Kannada News  /  Nation And-world  /  Mallikarjun Kharge Intensifies Efforts To Strengthen Congress Ahead Of 2024 Ls Polls, Likely To Begin Tour Of States
ಮಲ್ಲಿಕಾರ್ಜುನಾ ಖರ್ಗೆ
ಮಲ್ಲಿಕಾರ್ಜುನಾ ಖರ್ಗೆ (HT_PRINT)

Mallikarjun Kharge: ಕಾಂಗ್ರೆಸ್‌ ಬಲವರ್ಧನೆಗೆ ಮಲ್ಲಿಕಾರ್ಜುನಾ ಖರ್ಗೆ ಭಾರತ ಯಾತ್ರೆ, ಗುಜರಾತ್‌ನಿಂದ ಆರಂಭ ಸಾಧ್ಯತೆ

24 November 2022, 19:45 ISTHT Kannada Desk
24 November 2022, 19:45 IST

ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಲು ಮಲ್ಲಿಕಾರ್ಜುನಾ ಖರ್ಗೆಯವರು ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸ ಆರಂಭಿಸಲಿದ್ದಾರೆ.

ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಮಲ್ಲಿಕಾರ್ಜುನಾ ಖರ್ಗೆಯವರು ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸ ಆರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸುವುದು, ಚುನಾವಣಾ ಕ್ಷೇತ್ರಗಳು ಮತ್ತು ಭಾರತ ಜೋಡೊ ಯಾತ್ರೆಯ ಜತೆ ಕೆಲಸ ಮಾಡುವುದು ಸೇರಿದಂತೆ ಮೂರು ಪ್ರಮುಖ ಅಂಶಗಳ ಮೇಲೆ ಕಾರ್ಯತಂತ್ರ ರೂಪಿಸಲು ಆರಂಭಿಸಿದ್ದಾರೆ. "ಖರ್ಗೆ ಅವರ ವಿವಿಧ ರಾಜ್ಯಗಳ ಭೇಟಿಯು ಈ ಮೂರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ನ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಖರ್ಗೆಯವರು ಗುಜರಾತ್‌ನಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 93 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಗುಜರಾತ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಎರಡನೇ ಹಂತದ ಮತದಾನಕ್ಕೂ ಮುನ್ನ ಅವರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನದ ಸಮಯದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. "ರಾಹುಲ್‌ ಗಾಂಧಿಯವರ ಪ್ರವಾಸವು ಭಾರತ ಜೋಡೊ ಯಾತ್ರೆಯ ಬಿಡುವಿನ ವೇಳೆಯನ್ನು ಅವಲಂಬಿಸಿರುತ್ತದೆʼʼ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅವರು ಫಲಿತಾಂಶಕ್ಕೆ ತಕ್ಕಂತೆ ಹೊಸ ಕಾರ್ಯತಂತ್ರಗಳನ್ನು ಕೈಗೊಳ್ಳಲಿದ್ದಾರೆ. ಈಗಾಗಲೇ ಹಿಮಾಚಲ ಪ್ರದೇಶದ ಪಕ್ಷದ ಮುಖಂಡರ ಜತೆ ಖರ್ಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ರಾಜ್ಯಗಳ ಪ್ರವಾಸ ಮಾಡಲಿದ್ದು, ಒಟ್ಟಾರೆ ಭಾರತ ಯಾತ್ರೆ ಕೈಗೊಂಡು ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ತಿಳಿಸಿವೆ.

"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆ ತುಂಬುತ್ತವೆ. ನಾವು ಅಧಿಕಾರದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದ್ದೆವು. ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ. ಕಾರಣ ಬಡವರು ದಲಿತರಿಗೆ ಉದ್ಯೋಗ ಸಿಗುತ್ತದೆ. ಹೀಗಾಗಿ ಅವರು ತುಂಬಲ್ಲ. 70 ಸಾವಿರ ಸರ್ಕಾರಿ ನೌಕರಿ ತುಂಬಿ ಪ್ರಮಾಣ ಪತ್ರ ನೀಡುತ್ತಾರೆʼʼ ಎಂದು ಇತ್ತೀಚೆಗೆ ಮಲ್ಲಿಕಾರ್ಜುನಾ ಖರ್ಗೆಯವರು ಬೆಂಗಳೂರಿನಲ್ಲಿ ಹೇಳಿದ್ದರು.

ಅರಮನೆ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭ - ಸರ್ವೋದಯ ಸಮಾವೇಶದಲ್ಲಿ ಅವರು ಈ ಭರವಸೆ ನೀಡಿದ್ದರು.

"ನನಗೆ ನೀವು ಗೌರವಿಸಿ ಅಭಿನಂದಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ನನಗೆ ಅದ್ದೂರಿ ಸ್ವಾಗತ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ ನೀವು ನನಗೆ ಯಾವಾಗ ಗೌರವ ನೀಡುತ್ತೀರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಗೌರವ ಸಲ್ಲಿಸಿದಂತೆ ಆಗುತ್ತದೆ. ಈ ಹಾರ ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕುʼʼ ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು.