ಕನ್ನಡ ಸುದ್ದಿ  /  Nation And-world  /  Pilgrimage Season At Sabarimala Set To Conclude Today

Sabarimala Pilgrimage Season: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನಾಳೆಯಿಂದ ಬಂದ್‌, ಇಂದು ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ

Sabarimala: ಇಂದು ರಾತ್ರಿ 10 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಾಲಾಧಾರಿಗಳಿಗೆ ಅಯ್ಯಪ್ಪ ಸ್ವಾಮಿ ದರ್ಶನ ಕೊನೆಗೊಳ್ಳಲಿದೆ.

Sabarimala Pilgrimage Season: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನಾಳೆಯಿಂದ ಬಂದ್‌
Sabarimala Pilgrimage Season: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನಾಳೆಯಿಂದ ಬಂದ್‌ (PTI)

ಶಬರಿಮಲೆ: 41 ದಿನಗಳ ಕಾಲದ ಮಂಡಲ ಮಕರವಿಲ್ಲಕ್ಕು ಶಬರಿಮಲೆ ಯಾತ್ರೆ ಅವಧಿ ನಾಳೆ ಕೊನೆಗೊಳ್ಳಲಿದ್ದು, ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ನಾಳೆ ಬೆಳಗ್ಗೆ ಬಾಗಿಲು ಹಾಕಲಾಗುತ್ತದೆ. ಹೀಗಿದ್ದರೂ, ಮಂಡಲ ಮಕರವಿಲ್ಲಕ್ಕು ಮುಕ್ತಾಯದ ಕೊನೆಯ ಅವಧಿಯಲ್ಲಿ ಸಾವಿರಾರು ಭಕ್ತರು ಶಬರಿಮಲೆಗೆ ಆಗಮಿಸಿ ಮಣಿಕಂಠನ ದರ್ಶನ ಪಡೆಯುತ್ತಿದ್ದಾರೆ.

ಇಂದು ರಾತ್ರಿ 10 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಾಲಾಧಾರಿಗಳಿಗೆ ಅಯ್ಯಪ್ಪ ಸ್ವಾಮಿ ದರ್ಶನ ಕೊನೆಗೊಳ್ಳಲಿದೆ. ಬಳಿಕ "ಗುರುತಿ" ಹೆಸರಿನ ವಿಧಿವಿಧಾನ ನಡೆಸಿ, ಜನವರಿ 20ರ ಬೆಳಗ್ಗೆ 6 ಗಂಟೆಗೆ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ನಾಳೆ ಬೆಳಗ್ಗೆ ಭಕ್ತರಿಗೆ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.

ನೆಯ್ಯಾಭಿಷೇಕಂ ವಿಧಿವಿಧಾನವು ನಿನ್ನೆಗೆ ಕೊನೆಗೊಂಡಿದೆ. ಆದರೆ, ಕಲಾಭಿಷೇಕಂ ಮತ್ತು ಪಡಿ (ಮೆಟ್ಟಿಲು) ಪೂಜೆಯು ಸಂಜೆ ನಡೆಯಲಿದೆ.

ಈ ಬಾರಿ ಶಬರಿಮಲೆಗೆ ದಾಖಲೆ ಪ್ರಮಾಣದಲ್ಲಿ ಮಾಲಾಧಾರಿಗಳು ಆಗಮಿಸಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಭಕ್ತರ ದಟ್ಟಣೆ ತುಸು ಕಡಿಮೆಯಾಗಿದೆ. ಈಗ ಕೇರಳದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಹೊರರಾಜ್ಯಗಳಿಂದ ಆಗಮಿಸುವವರು ಸಂಖ್ಯೆ ಕಡಿಮೆಯಾಗಿದೆ.

ಮಂಗಳವಾರ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬುಕ್ಕಿಂಗ್‌ ಮಾಡಿರುವವರ ಸಂಖ್ಯೆ ಕೇವಲ 66,736 ಇತ್ತು. ಈ ಬಾರಿಯ ಶಬರಿಮಲೆ ಯಾತ್ರೆಯಲ್ಲಿ ಅಂದಾಜು 45 ಲಕ್ಷ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಸನ್ನಿಧಾನಕ್ಕೆ ಆಗಮಿಸಿದ್ದಾರೆ.

ಜನವರಿ 12, 2023ರವರೆಗೆ ಒಟ್ಟು 312.40 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಟ್ರಾವಂಕೂರು ದೇವಸ್ವಂ ಬೋರ್ಡ್‌ ಮಾಹಿತಿ ನೀಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಜನರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಆಗಿರಲಿಲ್ಲ. ಆದರೆ, ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದಾರೆ.

ಡಿಸೆಂಬರ್‌ 27ರಂದು ನೀಡಿದ ಮಾಹಿತಿ ಪ್ರಕಾರ, 39 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸುಮಾರು 30 ಸಾವಿರ ಭಕ್ತರು ಯಾತ್ರೆ ಕೈಗೊಂಡಿದ್ದಾರೆ. ಈ 39 ದಿನಗಳಲ್ಲಿ ಒಟ್ಟು 225 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ವಿಶೇಷವೆಂದರೆ, ಈ ಬಾರಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಶೇಕಡ 20ರಷ್ಟು ಭಕ್ತರು ಮಕ್ಕಳು. ಕಳೆದ ಕೆಲವು ವರ್ಷ ಸಾಂಕ್ರಾಮಿಕ ಕಾರಣದಿಂದ ಮಕ್ಕಳಿಗೆ ಯಾತ್ರೆ ಕೈಗೊಳ್ಳಲು ನಿಯಮಗಳಿದ್ದವು. ಹೀಗಾಗಿ, ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿತ್ತು.

ಈ ಬಾರಿ ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಈ ಹಿಂದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈ ವರ್ಷದ ಯಾತ್ರಾ ಋತುವಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ. ಇದರಿಂದಾಗಿ ಭಕ್ತರ ನಿಯಂತ್ರಣವೇ ಅಲ್ಲಿನ ಆಡಳಿತಕ್ಕೆ ಸವಾಲಾಗಿತ್ತು. ಬಳಿಕ ಪ್ರತಿನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 90 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು. ದರ್ಶನದ ಅವಧಿಯನ್ನೂ ಹೆಚ್ಚಿಸಲಾಗಿತ್ತು.

IPL_Entry_Point