು ಅಮ್ಮ ಹಿಂದುಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿ ಆಗಿರಲಿಲ್ಲ. ಹಣಕಾಸಿನ ಸಂಕಷ್ಟವೇ ಅವರ ಪ್ರಾಣಕ್ಕೆ ಎರವಾಯಿತು ಎಂಬುದನ್ನು ಪ್ರದೀಪ್‌ ಬಹುತೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಬಹಿರಂಗ ಪ್ರಚಾರದಲ್ಲೂ ಈ ವಿಚಾರವನ್ನು ನೋವಿನಿಂದ ಹೇಳಿದ್ದರು. ಅಪ್ಪ, ಅಮ್ಮನ ಮರಣಾನಂತರ ಅಜ್ಜಿ ಮನೆಯಲ್ಲಿ ಬೆಳೆದುದಾಗಿ ಹೇಳಿಕೊಂಡಿದ್ದಾರೆ.

ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್‌ ಪ್ರಕಾರ ಅವರ ವಯಸ್ಸು 38. ಪತ್ನಿ ಎಂ.ನಯನಾ. ಪ್ರದೀಪ್ ಈಶ್ವರ್‌ ಅವರ ವಾರ್ಷಿಕ ಆದಾಯ 34,67,770 ರೂಪಾಯಿ. ಪತ್ನಿ ನಯನಾ ಅವರ ವಾರ್ಷಿಕ ಆದಾಯ 24,50,000 ರೂಪಾಯಿ. parishramamd@gmail.com ಇದು ಅವರ ಇಮೇಲ್‌ ಐಡಿ. ಮೊಬೈಲ್‌ ಸಂಖ್ಯೆ 6360967043. ಟ್ವಿಟರ್‌ ಖಾತೆ @eshwar_pradeep, ಫೇಸ್‌ಬುಕ್‌ ಪುಟ - @pradeepeshwarnimmondige ಎಂದಿದೆ.

ಲೇಖಕರಾಗಿ, ಮೋಟಿವೇಶನಲ್‌ ಸ್ಪೀಕರ್‌ ಆಗಿ, ಟ್ಯೂಷನ್‌ನಲ್ಲಿ ಬಯೋಲಜಿ ಟೀಚರ್‌ ಆಗಿ ಸಾಕಷ್ಟು ಪ್ರಭಾವಿಯಾಗಿ ಬೆಳೆದವರು ಪ್ರದೀಪ್‌. ಒಂದಂತೂ ನಿಜ. ಪ್ರದೀಪ್‌ ಈಶ್ವರ್‌ ದೊಡ್ಡ ಕನಸುಗಾರ. ಮಹತ್ವಾಕಾಂಕ್ಷಿ. ಆದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಜನರಷ್ಟೇ ಅಲ್ಲ, ರಾಜ್ಯದ ಜನರ ಗಮನವೂ ಪ್ರದೀಪ್‌ ಮೇಲೆ ಇದೆ ಎಂಬುದು ವಾಸ್ತವ.