ಕನ್ನಡ ಸುದ್ದಿ  /  Sports  /  Cricket News Wtc Final 2023 What Happens If World Test Championship Final Between India And Australia Ends In Draw Jra

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾ ಆದರೆ ಫಲಿತಾಂಶ ಏನಾಗಲಿದೆ? ಐಸಿಸಿ ನಿಯಮ ಹೀಗಿದೆ

World Test Championship Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ವೇಳೆ ಮಳೆ ಬಂದು ಪಂದ್ಯದ ದಿನದಾಟಕ್ಕೆ ಅಡ್ಡಿಯಾದರೆ ಏನಾಗಲಿದೆ? ಅಥವಾ ಮಳೆ ಬರದೆ, ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಫಲಿತಾಂಶ ಏನಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಭಾರತ ತಂಡ
ಭಾರತ ತಂಡ (AP)

ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (World Test Championship final) ಪಂದ್ಯ ನಡೆಯಲಿದೆ. ಈ ಹಿಂದಿನ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದ ಭಾರತವು, ಇದೀಗ ಎರಡನೇ ಋತುವಿನಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ ಹಾಕಿರುವ ಭಾರತವು, ಗೆಲ್ಲುವ ಫೇವರೆಟ್‌ ತಂಡ ಎನಿಸಿಕೊಂಡಿದೆ.

ಮಹತ್ವದ ಫೈನಲ್‌ ಪಂದ್ಯಕ್ಕಾಗಿ, ರೋಹಿತ್‌ ಶರ್ಮಾ ಬಳಗವು ಈಗಾಗಲೇ ಇಂಗ್ಲೆಂಡ್‌ ತಲುಪಿದೆ. ಅಲ್ಲದೆ ಟೀಮ್‌ ಇಂಡಿಯಾದ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ, ಈ ನಡುವೆ ಒಂದು ಗೊಂದಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕಳೆದ ಬಾರಿ ಭಾರತ ಮತ್ತು ಕಿವೀಸ್ ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಪಂದ್ಯದುದ್ದಕ್ಕೂ ನಿರಂತರ ಮಳೆ ಸುರಿದು, ಆಟದ ಉತ್ಸಾಹ ಕಡಿಮೆಯಾಯ್ತು. ನಿರಂತರ ಮಳೆಯಿಂದಾಗಿ ಟೆಸ್ಟ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯ್ತು. ಅಂದರೆ, ಐದು ದಿನಗಳಲ್ಲಿ ಮುಗಿಯಬೇಕಿದ್ದ ಪಂದ್ಯ ಆರನೇ ದಿನಕ್ಕೆ ಮುಗಿದು ಫಲಿತಾಂಶ ಹೊರಬಿತ್ತು. ಮಹತ್ವದ ಪಂದ್ಯವು ಮಳೆಯಿಂದಾಗಿ ರದ್ದಾಗಬಾರದು ಅಥವಾ ಡ್ರಾ ಆಗಬಾರದೆಂದು ಮೀಸಲು ದಿನಕ್ಕೆ ಪಂದ್ಯ ಮುಂದುವರೆದಿತ್ತು.

ಈ ಬಾರಿಯೂ ಇಂಗ್ಲೆಂಡ್‌ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ, ಅಲ್ಲಿನ ಹವಾಮಾನದ ಬಗ್ಗೆ ನಿಖರವಾಗಿ ಭವಿಷ್ಯ ನುಡಿಯುವುದು ಕಷ್ಟ. ಮೋಡಕವಿದ ವಾತಾವರಣ ಅಥವಾ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗಬಹುದು. ನಿರಂತರ ಮಳೆ ಸುರಿದರೆ, ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆ ಕೂಡಾ ಇದೆ. ಒಂದು ವೇಳೆ ಡ್ರಾಗೊಂಡರೆ, ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಲಿದೆ. ಇದಕ್ಕೆ ಐಸಿಸಿ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಏನಾಗಲಿದೆ?

ಒಂದು ವೇಳೆ ಪಂದ್ಯವು ನಡೆಯುತ್ತಿದ್ದಾಗ ಮಳೆ ಬಂದು ಪಂದ್ಯದ ದಿನದಾಟಕ್ಕೆ ಅಡ್ಡಿಯಾದರೆ, ಎಷ್ಟು ಸಮಯದ ಪಂದ್ಯ ಹಾಳಾಯಿತೋ ಅಷ್ಟು ಸಮಯದ ಆಟವನ್ನು ಮೀಸಲು ದಿನದಂದು ಆಡಿಸಲಾಗುತ್ತದೆ. ಅಂದರೆ, ಎಷ್ಟು ಓವರ್‌ ಬಾಕಿಯಾಗಿದೆಯೋ, ಅಷ್ಟೇ ಸಂಖ್ಯೆಯ ಓವರ್‌ಗಳನ್ನು ಮಾತ್ರ ಮೀಸಲು ದಿನದಂದು ಆಡಿಸಲಾಗುತ್ತದೆ.

ಒಂದು ವೇಳೆ ದಿನಪೂರ್ತಿ ಮಳೆಯಾದರೆ ಏನಾಗುತ್ತದೆ?

ಉದಾಹರಣೆಗೆ, ಫೈನಲ್ ಪಂದ್ಯದ ಎರಡನೇ ದಿನದಂದು ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ, ನಂತರ ಅಂಪೈರ್‌ಗಳು ಮುಂದಿನ ಮೂರು ದಿನಗಳಲ್ಲಿ ಆ ದಿನ ಉಳಿದ ಓವರ್‌ಗಳನ್ನು ಸರಿದೂಗಿಸುತ್ತಾರೆ. ಅದು ಆಗದಿದ್ದರೆ, ಮೀಸಲು ದಿನದಂದು ಪಂದ್ಯ ನಡೆಯುತ್ತದೆ. ಕಳೆದ ಬಾರಿ ಭಾರತ ಹಾಗೂ ಕಿವೀಸ್‌ ನಡುವಿನ ಪಂದ್ಯ ಕೂಡಾ ಹೇಗೆಯೇ ಆಗಿತ್ತು. ಆಗಲೂ ಮೀಸಲು ದಿನ ಪಂದ್ಯದ ಫಲಿತಾಂಶ ಹೊರಬಿತ್ತು.

ಐದು ದಿನವೂ ಮಳೆ ಬರದೆ, ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಫಲಿತಾಂಶ ಏನಾಗಲಿದೆ? ಆಗಲೂ ಮೀಸಲು ದಿನಿವಿದೆಯೇ?

ಖಂಡಿತಾ ಇಲ್ಲ. ಪಂದ್ಯ ನಡೆಯಬೇಕಾದ ಎಲ್ಲಾ ಐದು ದಿನಗಳಲ್ಲಿ ಮಳೆ ಅಥವಾ ಹವಾಮಾನದ ಕಾರಣದಿಂದ ಓವರ್‌ಗಳು ಉಳಿದರೆ ಮಾತ್ರ ಮೀಸಲು ದಿನದ ಪಂದ್ಯ ನಡೆಸಲಾಗುತ್ತದೆ. ಆದರೆ, ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ ಮೀಸಲು ದಿನ ಇರುವುದಿಲ್ಲ. ಬದಲಾಗಿ ಉಭಯ ತಂಡಗಳನ್ನು ಜಂಟಿಯಾಗಿ ವಿಜೇತ ತಂಡವೆಂದು ಘೋಷಿಸಲಾಗುತ್ತದೆ. ಅಂದರೆ, ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುತ್ತವೆ.

ಒಂದು ವೇಳೆ ಫೈನಲ್ ಪಂದ್ಯ ಟೈ ಆದರೆ?

ಒಂದು ವೇಳೆ ಡಬ್ಲ್ಯುಟಿಸಿ ಫೈನಲ್‌ ಪಂದ್ಯವು ಟೈ ಆದರೆ, ಈ ಸಂದರ್ಭದಲ್ಲೂ ಉಭಯ ತಂಡಗಳು ಜಂಟಿಯಾಗಿ ಟ್ರೋಫಿ ಗೆಲ್ಲಲಿವೆ.