Imran Khan: ದೈವನಿಂದನೆಯ ಆರೋಪ ಹೊತ್ತ ಪಾಕಿಸ್ತಾನದ ಜನನಾಯಕ, ಸೇನೆ vs ಇಮ್ರಾನ್ ಖಾನ್ ಸಂಘರ್ಷದಲ್ಲಿ ನಲುಗುತ್ತಿದೆ ಪ್ರಜಾಪ್ರಭುತ್ವ- ಭಾಗ 1
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Imran Khan: ದೈವನಿಂದನೆಯ ಆರೋಪ ಹೊತ್ತ ಪಾಕಿಸ್ತಾನದ ಜನನಾಯಕ, ಸೇನೆ Vs ಇಮ್ರಾನ್ ಖಾನ್ ಸಂಘರ್ಷದಲ್ಲಿ ನಲುಗುತ್ತಿದೆ ಪ್ರಜಾಪ್ರಭುತ್ವ- ಭಾಗ 1

Imran Khan: ದೈವನಿಂದನೆಯ ಆರೋಪ ಹೊತ್ತ ಪಾಕಿಸ್ತಾನದ ಜನನಾಯಕ, ಸೇನೆ vs ಇಮ್ರಾನ್ ಖಾನ್ ಸಂಘರ್ಷದಲ್ಲಿ ನಲುಗುತ್ತಿದೆ ಪ್ರಜಾಪ್ರಭುತ್ವ- ಭಾಗ 1

Pakistan Ex PM Imran Khan: ‘ಪಾಕಿಸ್ತಾನದ ಜನರೆಲ್ಲರೂ ನನ್ನ ಪರವಾಗಿ ನಿಂತಿದ್ದರೂ ಇವರು (ಸೇನೆ) ಹುನ್ನಾರ ಮಾಡಿ, ಷಡ್ಯಂತ್ರ ರಚಿಸಿ ನನ್ನನ್ನು ತುಳಿಯುತ್ತಾರೆ’ ಎಂದು ಇಮ್ರಾನ್ ಖಾನ್ ಬಹು ಹಿಂದಿನಿಂದ ಹೇಳುತ್ತಿದ್ದರು. ಏನಿದರ ಮರ್ಮ? ಈ ಲೇಖನದಲ್ಲಿ ಪರಿಶೀಲಿಸಿದ್ದಾರೆ ಜಿಯೊ ಪಾಲಿಟಿಕ್ಸ್ ತಜ್ಞ ಕಿಶೋರ್ ನಾರಾಯಣ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅರೆಸ್ಟ್ ಆಗಿ, ಬಿಡುಗಡೆಯಾಗಿದ್ದಾರೆ. ಅವರ ವಿರುದ್ಧ ಸುಮಾರು 70 ಪ್ರಕರಣಗಳು ದಾಖಲಾಗಿವೆ. ದೇಶದ್ರೋಹ, ದೈವನಿಂದನೆ, ಹಣಕಾಸು ಅಕ್ರಮ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ. ಈ ಪೈಕಿ ದೈವನಿಂದನೆ ಗಂಭೀರ ಆರೋಪ ಎನಿಸಿದೆ. ಈ 70 ಪ್ರಕರಣಗಳ ಪೈಕಿ ಒಂದು ಪ್ರಕರಣದ ವಿಚಾರಣೆಯ ವೇಳೆ ಇಮ್ರಾನ್‌ ಖಾನ್‌ರ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರ ಬಂಧನ ಅನಿವಾರ್ಯವಾಯಿತು. ನಂತರ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಆಸರೆಯಲ್ಲಿ ಅವರಿಗೆ ಜಾಮೀನು ಸಿಕ್ಕಿತು.

ಕಳೆದ ವಾರ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯದಲ್ಲೇ ಬಂಧಿಸಿ ಜೈಲಿಗೆ ಕರೆದುಕೊಂಡು ಹೋದರು. ಈ ಕೆಲಸ ಮಾಡಿದ್ದು ಅರೆಸೇನಾ ಪಡೆಯ ಒಂದು ಘಟಕ. 'ನನ್ನನ್ನು ಸ್ವತಂತ್ರವಾಗಿ ಬೆಳೆಯಲು ಇವರು ಬಿಡುವುದಿಲ್ಲ. ಪಾಕಿಸ್ತಾನದ ಜನರೆಲ್ಲರೂ ನನ್ನ ಪರವಾಗಿ ನಿಂತಿದ್ದರೂ ಇವರು ಹುನ್ನಾರ ಮಾಡಿ, ಷಡ್ಯಂತ್ರ ರಚಿಸಿ ನನ್ನನ್ನು ತುಳಿಯುತ್ತಾರೆ. ಜನರೇ ಹುಷಾರಾಗಿರಿ, ಇಂದಲ್ಲ ನಾಳೆ ನನ್ನ ಬಂಧನವಾದರೆ ನೀವೆಲ್ಲ ಬೀದಿಗೆ ಬಂದು ಹೋರಾಡಬೇಕು. ಇಲ್ಲದೇ ಇದ್ದರೆ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ' ಎಂದು ಈ ಹಿಂದೆ ಹಲವು ಬಾರಿ ಇಮ್ರಾನ್ ಖಾನ್ ಹೇಳಿದ್ದರು. ಅವರು ಹೇಳುತ್ತಿದ್ದ ಭವಿಷ್ಯ ಮೇ 9ರಂದು ನಿಜವಾಯಿತು.

ಇಮ್ರಾನ್ ಖಾನ್ ಸ್ಥಾಪಿಸಿದ್ದ ಪಕ್ಷದ ಹೆಸರು 'ಪಾಕಿಸ್ತಾನ್‌ ತೆಹ್ರೀಕ್‌ ಏ ಇನ್ಸಾಫ್‌' (ಪಿಟಿಐ). ಈ ಪಕ್ಷದ ಕಾರ್ಯಕರ್ತರು ತಮ್ಮ ನಾಯಕನ ಬಂಧನದ ನಂತರ ರೊಚ್ಚಿಗೆದ್ದು ಬೀದಿಗೆ ಇಳಿದರು. ಪಾಕಿಸ್ಥಾನದ ಉದ್ದಗಲಕ್ಕೂ ಇಂದು ಬೆಂಕಿ ಹಚ್ಚುವುದು, ಲೂಟಿ ಮಾಡುವುದು, ರಾಷ್ಟ್ರೀಯ ಪ್ರತೀಕಗಳಾದ ಸೇನೆ, ಮೊಹಮದ್ ಅಲಿ ಜಿನ್ನಾ ಸ್ಮಾರಕ ಉದ್ಯಾನ, ಜಿನ್ನಾ ಅವರ ಪ್ರತಿಮೆಗಳ ಮೇಲೆ ದಾಳಿ ನಡೆಯಿತು. ಇಡೀ ದೇಶದಲ್ಲಿ ವ್ಯಾಪಕವಾದ ಪ್ರತಿಭಟನೆ ನಡೆಯುತ್ತಿದೆ.

ಹಿಂಸಾಚಾರ ವ್ಯಾಪಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ವಿಟರ್‌ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. ವೈರಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೆ ದೇಶ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಪಾಕಿಸ್ತಾನದ ಪ್ರಧಾನಮಂತ್ರಿ, ಸೇನಾ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ದೇಶದ ಹೊರಗೆ ಇದ್ದಾರೆ. ಇಮ್ರಾನ್ ಬಂಧನದ ನಂತರ ನಡೆಯುವ ಹಿಂಸಾಚಾರವನ್ನು ಅಂದಾಜಿಸಿಕೊಂಡು ಇವರು ಹೊರಗೆ ಹೋಗಿದ್ದಾರೋ, ಅಥವಾ ಅವರು ಈಗ ದೇಶದ ಹೊರಗೆ ಇರುವುದು ಕೇವಲ ಕಾಕತಾಳೀಯವೋ ಗೊತ್ತಿಲ್ಲ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಸರ್ಕಾರ ಪತನವಾಗಿತ್ತು. ನಂತರ ಪಿಪಿಪಿ ಮತ್ತು ಪಿಎಂಎಲ್‌ಎನ್‌ ಪಕ್ಷಗಳ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಪಾಕಿಸ್ತಾನದ ರಾಜಕೀಯ ಅಧಿಕಾರ ಯಾವ ಪಕ್ಷಕ್ಕೆ ಸೇರಬೇಕಿದ್ದರೂ ಅದಕ್ಕೆ ಸೇನೆಯ ಸಮ್ಮತಿ ಇರಲೇಬೇಕು. ಪಾಕಿಸ್ತಾನದಲ್ಲಿ ನವಾಜ್‌ ಷರೀಫ್‌ ಅವರನ್ನು ಮಟ್ಟಹಾಕಬೇಕು ಎಂದು ಸೇನೆಗೆ ಅನ್ನಿಸಿದಾಗಲೆಲ್ಲಾ ಅದು ಬೇರೆ ಪಕ್ಷಗಳನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿದೆ.

ಇಮ್ರಾನ್‌ಖಾನ್ ಕೂಡ ಅಧಿಕಾರಕ್ಕೆ ಬಂದಿದ್ದು ಸಹ ಪಾಕ್ ಸೇನೆಯ ಇಂಥ ಆಟದ ಭಾಗವಾಗಿಯೇ. ಸುಮಾರು 20 ವರ್ಷಗಳಿಂದ ರಾಜಕೀಯದಲ್ಲಿದ್ದ ಇಮ್ರಾನ್ ಖಾನ್ ಹಲವು ಬಾರಿ ಸೋತಿದ್ದಾರೆ. ನಾಲ್ಕೂವರೆ ವರ್ಷದ ಹಿಂದೆ ಅವರ ಪಕ್ಷ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂತು. ಇದು ಅವರ ಸ್ವಂತ ಬಲದಿಂದ ಸಂಪಾದಿಸಿದ ಗೆಲುವು ಅಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಇಮ್ರಾನ್‌ ಖಾನ್‌ ಪ್ರಧಾನಿಯಾದ ಮೊದಮೊದಲ ದಿನಗಳಲ್ಲಿ ಆಂತರಿಕ ವಿಚಾರಗಳನ್ನು ನಾನು ನೋಡಿಕೊಳ್ತೇನೆ. ವಿದೇಶಾಂಗ ವ್ಯವಹಾರ ಸೇನೆ ನೋಡಿಕೊಳ್ಳಲಿ ಎಂಬ ನಿಲುವು ತಳೆದಿದ್ದರು. ವಿದೇಶಾಂಗ ವ್ಯವಹಾರ ಎಂದರೆ ಪಾಕಿಸ್ತಾನದ ಶತ್ರುದೇಶವಾದ ಭಾರತ ಮತ್ತು ಮಿತ್ರ ದೇಶಗಳಾದ ಚೀನಾದ ವ್ಯವಹಾರಗಳು ಸೇರಿಕೊಳ್ಳುತ್ತವೆ. ಆದರೆ ಅಧಿಕಾರದ ಖಾತ್ರಿ ಸಿಕ್ಕದ ನಂತರ ಅದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದರು. ಇದನ್ನು ಅಲ್ಲಿನ ಸೇನೆ ಸಹಿಸಲಿಲ್ಲ. ಇಮ್ರಾನ್‌ಖಾನ್ ಮೇಲೆ ಇರಿಸಿದ್ದ ಸೇನಾಧಿಕಾರಿಗಳ ನಂಬಿಕೆ ಕದಲಿತು.

ಸೇನೆಯನ್ನು ನಿರ್ವಹಿಸುವ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಮೂಲ ವ್ಯತ್ಯಾಸವಿದೆ. ಭಾರತ ದೇಶ, ಭಾರತ ಸರ್ಕಾರ ಸೇನೆಯನ್ನು ನಿರ್ವಹಿಸುತ್ತದೆ. ಸರ್ಕಾರದ ನೀತಿ ನಿರೂಪಣೆ ಹಾಗೂ ನಿರ್ಧಾರಗಳನ್ನು ಸರ್ಕಾರದ ಆದೇಶದ ಮೇರೆಗೆ ಸೇನೆ ಜಾರಿಗೆ ತರುತ್ತದೆ. ಆದರೆ ಪಾಕಿಸ್ತಾನದಲ್ಲಿ ಹೀಗಲ್ಲ. ಅಲ್ಲಿ ಸೇನೆಯೇ ದೇಶ ಮತ್ತು ಸರ್ಕಾರಗಳನ್ನು ನಿರ್ವಹಿಸುತ್ತದೆ. ಸೇನೆಯ ಇಂಗಿತವನ್ನು ಜಾರಿಗೆ ತರುವ ಹೊಣೆಯನ್ನು ಪ್ರಜಾಪ್ರಭುತ್ವದ ಮುಖ ತೊಟ್ಟಿರುವ ಸರ್ಕಾರ ಹೊತ್ತುಕೊಳ್ಳುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ ಭಾರತದಲ್ಲಿ ಜನರು ಆಯ್ಕೆ ಮಾಡಿದ ಸರ್ಕಾರದ ಅಧೀನದಲ್ಲಿ ಸೇನೆ ಇರುತ್ತದೆ. ಆದರೆ ಪಾಕಿಸ್ತಾನದಲ್ಲಿ ಸೇನೆ ಆಯ್ಕೆ ಮಾಡಿದ ಸರ್ಕಾರದ ಅಧೀನದಲ್ಲಿ ಜನರು ಇರುತ್ತಾರೆ.

ಪಾಕಿಸ್ತಾನದಲ್ಲಿ ನಾಲ್ಕೂವರೆ ವರ್ಷಗಳ ಹಿಂದೆ ಚುನಾವಣೆ ಆಯಿತು. ಇಮ್ರಾನ್‌ ಖಾನ್‌ ಪಕ್ಷ ಗೆದ್ದು ಬಂದಿದ್ದಾಯಿತು. ಅವರು ಅಧಿಕಾರವನ್ನೂ ಕೈಗೆತ್ತಿಕೊಂಡರು. ಕೇವಲ ಇಸ್ಲಾಮಾಬಾದ್‌ (ಕೇಂದ್ರ ಸರ್ಕಾರ) ಒಂದೇ ಅಲ್ಲ. ಪಂಜಾಬ್‌, ಬಲೂಚಿಸ್ತಾನ್‌, ಸಿಂಧ್‌ ಸೇರಿದಂತೆ ಪ್ರಾಂತ್ಯಗಳ ಸರ್ಕಾರವೂ ಅದೇ ಪಕ್ಷದ್ದೇ ಆಗಿತ್ತು. ಪಾಕಿಸ್ತಾನದಲ್ಲಿ ನಿಧಾನವಾಗಿ ಸ್ಥಿರತೆ ಮೂಡುತ್ತಿತ್ತು. ಆದರೆ ಈ ಹಂತದಲ್ಲಿ ಸೇನೆಯ ಹಸ್ತಕ್ಷೇಪ ಹೆಚ್ಚಾಗಿ ಅಯೋಮಯದ ಪರಿಸ್ಥಿತಿ ನಿರ್ಮಾಣವಾಯಿತು.

ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಬಾಜ್ವಾ ಅವರು ನಿವೃತ್ತಿಯ ಅಂಚಿಗೆ ಸರಿದಾಗ ಅವರ ಅಧಿಕಾರ ಅವಧಿ ವಿಸ್ತರಣೆ ವಿಚಾರದಲ್ಲಿ ಗೊಂದಲ ಹೆಚ್ಚಾಯಿತು. ಇಮ್ರಾನ್‌ ಖಾನ್‌ ಅವರಿಗೆ ಬಾಜ್ವಾ ಅಧಿಕಾರದ ಅವಧಿ ವಿಸ್ತರಿಸುವುದು ಇಷ್ಟ ಇರಲಿಲ್ಲ. ಅಧಿಕಾರ ವಿಸ್ತರಣೆಯಾದರೆ ಚುನಾಯಿತ ಸರ್ಕಾರಕ್ಕೆ ಆಪತ್ತು ಒದಗಬಹುದು ಎಂಬ ಆತಂಕದ ಜೊತೆಗೆ ಪಾಕಿಸ್ತಾನವು ರೂಪುಗೊಂಡ 75 ವರ್ಷಗಳಲ್ಲಿ ಒಮ್ಮೆಯೂ ಯಾವುದೇ ಸರ್ಕಾರ ಪೂರ್ಣ ಅವಧಿಗೆ ಆಡಳಿತ ನಡೆಸಿರಲಿಲ್ಲ. ಇಮ್ರಾನ್ ಖಾನ್‌ ತಮ್ಮ ಅವಧಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇತ್ತು. ದೇಶದಲ್ಲಿ ಇಮ್ರಾನ್ ಖಾನ್ ಜನಪ್ರಿಯತೆ ಹೆಚ್ಚಾಗುತ್ತಿತ್ತು. ಜನರಲ್ ಬಾಜ್ವಾ ಅವರ ಅಧಿಕಾರ ವಿಸ್ತರಿಸುವ ಪ್ರಸ್ತಾವ ತಳ್ಳಿಹಾಕಿ, ತನಗೆ ಯಾರು ಸೂಕ್ತ ಎನಿಸುತ್ತಾರೋ ಅಂಥವರನ್ನು ಸೇನೆಯ ಮುಖ್ಯಸ್ಥರನ್ನಾಗಿ ಮಾಡುತ್ತೇನೆಂದು ಇಮ್ರಾನ್ ಹೊರಟರು. ಸೇನೆ ಇದನ್ನು ಸಹಿಸಲಿಲ್ಲ. ತಿಕ್ಕಾಟ ಆರಂಭವಾಯಿತು.

ಪಾಕಿಸ್ತಾನ ಸೇನೆಗೂ ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐಗೂ ತೀರಾ ಹತ್ತಿರದ ನಂಟು. ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ಸಂಬಂಧದ ಬಗ್ಗೆ ಮಾತನಾಡುವಂತೆ ಐಎಸ್‌ಐ ಮತ್ತು ಸೇನೆಯ ಬಗ್ಗೆಯೂ ಹೇಳಲಾಗುತ್ತದೆ. ಅಧಿಕೃತವಾಗಿ ಐಎಸ್‌ಐ ಎನ್ನುವುದು ಪಾಕಿಸ್ತಾನದ ಸೇನೆಯ ಅಧೀನದಲ್ಲಿದೆ. ಪಾಕಿಸ್ತಾನ ಸೇನೆಯ ಪೇಶಾವರ್ ಡಿವಿಷನ್‌ನ ಮುಖ್ಯಸ್ಥರು ಐಎಸ್‌ಐ ಮುಖ್ಯಸ್ಥರಾಗುವುದು, ನಂತರ ಅವರೇ ಸೇನೆಯ ಮುಖ್ಯಸ್ಥರಾಗುವುದು ವಾಡಿಕೆ. ಬಡ್ತಿಯ ಕ್ರಮವೇ ಹೀಗೆ ಎಂಬ ವಾದ ಒಂದು ಇದೆ. ಸೇನೆಯೊಳಗಿನ ಆಂತರಿಕ ರಾಜಕೀಯದಲ್ಲಿ ಪ್ರಬಲರಾಗುವವರು ಮುಖ್ಯಸ್ಥರಾಗುತ್ತಾರೆ ಎನ್ನುವ ಮತ್ತೊಂದು ವಾದವೂ ಇದೆ. ಪಾಕಿಸ್ತಾನದಲ್ಲಿ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರವನ್ನು ಸೇನೆ ಮುನ್ನಡೆಸಿದರೆ ಸೇನೆಯನ್ನು ಐಎಸ್‌ಐ ಮುನ್ನಡೆಸುತ್ತದೆ. ಹೀಗಾಗಿ ಸೇನೆಗಿಂತಲೂ ಐಎಸ್‌ಐ ಬಲ ಹೆಚ್ಚು. ಐಎಸ್‌ಐ ಮುಖ್ಯಸ್ಥರನ್ನೇ ಸೇನೆಯ ಮುಖ್ಯಸ್ಥರಾಗಿ ನೇಮಿಸುವುದು ಇದೇ ಕಾರಣಕ್ಕೆ ಎಂದು ವಿಶ್ಲೇಷಿಸಲಾಗುತ್ತಿದೆ.

ಐಎಸ್‌ಐ ಮುಖ್ಯಸ್ಥರ ಕಾರ್ಯವೈಖರಿ ಹೇಗಿರುತ್ತದೆ ಎನ್ನುವುದು ಬಹಳ ಮುಖ್ಯ. ಫೆಬ್ರುವರಿ 20219ರಲ್ಲಿ ಅಮೆರಿಕನ್ನರು ಕಾಬೂಲ್‌ನಿಂದ ಜಾಗ ಖಾಲಿ ಮಾಡುತ್ತಿದ್ದಂತೆ ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ಬಂದಿಳಿದಿದ್ದ. ತಾಲಿಬಾನಿಗಳ ಜತೆಗೆ ಇತರ ದೇಶಗಳು ಸಂಪರ್ಕ ಸಾಧಿಸುವ ಮೊದಲೇ ಅವರನ್ನು ತನ್ನತ್ತ ಒಲಿಸಿಕೊಳ್ಳುವುದು ಈತನ ಉದ್ದೇಶವಾಗಿತ್ತು. ಆತನನ್ನು ಸೇನಾ ಮುಖ್ಯಸ್ಥನನ್ನಾಗಿ ಮಾಡುವ ಪ್ರಯತ್ನ ಕೈಗೂಡಲಿಲ್ಲ. ಕೊನೆಗೆ ಮುನೀರ್‌ ಎಂಬಾತ ಸೇನಾ ಮುಖ್ಯಸ್ಥನಾದ. ಅಷ್ಟು ಹೊತ್ತಿಗೆ ಸೇನೆ ಮತ್ತು ಇಮ್ರಾನ್‌ ಖಾನ್‌ ನಡುವಿನ ನಂಟು ಹಳಸಿಕೊಂಡಿತ್ತು. ಸೇನೆಯ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡುವ ಇಮ್ರಾನ್ ಖಾನ್ ಬೇಡವೇ ಬೇಡ ಎನ್ನುವ ನಿರ್ಧಾರಕ್ಕೆ ಸೇನಾಧಿಕಾರಿಗಳು ಬಂದಿದ್ದರು.

ಆದರೆ ಸೇನೆಯ ಪ್ರಭಾವದಿಂದಾಚೆಗೂ ಇಮ್ರಾನ್ ಖಾನ್ ಅಷ್ಟು ಹೊತ್ತಿಗಾಗಲೇ ಜನಪ್ರಿಯನಾಗುತ್ತಿದ್ದ. 'ಪಾಕಿಸ್ತಾನವನ್ನು ಉಳಿಸಲು ನನ್ನಿಂದ ಮಾತ್ರವೇ ಸಾಧ್ಯ. ನಮ್ಮಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಅಧಿಕಾರವು ಎರಡೇ ಪಕ್ಷಗಳ ನಡುವೆ ಹೊಯ್ದಾಡುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಸಾಮರ್ಥ್ಯ ಆ ಎರಡೂ ಪಕ್ಷಗಳಿಗೆ ಇಲ್ಲ. ನಿಮಗೆ ನಾನು ಮಾತ್ರ ಭರವಸೆ' ಎಂದು ವ್ಯವಸ್ಥಿತವಾಗಿ ಬಿಂಬಿಸತೊಡಗಿದ. ಜನರು ಇದನ್ನು ನಂಬುತ್ತಿದ್ದರು.

(ಮುಂದಿನ ಭಾಗದಲ್ಲಿ: ಸೇನೆಯ ಜೊತೆಗೆ ಹಳಸಿದ ಸಂಬಂಧ, ಇಮ್ರಾನ್‌ಗೆ ಸಂಕಷ್ಟಗಳ ಸರಮಾಲೆ)

ಇದನ್ನೂ ಓದಿ: 10 ವರ್ಷ ನನ್ನನ್ನು ಜೈಲಿನಲ್ಲಿ ಇರಿಸಲು ಸೇನೆ ಪ್ಲಾನ್ ಮಾಡಿತ್ತು: ಇಮ್ರಾನ್ ಖಾನ್

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.