ಕನ್ನಡ ಸುದ್ದಿ  /  Karnataka  /  Protest Against Wild Elephant Attacks: 50 Lakh Rupees Compensation If The Officer Dies; 15 Lakh Rupees Compensation If The Farmer Dies Why This Discrimination Questions Demonstrators

Protest against wild elephant attacks: ಸಕಲೇಶಪುರ ಕಾಡಾನೆ ಕಾಟ; ಅಧಿಕಾರಿ ಮೃತ ಪಟ್ಟರೆ 50 ಲಕ್ಷ ರೂ.; ರೈತ ಮೃತಪಟ್ಟರೆ 15 ಲಕ್ಷ ರೂ.!?

Protest against wild elephant attacks: ಕಾಡಾನೆ ತುಳಿದು ಮೃತಪಟ್ಟ ರೈತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ. ಆದರೆ, ಸರ್ಕಾರಿ ಅಧಿಕಾರಿ ಮೃತಪಟ್ಟರೆ 50 ಲಕ್ಷ ರೂಪಾಯಿಗೂ ಅಧಿಕ ಪರಿಹಾರ. ಇದರಲ್ಲೂ ರೈತರ ಪಾಲಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪ.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕು ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹಿರಿಯೂರು ಕೂಡಿಗೆ ಸಂಚಾರ ಬಂದ್ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕು ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹಿರಿಯೂರು ಕೂಡಿಗೆ ಸಂಚಾರ ಬಂದ್ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಇಂದು ನಿನ್ನೆಯದಲ್ಲ. ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯ ವಿರೋಧಿಸಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹಿರಿಯೂರು ಕೂಡಿಗೆ ಸಂಚಾರ ಬಂದ್ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ವಳಲಹಳ್ಳಿ ಗ್ರಾಪಂ ವ್ಯಾಪ್ತಿಯ ಮರ್ಕಳ್ಳಿ, ಕಿರ್ಕಳ್ಳಿ, ಬೊಬ್ಬನಹಳ್ಳಿ, ವಳಲಹಳ್ಳಿ, ಕರಿಡಗಾಲ, ಬೊಮ್ಮನಕೆರೆ, ಕಲ್ಲತೋಟ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾತ್ರಿ ವೇಳೆ ಮಾತ್ರ ಸಂಚರಿಸುತ್ತಿದ್ದ ಕಾಡಾನೆಗಳು ಈಗ ಹಗಲುವೇಳೆ ಗ್ರಾಮದೊಳಗೆ ನಿರ್ಭಯವಾಗಿ ಸಂಚರಿಸುತ್ತಾ ಬೆಳೆಹಾನಿ ಮಾಡುತ್ತಿವೆ. ಈ ಭಾಗದ ರೈತರು ಮನೆಯಿಂದ ಹೊರಹೋದರೆ ಮನೆಗೆ ಬರುವುದು ಖಾತ್ರಿ ಇಲ್ಲದಂತಾಗಿದೆ. ಹತ್ತಾರು ಆನೆಗಳ ಹಿಂಡು ಏಕಕಾಲಕ್ಕೆ ಕಾಫಿ, ಏಲಕ್ಕಿತೋಟ, ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿರುವುದರಿಂದ ವ್ಯಾಪಕ ಬೆಳೆಹಾನಿಯಾಗುತ್ತಿದೆ. ಪರಿಣಾಮ ಈ ಭಾಗದಲ್ಲಿ ಸಾಕಷ್ಟು ಭತ್ತದ ಗದ್ದೆಗಳನ್ನು ಪಾಳುಬಿಡಲಾಗುತ್ತಿದೆ. ಇದರಿಂದ ಆಹಾರ ಸಮಸ್ಯೆ ಸೃಷ್ಟಿಯಾಗಿದೆ ಎಂದು ಪ್ರತಿಭಟನಾಕಾರರು ಅಹವಾಲು ಹೇಳಿದರು.

ಶಾಸಕ ಕುಮಾರಸ್ವಾಮಿ ಹೇಳುವುದೇನು?

ರಾಜ್ಯ ಸರ್ಕಾರ ರಚಿಸಿರುವ ಟಾಸ್ಕ್ ಪೋರ್ಸ್‌ನಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಸಕಾರತ್ಮಕವಾದ ಉತ್ತರ ತಾಲೂಕಿನ ರೈತರಿಗೆ ಸಿಕ್ಕಿಲ್ಲ. ಹಾಗಾಗಿ ಬೆಳಗಾವಿ ಅದಿವೇಶನ ಪ್ರಾರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ಮಲೆನಾಡು ಭಾಗದ ಜನರ ಸಮಸ್ಯೆಯನ್ನು ಅವರೇ ಖುದ್ದಾಗಿ ಬಂದು ಸಭೆ ನಡೆಸಿ ಪರಿಸ್ಥಿತಿಯ ತೀವ್ರತೆ ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ಬೆಳಗಾವಿಯಲ್ಲಿ ನಡೆಯುವ ಅದಿವೇಶನದ ವೇಳೆ ಧರಣಿ ನಡೆಸಲು ಚಿಂತನೆ ನಡೆಸಲಾಗುವುದು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಅಧಿಕಾರಿಗಳ ಜೀವದಂತೆ ರೈತನ ಜೀವಕ್ಕೆ ಬೆಲೆ ಇಲ್ಲವೆ? ಪರಿಹಾರದಲ್ಲಿ ತಾರತಮ್ಯ ಯಾಕೆ?

ಪರಿಹಾರ ನೀಡುವಲ್ಲಿಯೂ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಅಧಿಕಾರಿ ಮೃತಪಟ್ಟರೆ 50 ಲಕ್ಷ ರೂಪಾಯಿ ಪರಿಹಾರ ನೀಡುವ ಸರ್ಕಾರ, ಕಾಡಾನೆ ತುಳಿದು ರೈತ ಮೃತಪಟ್ಟರೆ ಆತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸುತ್ತದೆ. ಇದರಲ್ಲೂ ರೈತರ ಪಾಲಿಗೆ ಅನ್ಯಾಯವಾಗುತ್ತಿದೆ. ಹತ್ತಾರು ವರ್ಷ ಕಷ್ಟಪಟ್ಟು ಬೆಳೆದ ಕಾಫಿಗಿಡಗಳು ಕಾಡಾನೆ ದಾಳಿಯಿಂದ ನಾಶವಾದರೆ ನೀಡುವ ಪರಿಹಾರ ಸಹ ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ದೂರಿದರು.

ಮುಖ್ಯಮಂತ್ರಿ ಆದೇಶದ ಹಿನ್ನೆಲೆಯಲ್ಲಿ ತಾಲೂಕಿಗೆ ಆಗಮಿಸಿದ್ದ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹೆತ್ತೂರು ಹೋಬಳಿಗೆ ಭೇಟಿ ನೀಡದೆ ನಿರ್ಲಕ್ಷಿಸಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕರೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಕಲೇಶಪುರ ತಾಲೂಕಿನಲ್ಲಿ ಎರಡು ದಶಕಗಳ ಹಿಂದೆ ಇದ್ದ 10 ಕಾಡಾನೆಗಳು ಇಂದು ನೂರಾಗಿವೆ. ಮುಂದಿನ ಒಂದು ದಶಕದಲ್ಲಿ ಕಾಡಾನೆಗಳ ಸಂಖ್ಯೆ ದ್ವಿಗುಣಗೊಳ್ಳಲಿದ್ದು, ಕಾಡಾನೆಗಾಗಿ ಗ್ರಾಮಗಳನ್ನೇ ಸ್ಥಳಾಂತರಿಸುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಇದಕ್ಕೆ ನೂರಾರು ಕೋಟಿ ವಿನಿಯೋಗಿಸ ಬೇಕಾಗುತ್ತದೆ. ಕೂಡಲೇ ಸಮಸ್ಯೆ ಗಂಭೀರತೆ ಅರಿತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹೈಕೋರ್ಟಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ; ಸಮಸ್ಯೆ ಪರಿಹಾರವಾಗದಿದ್ದರೆ ಚುನಾವಣೆ ಬಹಿಷ್ಕಾರ

ಸಕಲೇಶಪುರ ತಾಲೂಕಿನಲ್ಲಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಬೇಕು. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಕದ್ದಮೆ ದಾಖಲಿಸಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನಕಾರ್ಯದರ್ಶಿ ಕೃಷ್ಣಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾಗಿ ʻಪ್ರತಿನಿಧಿʼ ವರದಿ ಮಾಡಿದೆ.

ಕಾಡಾನೆ ಸಮಸ್ಯೆ ಪರಿಹರಿಸಲು ಸರ್ಕಾರ ಗಂಬೀರ ಚಿಂತನೆ ನಡೆಸದಿರುವುದನ್ನು ಖಂಡಿಸಿ ಮುಂಬರುವ ಚುನಾವಣೆ ಬಹಿಷ್ಕರಿಸುವುದು. ಸೇರಿದಂತೆ ಬೆಳಗಾವಿನಲ್ಲಿ ನಡೆಯಲಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ನಿಶ್ಚಿತವಾಗಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಭಟನೆ ಅಂಗವಾಗಿ ಗ್ರಾಮದ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಗ್ರಾಮದ ಅಂಗಡಿಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಬೆಳೆಗಾರರ ಸಂಘ,ಹೆತ್ತೂರು ಹೋಬಳಿ ಬೆಳೆಗಾರರ ಸಂಘ,ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು.

ಪ್ರತಿಭಟನೆ ನೇತೃತ್ವವನ್ನು ವಳಲಹಳ್ಳಿ ಪಂಚಾಯಿತಿ ವ್ಯಾಪ್ತಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಂ ಬಾಲು ವಹಿಸಿದ್ದರು. ವಳಲಹಳ್ಳಿ ಗ್ರಾ.ಪಂ ಅಧ್ಯಕ್ಷ ರೇಣುಕಾ ಬೊಮ್ಮನಕೆರೆ,ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ,ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಜಿಪಂ ಮಾಜಿ ಸದಸ್ಯೆ ಉಜ್ಮರುಜ್ವಿ ಸುದರ್ಶನ್, ಮುರುಳಿಮೋಹನ್, ಕರಡಿಗಾಲ ಕೃಷ್ಣೆಗೌಡ, ವಳಲಹಳ್ಳಿ ಅಶ್ವಥ್, ಬೆಕ್ಕಿನಹಳ್ಳಿ ನಾಗರಾಜ್ ಮತ್ತಿತರರಿದ್ದರು.

IPL_Entry_Point