ದುಬೈ ಮಳೆ, ದಿಢೀರ್ ಪ್ರವಾಹಕ್ಕೆ ನಲುಗಿದ ಮರುಭೂಮಿ ನಗರ, ಭಾರತದ ವಿಮಾನ ಹಾರಾಟ ವಿಳಂಬ, ಶಾಲೆಗಳಿಗೆ ರಜೆ
Dubai weather: ದಿಢೀರ್ ಸುರಿದ ಮಳೆಗೆ ಮರುಭೂಮಿ ನಗರ ದುಬೈ ನಲುಗಿದ್ದು, ವಿಮಾನ ಹಾರಾಟ, ರಸ್ತೆ ಸಂಚಾರ, ಜನಜೀವನ ಎಲ್ಲವೂ ಅಸ್ತವ್ಯಸ್ತಗೊಂಡಿತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು 25 ನಿಮಿಷ ಸ್ಥಗಿತವಾಗುವಂತೆ ಮಾಡಿತು. ಈ ವಿದ್ಯಮಾನದ ವಿವರ ವರದಿ ಇಲ್ಲಿದೆ.

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಧಾರಾಕಾರ ಮಳೆಯು ಮರುಭೂಮಿ ದೇಶದಲ್ಲಿ ವ್ಯಾಪಕ ಪ್ರವಾಹ ಪರಿಸ್ಥಿತಿಯನ್ನು ಉಂಟುಮಾಡಿತು. ದುಬೈನ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರ (ಏಪ್ರಿಲ್ 16) ವಿಮಾನ ಆಗಮನವನ್ನು ನಿರ್ಬಂಧಿಸಿತು. ತೀವ್ರ ಪ್ರವಾಹ ಪರಿಸ್ಥಿತಿಯು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು 25 ನಿಮಿಷ ಸ್ಥಗಿತಗೊಳ್ಳುವಂತೆ ಮಾಡಿತು. ಶಾಲೆಗಳಿಗೆ ರಜೆ ಘೋಷಿಸಲಾಯಿತು. ಸಂಚಾರ ಅಸ್ತವ್ಯಸ್ತವಾಗಿತ್ತು.
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣದ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ಭಾರತ, ಪಾಕಿಸ್ತಾನ, ಸೌದಿ ಮತ್ತು ಯುನೈಟೆಡ್ ಕಿಂಗ್‌ಡಂ ಸೇರಿ ವಿವಿಧೆಡೆಯಿಂದ ದುಬೈಗೆ ತಲುಪಬೇಕಾಗಿದ್ದ ಡಜನ್‌ಗಟ್ಟಲೆ ವಿಮಾನಗಳು ವಿಳಂಬವಾಗಿವೆ. ಕೆಲವು ವಿಮಾನಗಳ ಹಾರಾಟ ರದ್ದುಗೊಂಡಿವೆ. ಭಾಗಶಃ ಮೋಡ ಬಿತ್ತನೆ ಮಾಡಿದ್ದರಿಂದ ಈ ಪ್ರವಾಹ ಪರಿಸ್ಥಿತಿ ಉಂಟಾಯಿತು ಎಂದು ಹೇಳಲಾಗುತ್ತಿದೆ.
ದುಬೈ ಮಳೆಗೆ ಕಾರಣವೇನು?
ದುಬೈ ನಗರದಲ್ಲಿ ಸೋಮವಾರ (ಏಪ್ರಿಲ್ 15) ತಡವಾಗಿ ಮಳೆ ಪ್ರಾರಂಭವಾಯಿತು. 20 ಮಿ.ಮೀ. ಮಳೆ ದುಬೈ ನಗರದ ಮರಳು ಮತ್ತು ರಸ್ತೆಯನ್ನು ತೋಯಿಸಿತು. ಇದು ಮಂಗಳವಾರ ಮತ್ತಷ್ಟು ತೀವ್ರಗೊಂಡು ದಿನದ ಅಂತ್ಯದ ವೇಳೆಗೆ, 142 ಮಿಲಿಮೀಟರ್‌ಗಳಿಗಿಂತ ಹೆಚ್ಚು (5.59 ಇಂಚುಗಳು) ಮಳೆ ಬಿದ್ದ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಯಿತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಾಸರಿ ವರ್ಷ 94.7 ಮಿಲಿಮೀಟರ್ (3.73 ಇಂಚು) ಮಳೆ ಬೀಳುತ್ತದೆ. ಒಂದೂವರೆ ವರ್ಷದ ಅವಧಿಯಲ್ಲಿ ಬೀಳುವ ಮಳೆ ಒಂದೇ ದಿನದಲ್ಲಿ ಬಿದ್ದ ಕಾರಣ ಈ ರೀತಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು.
ದುಬೈ ಮಳೆ ಮತ್ತು ಪ್ರವಾಹ ಪರಿಸ್ಥಿತಿ
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಏಪ್ರಿಲ್ 16ರಂದು ಎರಡು ಗಂಟೆ ಕಾರ್ಯಾಚರಣೆ ರದ್ದುಗೊಳಿಸಿತ್ತು. ಇದಕ್ಕೂ ಮೊದಲು ಸ್ಥಳೀಯ ಕಾಲಮಾನ ರಾತ್ರಿ 7.26ಕ್ಕೆ ಕೊನೆಯದಾಗಿ ವಿಮಾನವನ್ನು ಬರಮಾಡಿಕೊಂಡಿತ್ತು.
1) ಇದಕ್ಕೂ ಮುನ್ನ ಮಂಗಳವಾರ ಸಂಜೆ 100 ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ನಿರೀಕ್ಷಿಸುತ್ತಿದ್ದ ದುಬೈ ವಿಮಾನ ನಿಲ್ದಾಣವು ಚಂಡಮಾರುತದಿಂದ ಉಂಟಾದ ಗೊಂದಲದಲ್ಲಿ ತನ್ನ ಕಾರ್ಯಾಚರಣೆಯನ್ನುತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿತು.
2) ನಿರ್ಗಮನ ವಿಮಾನಗಳು ಸಂಜೆಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಆದರೆ ವಿಳಂಬ ಮತ್ತು ರದ್ದತಿಗಳಿಂದ ತೊಂದರೆಗೊಳಗಾಗಿದ್ದವು. ವಿಮಾನ ನಿಲ್ದಾಣದ ಪ್ರವೇಶ ರಸ್ತೆಗಳು ಜಲಾವೃತಗೊಂಡಿವೆ.
3) ಪ್ರತಿಕೂಲ ಹವಾಮಾನದ ಕಾರಣದಿಂದ ಬುಧವಾರ ಬೆಳಗಿನ ತನಕ ದುಬೈನಿಂದ ಹೊರಡುವ ತನ್ನ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಫ್ಲೈದುಬೈ ತಿಳಿಸಿದ್ದಾಗಿ ಯುಎಇ ಸುದ್ದಿಸಂಸ್ಥೆ ಡಬ್ಲ್ಯುಎಎಂ ವರದಿ ಮಾಡಿದೆ.
4) ಚಂಡಮಾರುತದಿಂದ ತತ್ತರಿಸಿರುವ ಮರುಭೂಮಿ ರಾಷ್ಟ್ರ ಯುಎಇಯಲ್ಲಿ ದುಬೈ ಮತ್ತು ಇತರೆ ಪ್ರವಾಹ ಪೀಡಿತ ಪ್ರದೇಶಗಳು ಕಾಣಿಸಿಕೊಂಡವು.
5) ದುಬೈ ಮಾಲ್ ಮತ್ತು ಮಾಲ್ ಆಫ್ ದಿ ಎಮಿರೇಟ್ಸ್ ಕೂಡ ಜಲಾವೃತಗೊಂಡವು. ದುಬೈ ಮೆಟ್ರೋ ನಿಲ್ದಾಣದಲ್ಲೂ ನೀರು ತುಂಬಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದವು.
6) ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳು ಕಾರುಗಳು ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ತೋರಿಸಿದರೆ, ಇನ್ನು ಕೆಲವು ವಿಡಿಯೋಗಳಲ್ಲಿ ದುಬೈನ ಅತ್ಯಂತ ಜನಪ್ರಿಯ ಮಾಲ್‌ಗಳಲ್ಲಿ ಒಂದಕ್ಕೆ ನೀರು ನುಗ್ಗಿದ್ದರಿಂದ ಅಂಗಡಿಯೊಂದರ ಸೀಲಿಂಗ್ ಕುಸಿದು ಬೀಳುವುದು ಕಂಡುಬಂಧಿದೆ.
7) ಯುಎಇ ಮತ್ತು ಬಹ್ರೇನ್‌ನಲ್ಲಿ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ.
8) ಒಮಾನ್‌ನಲ್ಲಿ ಈ ದಿಢೀರ್ ಮಳೆಗೆ ಭಾನುವಾರ ಮತ್ತು ಸೋಮವಾರ 18 ಮಂದಿ ಸಾವನ್ನಪ್ಪಿದ್ದಾರೆ.
9) ಕಳೆದ ವರ್ಷದ ವಿಶ್ವಸಂಸ್ಥೆಯ ಹವಾಮಾನ ಮಾತುಕತೆ ಆಯೋಜಿಸಿದ್ದ ಒಮಾನ್ ಮತ್ತು ಯುಎಇ ಎರಡೂ, ಜಾಗತಿಕ ತಾಪಮಾನದ ವಿಕೋಪ ಎದುರಿಸುತ್ತಿದೆ. ಇದು ಹೆಚ್ಚಿನ ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಈ ಹಿಂದೆಯೇ ವಿಶ್ವಸಂಸ್ಥೆ ಎಚ್ಚರಿಸಿದೆ.
10) ಅಲ್ ಐನ್‌ನಲ್ಲಿ ಆಯೋಜಿಸಲಾಗಿದ್ದ ಯುಎಇಯ ಅಲ್ ಐನ್ ಮತ್ತು ಸೌದಿ ತಂಡದ ಅಲ್ ಹಿಲಾಲ್ ನಡುವಿನ ಏಷ್ಯನ್ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಸೆಮಿಫೈನಲ್ ಅನ್ನು ಹವಾಮಾನದ ಕಾರಣ 24 ಗಂಟೆಗಳ ಕಾಲ ಮುಂದೂಡಲಾಯಿತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
