ಕನ್ನಡ ಸುದ್ದಿ  /  Lifestyle  /  Mental Health Counselling Expert Answers For Questions On Compulsive Sexual Behaviour Psychologist Bhavya Vishwanath Dmg

ಮನದ ಮಾತು: ಲೈಂಗಿಕ ವ್ಯಸನಕ್ಕೆ ಖಂಡಿತ ಇದೆ ಪರಿಹಾರ; ಆಪ್ತಸಲಹೆಯೊಂದಿಗೆ ಇರಲಿ ನಿಮ್ಮ ಮೇಲೆ ನಿಮಗೆ ನಂಬಿಕೆ

Compulsive Sexual Behaviour: ಒಂದಲ್ಲ ಒಂದು ಪ್ರಶ್ನೆ ಸದಾ ಕಾಡುತ್ತಲೇ ಇರುತ್ತದೆ. ಕೆಲವರು ಹೇಳಿಕೊಂಡು ಹಗುರಾಗುತ್ತಾರೆ, ಕೆಲವರು ಮನಸ್ಸಿನಲ್ಲಿ ಇಟ್ಟುಕೊಂಡು ಸಪ್ಪಗಾಗುತ್ತಾರೆ. ಮನದ ಮಾತು ಹಂಚಿಕೊಳ್ಳಲು ಇದು ವೇದಿಕೆ. ಈ ಸಂಚಿಕೆಯಲ್ಲಿ ಲೈಂಗಿಕ ವ್ಯಸನದ (Hyper Sexuality) ಪ್ರಶ್ನೆಗೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಉತ್ತರಿಸಿದ್ದಾರೆ.

ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್
ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: ಮೇಡಂ, ನಾನು ಒಂದು ಪ್ರಶ್ನೆ ಕೇಳಬೇಕು. ಆದರೆ ಹೇಗೆ ಕೇಳುವುದು ಎಂದು ಮುಜುಗರವಾಗುತ್ತಿದೆ. ಕಳೆದವಾರ ನೀವು ಬರೆದಿದ್ದ ಉತ್ತರ ಓದಿದೆ. ನಿಮ್ಮ ಬಳಿ ನನ್ನ ಸಮಸ್ಯೆ ಹೇಳಿಕೊಳ್ಳಬಹುದು ಎಂಬ ಧೈರ್ಯಬಂತು. ನನಗೆ 31 ವರ್ಷ ವಯಸ್ಸು. ಇನ್ನೂ ಮದುವೆಯಾಗಿಲ್ಲ. ನಾನು ನಿಜಕ್ಕೂ ಕೆಟ್ಟವನಲ್ಲ ಮೇಡಂ, ಆದರೆ ಕೆಟ್ಟ ಆಲೋಚನೆಗಳು ನನ್ನ ತಲೆಗೆ ಅದ್ಹೇಗೋ ಬರುತ್ತಲೇ ಇರುತ್ತವೆ. ಯಾವ ಹುಡುಗಿ, ಹೆಣ್ಣನ್ನು ನೋಡಿದರೂ ಕೆಟ್ಟ ಆಲೋಚನೆಗಳು ಸುಳಿದಾಡುತ್ತವೆ.. ಅವರ ದೇಹದ ಆಕಾರ ಕಲ್ಪಿಸಿಕೊಂಡು ಸ್ಖಲಿಸುವುದು ಉಂಟು. ನನ್ನ ಅನುಮಾನಗಳು ಇವು, ದಯವಿಟ್ಟು ಉತ್ತರಿಸಿ. ಇದು ದೇಹಕ್ಕೆ ಸಂಬಂಧಿಸಿದ ಕಾಯಿಲೆಯೇ? ಮನಸ್ಸಿಗೆ ಸಂಬಂಧಿಸಿದ ಕಾಯಿಲೆಯೇ? ಇದಕ್ಕೆ ಪರಿಹಾರವೇ ಇಲ್ಲವೇ? ನಾನು ನಿಜಕ್ಕೂ ಕೆಟ್ಟವನೇ? ದಯವಿಟ್ಟು ಉತ್ತರಿಸಿ ಮೇಡಂ.

- ಹತ್ತಕ್ಕೂ ಹೆಚ್ಚು ಜನರು ಕೇಳಿರುವ ಪ್ರಶ್ನೆ

ಉತ್ತರ: ಇಂಥ ನಡವಳಿಕೆ ಹಲವರಲ್ಲಿ ಕಂಡುಬರುತ್ತದೆ. ನೀವು ಗಾಬರಿಯಾಗಬೇಡಿ. ಇಂಥ ವಿಚಾರಗಳಲ್ಲಿ, ಪ್ರಕರಣಗಳಲ್ಲಿ ಮುಜುಗರ, ಸಂಕೋಚವಾಗುವುದು ಸಹಜ. ಅಪರಾಧಿ ಮನೋಭಾವದಿಂದ ಸಾಮನ್ಯವಾಗಿ ಸಮಸ್ಯೆಯನ್ನು ಮುಚ್ಚಿಟ್ಟುಕೊಂಡು ಒಬ್ಬರೆ ನರಳುತ್ತಾರೆ. ನೀವು ಧೈರ್ಯಮಾಡಿ ಸಮಸ್ಯೆ ಹೇಳಿಕೊಂಡದಕ್ಕೆ ಸಂತೋಷವಾಯಿತು. ಇದು ಒಂದು ಮಾನಸಿಕ ದೌರ್ಬಲ್ಯ ಅಥವಾ ಚಟ ಅಥವಾ ವ್ಯಸನವೆಂದು ಕರೆಯಬಹುದು. ಮನಸ್ಸಿನ ನಿಯಂತ್ರಣವೆೇ ಇದಕ್ಕೆ ಸೂಕ್ತ ಪರಿಹಾರ. ಧೃಢ ಸಂಕಲ್ಪದದಿಂದ ಮನಸ್ಸು ಮಾಡಿದರೆ ಖಂಡಿತವಾಗಿಯೂ ಪರಿಹಾರ ಕಂಡುಕ್ಕೊಳ್ಳಬಹುದು. ಈ ಸಮಸ್ಯೆಯಿಂದ ನಿಮಗೆ ಹಾಗೂ ಬೇರೆಯವರಿಗೂ ಹಾನಿಕರವೆಂದು ಅರಿವಾದಾಗ ತಕ್ಷಣವೇ ಪರಿಹಾರ ಹುಡುಕಿಕೊಳ್ಳುವುದು ಉತ್ತಮ. ಇದರಿಂದ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಾಯವಾಗುತ್ತದೆ.

ವಯೋಸಹಜವಾಗಿ ಲೈಂಗಿಕ ಆಸಕ್ತಿ ಮೂಡುವುದು ಸಹಜ. ಇದು ಒಂದು ಸ್ವಾಭಾವಿಕ ಕ್ರಿಯೆ, ಅದು ಖಂಡಿತ ಅಪರಾಧವಲ್ಲ. ಆದರೆ ಲೈಂಗಿಕ ಅಸಕ್ತಿ ಮತ್ತು ವರ್ತನೆಗಳು ಒಂದು ಮಿತಿಯಲ್ಲಿ ಇರಬೇಕು. ಇದು ನಮ್ಮ ಮನಸ್ಸಿನ ಇತರೆಲ್ಲಾ ಯೋಚನೆಗಳು, ದಿನನಿತ್ಯದ ಕೆಲಸಗಳಂತೆ ಸ್ವಾಭಾವಿಕವಾಗಿ ಇದ್ದರೆ, ಸಹಜ ಬದುಕಿನ ಭಾಗವಾಗಿ ನಡೆದುಕೊಂಡು ಹೋದರೆ ಸಮಸ್ಯೆಯಿಲ್ಲ. ಆದರೆ ಇಂಥ ಆಲೋಚನೆಗಳು ಮತ್ತು ವರ್ತನೆಗಳು ಮಿತಿಮೀರಿ ನಿಮ್ಮ ದಿನಚರಿ ಹಾಗೂ ದೈನಂದಿನ ಕಾರ್ಯಗಳಲ್ಲಿ ಅಡಚಣೆ ಉಂಟು ಮಾಡಿದರೆ ಅದು ಅಪಾಯ. ಇದರಿಂದ ನಿಮ್ಮ ಬೆಳವಣಿಗೆ ಕುಂಠಿತವಾಗಿ, ಮಾನಸಿಕವಾಗಿ ಕುಗ್ಗುತ್ತೀರಿ. ಇಂಥ ವರ್ತನೆಗಳು ಸ್ವಹಾನಿಕರ. ಅಂದರೆ ಅದರಿಂದ ನಿಮಗೆ ಹೆಚ್ಚು ಹಾನಿಯಾಗಬಹುದು. ನಿಮ್ಮ ವರ್ತನೆಯಿಂದ ಬೇರೆಯವರಿಗೂ ತೊಂದರೆಯಾಗತೊಡಗಿದಾಗ ಇದನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಬಹುದು. ಇದು ಮಾನಸಿಕ ಸಮಸ್ಯೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಆಗದೆ ಅಸಹಾಯಕತನ ಎದುರದಾಗ “ನಾನು ನಿಜಕ್ಕೂ ಕೆಟ್ಟವನೆೇ?” ಎಂಬ ಪ್ರಶ್ನೆ ಕಾಡುವುದು ಸಹಜ.

ಅತಿಯಾದ ಲೈಂಗಿಕ ನಡವಳಿಕೆಯನ್ನು (compulsive sexual behaviour) ಕೆಲವೊಮ್ಮೆ “ಗೀಳಿನ ಲೈಂಗಿಕ ನಡವಳಿಕೆ / ಲೈಂಗಿಕ ಗೀಳು" (hyper sexuality) ಅಥವಾ "ಲೈಂಗಿಕ ವ್ಯಸನ" (sexual addiction) ಎಂದು ಕರೆಯಲಾಗುತ್ತದೆ. ಇಂಥವರಲ್ಲಿ ಲೈಂಗಿಕ ಕಲ್ಪನೆಗಳು, ಪ್ರಚೋದನೆಗಳು ಅಥವಾ ನಿಯಂತ್ರಿಸಲಾಗದ ನಡವಳಿಕೆಗಳ ಮೇಲೆ ಮನಸ್ಸು ಹೆಚ್ಚಾಗಿ ಹರಿಯುತ್ತಿರುತ್ತದೆ. ನಿಮ್ಮ ಏಕಾಗ್ರತೆ, ಆತ್ಮವಿಶ್ವಾಸ, ಗೌರವ, ದೈಹಿಕ ಆರೋಗ್ಯ, ಉದ್ಯೊಗ, ಸಂಬಂಧಗಳು, ದಿನಚರಿ ಅಥವಾ ನಿಮ್ಮ ಜೀವನದ ಇತರ ಅಂಶಗಳಿಗೂ ಈ ಮನಸ್ಥಿತಿಯಿಂದ ತೊಂದರೆ ಮತ್ತು ಸಮಸ್ಯೆಗಳು ಉಂಟಾಗುತ್ತವೆ.

ಮಾನಸಿಕವಾಗಿ ಲೈಂಗಿಕ ಆಸಕ್ತಿ, ಆಲೋಚನೆಗಳು ಕೆಲವೊಮ್ಮೆ ಬಂದು ಹೋದಾಗ ಅಥವಾ ದೈಹಿಕವಾಗಿ ಹಸ್ತಮೈಥುನದಂಥ ಚಟುವಟಿಕೆ ದಿನದಲ್ಲಿ ಒಮ್ಮೆ ಅಥವಾ ವಾರದಲ್ಲಿ ಕೆಲವೊಮ್ಮೆ ನಡೆದಾಗ ಅದನ್ನು ವ್ಯಸನ ಎಂದು ಕರೆಯುವುದಿಲ್ಲ. ಆದರೆ ಮನಸ್ಸಿನಲ್ಲಿ ಸದಾ ಅಂಥದ್ದೇ ಆಲೋಚನೆಗಳು ಸುಳಿದಾಡುತ್ತಿದ್ದಾರೆ. ಹಸ್ತಮೈಥುನವು ಪುನರಾವರ್ತನೆಯಾಗುತ್ತಿದ್ದರೆ ಅದು ಗೀಳಾಗುತ್ತದೆ. ಪ್ರಾರಂಭದಲ್ಲಿ ತಕ್ಷಣದ ಸಂತೋಷ, ತೃಪ್ತಿ ಸಿಕ್ಕರೂ ಕ್ರಮೇಣ ವ್ಯಕ್ತಿ ಮಾನಸಿಕವಾಗಿ ಕುಗ್ಗುತ್ತಾನೆ.

ತನ್ನ ಲೈಂಗಿಕ ಯೋಚನೆ ಮತ್ತು ಚಟುವಟಿಕೆಗಳಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಬೇಡವೆಂದರೂ ಚಟದಿಂದ ಹೊರ ಬರಲು ಕಷ್ಟವಾಗುತ್ತದೆ. ತನ್ನ ಎಲ್ಲಾ ಸಮಯವನ್ನು ಈ ವ್ಯಸನಕ್ಕೆ ಮೀಸಲಾಗಿಡುತ್ತಾನೆ. ಬೇರೆ ಕಾಯ೯ಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಅಪರಾಧಿ ಮನೋಭಾವ (Guilt) ನರಳುತ್ತಾನೆ. ಮೊದಲಿಗೆ, ಈ ವ್ಯಸನದ ಹಿಂದಿರುವ ಕಾರಣಗಳು ಮತ್ತು ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಣ. ಆಗ ಪರಿಹಾರ ಹುಡುಕಿಕ್ಕೊಳ್ಳಲು ಸುಲಭವಾಗುತ್ತದೆ.

ಲೈಂಗಿಕ ವ್ಯಸನಕ್ಕೆ ಏನು ಕಾರಣ?

ನಿಖರವಾಗಿ ಇಂಥದ್ದೇ ಕಾರಣವೆಂದು ವೈಜ್ಞಾನಿಕವಾಗಿ ಹೇಳಲು ಆಗುವುದಿಲ್ಲ. ಆದರೆ ಕೆಲವು ಆಧಾರಗಳ ಮೇಲೆ ಈ ಅಂಶಗಳನ್ನು ಪಟ್ಟಿ ಮಾಡಬಹುದು.

1) ಮಿದುಳಿನ ರಾಸಾಯನಿಕಗಳ ಅಸಮತೋಲನ: ಮಿದುಳಿನಲ್ಲಿ ಕೆಲವು ರಾಸಾಯನಿಕಗಳು (ನರಪ್ರೇಕ್ಷಕಗಳು) ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಲೈಂಗಿಕ ಗೀಳಿನ ಸಮಸ್ಯೆ ಕಾಣುತ್ತದೆ. ಇಂಥ ಸಂದರ್ಭಗಳಲ್ಲಿ ಅತಿಯಾದ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ. ಇಂಥವರು ಲೈಂಗಿಕ ವರ್ತನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ.

2) ಅಶ್ಲೀಲ ದೃಶ್ಯಗಳನ್ನು ಸತತ ನೋಡುವುದು: ಲೈಂಗಿಕ ಆಸಕ್ತಿಯನ್ನು ಪ್ರಚೋದಿಸುವ ಅಶ್ಲೀಲ ಸಾಹಿತ್ಯ, ಚಿತ್ರ, ದೃಶ್ಯಗಳನ್ನು ಬಿಟ್ಟೂಬಿಡದೆ ನೋಡುವ ಹಂಬಲ ಕೆಲವರಿಗೆ ಇರುತ್ತದೆ. ಈಗ ಇಂಟರ್ನೆಟ್ ಬಳಕೆ ಹೆಚ್ಚಾಗಿರುವುದರಿಂದ ಇಂಥ ಕಂಟೆಂಟ್ ಸುಲಭವಾಗಿ ಸಿಗುತ್ತಿದೆ (Easy access). ಲೈಂಗಿಕತೆಗೆ ಒಡ್ಡುವಿಕೆ ಹೆಚ್ಚಾದಾಗಲೂ (over exposure to sexual content) ಲೈಂಗಿಕ ಕ್ರಿಯೆಯಲ್ಲಿ ಅತಿಯಾದ ಆಸಕ್ತಿ ಮೂಡಿ ನಂತರ ವ್ಯಸನವಾಗಿ ತಿರುಗುತ್ತದೆ.

3) ಬಾಲ್ಯದ ಅನುಭವ: ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ, ದೌರ್ಬಲ್ಯಗಳಿಗೆ ಒಳಗಾಗಿರುವವರು ಅಥವಾ ಬಾಲ್ಯದಲ್ಲಿ ಲೈಂಗಿಕ ವಿಷಯಕ್ಕೆ ಒಡ್ಡಿಕೊಂಡವರು ಸಹ ಕೆಲವೊಮ್ಮೆ ಇಂತಹ ವ್ಯಸನಕ್ಕೆ ಈಡಾಗುತ್ತಾರೆ.

4) ಏಕಾಂಗಿ ಬದುಕು: ಒಂಟಿತನ, ಅಗತ್ಯಕ್ಕಿಂತಲೂ ಹೆಚ್ಚು ಖಾಸಗಿ ಸಮಯದ ಲಭ್ಯ, ಪ್ರೇಮ ವೈಫಲ್ಯ, ಶೈಕ್ಷಣಿಕ ವೈಫಲ್ಯಗಳು, ನಿರುದ್ಯೋಗ, ಕೌಟುಂಬಿಕ ಸಮಸ್ಯೆಗಳು, ಹಣಕಾಸು ಸಮಸ್ಯೆಗಳು ಸಹ ಲೈಂಗಿಕ ಗೀಳಿಗೆ ಕಾರಣವಾಗಬಹುದು.

5) ದುಶ್ಚಟ: ಮದ್ಯ ಮತ್ತು ಮಾದಕ ದ್ರವ್ಯಗಳ ವ್ಯಸನಗಳುಳ್ಳವರಲ್ಲಿಯೂ ಇಂಥ ಗೀಳು ಕಂಡುಬರುತ್ತದೆ.

6) ಪ್ರಯೋಗಶೀಲತೆ: ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಸಹಜವಾಗಿ ಆರಂಭವಾಗುತ್ತದೆ. ಇಂಥ ಸಂದರ್ಭದಲ್ಲಿ ಪೋಷಕರಿಂದ ಸರಿಯಾದ ಮಾಹಿತಿ ಸಿಗದೆ, ಸ್ನೇಹಿತರಿಂದ ತಪ್ಪು ಮಾಹಿತಿ ಸಿಕ್ಕಾಗ ಅಥವಾ ತಾನೆ ತಿಳಿದುಕೊಳ್ಳಲು ಪ್ರಯತ್ನಿಸಿ ಈ ಗೀಳಿಗೆ ಬೀಳುವ ಸಾಧ್ಯತೆ ಉಂಟು.

ಪರಿಹಾರವೇ ಇಲ್ಲವೇ?

1) ಆಪ್ತಸಮಾಲೋಚನೆ: ಅತಿಯಾದ ಲೈಂಗಿಕ ಆಸಕ್ತಿ ಅಥವಾ ಲೈಂಗಿಕ ಗೀಳಿಗೆ ಖಂಡಿತ ಪರಿಹಾರಗಳು ಇವೆ. ಸಾಮಾನ್ಯವಾಗಿ ಆಪ್ತಸಮಾಲೋಚನೆಯ ನೆರವು, ಮಾರ್ಗದರ್ಶನ, ಔಷಧಿಗಳು, ಸ್ವ-ಸಹಾಯ, ಬೆಂಬಲ ಗುಂಪುಗಳ ತಂತ್ರದ ಮೂಲಕ ಲೈಂಗಿಕ ಗೀಳಿನಿಂದ ಬಳಲುತ್ತಿರುವವರನ್ನು ಹೊರಗೆ ತರಬಹುದಾಗಿದೆ.

2) ಆರೋಗ್ಯಕರ ನಡವಳಿಕೆ: ಇಂಥ ಚಿಕಿತ್ಸೆಗಳಲ್ಲಿ ಆರೋಗ್ಯಕರ ಲೈಂಗಿಕ ಅಭ್ಯಾಸಗಳು ಮತ್ತು ಸಂಬಂಧಗಳನ್ನು ಪೋಷಿಸುವ ಕುರಿತು ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ. ರೋಗಿಯ ಲೈಂಗಿಕ ಪ್ರಚೋದನೆಗಳನ್ನು ನಿಭಾಯಿಸಲು ಮತ್ತು ಅತಿಯಾದ ಲೈಂಗಿಕ ನಡವಳಿಕೆಗಳನ್ನು ನಿಯಂತ್ರಿಸಲು ಚಿಕಿತ್ಸಕರು ನೆರವಾಗುತ್ತಾರೆ.

3) ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ: ಇತರ ಸಮಸ್ಯೆಗಳು ತೀವ್ರವಾಗಿ ಕಾಡುತ್ತಿರುವ ಕಾರಣಕ್ಕೆ ಈ ಗೀಳು ಹಂಚಿಸಿಕೊಂಡವರು ಮೊದಲು ಅಂಥ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಲೈಂಗಿಕ ಗೀಳು ಗಂಡಸರು-ಹೆಂಗಸರು ಹೀಗೆ ಇಬ್ಬರಲ್ಲಿಯೂ ಕಂಡುಬರುತ್ತದೆ. ಆದರೆ ಈ ಗೀಳಿನಿಂದ ಬಳಲುವವರಲ್ಲಿ ಗಂಡಸರ ಸಂಖ್ಯೆಯೇ ಹೆಚ್ಚು. ಅಂಥವರು ತಮ್ಮನ್ನು ಕಾಡುತ್ತಿರುವ, ಪರಿಹಾರ ಸಿಗದ ಸಮಸ್ಯೆಗಳ ಬಗ್ಗೆ ಆಪ್ತಸಮಾಲೋಚಕರ ಸಹಾಯ, ಮಾರ್ಗದರ್ಶನ ಪಡೆದುಕೊಳ್ಳಬೇಕು.

ಕೊನೆಯದಾಗಿ ಒಂದು ಮಾತು. ಅತಿ ಲೈಂಗಿಕ ಆಸಕ್ತಿಯ ಗೀಳು ಅಥವಾ ವ್ಯಸನದಿಂದ ಹೊರ ಬರುವುದಕ್ಕೆ ಸಮಯ ಬೇಕು. ನಿಮಗೆ ನೀವೇ ಸಹಕಾರ ಕೊಟ್ಟುಕೊಳ್ಳುವುದು ಬಹಳ ಮುಖ್ಯ. ಸಂಯಮದಿಂದ ಖಂಡಿತವಾಗಿಯೂ ಪರಿಹಾರ ಕಂಡುಕೊಳ್ಳಬಹುದು.

ಒಂದಿಷ್ಟು ತಂತ್ರಗಳು

ನನಗೆ ಇಮೇಲ್ ಮಾಡಿರುವ ಹಲವರು ಇಂಥ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ. ಅವರಿಗೆ ನಾನು ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ ಮನೋಬಲ ದೃಢಪಡಿಸಿಕೊಳ್ಳಬೇಕೆಂದು ಸಲಹೆ ಮಾಡುತ್ತೇನೆ.

1) ನಿರಂತರ ಪ್ರಯತ್ನ: ಲೈಂಗಿಕ ಕ್ರಿಯೆಯ ಆಲೋಚನೆ ಬಂದ ತಕ್ಷಣವೇ ಇದ್ದ ಜಾಗದಿಂದ (indoor) ಹೊರಗೆ ಹೋಗುವುದು. ಜನರ ಜೊತೆ ಬೆರೆಯುವುದು, ಒಳ್ಳೆಯ ಆರೋಗ್ಯಕರವಾದ ಹವ್ಯಾಸ / ಚಟುವಟಿಕೆಯಲ್ಲಿ ತೆೊಡಗಿಸಿಕೊಳ್ಳಲು ಪ್ರಯತ್ನಿಸಿ. ಸ್ಥಳ ಬದಲಾವಣೆಯಿಂದ ಖಂಡಿತ ಲಾಭವಿದೆ.

2) ಹೆಚ್ಚು ಒಂಟಿತನ ಬೇಡ: ಒಬ್ಬೊಬ್ಬರೇ ಇರುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ. ಅತಿಯಾದ ಖಾಸಗಿ ಸಮಯವೂ ಬೇಡ. ಜನರೊಂದಿಗೆ ಬೆರೆಯಿರಿ.

3) ಧೃಢಿಕರಣ: ಮನಸ್ಸನ್ನು ಪ್ರತಿದಿನ ಗಟ್ಟಿ ಮಾಡಿಕೊಳ್ಳಬೇಕು. 'ನಾನು ಖಂಡಿತ ಈ ವ್ಯಸನದಿಂದ ಹೊರಬರುತ್ತೇನೆ. ನನ್ನಿಂದ ಇದು ಸಾಧ್ಯವಿದೆ' ಎಂದು ನಿಮಗೆ ನೀವೇ ಹಲವು ಬಾರಿ ಹೇಳಿಕೊಳ್ಳಿ. ನಿಮ್ಮ ಮನೋಬಲ ಖಂಡಿತ ಹೆಚ್ಚಾಗುತ್ತದೆ.

4) ಪ್ರಚೋದಕಗಳನ್ನು ಗುರುತಿಸಿ: ಒಂದು ದಿನದ ಎಲ್ಲ 24 ಗಂಟೆಗಳಲ್ಲೂ ಲೈಂಗಿಕ ಗೀಳು ಆವರಿಸಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಕೆಲ ನಿರ್ದಿಷ್ಟ ಸಮಯ, ಸಂದರ್ಭಗಳಲ್ಲಿ ಪ್ರಚೋದನೆ ಉಂಟಾಗುವುದನ್ನು ಗುರುತಿಸಬಹುದು. ಇದನ್ನೇ 'ಪ್ರಚೋದಕಗಳ ಗುರುತಿಸುವಿಕೆ' (identifying triggers) ಎನ್ನುತ್ತಾರೆ. ಒಮ್ಮೆ ಇಂಥ ಪ್ರಚೋದಕಗಳನ್ನು ಗುರುತಿಸಿಕೊಂಡರೆ ಪ್ರಚೋದನೆ ತಡೆಗಟ್ಟುವುದು, ಗೀಳಿನಿಂದ ಹೊರಬರುವುದು ಸುಲಭವಾಗುತ್ತದೆ.

ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ, ಬದಲಾವಣೆ ಖಂಡಿತ ಸಾಧ್ಯವಿದೆ.

(ಎಲ್ಲರ ಹೆಸರು ಮತ್ತು ಊರು ಬದಲಿಸಲಾಗಿದೆ)

---

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಬಹುದು.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಇನ್ನು ಮುಂದೆ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.