ಕನ್ನಡ ಸುದ್ದಿ  /  Nation And-world  /  One Nation One Election: Pil In Delhi Hc Seeks Lok Sabha, Assembly, Municipal Polls Together Karnataka Assembly Election

one nation one election: ಕರ್ನಾಟಕ ಸೇರಿ 16 ವಿಧಾನಸಭೆ, ಲೋಕಸಭೆ, ಮುನ್ಸಿಪಲ್‌ ಚುನಾವಣೆ ಒಟ್ಟಿಗೆ ನಡೆಯಲಿ; ದೆಹಲಿ ಹೈಕೋರ್ಟಲ್ಲಿ ಪಿಐಎಲ್‌

one nation one election: ಒಂದು ದೇಶ ಒಂದು ಚುನಾವಣೆ 2024ರಿಂದಲೇ ಜಾರಿಯಾಗಲಿ, ಕರ್ನಾಟಕ ಸೇರಿ 16 ವಿಧಾನಸಭೆ, ಲೋಕಸಭೆ, ಮುನ್ಸಿಪಲ್‌ ಚುನಾವಣೆ ಒಟ್ಟಿಗೆ ನಡೆಯಲಿ- ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಾಗಿದೆ.

ದೆಹಲಿ ಹೈಕೋರ್ಟ್‌ (ಕಡತ ಚಿತ್ರ)
ದೆಹಲಿ ಹೈಕೋರ್ಟ್‌ (ಕಡತ ಚಿತ್ರ) (HT_PRINT)

ನವದೆಹಲಿ: ಹಣ ಮತ್ತು ಜನಬಲವನ್ನು ಉಳಿಸುವ ಸಲುವಾಗಿ, ಅದೇ ರೀತಿ ಚುನಾವಣಾ ಅಡ್ಡಿಗಳನ್ನು ನಿಯಂತ್ರಿಸಲು ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ (one nation one election) ನಡೆಸುವ ಸಾಧ್ಯತೆಗಳನ್ನು ಖಚಿತಪಡಿಸಬೇಕು. ಇದಕ್ಕಾಗಿ ಕೇಂದ್ರ ಮತ್ತು ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಕೆಯಾಗಿದೆ.

ಲೋಕಸಭೆ, ವಿಧಾನಸಭೆ, ಪಂಚಾಯಿತಿ, ನಗರಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರಿಂದ ಹಲವು ಅನುಕೂಲಗಳಿವೆ. ಅರೆಸೇನಾ ಪಡೆಗಳು, ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ಸಿಬ್ಬಂದಿ ಮತ್ತು ಬೂತ್‌ಗಳನ್ನು ಸಂಘಟಿಸುವ ಚುನಾವಣಾ ಆಯೋಗದ ಸಿಬ್ಬಂದಿ, ವಿದ್ಯುನ್ಮಾನ ಮತಯಂತ್ರಗಳು ಮತ್ತು ವೋಟರ್ ಸ್ಲಿಪ್‌ಗಳ ಬಳಕೆಗೆ ಸಂಬಂಧಿಸಿದಂತೆ ಇದು (one nation one election) ಚುನಾವಣೆಗಳನ್ನು ನಡೆಸುವ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸೇವಾ ಕೈಗಾರಿಕೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಅಮೂಲ್ಯ ಸಮಯವನ್ನು ಉಳಿಸುವ ಸಲುವಾಗಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಚುನಾವಣೆಗಳನ್ನು ನಡೆಸುವ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಮನವಿಯು ನ್ಯಾಯಾಲಯವನ್ನು ಕೋರಿದೆ.

ಸುಪ್ರೀಂ ಕೋರ್ಟ್‌ನ ವೃತ್ತಿನಿರತ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಅವರು ಈ ಸಾರ್ವಜನಿಕ ಹಿತಾಸಕ್ತಿ ದಾವೆ (PIL) ಹೂಡಿದ್ದಾರೆ. ನಾವು ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಯುವ ಪರಿಸ್ಥಿತಿಗೆ ಹಿಂತಿರುಗಬೇಕು. ಭಾರತೀಯ ಕಾನೂನು ಆಯೋಗವು ತನ್ನ ವರದಿ ಸಂಖ್ಯೆ-170 ರಲ್ಲಿ ಪ್ರಸ್ತಾಪಿಸಿದ ಶಿಫಾರಸುಗಳನ್ನು ಜಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನು ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.

ಎಲ್ಲ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ನಿರ್ಧಾರವು ಹಣವನ್ನು ಉಳಿಸುತ್ತದೆ, ಏಕೆಂದರೆ ಪಕ್ಷಗಳ ಪ್ರಚಾರದ ವೆಚ್ಚವು ಕಡಿಮೆಯಾಗುತ್ತದೆ. ಮಾದರಿ ನೀತಿ ಸಂಹಿತೆಯ ಹೇರಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ವಿಳಂಬಗೊಳಿಸುತ್ತದೆ ಮತ್ತು ಆಡಳಿತದ ಸಮಸ್ಯೆಗಳಿಂದ ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದರ ಕಡೆಗೆ ಮನವಿಯಲ್ಲಿ ಗಮನಸೆಳೆಯಲಾಗಿದೆ.

ಲೋಕಸಭೆ, ವಿಧಾನಸಭೆಗಳು, ಪಂಚಾಯತ್‌ಗಳು ಮತ್ತು ಮುನ್ಸಿಪಲ್ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಅಗತ್ಯದ ಕುರಿತು ಸುದೀರ್ಘ ಚರ್ಚೆ ಆಗಿರುವ ಕುರಿತು ಕೂಡ ಮನವಿ ಗಮನಸೆಳೆದಿದೆ.

"ಚುನಾವಣೆಗಳು ದೊಡ್ಡ ಬಜೆಟ್ ವ್ಯವಹಾರ ಮತ್ತು ದುಬಾರಿ. ಆದ್ದರಿಂದ, ಭಾರತೀಯ ಕಾನೂನು ಆಯೋಗವು ತನ್ನ ಚುನಾವಣಾ ಕಾನೂನುಗಳ ಸುಧಾರಣೆಯ 170 ನೇ ವರದಿಯಲ್ಲಿ (1999) ಆಡಳಿತದಲ್ಲಿ ಸ್ಥಿರತೆಗಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವಂತೆ ಶಿಫಾರಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ’’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಧಿಕಾರಾವಧಿಯನ್ನು ಮೊಟಕುಗೊಳಿಸುವ ಅಥವಾ ವಿಸ್ತರಿಸುವ ಮೂಲಕ 2023 ಮತ್ತು 2024 ರಲ್ಲಿ ಅವಧಿ ಮುಕ್ತಾಯಗೊಳ್ಳಲಿರುವ ಅಸೆಂಬ್ಲಿಗಳ ಚುನಾವಣೆಗಳನ್ನು 2024 ರ ಲೋಕಸಭೆ ಚುನಾವಣೆ ಜತೆಗೆ ಒಟ್ಟುಗೂಡಿಸಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ.

ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿದರೆ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ, ಸಿಕ್ಕಿಂ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ - 16 ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು 2024 ರ ಸಾರ್ವತ್ರಿಕ ಚುನಾವಣೆ ಜತೆಗೆ ನಡೆಸಬಹುದು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

IPL_Entry_Point