ಕನ್ನಡ ಸುದ್ದಿ  /  ಕ್ರೀಡೆ  /  Harbhajan On Dhoni: ಬ್ಯಾನ್​ ಶಿಕ್ಷೆ ಮುಗಿಸಿ ಚೆನ್ನೈ ಸೇರಿದ ನಂತರ ಧೋನಿ ಮಗುವಿನಂತೆ ಅತ್ತಿದ್ರು; ಯಾರೂ ಕೇಳಿರದ ಘಟನೆ ಬಿಚ್ಚಿಟ್ಟ ಹರ್ಭಜನ್

Harbhajan on Dhoni: ಬ್ಯಾನ್​ ಶಿಕ್ಷೆ ಮುಗಿಸಿ ಚೆನ್ನೈ ಸೇರಿದ ನಂತರ ಧೋನಿ ಮಗುವಿನಂತೆ ಅತ್ತಿದ್ರು; ಯಾರೂ ಕೇಳಿರದ ಘಟನೆ ಬಿಚ್ಚಿಟ್ಟ ಹರ್ಭಜನ್

2016 ಮತ್ತು 2017ರಲ್ಲಿ ಬ್ಯಾನ್​ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super kings)​, 2018ರಲ್ಲಿ ಮತ್ತೆ ಯಲ್ಲೋ ಆರ್ಮಿಗೆ ಮರಳಿತು. ಆಗ ತಂಡದ ಸೇರಿದ ಬಳಿಕ ಎಂಎಸ್​ ಧೋನಿ (MS Dhoni) ಭಾವುಕರಾಗಿದ್ದರು. ಅಂದಿನ ಅಪರೂಪದ ಘಟನೆಯನ್ನು ಹರ್ಭಜನ್​ ಸಿಂಗ್ (Harbhajan Singh)​ ಬಹಿರಂಗಪಡಿಸಿದ್ದಾರೆ.

ಎಂಎಸ್​ ಧೋನಿ ಅವರ ಕುರಿತು ಅಪರೂಪದ ಘಟನೆ ಬಿಚ್ಚಿಟ್ಟ ಹರ್ಭಜನ್​ ಸಿಂಗ್
ಎಂಎಸ್​ ಧೋನಿ ಅವರ ಕುರಿತು ಅಪರೂಪದ ಘಟನೆ ಬಿಚ್ಚಿಟ್ಟ ಹರ್ಭಜನ್​ ಸಿಂಗ್

ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಪರಾಕ್ರಮದಿಂದ ಅಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸುವುದನ್ನು ಮುಂದುವರೆಸಿದ್ದಾರೆ. ತಮ್ಮ ಸುಪ್ರಸಿದ್ಧ ವೃತ್ತಿ ಜೀವನದ ಕೊನೆಯ ಹಂತದಲ್ಲೂ ಮನರಂಜನೆ ನೀಡುವುದರಲ್ಲಿ ಹೆಜ್ಜೆಯನ್ನು ಹಿಂದೆ ಇಟ್ಟಿಲ್ಲ. ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಸಿಎಸ್​ಕೆ ನಾಯಕನಿಗೆ ಅಗಾಧ ಬೆಂಬಲ ಸಿಗುತ್ತಿರುವುದು ಅತ್ಯಂತ ಖುಷಿಯ ವಿಚಾರ.

ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಎಂಎಸ್​ ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್​​​ ಎಂದು ಬಹುತೇಕರು ನಂಬಿದ್ದಾರೆ. ಧೋನಿ ಮಾತ್ರ ಈ ಬಗ್ಗೆ ಒಂದೇ ಒಂದು ಸುಳಿವು ಬಿಟ್ಟು ಕೊಟ್ಟಿಲ್ಲ. ಆದರೆ ಚೆನ್ನೈ ಪಂದ್ಯಗಳು ನಡೆಯುವ ಕಡೆಯೆಲ್ಲಾ ಮೈದಾನಗಳು ತುಂಬಿ ತುಳುಕುತ್ತಿವೆ. ಲೆಜೆಂಡರಿ ಆಟಗಾರ ಭರ್ಜರಿ ಸಿಕ್ಸರ್​​ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದಾರೆ.

ಎಂಎಸ್​ ಧೋನಿ ಅವರು ಸಿಎಸ್​ಕೆ ಪರ 14 ಸೀಸನ್​ಗಳನ್ನು ಆಡಿದ್ದಾರೆ. ಉಳಿದ ಎರಡು ಸೀಸನ್​ಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದ್ದರು. 2016 ಮತ್ತು 2017ರಲ್ಲಿ ಚೆನ್ನೈ​ ಬ್ಯಾನ್​ ಆಗಿದ್ದ ಕಾರಣ, ಪುಣೆ ಪರ ಕಣಕ್ಕಿಳಿಬೇಕಿತ್ತು. ಯಲ್ಲೋ ಆರ್ಮಿ ಪರ ಆಡಿದ 14 ಆವೃತ್ತಿಗಳಲ್ಲಿ 12 ಬಾರಿ ತಂಡವನ್ನು ಪ್ಲೇ ಆಫ್​​ಗೇರಿಸಿದ್ದಾರೆ.

12 ಬಾರಿ ಚೆನ್ನೈ ತಂಡವನ್ನು ಪ್ಲೇ ಆಫ್​ಗೇರಿದ ಧೋನಿ, 7 ಫೈನಲ್​ಗೂ ತಂಡವನ್ನೂ ಕೊಂಡೊಯ್ದಿದ್ದಾರೆ. ಜೊತೆಗೆ 4 ಬಾರಿ ಟ್ರೋಫಿಯೂ ಗೆದ್ದು ಕೊಟ್ಟಿದ್ದಾರೆ. ಆದರೆ ಧೋನಿ ತಂಡವು ಬ್ಯಾನ್​ ಆಗಿ ನಿಷೇಧಕ್ಕೆ ಒಳಗಾದಾಗ ತೀರಾ ಭಾವುಕರಾಗಿದ್ದರಂತೆ. ಫಿಕ್ಸಿಂಗ್​ನಿಂದಾಗಿ 2016, 17ರಲ್ಲಿ ಚೆನ್ನೈ ಬ್ಯಾನ್​ ಆಗಿತ್ತು. ಶಿಕ್ಷೆ ಮುಗಿಸಿ ಮತ್ತೆ ಚೆನ್ನೈ ತಂಡಕ್ಕೆ ಸೇರುತ್ತಿದ್ದಂತೆ ಧೋನಿ ಅತ್ತಿದ್ದರಂತೆ. ಹೀಗಂತ ಹರ್ಭಜನ್​ ಸಿಂಗ್​ ಅಂದು ನಡೆದ ಘಟನೆ ಕುರಿತು ವಿವರಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸಿಎಸ್​ಕೆ ತಂಡದ ಸಹ ಆಟಗಾರ ಹರ್ಭಜನ್​ ಸಿಂಗ್​ ಅವರು ಯಾರೂ ಕೇಳಿರದ ಕಥೆಯನ್ನು ಹಂಚಿಕೊಂಡಿದ್ದಾರೆ. ಲೆಜೆಂಡರಿ ಆಟಗಾರ, ತನ್ನ ತಂಡದ ಸದಸ್ಯರ ಮುಂದೆ ತನ್ನ ಭಾವನೆಗಳನ್ನು ನಿಯಂತ್ರಿಸಲು ವಿಫಲವಾದ ಅಪರೂಪದ ಕ್ಷಣದ ವಿವರಗಳನ್ನು ಬಹಿರಂಗಪಡಿಸಿದರು. ಫಿಕ್ಸಿಂಗ್​​ನಿಂದ 2 ವರ್ಷಗಳ ನಿಷೇಧವನ್ನು ಅನುಭವಿಸಿದ ನಂತರ, CSK ಐಪಿಎಲ್‌ಗೆ ಮರಳಿದಾಗ ಈ ಘಟನೆ ನಡೆದಿತ್ತು.

‘ನಾನು ಹಂಚಿಕೊಳ್ಳಲು ಬಯಸುವ ಒಂದು ಕಥೆ ಇದೆ. 2018ರಲ್ಲಿ ಎರಡು ವರ್ಷಗಳ ನಿಷೇಧದ ನಂತರ ಸಿಎಸ್​ಕೆ ಐಪಿಎಲ್​​ ಲೀಗ್‌ಗೆ ಮರಳಿತು. ಪರಿಣಾಮ ಎಲ್ಲರಿಗೂ ಲಂಚ್​ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಪುರುಷರು ಅಳುವುದು ಕಡಿಮೆ ಎಂಬ ಮಾತನ್ನು ನಾವು ಕೇಳಿರಬೇಕು. ಆದರೆ, ಆ ರಾತ್ರಿ ಎಂಎಸ್​ ಧೋನಿ ಅಳುತ್ತಿದ್ದರು. ಅವರು ಭಾವುಕರಾದರು. ಯಾರಿಗೂ ಈ ಬಗ್ಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಚೆನ್ನೈ ತಂಡವು ಮತ್ತೆ ಮರಳಿದ ಹಿನ್ನೆಲೆಯಲ್ಲಿ ಧೋನಿ ಎಮೋಷನಲ್​ ಆಗಿದ್ದರು‘ ಎಂದು ಕಾಮೆಂಟರಿ ಪ್ಯಾನೆಲ್​ನಲ್ಲಿದ್ದ ಚೆನ್ನೈ ತಂಡದ ಭಾಗವಾಗಿದ್ದ ಇಮ್ರಾನ್ ತಾಹಿರ್ ಅವರಿಗೆ ತಿಳಿಸಿದ್ದಾರೆ.

ಆಗ ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ತಾಹೀರ್​, ಹೌದು. ನಾನು ಕೂಡ ಅಲ್ಲಿಯೇ ಇದ್ದೆ. ಅದು ಅವರಿಗೆ (ಎಂಎಸ್ ಧೋನಿ) ತುಂಬಾ ಭಾವನಾತ್ಮಕ ಕ್ಷಣವಾಗಿತ್ತು. ಅವರನ್ನು ಹಾಗೆ ನೋಡಿದಾಗ, ಚೆನ್ನೈ ತಂಡವು ಅವರ ಹೃದಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ತಿಳಿಯಿತು. ಅವರು ತಂಡವನ್ನು ತಮ್ಮ ಕುಟುಂಬ ಎಂದು ಪರಿಗಣಿಸುತ್ತಾರೆ. ನಮಗೆಲ್ಲ ತುಂಬಾ ಭಾವನಾತ್ಮಕವಾಗಿತ್ತು ಎಂದು ಹೇಳಿದ್ದಾರೆ.

ನಾವು ಎರಡು ವರ್ಷಗಳ ನಂತರ ಮರಳಿ ಬಂದೆವು. ಮತ್ತು ಟ್ರೋಫಿಯನ್ನು ಗೆದ್ದೆವು. ಜನರು ನಮ್ಮ ತಂಡಕ್ಕೆ ವೃದ್ಧರು ಎಂಬ ಟ್ಯಾಗ್ ಅನ್ನು ನೀಡಿದರು. ನಾನು ಕೂಡ ಆ ಋತುವಿನ ತಂಡದಲ್ಲಿದ್ದೆ, ಆದರೆ ನಾವು ಪ್ರಶಸ್ತಿಯನ್ನು ಗೆದ್ದೆವು. ಆ ವಿಜಯದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ ಇಮ್ರಾನ್ ತಾಹೀರ್.