Sabarimala mandala pooja: 30 ಲಕ್ಷ ಭಕ್ತರ ಭೇಟಿ, ಆದಾಯ 225 ಕೋಟಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗಿಂದು ಮಂಡಲ ಪೂಜೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sabarimala Mandala Pooja: 30 ಲಕ್ಷ ಭಕ್ತರ ಭೇಟಿ, ಆದಾಯ 225 ಕೋಟಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗಿಂದು ಮಂಡಲ ಪೂಜೆ

Sabarimala mandala pooja: 30 ಲಕ್ಷ ಭಕ್ತರ ಭೇಟಿ, ಆದಾಯ 225 ಕೋಟಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗಿಂದು ಮಂಡಲ ಪೂಜೆ

Sabarimala mandala pooja: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯಲಿದ್ದು, ವಾರ್ಷಿಕ ಸಂಪ್ರದಾಯದಂತೆ ಇನ್ನೆರಡು ದಿನ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ.

30 ಲಕ್ಷ ಭಕ್ತರ ಭೇಟಿ, ಆದಾಯ 225 ಕೋಟಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗಿಂದು ಮಂಡಲ ಪೂಜೆ
30 ಲಕ್ಷ ಭಕ್ತರ ಭೇಟಿ, ಆದಾಯ 225 ಕೋಟಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗಿಂದು ಮಂಡಲ ಪೂಜೆ (PTI)

ಶಬರಿಮಲೆ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯಲಿದ್ದು, ವಾರ್ಷಿಕ ಸಂಪ್ರದಾಯದಂತೆ ಇನ್ನೆರಡು ದಿನ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ಡಿಸೆಂಬರ್‌ 30ರಂದು ದೇಗುಲದ ಬಾಗಿಲು ಮತ್ತೆ ತೆರೆಯಲಾಗುತ್ತದೆ. ಪಾರ್ಥಸಾರಥಿ ದೇಗುಲದಿಂದ ಥಂಕ ಅಂಗಿ (ಚಿನ್ನದ ಆಭರಣಗಳು) ತರಲಾಗಿದ್ದು, ಅಯ್ಯಪ್ಪ ಸ್ವಾಮಿಗೆ ಇಂದು ಅಲಂಕಾರ ಮಾಡಲಾಗುತ್ತದೆ. ಅಪರಾಹ್ನ 12.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆಯಲಿದೆ.

ಇಂದು ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ದೇವಾಲಯದ ಬಾಗಿಲು ಡಿಸೆಂಬರ್‌ 30ರಂದು ಮಕರವಿಲ್ಲಕ್ಕು ಅವಧಿಗಾಗಿ ಮತ್ತೆ ತೆರೆಯಲಾಗುತ್ತದೆ. ಜನವರಿ 14ರ ಮಕರ ಸಂಕ್ರಾಂತಿಯವರೆಗೆ ಮತ್ತೆ ದೇವಾಲಯ ತೆರೆದಿರಲಿದೆ. ಮಕರ ಸಂಕ್ರಾಂತಿ ಯಾತ್ರೆ ಕೈಗೊಳ್ಳುವವರು ಈ ಅವಧಿಯಲ್ಲಿ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ.

ಕಳೆದ 39 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಜನರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಆಗಿರಲಿಲ್ಲ. ಆದರೆ, ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದಾರೆ. ಈ ಬಾರಿ ಇಲ್ಲಿಯವರೆಗೆ ಸುಮಾರು 30 ಸಾವಿರ ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಈ 39 ದಿನಗಳಲ್ಲಿ ಒಟ್ಟು 225 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಡಿಸೆಂಬರ್‌ 25ರವರೆಗೆ ಶಬರಿಮಲೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆ 29.08 ಲಕ್ಷ ದಾಟಿದೆ. ಇಲ್ಲಿಯವರೆಗೆ 30 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ 39 ದಿನಗಳ ಒಟ್ಟು ಆದಾಯದಲ್ಲಿ 70.10 ಕೋಟಿ ರೂ. ಆದಾಯವು ಡೊನೆಷನ್‌ ರೂಪದಲ್ಲಿ ದೊರಕಿದೆ.

ವಿಶೇಷವೆಂದರೆ, ಈ ಬಾರಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಶೇಕಡ 20ರಷ್ಟು ಭಕ್ತರು ಮಕ್ಕಳು. ಕಳೆದ ಕೆಲವು ವರ್ಷ ಸಾಂಕ್ರಾಮಿಕ ಕಾರಣದಿಂದ ಮಕ್ಕಳಿಗೆ ಯಾತ್ರೆ ಕೈಗೊಳ್ಳಲು ನಿಯಮಗಳಿದ್ದವು. ಹೀಗಾಗಿ, ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಭಕ್ತರ ದಟ್ಟಣೆ ಹೆಚ್ಚಿರುವುದರಿಂದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಈ ಹಿಂದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಈ ವರ್ಷದ ಯಾತ್ರಾ ಋತುವಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ. ಇದರಿಂದಾಗಿ ಭಕ್ತರ ನಿಯಂತ್ರಣವೇ ಅಲ್ಲಿನ ಆಡಳಿತಕ್ಕೆ ಸವಾಲಾಗಿತ್ತು. ಬಳಿಕ ಪ್ರತಿನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 90 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು.

"ಭಕ್ತರಿಗೆ ಸುಸೂತ್ರವಾಗಿ ದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 90 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಇತ್ತೀಚೆಗೆ ಅಂದರೆ, ಡಿಸೆಂಬರ್‌ 12ರಂದು 1,19,480 ಭಕ್ತರು ವರ್ಚ್ಯುವಲ್‌ ಕ್ಯೂ ಸಿಸ್ಟಮ್‌ನಲ್ಲಿ ದೇಗುಲ ದರ್ಶನಕ್ಕಾಗಿ ಬುಕ್ಕಿಂಗ್‌ ಮಾಡಿದ್ದರುʼʼ ಟ್ರಾವಂಕೂರು ದೇವಸ್ವಂ ಬೋರ್ಡ್‌ (ಟಿಡಿಬಿ) ಚೇರ್ಮನ್‌ ಕೆ. ಅನಂತಗೋಪನ್‌ ಮಾಹಿತಿ ನೀಡಿದ್ದರು.

ಇದೇ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಅವಧಿಯನ್ನೂ ಹೆಚ್ಚಿಸಲಾಗಿತ್ತು. ಪ್ರಾತಃಕಾಲ 3 ಗಂಟೆಯಿಂದ ಅಪರಾಹ್ನ 1.30 ಗಂಟೆಯವರೆಗೆ ಮತ್ತು ಅಪರಾಹ್ನ 3 ಗಂಟೆಯಿಂದ ರಾತ್ರಿ 11.30 ಗಂಟೆಯವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ಪ್ರಾತಃಕಾಲ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು.

ಜನಸಂದಣಿ ನಿಯಂತ್ರಿಸಿ ಎಲ್ಲರಿಗೂ ಸುಗಮ ದರ್ಶನಕ್ಕೆ ಅವಕಾಶ ಒದಗಿಸಲು ದೇವಸ್ವಂ ಬೋರ್ಡ್‌ ಶ್ರಮಿಸಲಿದೆ. ಜನಸಂದಣಿ ನಿಯಂತ್ರಿಸುವ ಭಾಗವಾಗಿ ಮರಕ್ಕೂಟಂನಿಂದ ಹಂತಹಂತವಾಗಿ ಭಕ್ತರನ್ನು ಸನ್ನಿಧಾನಕ್ಕೆ ಬಿಡಲಾಗುತ್ತದೆ. ಅಯ್ಯಪ್ಪ ದರ್ಶನಕ್ಕೆ ಗಂಟೆಗಳ ಕಾಲ ಸರತಿ ಸಾಲು ನಿಲ್ಲಬೇಕಾಗಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ತ್ವರಿತವಾಗಿ ದರ್ಶನ ಮಾಡುವ ಸೌಲಭ್ಯ ನೀಡಲು ಟ್ರಾವಂಕೂರು ದೇವಸ್ವಂ ಬೋರ್ಡ್‌ (ಟಿಡಿಬಿ) ಪ್ರಯತ್ನಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.