ಕನ್ನಡ ಸುದ್ದಿ  /  ಕ್ರೀಡೆ  /  ಮುಂಬೈ ಸಿಟಿ ಎಫ್‌ಸಿ ಮಣಿಸಿ ಮೊಟ್ಟಮೊದಲ ಐಎಸ್‌ಎಲ್ ಲೀಗ್ ಶೀಲ್ಡ್ ಗೆದ್ದ ಮೋಹನ್ ಬಗಾನ್ ಸೂಪರ್ ಜೈಂಟ್ಸ್

ಮುಂಬೈ ಸಿಟಿ ಎಫ್‌ಸಿ ಮಣಿಸಿ ಮೊಟ್ಟಮೊದಲ ಐಎಸ್‌ಎಲ್ ಲೀಗ್ ಶೀಲ್ಡ್ ಗೆದ್ದ ಮೋಹನ್ ಬಗಾನ್ ಸೂಪರ್ ಜೈಂಟ್ಸ್

ISL League Shield: ಮುಂಬೈ ಸಿಟಿ ಎಫ್ ಸಿ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದ ಕೋಲ್ಕತಾದ ಮೋಹನ್ ಬಗಾನ್ ತಂಡವು, ಐಎಸ್‌ಎಲ್ 10ರ ಲೀಗ್ ಹಂತದ ಬಳಿಕ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ. ಲೀಗ್ ಶೀಲ್ಡ್ ತನ್ನದಾಗಿಸಿಕೊಂಡಿದೆ.

ಐಎಸ್‌ಎಲ್ ಲೀಗ್ ಶೀಲ್ಡ್ ಗೆದ್ದ ಮೋಹನ್ ಬಗಾನ್ ಸೂಪರ್ ಜೈಂಟ್ಸ್
ಐಎಸ್‌ಎಲ್ ಲೀಗ್ ಶೀಲ್ಡ್ ಗೆದ್ದ ಮೋಹನ್ ಬಗಾನ್ ಸೂಪರ್ ಜೈಂಟ್ಸ್ (PTI)

ಮೋಹನ್ ಬಗಾನ್ ಸೂಪರ್ ಜೈಂಟ್ (Mohun Bagan Super Giant) ತಂಡವು ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯನ್ನು (Mumbai City FC 2-1 ಗೋಲುಗಳಿಂದ ಸೋಲಿಸುವ ಮೂಲಕ, ಮೊಟ್ಟ ಮೊದಲ ಐಎಸ್‌ಎಲ್ ಲೀಗ್ ಶೀಲ್ಡ್ (ISL League Shield) ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ 2024-25ರ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2ರ (AFC Champions League 2) ಗುಂಪು ಹಂತಗಳಲ್ಲಿ ನೇರವನ್ನು ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಇಂಡಿಯನ್ ಸೂಪರ್ ಲೀಗ್ (ISL) 2023-24ರ ಅಂತಿಮ ಲೀಗ್ ಪಂದ್ಯದಲ್ಲಿ ಮೋಹನ್ ಬಗಾನ್ ಸೂಪರ್ ಜೈಂಟ್ ರೋಚಕ ಜಯ ದಾಖಲಿಸಿದೆ. ಏಪ್ರಿಲ್‌ 15ರ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ 2-1 ಅಂತರದಿಂದ ಗೆಲುವಿನ ನಗಾರಿ ಬಾರಿಸಿತು. ಕೋಲ್ಕತ್ತಾ ಮೂಲದ ಹಾಲಿ ಐಎಸ್‌ಎಲ್‌ ಚಾಂಪಿಯನ್‌ ತಂಡವು, ತನ್ನ ಮೊದಲ ಲೀಗ್ ಶೀಲ್ಡ್ ಗೆದ್ದುಕೊಂಡಿತು. ಲಿಸ್ಟನ್ ಕೊಲಾಕೊ ಮೊದಲಾರ್ಧದಲ್ಲಿ ಗೋಲು ಗಳಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆ ಬಳಿಕ ಬದಲಿ ಆಟಗಾರನಾಗಿ ಕಣಕ್ಕಿಳಿದ ಜೇಸನ್ ಕಮ್ಮಿಂಗ್ಸ್ ದ್ವಿತೀಯಾರ್ಧದಲ್ಲಿ ಮತ್ತೊಂದು ಅಂಕ ಕಲೆ ಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

61,177 ಅಭಿಮಾನಿಗಳ ಮುಂದೆ ಸ್ಮರಣೀಯ ವಿಜಯ

ಭಾರತದ ಅತಿ ದೊಡ್ಡ ಫುಟ್ಬಾಲ್ ಕ್ರೀಡಾಂಗಣವಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಬರೋಬ್ಬರಿ 61,177 ಅಭಿಮಾನಿಗಳ ಮುಂದೆ ತವರಿನ ತಂಡ ಗೆಲುವಿನ ನಗೆ ಬೀರಿದೆ. ಐಎಸ್‌ಎಲ್‌ನಲ್ಲಿ ಮುಂಬೈ ಸಿಟಿ ವಿರುದ್ಧದ ಈ ಹಿಂದಿನ ಎಂಟು ಪಂದ್ಯಗಳಲ್ಲಿ‌ ಆರರಲ್ಲಿ ಸೋತು ಉಳಿದ ಎರಡನ್ನು ಡ್ರಾ ಮಾಡಿಕೊಂಡಿದ್ದ ಮೋಹನ್ ಬಗಾನ್‌, ಅಂತಿಮವಾಗಿ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಒಲಿಸಿಕೊಂಡಿತು.

ಇದನ್ನೂ ಓದಿ | ಐದನೇ ಪಂದ್ಯದಲ್ಲೂ ಸೋಲು; ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ ಭಾರತ ಹಾಕಿ ತಂಡ

ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ, 2-1ರಿಂದ ಸೋತಿದ್ದ ಮೋಹನ್ ಬಗಾನ್ ಎಸ್‌ಜಿ, ಇದೀಗ ಮಹತ್ವದ ಪಂದ್ಯದಲ್ಲೇ ಅಷ್ಟೇ ಅಂಕಗಳೊಂದಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದು ಕೂಡಾ ತವರು ನೆದ ಅತಿ ದೊಡ್ಡ ಮೈದಾನದಲ್ಲಿ ದಾಖಲೆಯ ಕ್ರೀಡಾಭಿಮಾನಿಗಳ ನಡುವೆ ಸ್ಮರಣೀಯ ಗೆಲುವನ್ನು ತನ್ನದಾಗಿಸಿತು.

ಮೋಹನ್ ಬಗಾನ್ ತಂಡವು 22 ಪಂದ್ಯಗಳಿಂದ 48 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಇದೇ ವೇಳೆ 47 ಅಂಕ ಗಳಿಸಿದ್ದ ಮುಂಬೈ ಸಿಟಿಯನ್ನು ಹಿಂದಿಕ್ಕಿತು. ಲೀಗ್‌ ಶೀಲ್ಡ್ ಎತ್ತಿಹಿಡಿದು ಸಂಭ್ರಮಿಸುವ ಜೊತೆಗೆ, ಐಎಸ್‌ಎಲ್‌ನ ಹಾಲಿ ಚಾಂಪಿಯನ್ ಕೂಡಾ ಆಗಿರುವ ಮೋಹನ್ ಬಗಾನ್ ತಂಡವು, ಎಎಫ್‌ಸಿ ಚಾಂಪಿಯನ್ಸ್ ಲೀಗ್ 2ಗೆ ಟಿಕೆಟ್ ಕೂಡಾ ಸಂಪಾದಿಸಿತು.