ಕನ್ನಡ ಸುದ್ದಿ  /  ಕ್ರೀಡೆ  /  Karsan Ghavri: ಪೃಥ್ವಿ ಶಾ ತಾನು ದೊಡ್ಡ ಸ್ಟಾರ್ ಅಂದುಕೊಂಡಿದ್ದಾನೆ; ಶಾಗೆ ಸಲಹೆ ನೀಡಿದ ಗಿಲ್ ಬಾಲ್ಯದ ಕೋಚ್

Karsan Ghavri: ಪೃಥ್ವಿ ಶಾ ತಾನು ದೊಡ್ಡ ಸ್ಟಾರ್ ಅಂದುಕೊಂಡಿದ್ದಾನೆ; ಶಾಗೆ ಸಲಹೆ ನೀಡಿದ ಗಿಲ್ ಬಾಲ್ಯದ ಕೋಚ್

Prithvi Shaw: ಶುಬ್ಮನ್ ಗಿಲ್‌ ಅವರ ಬಾಲ್ಯದ ಕೋಚ್ ಕರ್ಸನ್ ಘವ್ರಿ ಅವರು, ಆಟದಲ್ಲಿ ಗಿಲ್ ಪ್ರಗತಿಯ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಭಾರತದ ಮತ್ತೋರ್ವ ಯುವ ಆಟಗಾರ ಪೃಥ್ವಿ ಶಾ ಅವರ ಬಗ್ಗೆ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಶುಬ್ಮ‌ನ್ ಗಿಲ್, ಪೃಥ್ವಿ ಶಾ
ಶುಬ್ಮ‌ನ್ ಗಿಲ್, ಪೃಥ್ವಿ ಶಾ (IPL)

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ ಪಂದ್ಯವು ಭಾನುವಾರ(ಮೇ 28) ನಡೆಯಲಿದೆ. ಅಹಮದಾಬಾದ್‌ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು 62 ರನ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ (GT) ತಂಡವು ಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಬಳಗದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ 20 ಓವರ್‌ಗಳಲ್ಲಿ 233 ರನ್‌ ಗಳಿಸಿತು. ಕೇವಲ 60 ಎಸೆತಗಳಲ್ಲಿ 129 ರನ್ ಸಿಡಿಸುವ ಮೂಲಕ ಟೈಟಾನ್ಸ್ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು.

ಆವೃತ್ತಿಯಲ್ಲಿ ಮೂರು ಶತಕ ಸಿಡಿಸಿದ ಶುಬ್ಮನ್ ಗಿಲ್‌ ಪ್ರದರ್ಶನವು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಹೊಗಳಿಕೆಗೆ ಕಾರಣವಾಯ್ತು. 23 ವರ್ಷದ ಯುವ ಆಟಗಾರ, ಭರ್ಜರಿ 10 ಸಿಕ್ಸರ್ ಮತ್ತು ಏಳು ಬೌಂಡರಿ ಸಿಡಿಸಿದರು. 32 ಎಸೆತಗಳನ್ನು ಅರ್ಧಶತಕ ಸಿಡಿಸಿದ ಅವರು, ಮುಂದಿನ 17 ಎಸೆತಗಳಲ್ಲಿ ಶತಕ ಸಿಡಿಸಿದರು. ಪ್ರಸ್ತುತ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿರುವ ಅವರು, ಟೂರ್ನಿಯ ಆರೇಂಜ್‌ ಕ್ಯಾಪ್‌ ಗೆಲ್ಲುವುದು ಬಹುತೇಕ ಖಚಿತ. ಏಕೆಂದರೆ ಇವರಿಗೆ ಬೇರೆ ಯಾವ ಆಟಗಾರ ಕೂಡಾ ಪ್ರಬಲ ಪೈಪೋಟಿ ನೀಡುತ್ತಿಲ್ಲ.

ಕಳೆದ ಕೆಲವು ತಿಂಗಳುಗಳಲ್ಲಿ ಯುವ ಆಟಗಾರ ತಮ್ಮ ಆಟದ ವೈಖರಿಯಲ್ಲಿ ವ್ಯಾಪಕ ಸುಧಾರಣೆ ಕಂಡಿದ್ದಾರೆ. ಆಟದ ಎಲ್ಲಾ ಸ್ವರೂಪಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಶುಬ್ಮನ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದರು. ಆ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗುಣಮಟ್ಟದ ಆಟ ಪ್ರದರ್ಶಿಸಿ, ಇದೀಗ ಜೂನ್ 7ರಿಂದ 11ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಆಡುವ ಉತ್ಸಾಹದಲ್ಲಿದ್ದಾರೆ. ಅಲ್ಲದೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಸಿದ್ಧರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶುಬ್ಮನ್ ಗಿಲ್‌ ಅವರ ಬಾಲ್ಯದ ತರಬೇತುದಾರನಾಗಿರುವ ಕರ್ಸನ್ ಘವ್ರಿ ಅವರು, ಆಟದಲ್ಲಿ ಗಿಲ್ ಪ್ರಗತಿಯ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಭಾರತದ ಮತ್ತೋರ್ವ ಯುವ ಆಟಗಾರ ಪೃಥ್ವಿ ಶಾ ಅವರ ಬಗ್ಗೆ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಶಾ ಮತ್ತು ಗಿಲ್ ಇಬ್ಬರೂ 2018ರಲ್ಲಿ ನಡೆದ ಭಾರತ ಅಂಡರ್‌ 19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಇದೀಗ, ಗಿಲ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿಯೂ ರಾಷ್ಟ್ರೀಯ ತಂಡದ ಅವಿಭಾಜ್ಯ ಸದಸ್ಯನಾಗಿದ್ದಾರೆ. ಆದರೆ ಶಾ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.

ಐಪಿಎಲ್‌ನ 2023ರ ಆವೃತ್ತಿಯಲ್ಲಿ ಶಾ ಪ್ರದರ್ಶನ ತೀರಾ ಕಳಪೆಯಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅವರು ಆಡಿದ 8 ಪಂದ್ಯಗಳಲ್ಲಿ ಕೇವಲ 106 ರನ್ ಗಳಿಸಿದ್ದಾರೆ.

“ಅವರಿಬ್ಬರೂ 2018ರ ಅಂಡರ್‌ 19 ವಿಶ್ವಕಪ್ ಗೆದ್ದ ತಂಡದಲ್ಲಿದ್ದರು. ಆದರೆ, ಈಗ ಪೃಥ್ವಿ ಶಾ ಎಲ್ಲಿದ್ದಾರೆ ಮತ್ತು ಗಿಲ್ ಎಲ್ಲಿದ್ದಾರೆ? ಅವರು ಎರಡು ವಿಭಿನ್ನ ವರ್ಗಗಳಲ್ಲಿದ್ದಾರೆ ” ಎಂದು ಘಾವ್ರಿ ಸುದ್ದಿ ಮಾಧ್ಯಮ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ಶಾ ತನ್ನನ್ನು ತಾನು ದೊಡ್ಡ ಸ್ಟಾರ್ ಎಂದುಕೊಂಡಿದ್ದಾನೆ. ಅಲ್ಲದೆ ಯಾರೂ ಅವನನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಭಾವನೆ ಅವನಲ್ಲಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಬ್ಯಾಟರ್‌ಗಳು ಟಿ20, ಏಕದಿನ, ಟೆಸ್ಟ್ ಪಂದ್ಯ ಅಥವಾ ರಣಜಿ ಟ್ರೋಫಿ ಎಂಬುದನ್ನು ಲೆಕ್ಕಿಸದೆ ಆಡಬೇಕು. ಏಕೆಂದರೆ ಬ್ಯಾಟರ್‌ ಅನ್ನು ಔಟ್ ಮಾಡಲು ಕೇವಲ ಒಂದು ಎಸೆತ ಸಾಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು,” ಎಂದು ತಿಳಿಸಿದ್ದಾರೆ.

“ಆಟಗಾರಿನಿಗೆ ಶಿಸ್ತು ಮತ್ತು ಉತ್ತಮ ಮನೋಧರ್ಮ ಇರಬೇಕು. ಆಟಗಾರನಾದವನು ನಿರಂತರವಾಗಿ ತನ್ನ ಆಟದ ಸುಧಾರಣೆಗಾಗಿ ಕಷ್ಟಪಡಬೇಕು. ಕ್ರೀಸ್ ಅನ್ನು ಆಕ್ರಮಿಕೊಂಡು ಆಟವಾಡಬೇಕು. ಒಂದು ವೇಳೆ ಹೀಗೆ ಮಾಡಿದರೆ, ಹೆಚ್ಚು ರನ್ ಗಳಿಸಲು ಸಾಧ್ಯವಾಗುತ್ತದೆ" ಎಂದು ಘಾವ್ರಿ ಹೇಳಿದ್ದಾರೆ.

ಇದೇ ವೇಳೆ ಯುವ ಬಲಗೈ ಬ್ಯಾಟರ್‌ಗೆ ಸಲಹೆ ನೀಡಿದ ಅವರು, ದೌರ್ಬಲ್ಯವನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. “ಅವರಿಬ್ಬರೂ ಒಂದೇ ವಯಸ್ಸಿನವರು. ಇನ್ನೂ ಅವರಲ್ಲಿ ಆಡುವ ವಯಸ್ಸಿದೆ. ಗಿಲ್ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಂಡಿದ್ದಾನೆ. ಆದರೆ ಶಾ ಅದನ್ನು ಮಾಡಿಲ್ಲ. ಇದಕ್ಕೆ ಇನ್ನೂ ಸಮಯವಿದೆ. ಅದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ, ಎಷ್ಟೇ ಸಾಮರ್ಥ್ಯ ಹೊಂದಿದ್ದರೂ ಪ್ರಯೋಜನವಿಲ್ಲ,” ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.