ಕನ್ನಡ ಸುದ್ದಿ  /  Nation And-world  /  Telangana News History Significance Of Telangana Formation Day June 2 2014 Separate Telugu State Hyderabad Andhra Mgb

Telangana Formation Day: ತೆಲಂಗಾಣ ಆವಿರ್ಭಾವ ದಿನೋತ್ಸವ; ಭಾರತದ ಹೊಸ ತೆಲುಗು ಭಾಷಿಕ ರಾಜ್ಯದ ಹುಟ್ಟಿನ ಕಥೆಯಿದು

Telangana as separate state: ಸಾಮಾನ್ಯವಾಗಿ ಭಾಷೆಗಳ ವಿಚಾರದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತದೆ. ಭಾಷೆಗಾಗಿ ಪ್ರತ್ಯೇಕವಾಗಿದ್ದಲ್ಲ ತೆಲಂಗಾಣ ರಾಜ್ಯ. ತಮಗೆ ತಮ್ಮ ಸರ್ಕಾರವೇ ತೋರುತ್ತಿರುವ ಮಲತಾಯಿ ಧೋರಣೆಯನ್ನು‌ ಅರಗಿಸಿಕೊಳ್ಳಲಾಗದ ಜನರು, ಪ್ರಾಣ ತೆತ್ತಾದರೂ ಸರಿ ನಮಗೆ ತೆಲಂಗಾಣ ‌ಅನ್ನೋ ನಮ್ಮದೇ ಪ್ರತ್ಯೇಕ ‌ರಾಜ್ಯ ಬೇಕೇ ಬೇಕೆಂದು ಪಣತೊಟ್ಟರು.

ಪ್ರತ್ಯೇಕ ತೆಲುಗು ರಾಜ್ಯಕ್ಕಾಗಿ ತೆಲಂಗಾಣ ಜನರ ಹೋರಾಟ (ಸಂಗ್ರಹ ಚಿತ್ರ)
ಪ್ರತ್ಯೇಕ ತೆಲುಗು ರಾಜ್ಯಕ್ಕಾಗಿ ತೆಲಂಗಾಣ ಜನರ ಹೋರಾಟ (ಸಂಗ್ರಹ ಚಿತ್ರ)

Telangana Formation Day: ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ತೆಲಂಗಾಣದ ಜನರಿಗೆ ಪ್ರತಿವರ್ಷವೂ ಜೂನ್​ 2 ವಿಶೇಷ ದಿನ. ಇದು ತೆಲಂಗಾಣ ಚಳವಳಿಯ ವಿಜಯವನ್ನು ಸೂಚಿಸುತ್ತದೆ. ಭಾರತದ ಅತೀ ಕಿರಿಯ ರಾಜ್ಯವಾದ ತೆಲಂಗಾಣ ಸೃಷ್ಟಿಯಾಗಿ ಇಂದಿಗೆ 9 ವರ್ಷಗಳು ತುಂಬಿವೆ. ಭಾರತದ 29ನೇ ರಾಜ್ಯವಾಗಿ 2014ರ ಜೂನ್ 2ರಂದು‌ ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂತು.

ಆಂಧ್ರಪ್ರದೇಶ (Andhra Pradesh) ರಾಜ್ಯದೊಳಗೆ ಒಂದು‌ ಪ್ರಾಂತ್ಯವಾಗಿದ್ದ ತೆಲಂಗಾಣ ಒಂದು ಪ್ರತ್ಯೇಕ ರಾಜ್ಯವಾಗಬೇಕು ಎಂಬ ಸುಮಾರು 45 ವರ್ಷಗಳ ಹೋರಾಟಕ್ಕೆ 2013ರಲ್ಲಿ ಭರವಸೆಯ ಬೆಳಕು ದೊರೆಯಿತು. ಜುಲೈ 1, 2013 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ತೆಲಂಗಾಣವನ್ನು ಪ್ರತ್ಯೇಕ ರಾಜ್ಯವಾಗಿ ರಚಿಸುವ ನಿರ್ಣಯವನ್ನು ಅಂಗೀಕರಿಸಿತು. ವಿವಿಧ ಹಂತಗಳ ನಂತರ, ತೆಲಂಗಾಣ ರಾಜ್ಯ ರಚನೆಗಾಗಿ ಫೆಬ್ರವರಿ 2014 ರಲ್ಲಿ ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆ 2014 ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯನ್ನು ಮಾರ್ಚ್ 1, 2014 ರಂದು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದರು ಮತ್ತು ಅಂತಿಮವಾಗಿ ಜೂನ್ 2 ರಂದು ತೆಲಂಗಾಣ ರಾಜ್ಯವನ್ನು ರಚಿಸಲಾಯಿತು.

ಹೊಸ ತೆಲುಗು ಭಾಷಿಕ ರಾಜ್ಯದ ಹುಟ್ಟಿನ ಕಥೆಯಿದು

ಸಾಮಾನ್ಯವಾಗಿ ಭಾಷೆಗಳ ವಿಚಾರದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತದೆ. ಭಾಷೆಗಾಗಿ ಪ್ರತ್ಯೇಕವಾಗಿದ್ದಲ್ಲ ತೆಲಂಗಾಣ ರಾಜ್ಯ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ, ಈ ಎರಡೂ ರಾಜ್ಯಗಳ ರಾಜ್ಯ ಭಾಷೆ ತೆಲುಗು. ಆದರೂ ಪ್ರತ್ಯೇಕತೆಯ ಕೂಗು ಕೇಳಿ ಬಂತು. ತಮಗೆ ತಮ್ಮ ಸರ್ಕಾರವೇ ತೋರುತ್ತಿರುವ ಮಲತಾಯಿ ಧೋರಣೆಯನ್ನು‌ ಅರಗಿಸಿಕೊಳ್ಳಲಾಗದ ಜನರು, ಪ್ರಾಣ ತೆತ್ತಾದರೂ ಸರಿ ನಮಗೆ ತೆಲಂಗಾಣ ‌ಅನ್ನೋ ನಮ್ಮದೇ ಪ್ರತ್ಯೇಕ ‌ರಾಜ್ಯ ಬೇಕೇ ಬೇಕೆಂದು ಪಣತೊಟ್ಟರು. 'ಜೈ ತೆಲಂಗಾಣ' ಘೋಷಣೆಯಡಿ ಹೋರಾಟ ನಡೆಯಿತು.

ಈ ಪ್ರತ್ಯೇಕತೆಯ ‌ಕೂಗಿಗೆ ಮೂರು‌ ಮುಖ್ಯ ಕಾರಣಗಳಿವೆ. ಒಂದು ನೀಳ್ಳು(ನೀರು), ಎರಡನೆಯದ್ದು ನಿಧುಲು (ನಿಧಿ ಅಥವಾ ಬಜೆಟ್ ಹಣಕಾಸು ಹಂಚಿಕೆ) ಹಾಗೂ ಮೂರನೆಯದ್ದು ‌ನಿಯಮಕಾಲು (ಸರ್ಕಾರಿ ಉದ್ಯೋಗ). ನೀರು ಪೂರೈಕೆಯಲ್ಲಿ ತೆಲಂಗಾಣ ಪ್ರಾಂತ್ಯಕ್ಕಾದ ಅನ್ಯಾಯ, ಬಜೆಟ್ ವಿಂಗಡಣೆಯಲ್ಲಿ‌ನ ತಾರತಮ್ಯ ಮತ್ತು ಸರ್ಕಾರಿ ನೌಕರಿಯಲ್ಲೂ ಈ ಭಾಗದ ಜನರಿಗಾದ ಅನ್ಯಾಯ. ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಹೋರಾಡಿ ಪ್ರತ್ಯೇಕ ರಾಜ್ಯದ ಹೋರಾಟ ನಡೆಯಿತು.

ಆಂಧ್ರಪ್ರದೇಶದಲ್ಲಿ ಹರಿಯುತ್ತಿದ್ದ ಕೃಷ್ಣ ‌ಮತ್ತು ಗೋದಾವರಿ ನದಿ ನೀರಿನ ವಿಚಾರದಲ್ಲೂ ತೆಲಂಗಾಣಕ್ಕೆ ಅನ್ಯಾಯವಾಗಿತ್ತು. ಬಜೆಟ್ ಹಂಚಿಕೆಯಲ್ಲಿ ಸೀಮಾಂದ್ರ(ಈಗಿನ ಆಂದ್ರಪ್ರದೇಶ) ಭಾಗಕ್ಕೆ ಸಿಂಹಪಾಲು‌ ಸಿಗುತ್ತಿತ್ತು, ಸರ್ಕಾರಿ ಉದ್ಯೋಗಗಳೂ ಸೀಮಾಂದ್ರ ಭಾಗದ ಜನರ ಪಾಲಾಗುತ್ತಿತ್ತು. ಇವೆಲ್ಲವನ್ನು ತೆಲಂಗಾಣ ಪ್ರಾಂತ್ಯದ ಜನರಿಗೆ ಬಹುಕಾಲ ಸಹಿಸಿಕೊಂಡಿರಲು ಸಾಧ್ಯವಾಗಿಲ್ಲ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ‌ ಒಳಕೂಗು 1950ರ ಅಸುಪಾಸಿನಲ್ಲೇ ಇಲ್ಲಿನ ಜನರ ಮನದಲ್ಲಿ ಮನೆಮಾಡಿತ್ತು. ಆದರೆ ಅದು‌ ಬೂದಿ‌ ಮುಚ್ಚಿದ ಕೆಂಡವಾಗಿತ್ತು. 1969ರಲ್ಲಿ ಜನರು ಹೋರಾಟ ಆರಂಭಿಸಿದರು.

2000 ಇಸವಿ ಬಳಿಕ ಈ ಹೋರಾಟ ಉಗ್ರರೂಪ ಪಡೆಯಿತು. ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕು, ಹೈದರಾಬಾದ್ ಇದರ ರಾಜಧಾನಿಯಾಗಬೇಕು‌ ಎಂಬುದೇ ಇವರ ಹೋರಾಟದ ಗುರಿಯಾಗಿತ್ತು. ಈ ಹೋರಾಟದಲ್ಲಿ ನೂರಾರು ಜನರು ಪ್ರಾಣತೆತ್ತಿದ್ದಾರೆ.

ಕೆಸಿಆರ್​ ಮತ್ತು ತೆಲಂಗಾಣ

2001ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ -ಟಿಆರ್​ಎಸ್​ (ಇಂದಿನ ಭಾರತ್​ ರಾಷ್ಟ್ರ ಸಮಿತಿ) ರಚನೆಯಾಯಿತು. ಅಂದಿನಿಂದ ನಿರಂತರವಾಗಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಈ ಪಕ್ಷ ಹೋರಾಡಿತು. ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ. ಚಂದ್ರಶೇಖರ ರಾವ್‌ (ಕೆಸಿಆರ್​) ಅವರು ಉಪವಾಸ ಸತ್ಯಾಗ್ರಹದ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. 2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದಾಗ ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2018 ರ ವಿಧಾನಸಭೆ ಚುನಾವಣೆಯಲ್ಲಿಯೂ ಭರ್ಜರಿ ಗೆಲುವು ಸಾಧಿಸಿ ಮತ್ತೊಮ್ಮೆ ಸಿಎಂ ಆದರು. ತೆಲಂಗಾಣದಲ್ಲಿ TRS​-KCR​ ಎಂದರೆ ಏನೆಂದು ಅರಿಯದ ಜನರಿಲ್ಲ. ಇತ್ತೀಷೆಗಷ್ಟೇ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ಭಾರತ್​ ರಾಷ್ಟ್ರ ಸಮಿತಿ ಪಕ್ಷವೆಂದು ಮರುನಾಮಕರಣ ಮಾಡಲಾಯಿತು.

ತೆಲಂಗಾಣ ರಾಜ್ಯ ಉದಯವಾದಾಗ ಕೇವಲ 10 ಜಿಲ್ಲೆಗಳು ಇದ್ದವು. ಅವುಗಳು ಯಾವುವೆಂದರೆ, ಹೈದರಾಬಾದ್, ರಂಗಾರೆಡ್ಡಿ, ಮೇದಕ್, ನಲ್ಲಗೊಂಡ, ಮಹಬೂಬ್ ನಗರ, .ವರಂಗಲ್, ಕರೀಂನಗರ, ನಿಜಾಮಾಬಾದ್, ಆದಿಲಾಬಾದ್, ಮತ್ತು ಖಮ್ಮಂ. ತೆಲಂಗಾಣ ರಾಜಧಾನಿ ಹೈದರಾಬಾದ್​. ಇದೀಗ ತೆಲಂಗಾಣ ರಾಜ್ಯದಲ್ಲಿ 33 ಜಿಲ್ಲೆಗಳಿವೆ.

IPL_Entry_Point