ಆರ್​ಸಿಬಿ 11 ಬ್ಯಾಟರ್​ಗಳನ್ನು ಆಡಿಸಿದರೆ ಉತ್ತಮ; ಫಾಫ್ ಪಡೆಯ ಕಳಪೆ ಬೌಲಿಂಗ್ ಕುರಿತು 1983ರ ವಿಶ್ವಕಪ್ ವಿಜೇತ ವ್ಯಂಗ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ 11 ಬ್ಯಾಟರ್​ಗಳನ್ನು ಆಡಿಸಿದರೆ ಉತ್ತಮ; ಫಾಫ್ ಪಡೆಯ ಕಳಪೆ ಬೌಲಿಂಗ್ ಕುರಿತು 1983ರ ವಿಶ್ವಕಪ್ ವಿಜೇತ ವ್ಯಂಗ್ಯ

ಆರ್​ಸಿಬಿ 11 ಬ್ಯಾಟರ್​ಗಳನ್ನು ಆಡಿಸಿದರೆ ಉತ್ತಮ; ಫಾಫ್ ಪಡೆಯ ಕಳಪೆ ಬೌಲಿಂಗ್ ಕುರಿತು 1983ರ ವಿಶ್ವಕಪ್ ವಿಜೇತ ವ್ಯಂಗ್ಯ

Krishnamachari Srikkanth : ಆರ್​ಸಿಬಿ ತಂಡದಲ್ಲಿ ಬೌಲರ್​ಗಳನ್ನು ಕೈಬಿಟ್ಟು 11 ಬ್ಯಾಟರ್​​ಗಳನ್ನು ಆಡಿಸಿ, ಅವರಿಂದಲೇ ಬೌಲಿಂಗ್ ಮಾಡಿಸಿದರೆ ಉತ್ತಮ ಎಂದು ಕೃಷ್ಣಮಾಚಾರಿ ಶ್ರೀಕಾಂತ್, ಕಳಪೆ ಬೌಲಿಂಗ್ ವಿರುದ್ಧ ಗುಡುಗಿದ್ದಾರೆ.

ಫಾಫ್ ಪಡೆಯ ಕಳಪೆ ಬೌಲಿಂಗ್ ಕುರಿತು 1983ರ ವಿಶ್ವಕಪ್ ವಿಜೇತ ಕ್ರಿಸ್ ಶ್ರೀಕಾಂತ್ ವ್ಯಂಗ್ಯ
ಫಾಫ್ ಪಡೆಯ ಕಳಪೆ ಬೌಲಿಂಗ್ ಕುರಿತು 1983ರ ವಿಶ್ವಕಪ್ ವಿಜೇತ ಕ್ರಿಸ್ ಶ್ರೀಕಾಂತ್ ವ್ಯಂಗ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024) ಸೋಮವಾರ (ಏಪ್ರಿಲ್ 15) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಯಲ್ಲಿ 6ನೇ ಸೋಲಿಗೆ ಶರಣಾಯಿತು. ಪ್ರವಾಸಿ ತಂಡ ಸನ್​ರೈಸರ್ಸ್ ಹೈದರಾಬಾದ್ 287 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಆದರೆ, ಆತಿಥೇಯ ಆರ್​ಸಿಬಿ ಈ ಗುರಿ ಬೆನ್ನಟ್ಟಲು ವಿಫಲವಾಯಿತು. ಎಸ್​ಆರ್​ಹೆಚ್​ ಬ್ಯಾಟ್ಸ್‌ಮನ್​​ಗಳು, ಆರ್​ಸಿಬಿ ಬೌಲರ್ಸ್ ಬೇಟೆಯಾಡಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಬೆಂಗಳೂರು 25 ರನ್‌ಗಳ ಅಂತರದಲ್ಲಿ ಪತನಗೊಂಡಿತು.

ಅಂದಿನ ಪಂದ್ಯದ ಕುರಿತು ಇದೀಗ 1983ರ ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್​, ಆರ್​ಸಿಬಿ ಕಳಪೆ ಬೌಲಿಂಗ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರ್​ಸಿಬಿ ಬೌಲಿಂಗ್​ ವಿಭಾಗವನ್ನು ಕೆಣಕುವ ರೀತಿ ಮಾತನಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ‘ಆರ್‌ಸಿಬಿ 11 ಬ್ಯಾಟರ್‌ಗಳೊಂದಿಗೆ ಆಡುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ. ವಿರಾಟ್ ಕೊಹ್ಲಿ ತುಂಬಾ ನೊಂದಿದ್ದಾರೆ’ ಎಂದು ಮಾಜಿ ಆಟಗಾರ ಹೇಳಿದ್ದಾರೆ.

‘11 ಬ್ಯಾಟರ್​ಗಳಿಂದಲೇ ಬೌಲಿಂಗ್ ಮಾಡಿಸಿ’

‘ರೀಸ್ ಟೋಪ್ಲಿ ರನ್ ಲೀಕ್ ಮಾಡುತ್ತಿದ್ದರು, ಲಾಕಿ ಫರ್ಗುಸನ್ ಕೂಡ ರನ್ ಲೀಕ್ ಮಾಡುತ್ತಿದ್ದರು. ಅವರು ಐಪಿಎಲ್‌ನಲ್ಲಿ ಉತ್ತಮವಾದ ಮಾಡಿಲ್ಲ. ಬೌಲರ್​​ಗಳ ಬದಲಿಗೆ ಬ್ಯಾಟರ್​ಗಳೇ ಬೌಲಿಂಗ್ ಮಾಡಿದ್ದರೆ, ಇಷ್ಟು ರನ್ ಬಿಟ್ಟುಕೊಡುತ್ತಿರಲಿಲ್ಲ. ವಿಲ್ ಜಾಕ್ಸ್ ಅವರು ಅತ್ಯುತ್ತಮ ಬೌಲರ್ ಆಗಿದ್ದಾರೆ. ತಂಡದಲ್ಲಿ ಬೌಲರ್​ಗಳನ್ನು ಕೈಬಿಟ್ಟು 11 ಬ್ಯಾಟರ್​​ಗಳನ್ನು ಆಡಿಸಿ ಅವರಿಂದಲೇ ಬೌಲಿಂಗ್ ಮಾಡಿಸಿದರೆ ಉತ್ತಮ’ ಎಂದು ಶ್ರೀಕಾಂತ್, ಆರ್​ಸಿಬಿ ಮ್ಯಾನೇಜ್​ಮೆಂಟ್ ವಿರುದ್ಧ ಗುಡುಗಿದ್ದಾರೆ.

‘ಆರ್​ಸಿಬಿ 11 ಬ್ಯಾಟರ್‌ಗಳನ್ನು ಆಡಿಸಿದರೆ ಉತ್ತಮ. ಫಾಫ್ ಡು ಪ್ಲೆಸಿಸ್ ಅವರನ್ನು 2 ಓವರ್‌ ಬೌಲ್ ಮಾಡಲು ಹೇಳಿ. ಕ್ಯಾಮರೂನ್ ಗ್ರೀನ್‌ಗೆ 4 ಓವರ್‌ಗಳನ್ನು ನೀಡಿ. ವಿರಾಟ್ ಕೊಹ್ಲಿ 4 ಓವರ್‌ಗಳನ್ನು ಬೌಲ್ ಮಾಡಿದ್ದರೆ, ಇಷ್ಟು ಮೊತ್ತ ಬಿಟ್ಟುಕೊಡುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಸಭ್ಯ ಬೌಲರ್. ಒಂದು ಹಂತದಲ್ಲಿ ಕೊಹ್ಲಿಗೆ ತುಂಬಾ ಬೇಸರವಾಯಿತು. ಬ್ಯಾಟಿಂಗ್ ಮಾಡಲು ಹೊರನಡೆದಾಗ ಅವರು ಕೋಪದಿಂದ ಬಂದರು’ ಎಂದು ಕೊಹ್ಲಿ ಕುರಿತು ಶ್ರೀಕಾಂತ್ ಹೇಳಿದ್ದಾರೆ.

ರೀಸ್ ಟೋಪ್ಲಿ ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 68 ರನ್ ಸೋರಿಕೆ ಮಾಡಿದರು. ಯಶ್ ದಯಾಳ್ 51 ರನ್‌, ಲಾಕಿ ಫರ್ಗ್ಯುಸನ್ 52, ವಿಜಯ್​ಕುಮಾರ್ ವೈಶಾಕ್ 64 ರನ್ ಬಿಟ್ಟುಕೊಟ್ಟರು. ಮಹಿಪಾಲ್ ಲೊಮ್ರೊರ್ ಒಂದು ಓವರ್​ನಲ್ಲಿ 18 ರನ್ ನೀಡಿದರು. ವಿಲ್ ಜಾಕ್ಸ್ ಎಸೆದ ಮೂರು ಓವರ್​​ಗಳಲ್ಲಿ 32 ರನ್ ಕೊಟ್ಟರು. ಆರು ಬೌಲರ್​ಗಳ ಎಕಾನಮಿ 10ಕ್ಕೂ ಹೆಚ್ಚಿದೆ. ಈ ಕೆಟ್ಟ ಬೌಲಿಂಗ್​ನಿಂದ ಹೈದರಾಬಾದ್ ಬ್ಯಾಟರ್​ಗಳು ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು.

ಆರ್​ಸಿಬಿಗೆ ವಿರೋಚಿತ ಸೋಲು

ಎಸ್​ಆರ್​ಹೆಚ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ವಿರೋಚಿತ ಸೋಲು ಎದುರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್, 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ವಿಶ್ವ ದಾಖಲೆಯ 287 ರನ್ ಸಿಡಿಸಿತ್ತು. 288 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್, 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿ 25 ರನ್​ಗಳಿಂದ ಸೋಲು ಕಂಡಿತು. ಸೋತರು ಕೂಡ ಆರ್​ಸಿಬಿ ದಾಖಲೆ ಬರೆಯಿತು.

ಟ್ರಾವಿಸ್ ಹೆಡ್ ಶತಕ

ಹೈದರಾಬಾದ್ ಬೃಹತ್ ಮೊತ್ತ ದಾಖಲಿಸಲು ಕಾರಣವಾಗಿದ್ದು, ಟ್ರಾವಿಸ್ ಹೆಡ್. ಆರಂಭದಿಂದ ತಾನು ಕ್ರೀಸ್​​ನಲ್ಲಿ ಇರುವವರೆಗೂ ಆರ್ಭಟಿಸಿದ ಹೆಡ್​, ತನ್ನ ಐಪಿಎಲ್ ಚೊಚ್ಚಲ ಶತಕ ಪೂರೈಸಿದರು. ಕೇವಲ 41 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್​ ಸಹಿತ 248ರ ಸ್ಟ್ರೈಕ್​ರೇಟ್​ನಲ್ಲಿ 102 ರನ್ ಬಾರಿಸಿದರು. ಅಭಿಷೇಕ್ ಶರ್ಮಾ (34), ಹೆನ್ರಿಚ್ ಕ್ಲಾಸೆನ್ (67), ಏಡನ್ ಮಾರ್ಕ್ರಮ್ (32*), ಅಬ್ದುಲ್ ಸಮದ್ (37) ಅದ್ಭುತ ಸಾಥ್ ನೀಡಿದರು. ಪರಿಣಾಮ ಎಸ್​ಆರ್​ಹೆಚ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ದಿನೇಶ್ ಕಾರ್ತಿಕ್ ಅಬ್ಬರ

ಬೃಹತ್ ಮೊತ್ತವನ್ನು ಚೇಸ್​ ಮಾಡಿದ ಬೆಂಗಳೂರು ಪರ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಪಂದ್ಯವು ಸೋಲುತ್ತದೆ ಎಂದು ನಿರ್ಧರಿಸಿದ್ದ ಅಭಿಮಾನಿಗಳಿಗೆ ಗೆಲುವಿನ ಹುರುಪು ತಂದುಕೊಟ್ಟರು. ಕೇವಲ 35 ಎಸೆತಗಳಲ್ಲಿ 7 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ 237ರ ಸ್ಟ್ರೈಕ್​ರೇಟ್​ನಲ್ಲಿ 83 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನಡೆಸಿದರು. ಫಾಫ್ ಡು ಪ್ಲೆಸಿಸ್ 62, ವಿರಾಟ್ ಕೊಹ್ಲಿ 42 ರನ್ ಬಾರಿಸಿದರು.

Whats_app_banner