ಕನ್ನಡ ಸುದ್ದಿ  /  Nation And-world  /  West Bengal Recruitment Scam: Who Is Arpita Mukherjee With 20 Crore Stashed At Home Bjp Posts Pic With Mamata

West Bengal Recruitment Scam: 20 ಕೋಟಿ ರೂ. ಸಂಗ್ರಹಿಸಿದ್ದ ಅರ್ಪಿತಾ ಮುಖರ್ಜಿ ಯಾರು?

ಪಶ್ಚಿಮ ಬಂಗಾಳ (West Bengal)ದಲ್ಲಿ ಬೆಳಕಿಗೆ ಬಂದ ನೇಮಕಾತಿ ಹಗರಣ (Recruitment Scam)ದಲ್ಲಿ 20 ಕೋಟಿ ರೂಪಾಯಿ ನಗದು ಸಂಗ್ರಹಿಸಿದ ಅರ್ಪಿತಾ ಮುಖರ್ಜಿ ಯಾರು? ಅವರಿಗೂ ತೃಣಮೂಲ ಕಾಂಗ್ರೆಸ್‌ಗೂ ಇರುವ ನಂಟು ಏನು? ಇದರಲ್ಲಿ ಯಾರೆಲ್ಲ ಭಾಗಿದಾರರು? ಎಂಬ ತನಿಖೆ, ವಿಚಾರಣೆ ಶುರುವಾಗಿದೆ. ಇದರ ವರದಿ ಇಲ್ಲಿದೆ.

ಸಚಿವ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ
ಸಚಿವ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ (TWITTER )

ನವದೆಹಲಿ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಹಗರಣ (West Bengal SSCscam)ಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇಡಿ) ನಿನ್ನೆ ಅಲ್ಲಿ ವಿವಿಧೆಡೆ ದಾಳಿ ನಡೆಸಿ 20 ಕೋಟಿ ರೂಪಾಯಿ ನಗದನ್ನು ಒಂದೇ ಕಡೆಯಿಂದ ವಶಪಡಿಸಿತ್ತು.

ಬಂಗಾಳ ಸರ್ಕಾರದ ಸಚಿವ ಪಾರ್ಥ ಚಟರ್ಜಿ ಅವರಿಗೆ ಸಂಬಂಧಿಸಿದ ವಿವಿಧೆಡೆ ಈ ಶೋಧ ನಡೆದಿತ್ತು. 2000 ರೂಪಾಯಿ ಮತ್ತು 500 ರೂಪಾಯಿಗಳ ಕಂತೆ ಕಂತೆ ಹಣ ಸಚಿವ ಪಾರ್ಥ ಚಟರ್ಜಿ ಅವರ ಆಪ್ತರೆನಿಸಿಕೊಂಡಿರುವ ಅರ್ಪಿತಾ ಮುಖರ್ಜಿ ಮನೆಯಿಂದ ಸಿಕ್ಕಿತ್ತು. ಈ ಕಂತೆಗಳ ಒಟ್ಟು ಮೌಲ್ಯ 20 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಹಣ ಎಣಿಸಲು ಮಷಿನ್‌ ಬಳಸಿದ ಬ್ಯಾಂಕ್‌ ಸಿಬ್ಬಂದಿ

ಅರ್ಪಿತಾ ಅವರ ವಸತಿಗೃಹದಿಂದ ಜಾರಿ ನಿರ್ದೇಶನಾಲಯ ಈ ಮೊತ್ತವನ್ನು ವಶಪಡಿಸಿಕೊಂಡಿದೆ. ಈ ಮೊತ್ತವನ್ನು ಎಣಿಸುವುದಕ್ಕಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಬ್ಯಾಂಕ್ ನೌಕರರು ಮತ್ತು ಎಣಿಕೆ ಯಂತ್ರಗಳ ಸಹಾಯವನ್ನು ತೆಗೆದುಕೊಂಡಿದೆ. ಕೋಣೆಯಲ್ಲಿ 500 ಮತ್ತು 2000 ರೂಪಾಯಿ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಇರಿಸಿರುವುದು ಫೋಟೋದಲ್ಲಿ ಗೋಚರಿಸಿದೆ.

20 ಮೊಬೈಲ್‌ ಫೋನ್‌ ಬಳಕೆ !

ಇದಲ್ಲದೇ ಅರ್ಪಿತಾ ಮನೆಯಲ್ಲಿ 20 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೊಂದು ಮೊಬೈಲ್ ಫೋನ್ ಗಳನ್ನು ಏಕೆ ಬಳಸಲಾಗಿದೆ ಎಂಬುದು ಅಧಿಕಾರಿಗಳ ಕುತೂಹಲಕ್ಕೂ ಕಾರಣವಾಗಿದೆ.

ಎಲ್ಲೆಲ್ಲಿ ಶೋಧ ಕಾರ್ಯಾಚರಣೆ

ಇದಲ್ಲದೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಉದ್ಯೋಗಿಗಳು, ಶಿಕ್ಷಣ ರಾಜ್ಯ ಸಚಿವ ಪರೇಶ್ ಅಧಿಕಾರಿ ಅವರ ಕೂಚ್ ಬೆಹಾರ್ ಜಿಲ್ಲೆಯ ಮನೆಯಲ್ಲೂ ಶೋಧ ನಡೆಸಿದ್ದರು. ಎಸ್‌ಎಸ್‌ಸಿ ನೇಮಕಾತಿ ಹಗರಣ (SSC Recruitment Scam)ದಲ್ಲಿ ಪಾರ್ಥ ಚಟರ್ಜಿ ಮತ್ತು ಪರೇಶ್ ಅಧಿಕಾರಿ ಅವರನ್ನೂ ಸಿಬಿಐ ಪ್ರಶ್ನಿಸಿತ್ತು. ಶಾಸಕ ಮಾಣಿಕ್ ಭಟ್ಟಾಚಾರ್ಯ ಮತ್ತು ಇತರರ ಮನೆಗಳ ಮೇಲೂ ಇಡಿ ದಾಳಿ ನಡೆಸಿದೆ ಎಂದು ಜಾರಿ ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.

ದೂರ ಸರಿದ ಟಿಎಂಸಿ

ಅರ್ಪಿತಾ ಮುಖರ್ಜಿ ಅವರ ನಿವಾಸದಿಂದ ಭಾರಿ ಪ್ರಮಾಣದ ಹಣ ವಶಪಡಿಸಿಕೊಂಡ ಬೆನ್ನಿಗೆ ಅದಕ್ಕೂ ತನಗೂ ಸಂಬಂಧ ಇಲ್ಲ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ವಶಪಡಿಸಿಕೊಂಡ ಹಣಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೆಸರುಗಳು ಹೊರಬಿದ್ದಿರುವ ವ್ಯಕ್ತಿಗಳು ವಿವರಿಸಲು ಜವಾಬ್ದಾರರಾಗಿರುತ್ತಾರೆ. ಪಕ್ಷದ ಹೆಸರನ್ನು ಇದಕ್ಕೆ ಏಕೆ ಎಳೆದಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಸೂಕ್ತ ಸಮಯದಲ್ಲಿ ನಾವು ಹೇಳಿಕೆಯನ್ನು ನೀಡುತ್ತೇವೆ ಎಂದು ಎಂದು ತೃಣಮೂಲ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಕುನಾಲ್ ಘೋಷ್ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಮಮತಾಗೂ ಆಪ್ತೆ?

ಆಪಾದಿತ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ2,000 ಮತ್ತು 500 ರೂಪಾಯಿ ನೋಟುಗಳ ಬಂಡಲ್‌ಗಳು 20 ಕೋಟಿ ನಗದು ರೂಪದಲ್ಲಿ ಪತ್ತೆಯಾಗಿವೆ. ಈ ಪ್ರಕರಣದಿಂದ ತೃಣಮೂಲ ಕಾಂಗ್ರೆಸ್‌ ದೂರ ಸರಿದ ಬೆನ್ನಿಗೆ, ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ಅರ್ಪಿತಾ ಮುಖರ್ಜಿ ಇರುವ ಫೋಟೋಗಳನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.

'ಸಹವಾಸದಿಂದ ತಪ್ಪಿತಸ್ಥರು' ಎಂಬ ಕಾನೂನು ವ್ಯಾಖ್ಯೆ ಒಂದಿದೆ. ಒಬ್ಬರ ಅರಿವಿನಲ್ಲೇ ಇನ್ನೊಬ್ಬರು ಅಪರಾಧ ಎಸಗಿದಾಗ ಈ ವ್ಯಾಖ್ಯೆಯ ಉಲ್ಲೇಖವಾಗುತ್ತದೆ. ಈಗ ಬಂದಿರುವುದು ಟ್ರೇಲರ್‌ ಮಾತ್ರ; ಸಿನಿಮಾ ಪ್ರದರ್ಶನ ಮುಂದಿದೆ ಎಂದು 2019ರ ದುರ್ಗಾ ಪೂಜೆಯ ಫೋಟೋ ಶೇರ್‌ ಮಾಡಿದ್ದಾರೆ.

ಅರ್ಪಿತಾ ಮುಖರ್ಜಿ ಯಾರು ಮತ್ತು ತೃಣಮೂಲದೊಂದಿಗೆ ಅವರ ಸಂಪರ್ಕವೇನು?

1. ಅರ್ಪಿತಾ ಮುಖರ್ಜಿ ಅವರನ್ನು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಎಂದು ಜಾರಿ ನಿರ್ದೇಶನಾಲಯ ಬಣ್ಣಿಸಿದೆ.

2. ಅರ್ಪಿತಾ ಮುಖರ್ಜಿ ಅವರು ದಕ್ಷಿಣ ಕೋಲ್ಕತ್ತಾದ ಪ್ರಸಿದ್ಧ ದುರ್ಗಾ ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದು ಪಾರ್ಥ ಚಟರ್ಜಿ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಸಾಕ್ಷಿ. ಆ ದುರ್ಗಾ ಪೂಜಾ ಸಮಿತಿಯ ಜಾಹೀರಾತುಗಳಲ್ಲಿ ಅರ್ಪಿತಾ ಮುಖರ್ಜಿ ಕಾಣಿಸಿಕೊಂಡಿದ್ದರು ಎಂದು ಸುವೇಂದು ಅಧಿಕಾರಿ ಪೋಸ್ಟ್ ಮಾಡಿದ ಫೋಟೋಗಳು ಹೇಳುತ್ತಿವೆ.

3. ಅರ್ಪಿತಾ ಮುಖರ್ಜಿ ಕೆಲವು ಬೆಂಗಾಲಿ, ಒಡಿಯಾ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಬೆಂಗಾಲಿ ಪ್ರಸೇನಜಿತ್‌ ಚಟರ್ಜಿ (ಮಾಮಾ ಭಾಗ್ನೆ) 2009ರ ಮತ್ತು ಜೀತ್‌ ಅವರ ಜತೆಗೆ (ಪಾರ್ಟನರ್‌) 2008ರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು.

4. ದುರ್ಗಾಪೂಜಾ ಸಮಿತಿಯ ಮೂಲಕ ಅರ್ಪಿತಾ ಮುಖರ್ಜಿ ಸಚಿವರೊಂದಿಗೆ ಸಂಪರ್ಕ ಹೊಂದಿದ್ದರು. ಸಚಿವರೊಂದಿಗೆ ಇರುವ ಅನೇಕ ಫೋಟೋಗಳು ಈಗ ವೈರಲ್‌ ಆಗಿವೆ.

5. ವಶಪಡಿಸಿಕೊಂಡ ಹಣಕ್ಕೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ತೃಣಮೂಲ ತನ್ನೊಂದಿಗೆ ಯಾವುದೇ ಸಂಪರ್ಕವನ್ನು ನಿರಾಕರಿಸಿದೆ. ಸಚಿವ ಪಾರ್ಥ ಚಟರ್ಜಿ ಪರವಾಗಿ ಬೆಹಲಾ ವೆಸ್ಟ್‌ ಸೆಂಟರ್‌ನಲ್ಲಿ ಪ್ರಚಾರದಲ್ಲೂ ಅರ್ಪಿತಾ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

IPL_Entry_Point

ವಿಭಾಗ