ಕನ್ನಡ ಸುದ್ದಿ  /  Lifestyle  /  Remedy For All Types Of Hair Problem

Hair care Tips: ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ..ತಪ್ಪದೆ, ತಾಳ್ಮೆಯಿಂದ ಟ್ರೈ ಮಾಡಿ

ಮನೆಯಲ್ಲಿ ಅಜ್ಜಿಯಂದಿರು ಇದ್ದರೆ, ಈ ರೀತಿಯ ಪ್ಯಾಕ್‌ಗಳ ಬಗ್ಗೆ ಹೇಳುತ್ತಿರುತ್ತಾರೆ. ರೇಷ್ಮೆಯಂತಹ, ಬಲವಾದ ಕೂದಲು ಬಯಸುವವರಿಗೆ ಇದು ಅತ್ಯುತ್ತಮ ಹೇರ್ ಪ್ಯಾಕ್ ಆಗಿದೆ. ಇದಲ್ಲದೆ, ಈ ಹೇರ್ ಪ್ಯಾಕನ್ನು ಯಾರು ಬೇಕಾದರೂ ಹಚ್ಚಬಹುದು.

ಕೂದಲ ಆರೈಕೆ
ಕೂದಲ ಆರೈಕೆ (PC: Freepik)

ಪ್ರತಿಯೊಬ್ಬರೂ ತಮ್ಮ ಕೂದಲ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದರಲ್ಲೂ ಮಹಿಳೆಯರು ಇನ್ನೂ ಹೆಚ್ಚು ಎನ್ನಬಹುದು. ಕೆಲವರು ಕೂದಲು ದಟ್ಟವಾಗಿ ಬೆಳೆಯಬೇಕೆಂದು ಬಯಸುತ್ತಾರೆ, ಕೆಲವರು ಮೃದುವಾಗಿರಬೇಕೆಂದು ಬಯಸುತ್ತಾರೆ. ಹೀಗೆ ಕೂದಲಿಗೆ ಆರೈಕೆ ಮಾಡಲು ಅನೇಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಅವುಗಳನ್ನು ಅತಿಯಾಗಿ ಬಳಸುವುದರಿಂದ ಹಾನಿಯುಂಟಾಗುವ ಸಾಧ್ಯತೆ ಇದೆ.

ಅದರ ಬದಲು ಮನೆಯಲ್ಲೇ ವಿವಿಧ ರೀತಿಯ ಹೇರ್ ಪ್ಯಾಕ್‌ಗಳನ್ನು ಬಳಸಿ ಕೂದಲ ರಕ್ಷಣೆ ಮಾಡುವುದು ಒಳ್ಳೆಯದು. ಈ ವಿಧಾನಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಕೆಲವೇ ದಿನಗಳಲ್ಲಿ ಕೂದಲು ಎಷ್ಟು ಚೆನ್ನಾಗಿ ಬೆಳೆಯುತ್ತದೆ, ಹಾಗೂ ಕೂದಲಿನ ಬಹುತೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದನ್ನು ನೀವೇ ಗಮನಿಸಬಹುದು.

ಮೊಸರು, ಆಮ್ಲಾ ಮತ್ತು ದಾಸವಾಳದ ಪುಡಿಯ ಪ್ಯಾಕ್‌

ಒಮ್ಮೆ ಈ ಹೇರ್ ಮಾಸ್ಕ್ ಟ್ರೈ ಮಾಡಿ, ಇದರಿಂದ ನಿಮ್ಮ ಕೂದಲು ಖಂಡಿತವಾಗಿಯೂ ಸೊಂಪಾಗಿ ಬೆಳೆಯುತ್ತದೆ. ಬಹಳ ಆರೋಗ್ಯವಾಗಿಯೂ ಇರುತ್ತದೆ. ಇದಕ್ಕಾಗಿ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಸ್ವಲ್ಪ ದಾಸವಾಳದ ಪುಡಿಯೊಂದಿಗೆ ಆಮ್ಲಾ ಪುಡಿ ಮತ್ತು ಮೊಸರು ಸೇರಿಸಿ ಮೃದುವಾದ ಪೇಸ್ಟ್ ಮಾಡಿ. ಅದರ ನಂತರ ಈ ಪೇಸ್ಟನ್ನು ಬುಡದ ಸಹಿತ ಕೂದಲಿಗೆ ಹಚ್ಚಿ. ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ. ದಾಸವಾಳದ ಪುಡಿಯಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಂತೆಯೇ ಆಮ್ಲಾದಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿವೆ. ಇದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲ, ಮೊಸರು, ಸೋಂಕುಗಳಿಂದ ರಕ್ಷಿಸುತ್ತದೆ. ಬೇಕಿದ್ದರೆ ಮನೆಯಲ್ಲಿಯೇ ಆಮ್ಲಾ ಪೌಡರ್ ದಾಸವಾಳ ಪುಡಿ ತಯಾರಿಸಿಕೊಳ್ಳಬಹುದು. ಇಲ್ಲದಿದ್ದರೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಸಮಯ ಇಲ್ಲದವರು ಆ ಪುಡಿಗಳನ್ನು ಕೊಂಡು ತಂದು ಹೇರ್ ಪ್ಯಾಕ್ ಮಾಡಿಕೊಳ್ಳಬಹುದು.

ಮೆಂತ್ಯ ಮತ್ತು ಮೊಸರಿನೊಂದಿಗೆ ರೇಷ್ಮೆಯಂತಹ ಕೂದಲು

ಮನೆಯಲ್ಲಿ ಅಜ್ಜಿಯಂದಿರು ಇದ್ದರೆ, ಈ ರೀತಿಯ ಪ್ಯಾಕ್‌ಗಳ ಬಗ್ಗೆ ಹೇಳುತ್ತಿರುತ್ತಾರೆ. ರೇಷ್ಮೆಯಂತಹ, ಬಲವಾದ ಕೂದಲು ಬಯಸುವವರಿಗೆ ಇದು ಅತ್ಯುತ್ತಮ ಹೇರ್ ಪ್ಯಾಕ್ ಆಗಿದೆ. ಇದಲ್ಲದೆ, ಈ ಹೇರ್ ಪ್ಯಾಕನ್ನು ಯಾರು ಬೇಕಾದರೂ ಹಚ್ಚಬಹುದು. ಸ್ವಲ್ಪ ಮೊಸರಿನೊಂದಿಗೆ ಮೆಂತ್ಯ ಕಾಳುಗಳನ್ನು ಸೇರಿಸಿ ನೆನೆಸಿ. ಬೆಳಗ್ಗೆ ಎದ್ದ ನಂತರ, ನೀವು ಈ ಮಿಶ್ರಣವನ್ನು ಒಮ್ಮ ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿ, ನಿಮ್ಮ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ.

ಮೆಂತ್ಯದಲ್ಲಿ ಪ್ರೋಟೀನ್, ಕಬ್ಬಿಣ, ಫ್ಲೇವನಾಯ್ಡ್ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಇದು ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ. ಹಾಗೇ ಮೊಸರು ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ರೇಷ್ಮೆಯಂತೆ ಮಾಡುತ್ತದೆ. ಹಾಗಾಗಿ ಈ ಹೇರ್ ಪ್ಯಾಕ್ ನಿಮಗೆ ಬಹಳ ಉಪಯುಕ್ತ.

ಕರಿಬೇವು, ದಾಸವಾಳ ಮತ್ತು ತೆಂಗಿನ ಎಣ್ಣೆಯ ಹೇರ್‌ ಮಾಸ್ಕ್‌

ಒಂದು ಪಾತ್ರೆಯಲ್ಲಿ ಎರಡು ಚಮಚ ತೆಂಗಿನ ಎಣ್ಣೆ 2 ಎಸಳು ಕರಿಬೇವಿನ ಎಲೆ, ಒಂದೆರಡು ಒಣಗಿದ ದಾಸವಾಳಗಳನ್ನು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿ ಸ್ಟೋವ್‌ ಆಫ್‌ ಮಾಡಿ. ಈ ಮಿಶ್ರಣ ತಣ್ಣಗಾದಾಗ ನಿಮ್ಮ ಕೂದಲಿಗೆ ಮಸಾಜ್‌ ಮಾಡಿ. ಒಂದು ಗಂಟೆ ನಂತರ ಸ್ನಾನ ಮಾಡಿ. ಈ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕರಿಬೇವಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಪ್ರೋಟೀನ್‌ಗಳು, ಬೀಟಾ ಕ್ಯಾರೋಟಿನ್ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುವುದನ್ನು ತಪ್ಪಿಸುತ್ತದೆ. ತೆಂಗಿನ ಎಣ್ಣೆ ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ.

ನೆತ್ತಿಗೆ ಹರಳೆಣ್ಣೆ ಹಚ್ಚಿ

ಹರಳೆಣ್ಣೆ ಕೂಡಾ ಕೂದಲಿನ ಬಹುತೇಕ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕೊಬ್ಬಿನಾಮ್ಲಗಳು ಮತ್ತು ಇತರ ಪ್ರೋಟೀನ್‌ ಅಂಶಗಳಿವೆ. ಇದು ಕೂದಲನ್ನು ಸುಂದರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ತಲೆಹೊಟ್ಟು ಸಮಸ್ಯೆಯನ್ನು ತೊಡೆದುಹಾಕಲು ಕೂಡಾ ಇದು ಸಹಾಯ ಮಾಡುತ್ತದೆ. ಸ್ವಲ್ಪ ಹರಳೆಣ್ಣೆಯನ್ನು ಆಗ್ಗಾಗ್ಗೆ ನೆತ್ತಿಗೆ ಹಚ್ಚಿ ಮೃದುವಾಗಿ ಉಜ್ಜಿಕೊಳ್ಳಿ. ಅಥವಾ ಹರಳೆಣ್ಣೆಯಿಂದ ಸಂಪೂರ್ಣ ಕೂದಲಿಗೆ ಮಸಾಜ್‌ ಮಾಡಿ ಒಂದು ಗಂಟೆ ನಂತರ ಮೃದುವಾದ ಶಾಂಪೂನಿಂದ ತೊಳೆಯಿರಿ.

ಹಾಗೇ ಬಿಳಿ ಕೂದಲಿಗೆ ರಾಸಾಯನಿಕಯುಕ್ತ ಡೈ ಹಚ್ಚುವವರು ಆಯುರ್ವೇದ ಅಂಗಡಿಗಳಲ್ಲಿ ದೊರೆಯುವ ಇಂಡಿಯೋ ಪುಡಿಯನ್ನು ಬಳಸಿ ಕೂದಲಿಗೆ ಕಪ್ಪು ಬಣ್ಣ ನೀಡಬಹುದು. ಆದರೆ ಇಂಡಿಯೋ ಪುಡಿಯನ್ನು ನೇರವಾಗಿ ಕೂದಲಿಗೆ ಹಚ್ಚಬೇಡಿ. ಮೊದಲು ಮೆಹಂದಿ ಪ್ಯಾಕ್‌ ಹಚ್ಚಿ, ಅದರ ಮೇಲೆ ಇಂಡಿಗೋ ಪೇಸ್ಟ್‌ ಲೇಯರ್‌ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದರೆ ಕೂದಲು ಕಪ್ಪಾಗುತ್ತದೆ.

ಎಣ್ಣೆಯನ್ನು ಮೂರು ದಿನಗಳಿಗೆ ಒಮ್ಮೆ ಕೂದಲಿಗೆ ಹಚ್ಚಿ, ಹಾಗೇ ವಾರಕ್ಕೆ ಅಥವಾ 10 ದಿನಗಳಿಗೆ ಒಮ್ಮೆ ಹೇರ್‌ ಪ್ಯಾಕ್‌ ಬಳಸುತ್ತಾ ಬಂದರೆ ನಿಮ್ಮ ಬಹುತೇಕ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. ಒಮ್ಮೆ ಪ್ರಯತ್ನಿಸಿ.

ವಿಭಾಗ