Kannada News  /  Sports  /  Najam Sethi Calls For Support Of Other Acc Members
ನಜಮ್ ಸೇಥಿ, ಜಯ್ ಶಾ
ನಜಮ್ ಸೇಥಿ, ಜಯ್ ಶಾ

Najam Sethi: 'ಬಿಸಿಸಿಐ ಹಣಬಲದೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವ ಹೊಂದಿದೆ'; ಎಸಿಸಿ ಸದಸ್ಯರ ಬೆಂಬಲಕ್ಕೆ ಪಿಸಿಬಿ ಕರೆ

19 March 2023, 9:14 ISTHT Kannada Desk
19 March 2023, 9:14 IST

“ಎಸಿಸಿಯ ಇತರ ಸದಸ್ಯರು ಏಷ್ಯಾಕಪ್‌ನಲ್ಲಿ ನಮ್ಮ ನಿಲುವನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯ. ಅವರು ಏನು ಯೋಚಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಆದರೆ ಅಂತಿಮವಾಗಿ ಬಿಸಿಸಿಐ ತನ್ನ ಆರ್ಥಿಕ ಶಕ್ತಿಯೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ”

ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸದಸ್ಯರು ನಾಳೆ ದುಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಿ, 2023ರ ಏಷ್ಯಾಕಪ್ ಪಂದ್ಯಾವಳಿಯ ಆತಿಥ್ಯದ ಕುರಿತು ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ. ಎಸಿಸಿ ಮತ್ತು ಐಸಿಸಿ ಸಭೆಗೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮುಖ್ಯಸ್ಥ ನಜಮ್ ಸೇಥಿ ಎಸಿಸಿಯ ಇತರ ಸದಸ್ಯರ ಬೆಂಬಲಕ್ಕೆ ಕರೆ ನೀಡಿದ್ದಾರೆ. ಇದೇ ವೇಳೆ ಅವರು ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐ ಭಾರಿ ಪ್ರಭಾವ ಹೊಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಎಸಿಸಿ ಮುಖ್ಯಸ್ಥ ಮತ್ತು ಬಿಸಿಸಿಐ ಕಾರ್ಯದರ್ಶಿ ಆಗಿರುವ ಜಯ್ ಶಾ ಅವರು ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಇದೇ ವೇಳೆ ಆತಿಥ್ಯದ ಸ್ಥಳ ಬದಲಾವಣೆಗೆ ಒತ್ತಾಯಿಸಿದ್ದರು. ಇದೇ ಟೂರ್ನಿಯ ಆತಿಥ್ಯದ ಹಕ್ಕನ್ನು ತಮ್ಮಿಂದ ಕಿತ್ತುಕೊಂಡರೆ, ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಹೇಳುವ ಮೂಲಕ ಪಾಕಿಸ್ತಾನ ಕೂಡಾ ಪ್ರತೀಕಾರ ತೀರಿಸಿಕೊಂಡಿತ್ತು.

“ಎಸಿಸಿಯ ಇತರ ಸದಸ್ಯರು ಏಷ್ಯಾಕಪ್‌ನಲ್ಲಿ ನಮ್ಮ ನಿಲುವನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯ. ಅವರು ಏನು ಯೋಚಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಆದರೆ ಅಂತಿಮವಾಗಿ ಬಿಸಿಸಿಐ ತನ್ನ ಆರ್ಥಿಕ ಶಕ್ತಿಯೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ” ಎಂದು ಎಸಿಸಿ ಮತ್ತು ಐಸಿಸಿ ಸಭೆಗಳಲ್ಲಿ ಭಾಗವಹಿಸಲು ದುಬೈಗೆ ನಿರ್ಗಮಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಸೇಥಿ ಹೇಳಿದ್ದಾರೆ.

“ನಾನು ಎಸಿಸಿಯ ಹಿರಿಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ. ನಮ್ಮ ಸಮಸ್ಯೆಗಳ ಬಗ್ಗೆ ನಾನು ಅವರಿಗೆ ತಿಳಿಸಿದ್ದೇನೆ ಮತ್ತು ನಾವು ಸಮಸ್ಯೆಗಳಿಗೆ ಗೌರವಯುತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ,” ಎಂದು ಅವರು ಹೇಳಿದರು.

ಎಸಿಸಿ ಕಳೆದ ತಿಂಗಳು ಇದೇ ವಿಷಯದ ಬಗ್ಗೆ ಸಭೆ ನಡೆಸಿತ್ತು. ಆದರೆ ಅದರ ನಂತರ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಕೆಲ ವರದಿಗಳ ಪ್ರಕಾರ, ಏಷ್ಯಾ ಕಪ್‌ಗೆ ಪರ್ಯಾಯ ಆಥಿತ್ಯ ಸ್ಥಳವಾಗಿ ಯುಎಇ ಆಯ್ಕೆಯಾಗಿದೆ ಎಂದು ಹೇಳಲಾಗಿದೆ. ಆತಿಥ್ಯದ ಹಕ್ಕು ಪಾಕಿಸ್ತಾನದೊಂದಿಗೆ ಇರಲಿದ್ದು, ಅದು ಅರಬ್‌ ರಾಷ್ಟ್ರದಲ್ಲಿ ಪಂದ್ಯಗಳನ್ನು ನಡೆಸಲಿದೆ.

"ನಾನು ಬಿಸಿಸಿಐ ಕಾರ್ಯದರ್ಶಿ ಮತ್ತು ಎಸಿಸಿ ಅಧ್ಯಕ್ಷ ಜಯ್ ಶಾ ಅವರೊಂದಿಗೂ ಮಾತನಾಡುತ್ತೇನೆ. ಸಭೆಗಳು ಹೇಗೆ ನಡೆಯುತ್ತವೆ ಎಂಬುದನ್ನು ನಾನು ನೋಡುತ್ತೇನೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ನಾವು ನಮ್ಮ ತಂಡವನ್ನು ವಿಶ್ವಕಪ್‌ಗಾಗಿ ಭಾರತಕ್ಕೆ ಕಳುಹಿಸುತ್ತೇವೆಯೇ ಎಂಬುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಸೇಥಿ ಹೇಳಿದ್ದಾರೆ.

“ನಮ್ಮ ಮುಂದೆ ಕೆಲ ಸಂಕೀರ್ಣ ಸಮಸ್ಯೆಗಳಿವೆ. ಆದರೆ ನಾನು ಎಸಿಸಿ ಮತ್ತು ಐಸಿಸಿ ಸಭೆಗಳಲ್ಲಿ ನಮ್ಮ ಮುಂದಿರುವ ಎಲ್ಲಾ ಆಯ್ಕೆಗಳನ್ನು ತೆರೆದಿಡುತ್ತೇನೆ. ನಾವು ಈಗ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ.” ಎಂದು ನಜಮ್ ಸೇಥಿ ಹೇಳಿದ್ದಾರೆ.