ಕನ್ನಡ ಸುದ್ದಿ  /  ಕ್ರೀಡೆ  /  Ind Vs Aus: ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಾಕಿ ಪಂದ್ಯದಲ್ಲಿ ಭಾರತಕ್ಕೆ 1-5 ಅಂತರದ ಸೋಲು

IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಾಕಿ ಪಂದ್ಯದಲ್ಲಿ ಭಾರತಕ್ಕೆ 1-5 ಅಂತರದ ಸೋಲು

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಾಕಿ ಪಂದ್ಯದಲ್ಲಿ ಭಾರತದ ಪರ ಗುರ್ಜಂತ್ ಸಿಂಗ್ ಗೋಲು ಗಳಿಸಿದರು. ಇದು ಪಂದ್ಯದಲ್ಲಿ ಭಾರತ ಗಳಿಸಿದ ಏಕೈಕ ಗೋಲು. ಪರ್ತ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾನುವಾರ ಮತ್ತೆ ಭಾರತವು ಆಸೀಸ್‌ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಾಕಿ ಪಂದ್ಯದಲ್ಲಿ ಭಾರತಕ್ಕೆ 1-5 ಅಂತರದ ಸೋಲು (File photo)
ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಾಕಿ ಪಂದ್ಯದಲ್ಲಿ ಭಾರತಕ್ಕೆ 1-5 ಅಂತರದ ಸೋಲು (File photo)

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಹೀನಾಯ ಸೋಲು ಕಂಡಿದೆ. ಕಾಂಗರೂಗಳಿಗೆ ಕನಿಷ್ಠ ಉತ್ತಮ ಪೈಪೋಟಿ ನೀಡುವಲ್ಲೂ ವಿಫಲವಾದ ತಂಡವು, 1-5 ಅಂತರದಿಂದ ಮುಗ್ಗರಿಸಿತು. ಏಪ್ರಿಲ್‌ 6ರ ಶನಿವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ, ಆರಂಭದಿಂದ ಅಂತ್ಯದವರೆಗೂ ಕಾಂಗರೂಗಳು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಪರಿಣಾಮ ಭಾರಿ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡರು.

ಟ್ರೆಂಡಿಂಗ್​ ಸುದ್ದಿ

ಪಂದ್ಯದ ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ತಂಡವು ಕೆಲವು ಪ್ರತಿರೋಧ ಒಡ್ಡಿತು. ಆದರೆ, ಅಂಕಗಳನ್ನು ಹೆಚ್ಚಿಸುವುದು ತಂಡದಿಂದ ಸಾಧ್ಯವಾಗಲಿಲ್ಲ. ಆಸೀಸ್‌ ಪರ ಟಾಮ್ ವಿಕ್ಹ್ಯಾಮ್ ಪಂದ್ಯದ 20 ಮತ್ತು 38ನೇ ನಿಮಿಷದಲ್ಲಿ ಗೋಲು ಗಳಿಸಿದರು. ಟಿಮ್ ಬ್ರಾಂಡ್ 3ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಜೋಯಲ್ ರಿಂಟಾಲಾ 37 ಮತ್ತು ಫ್ಲಿನ್ ಒಗಿಲ್ವಿ 57ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪಾಲು ಪಡೆದರು.

ಭಾರತ ಗಳಿಸಿದ ಏಕೈಕ ಗೋಲು 47ನೇ ನಿಮಿಷದಲ್ಲಿ ಬಂತು. ಗುರ್ಜಂತ್ ಸಿಂಗ್ ತಂಡದ ಖಾತೆ ತೆರೆಯುವಲ್ಲಿ ನೆರವಾದರು.

ಆಸ್ಟ್ರೇಲಿಯಾ ಚಾಣಾಕ್ಷ ಆಟ

ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡ ವಿಫಲವಾಯಿತು. ಭಾರತದ ಚಾಣಾಕ್ಷ ಡಿಫೆನ್ಸ್ ವಿಭಾಗವನ್ನು ಮೀರಿಸಿದ ಆಸ್ಟ್ರೇಲಿಯಾ, ಆಕ್ರಮಣಕಾರಿ ಆಟದಿಂದಲೇ ಗಮನ ಸೆಳೆಯಿತು.

ಇದನ್ನೂ ಓದಿ | ರೊನಾಲ್ಡೊ ಟು ಮೆಸ್ಸಿ: ಅತ್ಯಂತ ದುಬಾರಿ ವಾಚ್​ಗಳನ್ನು ಹೊಂದಿರುವ ವಿಶ್ವದ ಫುಟ್ಬಾಲ್​ ಆಟಗಾರರು ಇವರೇ ನೋಡಿ

2-0 ಅಂತರದೊಂದಿಗೆ ಮೊದಲ ವಿರಾಮದಲ್ಲಿ ಮುನ್ನಡೆ ಸಾಧಿಸಿದ ಆಸೀಸ್‌, ಆ ಬಳಿಕವೂ ಅದೇ ಮುನ್ನಡೆ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತವು ಎರಡು ಬಾರಿ ಗೋಲುಗಳನ್ನು ಗಳಿಸುವ ಸಮೀಪಕ್ಕೆ ಬಂದಿತು. ಆದರೆ ಈ ಎರಡೂ ಸಂದರ್ಭಗಳಲ್ಲಿಯೂ ಆಸ್ಟ್ರೇಲಿಯಾ ಗೋಲ್‌ಕೀಪರ್ ಆಂಡ್ರ್ಯೂ ಚಾರ್ಟರ್ ಭಾರತೀಯರ ಪ್ರಯತ್ನವನ್ನು ಸುಲಭವಾಗಿ ತಡೆದರು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತವು ಮೈದಾನದಲ್ಲಿ ಚುರುಕಾಗಿ ಮುಂದುವರೆಯಿತು. ಆದರೆ ಆಸ್ಟ್ರೇಲಿಯಾದ ಬಲಿಷ್ಠ ಡಿಫೆನ್ಸ್ ಮುಂದೆ ಭಾರತದ ಆಟ ನಡೆಯಲಿಲ್ಲ. ಗೋಲು ಗಳಿಸುವ ಅವಕಾಶವನ್ನೇ ಸೃಷ್ಟಿಸಲು ಸಾಧ್ಯವಾಗಲಿಲ್ಲ.

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತವು, ಪರ್ತ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಭಾನುವಾರ ಮತ್ತೆ ಆಸೀಸ್‌ ತಂಡವನ್ನು ಎದುರಿಸಲಿದೆ.