ಕನ್ನಡ ಸುದ್ದಿ  /  Sports  /  Cricket News Ms Dhoni With Most Appearances In The Icc Tournament Finals Kohli Rohit Will Surpass Msd Unique Record Prs

WTC Final 2023: ಎಂಎಸ್​ ಧೋನಿ ರೆಕಾರ್ಡ್ ಮೇಲೆ ಕಣ್ಣಿಟ್ಟ ಕೊಹ್ಲಿ, ರೋಹಿತ್​; ಜಂಟಿ ದಾಖಲೆ ಬರೆಯಲಿದ್ದಾರೆ ನಾಯಕ, ಮಾಜಿ ನಾಯಕ

ಎಂಎಸ್​ ಧೋನಿ ಅವರು ಟೀಮ್​ ಇಂಡಿಯಾ ಪರ ಅಧಿಕ ಬಾರಿ ಐಸಿಸಿ ಟ್ರೋಫಿ ಫೈನಲ್​​ಗಳಲ್ಲಿ ಕಾಣಿಸಿಕೊಂಡ 2ನೇ ಆಟಗಾರನಾಗಿದ್ದಾರೆ. ಈಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಣಕ್ಕಿಳಿಯುವ ಮೂಲಕ ಧೋನಿ ದಾಖಲೆಯನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ​ ಹಿಂದಿಕ್ಕಲಿದ್ದಾರೆ.

: ಎಂಎಸ್​ ಧೋನಿ ರೆಕಾರ್ಡ್ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ
: ಎಂಎಸ್​ ಧೋನಿ ರೆಕಾರ್ಡ್ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ

ಲಂಡನ್​ನ ಓವಲ್​ ಮೈದಾನದಲ್ಲಿ ಜೂನ್ 7ರಿಂದ ಟೀಮ್​ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ (India vs Australia) ನಡುವೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (ICC World Test Championship final 2023)​ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್​ ಶರ್ಮಾ (Rohit Sharma) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ದೊಡ್ಡ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಆ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಎಸ್​ ಧೋನಿ (MS Dhoni) ದಾಖಲೆಯನ್ನು ಮುರಿಯಲಿದ್ದಾರೆ. ರೋಹಿತ್​ ಮತ್ತು ಕೊಹ್ಲಿ ಡಬ್ಲ್ಯುಟಿಸಿ ಫೈನಲ್​​ನಲ್ಲಿ​ ಆಡುವ ಮೂಲಕ ಹೆಚ್ಚು ಐಸಿಸಿ ಫೈನಲ್​​ ಪಂದ್ಯಗಳಲ್ಲಿ ಕಾಣಿಸಿಕೊಂಡ 2ನೇ ಆಟಗಾರರು ಎಂಬ ಹೆಗ್ಗಳಿಕಗೆ ಪಾತ್ರರಾಗಲಿದ್ದಾರೆ. ಧೋನಿ, ವಿರಾಟ್​, ರೋಹಿತ್​ ಸದ್ಯ ತಲಾ ಐದು ಬಾರಿ ಐಸಿಸಿ ಫೈನಲ್​​ ಆಡಿದ್ದಾರೆ.

ಈಗ ಜೂನ್​ 7ರಂದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಣಕ್ಕಿಳಿಯುವ ಮೂಲಕ ಧೋನಿ ದಾಖಲೆಯನ್ನು ಕೊಹ್ಲಿ ಮತ್ತು ರೋಹಿತ್​ ಮುರಿಯಲಿದ್ದಾರೆ. ಮೂವರು ಸಹ ತಲಾ 5 ಬಾರಿ ಫೈನಲ್​ ಆಡಿದ್ದು, ಜಂಟಿಯಾಗಿ ಭಾರತದ ಪರ ಅಧಿಕ ಬಾರಿ ಐಸಿಸಿ ಫೈನಲ್​​ಗಳಲ್ಲಿ ಕಾಣಿಸಿಕೊಂಡ ಎರಡನೇ ಆಟಗಾರರಾಗಿದ್ದಾರೆ. ಈಗ ರೋಹಿತ್​​-ಕೊಹ್ಲಿ ತಲಾ 6 ಬಾರಿ ಐಸಿಸಿ, ಫೈನಲ್ ಆಡುವ ದಾಖಲೆ ಬರೆಯಲ್ಲಿದ್ದಾರೆ.

ಧೋನಿ 5 ಬಾರಿ ಫೈನಲ್​ ಆಡಿದ್ದಾರೆ

ಧೋನಿ, ಭಾರತಕ್ಕೆ 3 ಐಸಿಸಿ ಟ್ರೋಫಿ ಗೆದ್ದು ಕೊಟ್ಟಿದ್ದಾರೆ. 2007ರಲ್ಲಿ ಮೊದಲ ಐಸಿಸಿ ಫೈನಲ್‌, 2011ರ ವಿಶ್ವಕಪ್ ಫೈನಲ್​, 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್​​ಗಳಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. 2014ರ ಟಿ20 ವಿಶ್ವಕಪ್ ಫೈನಲ್, 2017 ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗಳಲ್ಲೂ ಕಾಣಿಸಿಕೊಂಡಿದ್ದರು.

ವಿರಾಟ್​ ಕೊಹ್ಲಿ ಫೈನಲ್​ ಆಡಿದ ವರ್ಷಗಳು

ವಿರಾಟ್​ ಕೊಹ್ಲಿ 2011ರಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್​ ಆಡಿದ್ದರು. ನಂತರ 2013ರ ಚಾಂಪಿಯನ್ಸ್ ಫೈನಲ್​​​, 2014ರ ಟಿ20 ವಿಶ್ವಕಪ್​​ ಫೈನಲ್​, 2017ರಲ್ಲಿ ಚಾಂಪಿಯನ್ಸ್​ ಟ್ರೋಫಿ, 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಕಣಕ್ಕಿಳಿದ್ದರು. ಆದರೆ ಇದರಲ್ಲಿ ಅಂಡರ್-19 ವಿಶ್ವಕಪ್​ ಫೈನಲ್​ ಸೇರಿಲ್ಲ.

ರೋಹಿತ್​ ಆಡಿದ ಫೈನಲ್​ಗಳು

ಇನ್ನು ರೋಹಿತ್ ಶರ್ಮಾ, ಮೊದಲ ಬಾರಿಗೆ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಫೈನಲ್​ನಲ್ಲಿ ಕಣಕ್ಕಿಳಿದರು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​​, 2014ರಲ್ಲಿ ಟಿ20 ವಿಶ್ವಕಪ್ ಫೈನಲ್​, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​​​ ಮತ್ತು 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ ತಂಡದಲ್ಲಿ ರೋಹಿತ್ ಕಣಕ್ಕಿಳಿದ್ದರು.

ಯುವಿ ಫೈನಲ್​ ಆಡಿದ ವರ್ಷಗಳು

ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಅಧಿಕ ಐಸಿಸಿ ಫೈನಲ್​​​ಗಳನ್ನು ಆಡಿದ್ದಾರೆ. 2000ರಲ್ಲಿ ಮೊದಲ ಐಸಿಸಿ ಫೈನಲ್‌ ಆಡಿದ್ದ ಯುವಿ, ನಂತರ 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​, 2003ರ ಏಕದಿನ ವಿಶ್ವಕಪ್ ಫೈನಲ್​, 2007ರ ಟಿ20 ವಿಶ್ವಕಪ್ ಫೈನಲ್, 2011ರ ವಿಶ್ವಕಪ್, 2014ರ ಟಿ20 ವಿಶ್ವಕಪ್ ಫೈನಲ್​, 2017 ಚಾಂಪಿಯನ್ಸ್ ಟ್ರೋಫಿ ಸೇರಿ 7 ಐಸಿಸಿ ಟೂರ್ನಿಗಳ ಫೈನಲ್​​ ಆಡಿದ್ದಾರೆ.

ಇದೀಗ ಕೊಹ್ಲಿ, ರೋಹಿತ್​ ಜಂಟಿಯಾಗಿ ತಲಾ 6ನೇ ಐಸಿಸಿ ಫೈನಲ್​ ಆಡಲಿದ್ದು, ಯುವರಾಜ್​ ಸಿಂಗ್​ ನಂತರದ ಸ್ಥಾನದಲ್ಲಿ ಪಡೆಯಲಿದ್ದಾರೆ. ಈ ನಾಲ್ವರು ಕ್ರಿಕೆಟಿಗರನ್ನು ಹೊರತುಪಡಿಸಿ ದಿಗ್ಗಜ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 5 ಐಸಿಸಿ ಟೂರ್ನಿಗಳ ಫೈನಲ್‌ಗಳಲ್ಲಿ ಕಣಕ್ಕಿಳಿದಿದ್ದಾರೆ.