ಕನ್ನಡ ಸುದ್ದಿ  /  Nation And-world  /  India News Gujrat Vadodara Iim Students Develop Ac Helmets For Traffic Police Stand In Open Area Helps Summer Cool Kub

AC Helmets: ಬಿಸಿಲ ಧಗೆ ತಗ್ಗಿಸಲು ಬಂತು ಎಸಿ ಹೆಲ್ಮೆಟ್‌, ವಡೋದರದಲ್ಲಿ ಸಂಚಾರ ಪೊಲೀಸರ ಬಳಕೆ

ತಲೆ ಬಿಸಿ ತಪ್ಪಿಸಿಕೊಳ್ಳಲು ಬಂದಿದೆ ಎಸಿ ಹೆಲ್ಮೆಟ್‌. ವಡೋದರದ ಐಐಎಂ ವಿದ್ಯಾರ್ಥಿಗಳು ರೂಪಿಸಿರುವ ವಿಶೇಷ ಹೆಲ್ಮೆಟ್‌ ಅನ್ನು ಪೊಲೀಸರು ಬಳಸುತ್ತಿದ್ದಾರೆ.

ಪೊಲೀಸರು ಬಳಸುತ್ತಿರುವ ಎಸಿ ಹೆಲ್ಮೆಟ್‌ ಹೀಗಿದೆ.
ಪೊಲೀಸರು ಬಳಸುತ್ತಿರುವ ಎಸಿ ಹೆಲ್ಮೆಟ್‌ ಹೀಗಿದೆ.

ವಡೋದರಾ: ಆ ವಿದ್ಯಾರ್ಥಿಗಳು ನಿತ್ಯ ಪ್ರಮುಖ ವೃತ್ತದಲ್ಲಿ ನಿಂತುಕೊಂಡು ಕೆಲಸ ಮಾಡುವ ಪೊಲೀಸರನ್ನು ನೋಡುತ್ತಿದ್ದರು. ಗಂಟೆ ಗಟ್ಟಲೇ ಬಿಸಿಲಲ್ಲಿಯೇ ನಿಲ್ಲಬೇಕು. ಅದು ಈಗಂತೂ ಬಿರುಬಿಸಿಲು ಇರುವುದರಿಂದ ಹತ್ತು ನಿಮಿಷ ನಿಲ್ಲುವುದೆಂದರೆ ಅದಕ್ಕಿಂತ ಕಷ್ಟ ಇನ್ನೊಂದಿಲ್ಲ. ಆದರೆ ಆರೇಳು ಗಂಟೆ ನಿಂತು ಕೆಲಸ ಮಾಡುವಾಗ ಹೇಗಿರಬೇಡ. ಇದಕ್ಕಾಗಿ ಏನು ಮಾಡಬಹುದು ಎನ್ನುವ ಯೋಚನೆ ಮಾಡಿದರು. ಅವರ ತಲೆಗೆ ಸುರಕ್ಷತೆ ನೀಡುವ ಪ್ರಯತ್ನ ಮಾಡಬೇಕು. ತಂತ್ರಜ್ಞಾನ,ಕೌಶಲ್ಯ ಮೇಳೈಸಿ ಹೊಸದನ್ನು ನೀಡಬೇಕು ಎಂದು ಯೋಜಿಸಿದರು. ಅದರ ಫಲವಾಗಿಯೇ ರೂಪುಗೊಂಡಿದ್ದು ಹವಾನಿಯಂತ್ರಿತ ಹೆಲ್ಮೆಟ್‌(AC Helmet). ಇಂತಹ ಪ್ರಯತ್ನ ಮಾಡಿದವರು ವಡೋದರದ ಭಾರತೀಯ ನಿರ್ವಹಣಾ ಸಂಸ್ಥೆ( IIM)ಯ ವಿದ್ಯಾರ್ಥಿಗಳು. ಈಗ ಹವಾನಿಯಂತ್ರಿತ ಹೆಲ್ಮೆಟ್‌ ವಡೋದರ ಪೊಲೀಸರ ಬಳಕೆಯಲ್ಲಿದೆ.

ಇದು ಬ್ಯಾಟರಿ ಚಾಲಿತ ಹೆಲ್ಮೆಟ್‌. ಮುಖ್ಯವಾಗಿ ಬಿಸಿಲಿನಿಂದ ತಲೆಯ ಮೇಲೆ ಆಗುವ ಪರಿಣಾಮ ತಪ್ಪಿಸುವ ನಿಟ್ಟಿನಲ್ಲಿ ರೂಪಿಸಿದ ಹೆಲ್ಮೆಟ್.‌ ಆರೇಳು ಗಂಟೆ ಕೆಲಸ ಮಾಡಬಲ್ಲ ಸಣ್ಣ ಎಸಿಯನ್ನು ಇದರಲ್ಲಿ ಇರಿಸಲಾಗಿದೆ. ಹೆಲ್ಮೆಟ್‌ ಒಳಗೆ ಸದಾ ತಂಪಾದ ವಾತಾವರಣವನ್ನು ಇದು ಇರಿಸಲಿದೆ. ಇದರಿಂದ ಬಿಸಿಯಾಗುವುದು ತಪ್ಪಲಿದೆ. ಇದು ತಲೆಯನ್ನು ಎರಡು ರೀತಿಯಲ್ಲಿ ಕಾಪಾಡಲಿದೆ. ಒಂದು ಅಪಘಾತದಿಂದ ಮತ್ತೊಂದು ಬಿಸಿಲಿನ ಝಳದಿಂದ.

ಭಾರತದಲ್ಲಿ ಈ ಬಾರಿಯಂತೂ ಬಿಸಿಲಿನ ಕಾವು ಮಿತಿಮೀರಿದೆ. ಮನೆ ಇಲ್ಲವೇ ಕಚೇರಿಯಲ್ಲಿಯೇ ಕುಳಿತುಕೊಳ್ಳುವಾಗದಷ್ಟು ಬಿಸಿಲು. ಎಲ್ಲಾ ರಾಜ್ಯಗಳು, ನಗರಪ್ರದೇಶವಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಬಿಸಿಲಿನ ಶಾಖಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಕೆಲವರು ಹೊರಗಡೆ ನಿಂತು ಅನಿವಾರ್ಯವಾಗಿ ಕೆಲಸ ಮಾಡಲೇಬೇಕು. ಇದರಲ್ಲಿ ಸಂಚಾರ ಪೊಲೀಸರೂ ಕೂಡ ಇದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡೇ ಐಐಎಂ ವಡೋದರ ವಿದ್ಯಾರ್ಥಿಗಳು ಹವಾನಿಯಂತ್ರಿತ ಹೆಲ್ಮೆಟ್‌ ಅನ್ನು ಅಭಿವೃದ್ದಿಪಡಿಸಿದರು. ಕಡಿಮೆ ಖರ್ಚಿಯಲ್ಲಿ ಇದನ್ನು ರೂಪಿಸಿದರು. ಹೆಲ್ಮೆಟ್‌, ಅದಕ್ಕೊಂದು ಬ್ಯಾಟರಿ, ನೀರು ಸಂಗ್ರಹಿಸಿಟ್ಟುಕೊಂಡು ಅದನ್ನು ಕೂಲ್‌ ಆಗಿ ಪರಿವರ್ತಿಸುವ ಪುಟ್ಟ ಯಂತ್ರ. ನಾವು ನಿತ್ಯ ಬಳಸುವ ಹೆಲ್ಮೆಟ್‌ ಮಾದರಿಯಲ್ಲಿಯೇ ಇದು ಇದೆ. ಮಾಮೂಲಿ ಹೆಲ್ಮೆಟ್‌ನಂತೆಯೇ ಬಳಸಿದರೆ ಆಯಿತು. ಹವಾನಿಯಂತ್ರಿತ ಹೆಲ್ಮೆಟ್‌ ಬಳಕೆಗೆ ಕೆಲವಾರು ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳು ರೂಪಿಸಿದ್ಧಾರೆ. ಹೆಲ್ಮೆಟ್‌ ದರವೂ ದುಬಾರಿಯೇನಲ್ಲ. ಮಾಮೂಲಿ ಬಳಸುವ ಹೆಲ್ಮೆಟ್‌ನಷ್ಟೇ ದರ ಇದೆ.

ವಡೋದರ ಪೊಲೀಸ್‌ ಅಧಿಕಾರಿಗಳೊಂದಿಗೆ ಐಐಎಂ ವಿದ್ಯಾರ್ಥಿಗಳು ಮಾತುಕತೆ ನಡೆಸಿ ಇದನ್ನು ರೂಪಿಸಿದ್ದು. ಸುಮಾರು 450 ಸಂಚಾರ ಪೊಲೀಸ್‌ ಸಿಬ್ಬಂದಿ ಇದನ್ನು ಬಳಸುತ್ತಲೂ ಇದ್ದಾರೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಆರೇಳು ಗಂಟೆ ಕಾಲ ಸುಸೂತ್ರವಾಗಿ ಇದನ್ನು ಅವರು ಬಳಸಿರುವ ಅಭಿಪ್ರಾಯವನ್ನು ನೀಡಿದ್ದಾರೆ. ಅಭಿಪ್ರಾಯ ಆಧರಿಸಿ ಇನ್ನಷ್ಟು ಸುಧಾರಣೆ ಮಾಡಲು ಐಐಎಂ ವಿದ್ಯಾರ್ಥಿಗಳು ಮುಂದಾಗಿದ್ಧಾರೆ.

ವಡೋದರದಲ್ಲಿ ಬಳಕೆ ಮಾಡುತ್ತಿರುವ ಈ ಹವಾನಿಯಂತ್ರಿತ ಹೆಲ್ಮೆಟ್‌ ಪ್ರಯೋಗವು ಹಂತ ಹಂತವಾಗಿ ದೇಶಾದ್ಯಂತ ಬಳಸುವ ಸನ್ನಿವೇಶವೂ ಬರಬಹುದು. ಏಕೆಂದರೆ ಲಕ್ಷಾಂತರ ಪೊಲೀಸರು ಹೀಗೆ ಬಿಸಿಲ ನಡುವೆ ಕೆಲಸ ಮಾಡುವುದರಿಂದ ಅವರಿಗೆ ಸಹಾಯಕವಾಗಲಿದೆ. ಅಲ್ಲದೇ ಸಾಮಾನ್ಯರೂ ಮುಂದೆ ಇದನ್ನು ಬಳಕೆ ಮಾಡಲೂ ಬಹುದು ಎನ್ನುವುದು ಅಧಿಕಾರಿಯೊಬ್ಬರ ವಿವರಣೆ.

ವಡೋದರ ಮಾದರಿಯಲ್ಲಿಯೇ ಉತ್ತರ ಪ್ರದೇಶದ ಕಾನ್ಪುರದಲ್ಲೂ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್‌ ಅನ್ನು ನೀಡಲಾಗಿದೆ. ಅಲ್ಲಿಯೂ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ