ರಾಮಾಯಣ ಕಾಲದ 6 ಕಾಡುಗಳ ಪೈಕಿ ಒಂದು ಕರ್ನಾಟಕದಲ್ಲಿ ಇಂದಿಗೂ ಇದೆ; ಹಸಿರು ಪ್ರೀತಿಯ ಮಹಾಕಾವ್ಯ -ಕಾಡಿನ ಕಥೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  ರಾಮಾಯಣ ಕಾಲದ 6 ಕಾಡುಗಳ ಪೈಕಿ ಒಂದು ಕರ್ನಾಟಕದಲ್ಲಿ ಇಂದಿಗೂ ಇದೆ; ಹಸಿರು ಪ್ರೀತಿಯ ಮಹಾಕಾವ್ಯ -ಕಾಡಿನ ಕಥೆಗಳು

ರಾಮಾಯಣ ಕಾಲದ 6 ಕಾಡುಗಳ ಪೈಕಿ ಒಂದು ಕರ್ನಾಟಕದಲ್ಲಿ ಇಂದಿಗೂ ಇದೆ; ಹಸಿರು ಪ್ರೀತಿಯ ಮಹಾಕಾವ್ಯ -ಕಾಡಿನ ಕಥೆಗಳು

ರಾಮಾಯಣದಲ್ಲಿ ಪರಿಸರ ಪಾಠ: ಶ್ರೀರಾಮನ ವನವಾಸವಿಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅರಣ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮಹಾಕವಿ ವಾಲ್ಮೀಕಿ ರಾಮಾಯಣದಲ್ಲಿ ಕಾಡಿನ ಎಷ್ಟೋ ಕಥೆ, ವಿವರಗಳನ್ನು ಬೆಸೆದಿದ್ದರೆ. ಪರಿಸರದ ದೃಷ್ಟಿಯಿಂದ ರಾಮಾಯಣ ಪರಿಶೀಲಿಸುವ ಪ್ರಯತ್ನ ಇಲ್ಲಿದೆ.

ರಾಮಾಯಣದಲ್ಲಿ ಪರಿಸರ ಪಾಠ
ರಾಮಾಯಣದಲ್ಲಿ ಪರಿಸರ ಪಾಠ

ರಾಮಾಯಣದ ಕಾಡುಗಳು: ರಾಮಾಯಣ ಎಂದರೆ ಅದೊಂದು ಧಾರ್ಮಿಕ ಕಥನ. ರಾಮ, ಸೀತೆ, ಹನುಮಂತ ಸಹಿತ ನೂರಾರು ಪಾತ್ರಗಳ ಕಥಾನಕ ಎಂದೇ ಹೇಳುವುದುಂಟು. ರಾಮಾಯಣ ಆಧರಿಸಿ ಅದೆಷ್ಟು ಸಾಹಿತ್ಯ, ರೂಪಕಗಳು ಬಂದಿವೆ. ರಾಮಾಯಣ ಎಂದರೆ ಅಷ್ಟೇ ಅಲ್ಲ. ಅದೊಂದು ಸುಂದರ ಅರಣ್ಯಗಳನ್ನೊಂಡ, ಆಯುರ್ವೇದ ಸಸ್ಯ ಸಂಪತ್ತಿನ ಭಂಡಾರವೂ ಹೌದು. ಇದನ್ನು ಹಲವರು ಸಂಶೋಧನೆಗೂ ಬಳಸಿಕೊಂಡಿದ್ದಾರೆ.

ರಾಮನಿಗೆ 14 ವರ್ಷದ ವನವಾಸ ಶುರುವಾದಾಗ ಅಯೋಧ್ಯೆಯಿಂದ ಶ್ರೀಲಂಕಾದವರೆಗೂ ಸಂಚರಿಸಿದ. ಅದರಲ್ಲೂ ರಾವಣನು ಸೀತೆಯನ್ನು ಅಪಹರಿಸಿದ ನಂತರ ರಾಮನು ಉತ್ತರ ಭಾರತದ ಚಿತ್ರಕೂಟ ಪ್ರದೇಶದಿಂದ ದಕ್ಷಿಣದ ಶ್ರೀಲಂಕಾವರೆಗೆ ಹೋಗುವಾಗ ಅನೇಕ ಅರಣ್ಯದಲ್ಲಿ ಸಂಚರಿಸಿದ್ದಾನೆ ಎನ್ನುವ ನಂಬಿಕೆಯಿದೆ. ರಾಮ ಪ್ರವೇಶಿಸಿದ ಅರಣ್ಯಗಳು ಪಾರಿಸರಿಕವಾಗಿ ಮಹತ್ವ ಪಡೆದಿವೆ. ಈ ಅರಣ್ಯಗಳು ವನ್ಯಜೀವಿಗಳಿಂದ ಮಾತ್ರವಲ್ಲದೆ ಹಲವು ಜಾತಿಯ ಮರಗಳು, ಔಷಧೀಯ ಸಸ್ಯಗಳಿಂದಲೂ ಕೂಡಿದ್ದಾಗಿತ್ತು ಎನ್ನುವುದು ಮುಖ್ಯ.

ಶ್ರೀರಾಮ ದಂಡಕಾರಣ್ಯದಿಂದ ಹೊರಟು ಬಂದಿದ್ದು ಚಿತ್ರಕೂಟ ಅರಣ್ಯಕ್ಕೆ. ಚಿತ್ರಕೂಟ ಅರಣ್ಯ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿಯಲ್ಲಿರುವ ಪ್ರಮುಖ ಅರಣ್ಯ. ಚಿತ್ರಕೂಟದಲ್ಲಿಯೇ ರಾಮ ಹಾಗೂ ಸೀತೆ ಕೆಲವು ಸಮಯ ಕಳೆದಿದ್ದಾಗಿ ಹೇಳಲಾಗುತ್ತದೆ. ಚಿತ್ರಕೂಟ ಅರಣ್ಯ ಹಲವಾರು ಹೂವು ಹಾಗೂ ಹಣ್ಣುಗಳ ಜಾತಿಯ ಮರಗಳಿಗೆ ಜನಪ್ರಿಯ. ಚಿತ್ರಕೂಟ ಅರಣ್ಯದ ಮಾವು ಹಾಗೂ ಹಲಸು, ಬೇವು ಹಾಗೂ ಬಿದಿರು ಕೂಡ ಜನಪ್ರಿಯವೇ. ಇದರೊಟ್ಟಿಗೆ ಇನ್ನೂ ಹತ್ತಾರು ಜಾತಿಯ ಮರಗಳು ಸಹ ಚಿತ್ರಕೂಟ ಅರಣ್ಯದಲ್ಲಿವೆ.

ಛತ್ತೀಸಗಢದ ದಂಡಕಾರಣ್ಯದಿಂದ ಕರ್ನಾಟಕದ ಕಿಷ್ಕಿಂಧೆಯವರೆಗೆ

ವನವಾಸ ಸಂದರ್ಭದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ಚಿತ್ರಕೂಟ ಪ್ರದೇಶದಿಂದ ಭಾರತದ ಬೃಹತ್ ದಂಡಕಾರಣ್ಯಕ್ಕೆ ಚಾರಣ ಮಾಡಿದರು. ದಂಡಕಾರಣ್ಯ ಎನ್ನುವುದು ಇಂದು ತಿಳಿದಿರುವಂತೆ 92,000 ಚದರ ಕಿ.ಮೀ ವಿಸ್ತೀರ್ಣದ ಹಸಿರು ಪ್ರಸ್ಥಭೂಮಿ. ಇದರಲ್ಲಿ ಅಬುಜ್ಮಾರ್ ಬೆಟ್ಟಗಳು ಮತ್ತು ಪೂರ್ವ ಘಟ್ಟಗಳು ಇವೆ. ಈ ಅರಣ್ಯವು ಛತ್ತೀಸಗಢ, ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ವ್ಯಾಪಿಸಿದೆ, ಈ ಅರಣ್ಯವು ಹಿಂದೂ ಧರ್ಮಗ್ರಂಥಗಳು ಮತ್ತು ರಾಮಾಯಣದ ಅನೇಕ ದೃಶ್ಯಗಳಿಗೆ ಸಾಕ್ಷಿಯಾಗಿದೆ. ರಾಮ, ಲಕ್ಷ್ಮಣ ಹಾಗೂ ಸೀತಾ ಮೂವರು ಸುಮಾರು 13 ವರ್ಷಗಳ ಕಾಲ ಈ ಸುಂದರವಾದ ಕಾಡಿನಲ್ಲಿ ಕಳೆದರು. ಈ ಪೌರಾಣಿಕ ಪ್ರದೇಶವು ಈಗ ಛತ್ತೀಸಗಢ ರಾಜ್ಯದ ಬಸ್ತಾರ್ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. ಈಗ ಬಸ್ತಾರ್‌ನ ಈ ಪ್ರದೇಶ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಈಗಲೂ ಈ ಅರಣ್ಯವನ್ನು ರಾಮಾಯಣದ ಅರಣ್ಯ ಎಂದೇ ಸ್ಥಳೀಯರು ಕರೆಯುತ್ತಾರೆ.

ದಂಡಕಾರಣ್ಯದಲ್ಲಿ ಇರುವುದು ಅತಿ ಉದ್ದನೆಯ ಮರಗಳೇ. ಮುಗಿಲೆತ್ತರದ ಮರಗಳು ದಂಡಕಾರಣ್ಯದ ವೈಶಿಷ್ಟ್ಯ. ಇಲ್ಲಿ ಹಣ್ಣು ಬಿಡುವ ಹತ್ತಾರು ಮರಗಳು ನೆಲೆಗೊಂಡಿವೆ. ಈಗಿನ ತೆಲಂಗಾಣಕ್ಕೆ ಸೇರಿದ ಪಂಚವಟಿ ಅರಣ್ಯದಲ್ಲಿದ್ದಾಗಲೇ ಸೀತೆಯ ಅಪಹರಣವಾಗಿದ್ದು. ಗೋದಾವರಿ ನದಿ ತೀರದ ಪಂಚವಟಿ ಅರಣ್ಯದಲ್ಲಿ ರಾಮ ಹಾಗೂ ಸೀತೆ ಕೆಲವು ದಿನ ಬೀಡು ಬಿಟ್ಟಿದ್ದರು. ಈ ವೇಳೆ ರಾವಣ ಆಕೆಯನ್ನು ಇದೇ ಅರಣ್ಯದಿಂದ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ದ ಎನ್ನುವ ಉಲ್ಲೇಖ ರಾಮಾಯಣದಲ್ಲಿದೆ.

ಪಂಚವಟಿಯಿಂದ ರಾವಣ ಸೀತೆಯನ್ನು ಕರೆದೊಯ್ದದ್ದು ಶ್ರೀಲಂಕಾದ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಕ್ಕೆ. ಶ್ರೀಲಂಕಾ ಕೂಡ ಎಲ್ಲಾ ಕಾಲಮಾನದಲ್ಲೂ ಹಸಿರಾಗಿರುವ ಅರಣ್ಯ ಪ್ರದೇಶಗಳನ್ನು ಹೊಂದಿದೆ. ಭಾರತದ ನೆರೆಯ ದೇಶವಾಗಿರುವ ಶ್ರೀಲಂಕಾದಲ್ಲಿ ಅಶೋಕ ಮರ, ಸುಂದರ ಕೆಂಪು ಹೂವಿನ ಮಳೆ ಮರಗಳು ಈಗಲೂ ಜನಪ್ರಿಯ.

ರಾವಣ ಸೀತೆಯನ್ನು ಅಪಹರಿಸಿದ ಮೇಲೆ ರಾಮ ಹುಡುಕಾಟ ಆರಂಭಿಸಿದ್ದು, ಆಂಧ್ರಪ್ರದೇಶದ ಪಂಚವಟಿ ಅರಣ್ಯ ಭಾಗದಿಂದ. ಇಂದಿನ ಕರ್ನಾಟಕ ಪ್ರವೇಶಿಸಿದ್ದು ಕಿಷ್ಕಿಂಧೆಯ ಮೂಲಕ. ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗೆ ಸೇರಿದ ಕಿಷ್ಕಿಂಧೆಯು ಈಗಿನ ಅಂಜನಾದ್ರಿಯಾಗಿ ಜನಪ್ರಿಯವಾಗಿದೆ. ಬೆಟ್ಟ, ಗುಡ್ಡಗಳ ಸಾಲು. ಹಸಿರು ಮರಗಳ ನಡುವೆ ಹರಿಯುವ ತುಂಗಭದ್ರೆಯು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ಹಂಪಿಯ ಭಾಗ ವಿಜಯನಗರ ಜಿಲ್ಲೆಯಲ್ಲಿದ್ದರೆ, ಅಂಜನಾದ್ರಿ ಬೆಟ್ಟ ಕೊಪ್ಪಳದಲ್ಲಿದೆ.

ಕಿಷ್ಕಿಂಧೆ ಕಾಡಿನ ಅಮೂಲ್ಯ ವೃಕ್ಷ ಸಂಪತ್ತು

ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ, ಇಲ್ಲಿಗೆ ಬಂದು ರಾಮ ಕೆಲ ಅವಧಿ ತಂಗಿದ್ದ. ಸೀತೆ ಈ ಭಾಗದಲ್ಲಿ ಇರಬಹುದು ಎನ್ನುವ ಕಾರಣಕ್ಕೆ ಹುಡುಕಾಟ ನಡೆಸಿದ್ದ ಎನ್ನುವುದು ರಾಮಾಯಣದಲ್ಲಿದೆ. ಇಲ್ಲಿಯೇ ಹನುಮ ಹಾಗೂ ಸುಗ್ರೀವರು ರಾಮನನ್ನು ಭೇಟಿ ಮಾಡಿ ಸೀತೆ ಹುಡುಕಾಟಕ್ಕೆ ನೆರವಾಗಿದ್ದರು. ಹನುಮನ ಸಹಕಾರವಿಲ್ಲದೇ ರಾಮ ಸೀತೆ ಹುಡುಕಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಹನುಮಂತ ಪಟ್ಟ ಕಷ್ಟ ಕಾರ್ಪಣ್ಯಗಳ ಚಿತ್ರಣವನ್ನು ರಾಮಾಯಣದಲ್ಲಿ ವಿವರಿಸಲಾಗಿದೆ. ಇದರಿಂದ ಕಿಷ್ಕಿಂಧಾ ಬೆಟ್ಟಗಳ ಸಾಲು ರಾಮಾಯಣದೊಂದಿಗೆ ಮುಖ್ಯವಾಗಿ ಬೆಸೆದುಕೊಂಡಿರುವ ತಾಣ.

ಸಮೀಪದಲ್ಲಿಯೇ ಇದ್ದ ಪಂಪಾ ಸರೋವರ, ಸುತ್ತಲಿನ ಅರಣ್ಯ ಪ್ರದೇಶದಲ್ಲಿ ರಾಮ ಇದ್ದುದನ್ನು ಉಲ್ಲೇಖಿಸಲಾಗಿದೆ. ಪಂಪಾ ಸರೋವರದ ಅರಣ್ಯದಲ್ಲಿ ಸೇಬು, ಹಲಸಿನ ಹಣ್ಣು, ಮಾವಿನ ಮರಗಳು ಇದ್ದವು. ಶ್ರೀಗಂಧ, ಅಶೋಕ, ಕದಂಬ ಮರಗಳು ಈ ಅರಣ್ಯದ ವಿಶೇಷವಾಗಿತ್ತು. ಮಲ್ಲಿಗೆ, ಕಮಲ, ಲಿಲ್ಲಿ, ಚೆರ್ರಿ ಸಹಿತ ಹಲವು ಬಗೆಯ ಹೂವುಗಳೂ ಕೂಡ ಪಂಪಾ ಸರೋವರದ ಅರಣ್ಯ ಪ್ರದೇಶದಲ್ಲಿದ್ದವು ಎನ್ನುವುದು ಇದರ ಮಹತ್ವವನ್ನು ಸಾರುತ್ತದೆ. ಈ ಅರಣ್ಯ ಭಾಗವೆಲ್ಲವೂ ಕರ್ನಾಟಕದ್ದೇ ಎನ್ನುವುದು ಗಮನೀಯ ಸಂಗತಿ.

ಇಂಥ ಹಲವು ಮಹತ್ವದ ಅಂಶಗಳನ್ನು ಒಗ್ಗೂಡಿಸಿ ಚೆನ್ನೈನ ಸಸ್ಯಶಾಸ್ತ್ರಜ್ಞ ಹಾಗೂ ಸಿಪಿಆರ್‌ ಪರಿಸರ ಶಿಕ್ಷಣ ಕೇಂದ್ರ (CPR Environmental Education Centre, Chennai) ಮುಖ್ಯಸ್ಥ ಅಮೆರ್ಥ ಲಿಂಗಂ ಅವರು ದಶಕದ ಹಿಂದೆಯೇ 'ವಾಲ್ಮೀಕಿ ರಾಮಾಯಣದ ಸಸ್ಯವೈವಿಧ್ಯ' ಎನ್ನುವ ಕುರಿತು ವಿಚಾರವನ್ನು ಮಂಡಿಸಿದ್ದರು. ಇದಕ್ಕಾಗಿ ರಾಮಾಯಣದಲ್ಲಿ ವರ್ಣಿಸಿರುವ ಎಲ್ಲಾ ಸಸ್ಯಗಳ ವಿವರಗಳನ್ನು ಸಂಗ್ರಹಿಸಿದ್ದರು. ಇದರಲ್ಲಿ ಅವರು ನೀಡಿದ ಪ್ರತಿ ಸಸ್ಯಗಳ ಮಾಹಿತಿ ಹಾಗೂ ರಾಮಾಯಣದ ನಂಟು, ರಾಮ, ಲಕ್ಷ್ಮಣ, ಹನುಮಂತರು ಬಳಸಿದ ಸಸ್ಯಗಳ ವಿವರಗಳಿದ್ದವು.

ಉತ್ತರಾಖಂಡದಲ್ಲಿ ರಾಮಾಯಣ ಪಾರ್ಕ್‌

ರಾಮಾಯಣದ ಜತೆಗೆ ಅರಣ್ಯ ಹಾಗೂ ಹಸಿರಿನ ನಂಟಿನ ಮಹತ್ವ ಸಾರುವ ಉದ್ದೇಶದಿಂದ ಭಾರತದಲ್ಲೇ ಮೊದಲ ಬಾರಿಗೆ ಉತ್ತರಾಖಂಡ ರಾಜ್ಯದ ಅರಣ್ಯ ಇಲಾಖೆಯು ಹಸಿರು ರಾಮಾಯಣ ಪಾರ್ಕ್‌ ರೂಪಿಸಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಎಲ್ಲ 139 ಜಾತಿಯ ಸಸ್ಯ ಸಂಪತ್ತನ್ನು ಈ ಪಾರ್ಕ್‌ನಲ್ಲಿ ಪರಿಚಯಿಸಲಾಗಿದೆ. ಅಲ್ಲದೇ ರಾಮ ಸಂಚರಿಸಿದ ಆರು ಪ್ರಮುಖ ಅರಣ್ಯದ ವಿವರಗಳೂ ಇಲ್ಲಿವೆ.

ವಾಲ್ಮೀಕಿ ರಾಮಾಯಣದಲ್ಲಿ ಅರಣ್ಯ, ಸಸ್ಯ ಜಗತ್ತು ಹಾಗೂ ಹಸಿರಿನ ಕುರಿತು ಪ್ರಮುಖವಾಗಿ ಉಲ್ಲೇಖವಿದೆ. ವಾಲ್ಮೀಕಿ ರಾಮಾಯಣವನ್ನು ಆಧರಿಸಿಯೇ ಅರಣ್ಯ ಇಲಾಖೆ ಇಂತಹದೊಂದು ಪ್ರಯತ್ನ ಮಾಡಿದೆ. ಉತ್ತರಾಖಂಡದ ಅರಣ್ಯ ಪ್ರದೇಶವೇ ಆಗಿರುವ ಕುಮಾವ್ ಪ್ರಾಂತ್ಯದ ಹಲ್ದ್ವಾನಿ ಪ್ರದೇಶದಲ್ಲಿ ಈ ಪಾರ್ಕ್‌ ರೂಪುಗೊಂಡಿದೆ. ಅಲ್ಲದೇ ಪ್ರಮುಖ ಪ್ರವಾಸಿ ತಾಣವಾಗಿಯೂ ಇದು ಮಾರ್ಪಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್‌ ಚತುರ್ವೇದಿ, ರಾಮಾಯಣದ ಬಗ್ಗೆ ನಮ್ಮಲ್ಲಿ ಗೌರವವಿದೆ. ಈಗಲೂ ಜನ ರಾಮನನ್ನು ಗೌರವಿಸುತ್ತಾರೆ. ರಾಮಾಯಣವು ನಾಡಿನ ಜತೆಗೆ ಕಾಡಿನಲ್ಲೂ ರೂಪುಗೊಂಡಿದೆ. ಅಂದರೆ ಆ ಕಾಡಿನಲ್ಲಿ ರಾಮ ಬಳಸಿದ ಅದೆಷ್ಟೋ ಸಸ್ಯಗಳು, ವೈದ್ಯನ ರೀತಿ ಲಕ್ಷ್ಮಣ ಸಸ್ಯಗಳನ್ನು ಅಣ್ಣನ ಆರೈಕೆಗೆ ಬಳಸಿದ್ದು. ಸಂಜೀವಿನಿ ರೀತಿ ಸಸ್ಯಗಳ ಗುಡ್ಡವನ್ನೇ ಹನುಮಂತ ಹೊತ್ತು ತಂದಿದ್ದು ಇದೆ. ಆಗ ಬಳಸಿದ ಅದೆಷ್ಟೋ ಔಷಧೀಯ ಸಸ್ಯಗಳು ನಮ್ಮಲ್ಲಿ ಈಗಲೂ ಬಳಕೆಯಲ್ಲಿದೆ. ಇದಕ್ಕಾಗಿ ನಾವು ಕೊಂಚ ಸಂಶೋಧನೆ ಮಾಡಿದೆವು. ವಾಲ್ಕೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾದ ಸಸ್ಯ ಸಂಪತ್ತು. ಅರಣ್ಯ ಪ್ರದೇಶದ ವಿವರವನ್ನು ಪಡೆದುಕೊಂಡೆವು. ಎಲ್ಲಾ ಮಾಹಿತಿಯೊಂದಿಗೆ ಪಾರ್ಕ್‌ನಲ್ಲಿ ಸಸ್ಯಗಳನ್ನು ನೀಡಿದ್ದೇವೆ. ಅರಣ್ಯದ ಮಹತ್ವದ ವಿವರಗಳೂ ಇಲ್ಲಿ ಸಿಗುತ್ತವೆ' ಎಂದು ಹೇಳುತ್ತಾರೆ.

ರಾಮ ಸಂಚರಿಸಿದ ಅರಣ್ಯಗಳು

ಶ್ರೀರಾಮನು ಅಯೋಧ್ಯೆಯಿಂದ ಶ್ರೀಲಂಕಾಕ್ಕೆ ಹೋಗುವಾಗ ಮುಖ್ಯವಾಗಿ ನಾಲ್ಕು ಅರಣ್ಯಗಳು ಬರುತ್ತವೆ. ಇವೆಂದರೆ ಚಿತ್ರಕೂಟ, ದಂಡಕಾರಣ್ಯ, ಪಂಚವಟಿ ಹಾಗೂ ಕಿಷ್ಕಿಂಧ. ಇದರೊಟ್ಟಿಗೆ ಶ್ರೀಲಂಕಾದ ಅಶೋಕ ವನ ಹಾಗೂ ಹಿಮಾಲಯದ ದ್ರೋಣ ಗಿರಿ ಕೂಡ ಸೇರಿಕೊಂಡಿವೆ. ಈ ಎಲ್ಲವನ್ನೂ ಒಳಗೊಂಡಂತೆ ಮಾಹಿತಿಯನ್ನು ರಾಮಾಯಣ ಪಾರ್ಕ್‌ನಲ್ಲಿ ನೀಡಲಾಗಿದೆ. ದಂಡಕಾರಣ್ಯವು ಮಧ್ಯಭಾರತದಲ್ಲಿ, ಕರ್ನಾಟಕದಲ್ಲಿ ಕಿಷ್ಕಿಂಧ, ಶ್ರೀಲಂಕಾ ಅಶೋಕ ವಾಟಿಕದಲ್ಲಿ ಈಗಲೂ ರಾಮಾಯಣದಲ್ಲಿ ಬಳಸಿದ ಹಲವಾರು ಮರ, ಸಸ್ಯಗಳು ಕಂಡು ಬಂದಿವೆ. ಅದರಲ್ಲಿ ರಕ್ತಚಂದನ, ಅಶೋಕ ಹಲವಾರು ಮರಗಳು ಇದರಲ್ಲಿ ಪ್ರಮುಖವಾದವು. ಇಲ್ಲಿ ಸಂಸ್ಕೃತ ಶ್ಲೋಕ ಹಾಗೂ ಸಸ್ಯ, ಮರಗಳ ಮಹತ್ವ, ಹಿನ್ನೆಲೆಯ ವಿವರವನ್ನು ನೀಡಲಾಗಿದೆ. ಒಂದು ಎಕರೆ ಪ್ರದೇಶ ಸುತ್ತು ಹಾಕಿ ಬಂದರೆ ರಾಮಾಯಣದ ಅನುಭವವಾಗುವ ವಾತಾವರಣವು 'ರಾಮಾಯಣ ಪಾರ್ಕ್‌'ನಲ್ಲಿದೆ.

ಬರಹ: ಕುಂದೂರು ಉಮೇಶ ಭಟ್ಟ

(This special story on Ramayana's bonding with nature first appeared in 'Hindustan Times Kannada. To read more on stories about Karnataka's environment please visit kannada.hindustantimes.com )

Whats_app_banner