ಕನ್ನಡ ಸುದ್ದಿ  /  Lifestyle  /  Health Fitness Why So Many Young People Are Dying Of Heart Issues Expert Opinion Youth Heart Health News In Kannada Rst

Heart Problem in Youth: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆ; ಕಾರಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರ ಸಲಹೆ ಹೀಗಿದೆ

Raising Heart Problems in Youth: ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಹೃದಯಾಘಾತದಿಂದ ಯುವಜನರು ಮರಣ ಹೊಂದುತ್ತಿರುವ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದು ಅಪಾಯದ ಮುನ್ಸೂಚನೆಯೂ ಹೌದು. ಹಾಗಾದರೆ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆಗೆ ಕಾರಣಗಳೇನು ಹಾಗೂ ಈ ಕುರಿತು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.

ಯುವಜನರೇ, ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಯುವಜನರೇ, ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಕಳೆದ ಕೆಲ ವರ್ಷಗಳಿಂದೀಚೆಗೆ 45 ವಯಸ್ಸಿನ ಒಳಗಿನವರಲ್ಲಿ ಹಠಾತ್‌ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಕೋವಿಡ್‌ ಸಾಂಕ್ರಾಮಿಕ ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳು, ಮುನ್ನೆಚ್ಚರಿಕಾ ಕ್ರಮಗಳು, ಕೋವಿಡ್‌-19 ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಈ ಎಲ್ಲಾ ಅಂಶಗಳ ಬಗ್ಗೆ ಮುಂಬೈನ ಏಷ್ಯನ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ಹೃದ್ರೋಗ ತಜ್ಞ ಡಾ. ರಮಾಕಾಂತ ಪಾಂಡಾ ಹಂಚಿಕೊಂಡ ಮಾಹಿತಿ ಹೀಗಿದೆ.

ತೊಂದರೆಯುಂಟು ಮಾಡುವ ಪ್ರವೃತ್ತಿ

ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಯಿಂದ ಯುವ ಜನರು ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಎರಡು ಪ್ರಮುಖ ಅಂಶಗಳನ್ನು ಗಮನಿಸಬೇಕು. ಮೊದಲನೆಯದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಇರುವ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಎರಡನೇಯದು ವಯಸ್ಸಿನ ಪರಿಮಿತಿಯಲ್ಲದೇ ಎಲ್ಲಾ ವಯಸ್ಸಿನವರೂ ಹೃದಯ ಯೋಗಕ್ಷೇಮಕ್ಕೆ ಒತ್ತು ನೀಡಬೇಕು ಎಂಬುದು. ಹೃದಯ ಸಮಸ್ಯೆ ಯಾವಾಗ ಬೇಕಾದರೂ ಕಾಣಿಸಬಹುದು. ಅದರಲ್ಲೂ ವಿಶೇಷವಾಗಿ ಇಂದಿನ ಒತ್ತಡದ ಜೀವನಶೈಲಿ, ಮಧುಮೇಹ, ಸ್ಥೂಲಕಾಯತೆ ಹಾಗೂ ಅಧಿಕ ರಕ್ತದೊತ್ತಡದಂತಹ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೃದ್ರೋಗಕ್ಕೆ ಕಾರಣವಾಗಬಹುದು.

ಈ ಕೂಡಲೇ ನಾವು ನಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅನಾರೋಗ್ಯಕರ ಜೀವನಶೈಲಿ ಅನುಸರಿಸುವುದನ್ನು ತಕ್ಷಣಕ್ಕೆ ನಿಲ್ಲಿಸುವ ಮೂಲಕ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಸಣ್ಣ ವಯಸ್ಸಿನಿಂದಲೇ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯ ಎನ್ನಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಹೃದ್ರೋಗಗಳಿಂದ ದೂರ ಇರಬಹುದು, ಮಾತ್ರವಲ್ಲ ಆರೋಗ್ಯಕರ ಜೀವನವನ್ನು ನಡೆಸಬಹುದು.

ಯುವಜನರು ಹೃದಯಾಘಾತದ ಅಪಾಯದಲ್ಲಿದ್ದಾರೆಯೇ?

ಕಳೆದ ಮೂರು ವರ್ಷಗಳಿಂದ ಸಿನಿರಂಗದ ಹಲವು ಖ್ಯಾತರು ಹಠಾತ್‌ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌, ಚಿರಂಜೀವಿ ಸರ್ಜಾ, ಹಿಂದಿ ಕಿರುತೆರೆ ನಟ ಸಿದ್ಧಾರ್ಥ್‌ ಶುಕ್ಲಾ, ರಾಜ್‌ ಕೌಶಲ್‌ ಸೇರಿದಂತೆ ಹಲವರು ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ನೋಡಲು ಫಿಟ್‌ ಆಗಿದ್ದು, ಜಿಮ್‌ನಲ್ಲಿ ದೇಹದಂಡನೆ, ಆರೋಗ್ಯಕರ ಆಹಾರ ಸೇವನೆ ಹಾಗೂ ಜೀವನಶೈಲಿಯನ್ನು ನಡೆಸುತ್ತಿದ್ದವರು. ಹಾಗಾದರೆ ಇವರಲ್ಲಿನ ಹೃದಯಾಘಾತಕ್ಕೆ ಕಾರಣ ಏನಿರಬಹುದು?.

ಈ ಬಗ್ಗೆ ಹೇಳುವ ಪಾಂಡಾ ʼಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ ಭಾರತೀಯರು ಅದರಲ್ಲೂ ಯುವಜನರಲ್ಲಿ ಹೃದ್ರೋಗದ ಸಮಸ್ಯೆ ಹೆಚ್ಚು ಕಾಣಿಸುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ. ವ್ಯಾಯಾಮದ ಕೊರತೆ, ಕಡಿಮೆ ನಾರಿನಾಂಶ ಇರುವ ಕಳಪೆ ಡಯೆಟ್‌ ಕ್ರಮ ಪಾಲನೆ, ಧೂಮಪಾನ, ಅತಿಯಾಗಿ ಸಿಹಿ ತಿನ್ನುವುದು, ಸಂಸ್ಕರಿತ ಆಹಾರ ಹಾಗೂ ಅಧಿಕ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆ, ರಾತ್ರಿ ತಡವಾಗಿ ಮಲಗುವುದು, ಅಸಮರ್ಪಕ ಜೀವನಶೈಲಿ, ನಿದ್ದೆಯ ಕೊರತೆ, ಅತಿಯಾದ ಸ್ಕ್ರೀನ್‌ ಟೈಮ್‌ ಹಾಗೂ ಕಲುಷಿತ ವಾತಾವರಣ ಸೇರಿದಂತೆ ಅನುವಂಶಿಕ ಪ್ರವೃತ್ತಿ ಕೂಡ ಹೃದಯಾಘಾತ ಹಾಗೂ ಹೃದಯದ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಇದು ಹಲವು ಯುವಜನರಲ್ಲಿ ರೋಗನಿರ್ಣಯ ಮಾಡಲು ಸಾಧ್ಯವಾಗದಂತಹ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಇದು ಅರಿವಿಲ್ಲದಂತೆ ಹೃದ್ರೋಗದ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದು ಸುಪ್ತ ಅಪಾಯವಾಗಿದ್ದು, ಕೆಲವೊಮ್ಮೆ ಗಮನಕ್ಕೆ ಬರುವುದಿಲ್ಲ.

ನಿಮ್ಮಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸದೇ ಇದ್ದರೂ ಕೂಡ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಆ ಕಾರಣಕ್ಕೆ ಆಗಾಗ ಹೃದಯದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅದರಲ್ಲೂ ಅನುವಂಶಿಕ ಪ್ರವೃತ್ತಿ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ, ನೀವೂ ತಪ್ಪದೇ ಪರೀಕ್ಷೆಗೆ ಒಳಗಾಗಬೇಕು. ಈ ಪರೀಕ್ಷೆಗಳು ಯಾವುದೇ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಸಹಾಯ ಮಾಡುತ್ತವೆ. ಅಲ್ಲದೆ ಗಂಭೀರ ಸಮಸ್ಯೆಗೂ ಮೊದಲು ಸರಿಯಾದ ಚಿಕಿತ್ಸೆಗೆ ಅವಕಾಶ ನೀಡುತ್ತದೆ.

ಹೃದಯದ ಆರೋಗ್ಯದ ಅಪಾಯವನ್ನು ಹೆಚ್ಚಿಸುವ ಅಂಶಗಳು ಯಾವುವು?

ಹಲವಾರು ಅಪಾಯಕಾರಿ ಅಂಶಗಳು ಹೃದಯ ಸಂಬಂಧಿ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ಮಧುಮೇಹ, ಅಧಿಕ ರಕ್ತದೊತ್ತಡ, ತಂಬಾಕಿನ ಉತ್ಪನ್ನಗಳ ಸೇವನೆ, ಕೊಲೆಸ್ಟ್ರಾಲ್‌ ಮಟ್ಟದಲ್ಲಿನ ಏರಿಕೆ, ಅಸಮರ್ಪಕ ಜೀವನಶೈಲಿ, ಹೃದಯ ಸಂಬಂಧಿ ಸಮಸ್ಯೆ ಇರುವ ಕೌಟುಂಬಿಕ ಹಿನ್ನೆಲೆ, ಅತಿಯಾದ ತೂಕ ಅಥವಾ ಬೊಜ್ಜು, ಅಸಮರ್ಪಕ ಡಯೆಟ್‌ ಕ್ರಮದ ಪಾಲನೆ ಹಾಗೂ ಒತ್ತಡ ಇವು ಕಾರಣವಾಗಬಹುದು. ಈ ಅಪಾಯಕಾರಿ ಅಂಶಗಳ ಬಗ್ಗೆ ಅರಿವು ಹೊಂದಿರುವುದು ಹಾಗೂ ಹೃದಯ ಆರೋಗ್ಯದ ಮಟ್ಟವನ್ನು ಸುಧಾರಿಸಲು ಸೂಕ್ತ ಕ್ರಮವನ್ನು ಕೈಗೊಳ್ಳುವುದು ಬಹಳ ಮುಖ್ಯವಾಗುತ್ತದೆ ಹಾಗೂ ಇದರಿಂದ ಹೃದ್ರೋಗ ಪ್ರಮಾಣದಲ್ಲೂ ಇಳಿಕೆಯನ್ನು ಕಾಣಬಹುದು ಎನ್ನುತ್ತಾರೆ ಡಾ. ಪಾಂಡಾ.

ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ

ಈ ಕೆಳಗೆ ತಿಳಿಸಿರುವ ಯಾವುದೇ ರೋಗಲಕ್ಷಣಗಳು ಕಾಣಿಸಿದರೂ ತಕ್ಷಣಕ್ಕೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಯಾಕೆಂದರೆ ಅವುಗಳು ಸಂಭಾವ್ಯ ಹೃದಯ ಸಮಸ್ಯೆಯ ಎಚ್ಚರಿಕೆ ಗಂಟೆಗಳಾಗಿರಬಹುದು.

ಎದೆನೋವು, ಎದೆ ಬಿಗಿತ, ಒತ್ತಡಭಾವ ಮತ್ತು ಅಸ್ವಸ್ಥತೆ: ನೀವು ದೇಹಕ್ಕೆ ಶ್ರಮ ಹಾಕಿದ ಸಮಯದಲ್ಲಿ ಎದೆನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ಅದು ಸೌಮ್ಯವಾಗಿರಲಿ, ತೀವ್ರವಾಗಿರಲಿ ಅದರ ಬಗ್ಗೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಉಸಿರಾಟ ತೊಂದರೆ: ನಿಮಗೆ ಉಸಿರಾಡುವಾಗ ತೊಂದರೆ ಉಂಟಾದರೆ, ಉಸಿರು ಬಿಗಿ ಹಿಡಿದಂತಾದರೆ ಇದನ್ನು ನಿರ್ಲಕ್ಷಿಸಬೇಡಿ. ನೀವು ವಿಶ್ರಾಂತಿ ಪಡೆಯುವಾಗಾಗಲಿ ಅಥವಾ ದೈಹಿಕ ಚಟುವಟಿಕೆ ನಡೆಸುವ ಸಂದರ್ಭದಲ್ಲಾಗಲಿ ಉಸಿರಾಟ ತೊಂದರೆ ಕಾಣಿಸಿಕೊಂಡರೆ ಇದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಎಚ್ಚರ ವಹಿಸಿ.

ಕುತ್ತಿಗೆ, ದವಡೆ, ಗಂಟಲು, ಹೊಟ್ಟೆಯ ಮೇಲ್ಭಾಗ ಮತ್ತು ಬೆನ್ನಿನಲ್ಲಿ ನೋವು: ದೇಹದ ಈ ಭಾಗಗಳಲ್ಲಿ ವಿವರಿಸಲಾಗದಂತಹ ನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ, ಅದರಲ್ಲೂ ವಿಶೇಷವಾಗಿ ಮೇಲೆ ತಿಳಿಸಿದ ರೋಗಲಕ್ಷಣಗಳಿದ್ದು ಈ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣಕ್ಕೆ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಉತ್ತಮ.

ದೈಹಿಕ ಅಥವಾ ಮಾನಸಿಕ ಒತ್ತಡದ ಸಮಯದಲ್ಲಿ ತೋಳಗಳಲ್ಲಿ ನೋವು ಅಥವಾ ಮರಗಟ್ಟುವಿಕೆ: ನೀವು ಮಾನಸಿಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾದ ಸಮಯದಲ್ಲಿ ನಿಮ್ಮ ತೋಳಿನ ಭಾಗದಲ್ಲಿ ಹೇಳಿಕೊಳ್ಳಲಾಗದಂತಹ ನೋವು, ಅಸಹಜತೆ ಹಾಗೂ ಮರಗಟ್ಟುವಿಕೆ ಕಾಣಿಸಿದರೆ ಇದನ್ನು ನೀವು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದು ಹೃದಯ ಸಂಬಂಧಿ ಸಮಸ್ಯೆ ಆಗಿರಬಹುದು.

ಕೋವಿಡ್‌-19 ಹಾಗೂ ಹೃದಯದ ಆರೋಗ್ಯದ ನಡುವಿನ ಸಂಬಂಧವಿದೆಯೇ?

ಹೃದಯದ ಆರೋಗ್ಯದ ಮೇಲೆ ಕೋವಿಡ್‌ನ ಪ್ರಭಾವವನ್ನು ಗುರುತಿಸಲು ಹಲವಾರು ಅಧ್ಯಯನಗಳು ಪ್ರಯತ್ನಿಸಿವೆ. ಈ ಬಗ್ಗೆ ಹೇಳುವ ವೈದ್ಯರು ʼಕೋವಿಡ್‌ ಹೃದಯ ಆರೋಗ್ಯದ ಮೇಲೆ ತನ್ನ ಗುರುತನ್ನು ಉಳಿಸಿ ಹೋಗಿದೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಕೋವಿಡ್‌ನ ಪ್ರಭಾವ ತೀವ್ರವಾಗಿದ್ದಾಗ ವೈರಸ್‌ನಿಂದ ಉಂಟಾದ ಉರಿಯೂತವು ರಕ್ತದ ಹೆಪ್ಪುಗಟ್ಟುವಿಕೆಯ ಪ್ರಮಾಣವನ್ನು ಹೆಚ್ಚಿಸಿತ್ತು. ಇದುಹೃದಯದ ರಕ್ತದ ಹರಿವಿನಲ್ಲಿನ ಅಡೆತಡೆಗಳು, ಹೃದಯಾಘಾತ, ಮಯೋಕಾರ್ಡಿಟಿಸ್‌ನಂತಹ ಸಮಸ್ಯೆಗೆ ಕಾರಣವಾಗಿತ್ತು. ಅನಿಯಮಿತ ಹೃದಯದ ಬಡಿತದ ಜೊತೆಗೆ ದೀರ್ಘಕಾಲದ ಹೃದಯ ಸ್ನಾಯುವಿನ ಅಪಸಾಮಾನ್ಯ ಕ್ರಿಯೆಯು ಕಂಡುಬಂದಿತ್ತು. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯತೆಯಂತಹ ಮೊದಲೇ ಅಸ್ತಿತ್ವದಲ್ಲಿರುವ ಕಾರ್ಡಿಯೋ ಮೆಟಬಾಲಿಕ್‌ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಕೋವಿಡ್‌ನಿಂದ ಹೆಚ್ಚಿನ ತೊಂದರೆಗೆ ಒಳಗಾಗಿದ್ದಾರೆ ಹಾಗೂ ಒಳಗಾಗುವ ಸಾಧ್ಯತೆಯೂ ಹೆಚ್ಚು.

ಈ ಎಲ್ಲಾ ಮಾಹಿತಿಗಳನ್ನು ಟೈಮ್ಸ್‌ ಇಂಡಿಯಾ ಜೊತೆ ಹಂಚಿಕೊಂಡ ಡಾ. ಪಾಂಡಾ ʼಒಟ್ಟಾರೆ ನಮ್ಮ ದೈಹಿಕ ಆರೋಗ್ಯ ಹಾಗೂ ಹೃದಯದ ಯೋಗಕ್ಷೇಮದ ನಡುವಿನ ಸಂಕೀರ್ಣ ಸಂಬಂಧವಿದ್ದು, ಆರೋಗ್ಯಕ್ಕೆ ಅದರಲ್ಲೂ ವಿಶೇಷವಾಗಿ ಹೃದಯದ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸುವುದು ಬಹಳ ಅವಶ್ಯʼ ಎಂದಿದ್ದಾರೆ.

ವಿಭಾಗ