ಕನ್ನಡ ಸುದ್ದಿ  /  ಕ್ರೀಡೆ  /  ಬಹುನಿರೀಕ್ಷಿತ ಥಾಮಸ್ ಕಪ್-ಉಬರ್ ಕಪ್​ಗೆ ಭಾರತ ತಂಡ ಪ್ರಕಟ; ಹಿಂದೆ ಸರಿದ ಸ್ಟಾರ್ ಷಟ್ಲರ್ ಪಿವಿ ಸಿಂಧು

ಬಹುನಿರೀಕ್ಷಿತ ಥಾಮಸ್ ಕಪ್-ಉಬರ್ ಕಪ್​ಗೆ ಭಾರತ ತಂಡ ಪ್ರಕಟ; ಹಿಂದೆ ಸರಿದ ಸ್ಟಾರ್ ಷಟ್ಲರ್ ಪಿವಿ ಸಿಂಧು

India squad for Thomas and Uber cup : ಚೀನಾದ ಚೆಂಗ್ಡುದಲ್ಲಿ ಏಪ್ರಿಲ್ 27ರಿಂದ ಆರಂಭವಾಗುವ ಥಾಮಸ್ ಕಪ್ ಮತ್ತು ಉಬರ್​ ಕಪ್ ಟೂರ್ನಿಗೆ ಭಾರತ ಬ್ಯಾಡ್ಮಿಂಟನ್ ತಂಡವನ್ನು ಪ್ರಕಟಿಸಲಾಗಿದೆ.

ಬಹುನಿರೀಕ್ಷಿತ ಥಾಮಸ್ ಕಪ್-ಉಬರ್ ಕಪ್​ಗೆ ಭಾರತ ತಂಡ ಪ್ರಕಟ
ಬಹುನಿರೀಕ್ಷಿತ ಥಾಮಸ್ ಕಪ್-ಉಬರ್ ಕಪ್​ಗೆ ಭಾರತ ತಂಡ ಪ್ರಕಟ

ಏಪ್ರಿಲ್ 27 ರಿಂದ ಮೇ 5 ರವರೆಗೆ ಚೀನಾದ ಚೆಂಗ್ಡುದಲ್ಲಿ ನಡೆಯುವ ಮುಂಬರುವ ಬಿಡಬ್ಲ್ಯುಎಫ್​ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ 2024ಗಾಗಿ (Thomas Cup - Uber Cup 2024) ಪುರುಷರ ಮತ್ತು ಮಹಿಳಾ ತಂಡಗಳನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (BAI) ಪ್ರಕಟಿಸಿದೆ. ಆದರೆ ಈ ಪ್ರಮುಖ ಟೂರ್ನಿಯಿಂದ ಸ್ಟಾರ್ ಷಟ್ಲರ್ ಪಿವಿ ಸಿಂಧು (PV Sindhu) ಅವರು ಹಿಂದೆ ಸರಿದಿದ್ದಾರೆ. ಅಲ್ಲದೆ, ಮಹಿಳಾ ತಂಡಕ್ಕೆ ಕೇವಲ ಯುವ ಆಟಗಾರ್ತಿಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಥಾಮಸ್ ಕಪ್​ಗೆ 10 ಸದಸ್ಯರ ತಂಡವು ಐದು ಸಿಂಗಲ್ಸ್ ಆಟಗಾರರನ್ನು ಹೊಂದಿದೆ. ಈ ಪೈಕಿ ಕಿರಣ್ ಜಾರ್ಜ್, ಎಚ್‌ಎಸ್ ಪ್ರಣೋಯ್, ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ರಾಜಾವತ್ ಅವರು ಸಿಂಗಲ್​ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಶ್ವದ ನಂ. 1 ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಮತ್ತು ಎಂಆರ್ ಅರ್ಜುನ್-ಧ್ರುವ ಕಪಿಲಾ ಎರಡು ಜೋಡಿಗಳು ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದು, ಸಾಯಿ ಪ್ರತೀಕ್ ಇವರಿಗೆ ಬ್ಯಾಕಪ್ ಆಟಗಾರ.

ಆಟಗಾರರು ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರೆ 2024ರ ಪ್ಯಾರಿಸ್ ಒಲಿಂಪಿಕ್​ಗೆ ಅರ್ಹತೆ ಪಡೆಯಲಿದ್ದಾರೆ. ಹಾಗಾಗಿ ಹೆಚ್ಚುವರಿ ಸಿಂಗಲ್ಸ್ ಆಟಗಾರರನ್ನು ತಂಡದಲ್ಲಿ ಸೇರಿಸಲಾಗಿದೆ. ರಾಷ್ಟ್ರೀಯ ಮುಖ್ಯ ಕೋಚ್ ಪುಲೆಲ್ಲಾ ಗೋಪಿಚಂದ್, ಭಾರತದ ಮಾಜಿ ಅನುಭವಿಗಳಾದ ಯು. ವಿಮಲ್ ಕುಮಾರ್, ಜ್ವಾಲಾ ಗುಟ್ಟಾ, ಮಂಜುಷಾ ಕನ್ವರ್, ಪಾರ್ಥೋ ಗಂಗೂಲಿ ಮತ್ತು ಮಲ್ಲಿಕಾ ಬರುವಾ ಶರ್ಮಾ ಅವರನ್ನು ಒಳಗೊಂಡ ಆಯ್ಕೆ ಸಮಿತಿಯ ಆನ್‌ಲೈನ್ ಸಭೆಯ ನಂತರ ತಂಡವನ್ನು ನಿರ್ಧರಿಸಲಾಯಿತು.

ಭಾರತ ಪುರುಷರ ತಂಡ ಎರಡು ವರ್ಷಗಳ ಹಿಂದೆ ಥಾಯ್ಲೆಂಡ್‌ನಲ್ಲಿ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿ ತನ್ನ ಮೊದಲ ಥಾಮಸ್ ಕಪ್ ಕಿರೀಟವನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತ್ತು. ಉಬರ್ ಕಪ್‌ಗಾಗಿ ಯುವ ಆಟಗಾರರ್ತಿಯರಿಗೆ ಆದ್ಯತೆ ನೀಡಲಾಗಿದೆ. ಪಿವಿ ಸಿಂಧು ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸುವ ಸಲುವಾಗಿ ಉಬರ್ ಕಪ್​ನಿಂದ ಹಿಂದೆ ಸರಿದಿದ್ದಾರೆ. ಯುವ ಆಟಗಾರ್ತಿಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದು ಉತ್ತಮ ಅವಕಾಶವಾಗಿದೆ.

ಡಬಲ್ಸ್​ನಲ್ಲಿ ಅಗ್ರ ಎರಡು ಜೋಡಿಗಳನ್ನು ಆಯ್ಕೆ ಮಾಡಿದ ನಂತರ ಮಥಿಯಾಸ್ ಬೋ (ಡಬಲ್ಸ್ ಕೋಚ್) ಅವರೊಂದಿಗೆ ಸಮಾಲೋಚನೆ ನಡೆಸಿ ಸಾಯಿ ಪ್ರತೀಕ್ ಅವರನ್ನು ಹೆಚ್ಚುವರಿ ಡಬಲ್ಸ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಸಿಂಗಲ್ಸ್‌ನಲ್ಲಿ ನಾವು ಒಬ್ಬ ಹೆಚ್ಚುವರಿ ಆಟಗಾರನನ್ನು ಹೊಂದಬೇಕೆಂದು ಸಮಿತಿಯು ಭಾವಿಸಿದೆ. ಯಾರಾದರೂ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ ಅಥವಾ ಚೇತರಿಕೆಯ ಅಗತ್ಯವಿದ್ದಲ್ಲಿ ಹೆಚ್ಚುವರಿ ಆಟಗಾರರ ಅಗತ್ಯ ಇರಲಿದೆ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.

ಥಾಮಸ್ ಕಪ್ ತಂಡ

ಸಿಂಗಲ್ಸ್ : ಎಚ್ ಎಸ್ ಪ್ರಣೋಯ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಪ್ರಿಯಾಂಶು ರಾಜಾವತ್ ಮತ್ತು ಕಿರಣ್ ಜಾರ್ಜ್

ಡಬಲ್ಸ್ : ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ, ಎಂಆರ್ ಅರ್ಜುನ್, ಧ್ರುವ ಕಪಿಲ ಮತ್ತು ಸಾಯಿ ಪ್ರತೀಕ್

ಉಬರ್ ಕಪ್ ತಂಡ

ಸಿಂಗಲ್ಸ್ : ಅನ್ಮೋಲ್ ಖರ್ಬ್, ತನ್ವಿ ಶರ್ಮಾ, ಅಶ್ಮಿತಾ ಚಲಿಹಾ ಮತ್ತು ಇಶಾರಾಣಿ ಬರುವಾ

ಡಬಲ್ಸ್ : ಶ್ರುತಿ ಮಿಶ್ರಾ, ಪ್ರಿಯಾ ಕೊಂಜೆಂಗ್ಬಾಮ್, ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಠಾಕರ್.