Chess Candidates 2024: ಚೆಸ್ ಚತುರ ಪ್ರಜ್ಞಾನಂದ ಮತ್ತು ವಿಧಿತಿ ಗುಜರಾತಿಗೆ ಸೋಲು, ಡ್ರಾ ಸಾಧಿಸಿದ ಡಿ ಗುಕೇಶ್
Chess Candidates 2024 : 2024ರ ಚೆಸ್ ಕ್ಯಾಂಡಿಡೇಟ್ ಟೂರ್ನಿಯ 11ನೇ ಸುತ್ತಿನಲ್ಲಿ ಆರ್ ಪ್ರಜ್ಞಾನಂದ ಮತ್ತು ವಿಧಿತಿ ಗುಜರಾತಿ ಅವರು ಪರಾಭಗೊಂಡು ನಿರಾಸೆ ಮೂಡಿಸಿದ್ದಾರೆ. ಡಿ ಗುಕೇಶ್ ಅವರು ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಭಾರತದ ಚೆಸ್ ಚತುರ ಎಂದೇ ಕರೆಸಿಕೊಳ್ಳುವ ಆರ್ ಪ್ರಜ್ಞಾನಂದ (Praggnanandhaa) ಅವರು ಕೆನಡಾದ ಟೊರೊಂಟೊದಲ್ಲಿ ನಡೆಯುತ್ತಿರುವ 2024ರ ಚೆಸ್ ಕ್ಯಾಂಡಿಡೇಟ್ ಟೂರ್ನಿಯ 11ನೇ ಸುತ್ತಿನಲ್ಲಿ (Chess Candidates 2024) ಅಮೆರಿಕದ ಚೆಸ್ ಪಟು ಹಿಕಾರು ನಕಮುರಾ (Hikaru Nakamura) ವಿರುದ್ಧ ಪರಾಭವಗೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಚೆಸ್ ಆಟಗಾರರು ನೀರಸ ಪ್ರದರ್ಶನ ನೀಡಿದ್ದಾರೆ. ಪ್ರಜ್ಞಾನಂದ ಅಲ್ಲದೆ, ಮತ್ತೊಬ್ಬ ಯುವ ಚೆಸ್ ಪಟು ವಿದಿತಿ ಗುಜರಾತಿ (Vidit Gujrathi) ಅವರು ಕೂಡ ಸೋಲನುಭವಿಸಿದ್ದಾರೆ. ಖುಷಿಯ ವಿಚಾರ ಅಂದರೆ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ (D Gukesh), 11ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಭಾರತೀಯ ಚೆಸ್ ಪಟುಗಳು ಮೇಲುಗೈ ಸಾಧಿಸಿದ್ದಾರೆ. ಬಲ್ಗೇರಿಯಾದ ನುರ್ಗ್ಯುಲ್ ಸಾವಿಮೋವಾ ಅವರನ್ನು ಕೊನೇರು ಹಂಪಿ ಸೋಲುಣಿಸಿದರು. ಮತ್ತೊಬ್ಬ ಭಾರತೀಯರಾದ ವೈಶಾಲಿ ರಮೇಶ್ ಬಾಬು ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ ಎದುರು ಜಯದ ನಗೆ ಬೀರಿದರು. ತಮ್ಮ 11 ನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವ ನಂ 2 ಫ್ಯಾಬಿಯಾನೊ ಕರುವಾನಾ ವಿರುದ್ಧದ ಆಟದಲ್ಲಿ ಡಿ. ಗುಕೇಶ್ 40 ನಡೆಗಳ ಬಳಿಕ ಡ್ರಾ ಸಾಧಿಸಿದರು. ಮತ್ತೊಂದೆಡೆ ವಿದಿತ್ ಅವರು ರಷ್ಯಾದ ಇಯಾನ್ ನೆಪೋಮ್ನಿಯಾಚಿ ವಿರುದ್ಧ ಸೋತರು.
11ನೇ ಸುತ್ತಿನ ಬಳಿಕ ಭಾರತದ ಚೆಸ್ ಸ್ಪರ್ಧಿಗಳು ನೀರಸ ಪ್ರದರ್ಶನ ನೀಡುವುದರ ಜೊತೆಗೆ ಅಂಕಪಟ್ಟಿಯಲ್ಲೂ ಕುಸಿದಿದ್ದಾರೆ. ನೂತನ ಪಾಯಿಂಟ್ಸ್ ಟೇಬಲ್ನಲ್ಲಿ ರಷ್ಯಾದ ಇಯಾನ್ ನೆಪೋಮ್ನಿಯಾಚಿ 7 ಪಾಯಿಂಟ್ಸ್ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಡಿ ಗುಕೇಶ್ 6.5 ಅಂಕ ಪಡೆದು ಅಷ್ಟೇ ಅಂಕ ಸಂಪಾದಿಸಿರುವ ಅಮೆರಿಕಾದ ಹಿಕರು ನಕಮುರಾ ಅವರೊಂದಿಗೆ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಆದರೆ ಸೋತ ಪ್ರಜ್ಞಾನಂದ 5.5 ಪಾಯಿಂಟ್ಗಳೊಂದಿಗೆ 5ನೇ ಸ್ಥಾನಕ್ಕೆ ಜಾರಿದ್ದಾರೆ.
11ನೇ ಸುತ್ತಿನ ನಂತರ ಅಂಕಪಟ್ಟಿ (ಪುರುಷರ ವಿಭಾಗ)
1. ಇಯಾನ್ ನೆಪೋಮ್ನಿಯಾಚಿ (ರಷ್ಯಾ) - 7.0
2. ಹಿಕರು ನಕಮುರಾ (ಅಮೆರಿಕ) - 6.5
3. ಡಿ ಗುಕೇಶ್ (ಭಾರತ) - 6.5
4. ಫ್ಯಾಬಿಯಾನೋ ಕರುವಾನಾ (ಅಮೆರಿಕ) - 6.0
5. ಆರ್ ಪ್ರಗ್ನಾನಂದಾ (ಭಾರತ) - 5.5
6. ವಿದಿತ್ ಗುಜರಾತಿ (ಭಾರತ) - 5.0
7. ಅಲಿರೆಜಾ ಫಿರೋಜ್ಜಾ (ಫ್ರೆಂಚ್) - 4.5
8. ನಿಜತ್ ಅಬಾಸೊವ್ (ಅಜೆರ್ಬೈಜಾನಿ) - 3.0
11ನೇ ಸುತ್ತಿನ ನಂತರ ಅಂಕಪಟ್ಟಿ (ಮಹಿಳೆಯರ ವಿಭಾಗ)
1. ಟ್ಯಾನ್ ಝೊಂಗಿ (ಚೀನಾ) - 7.5
2. ಲೀ ಟಿಂಗ್ಜಿ (ಚೀನಾ) - 7.0
3. ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ (ರಷ್ಯಾ) - 5.5
4. ಕೋನೇರು ಹಂಪಿ (ಭಾರತ) - 5.5
5. ಕಟೆರಿನಾ ಲಗ್ನೋ (ರಷ್ಯಾ) - 5.5
6. ಅನ್ನಾ ಮುಜಿಚುಕ್ (ಉಕ್ರೇನ್) - 4.5
7. ಆರ್. ವೈಶಾಲಿ (ಭಾರತ) - 4.5
8. ನರ್ಗ್ಯುಲ್ ಸಾಲಿಮೋವಾ (ಬಲ್ಗೇರಿಯಾ) - 4.0