ಕನ್ನಡ ಸುದ್ದಿ  /  ಕ್ರೀಡೆ  /  Virat Kohli Gesture: ನೆಟ್ಟಿಗರ ಹೃದಯ ಗೆದ್ದ ವಿರಾಟ್‌, ಅರ್ಧಶತಕಕ್ಕೆ ಒಂದು ರನ್‌ ಬೇಕಿದ್ದಾಗ ಕಿಂಗ್‌ ಮಾಡಿದ್ದು ಹೀಗೆ

Virat Kohli Gesture: ನೆಟ್ಟಿಗರ ಹೃದಯ ಗೆದ್ದ ವಿರಾಟ್‌, ಅರ್ಧಶತಕಕ್ಕೆ ಒಂದು ರನ್‌ ಬೇಕಿದ್ದಾಗ ಕಿಂಗ್‌ ಮಾಡಿದ್ದು ಹೀಗೆ

virat kohli dinesh karthik : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಜಯ ಗಳಿಸಿದೆ. ಬೃಹತ್‌ ಮೊತ್ತ ದಾಖಲಾದ ಈ ಪಂದ್ಯದಲ್ಲಿ, ಕೊನೆಯವರೆಗೂ ಪ್ರಬಲ ಹೋರಾಟ ನಡೆಸಿದ ಹರಿಣಗಳು ಅಂತಿಮವಾಗಿ ಸೋಲೊಪ್ಪಿಕೊಂಡಿದ್ದಾರೆ. ಸತತ ಎರಡು ಜಯ ದಾಖಲಿಸಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೊದಲ ಬಾರಿಗೆ ತವರಿನಲ್ಲಿ ದ್ವಿಪಕ್ಷೀಯ ಸರಣಿ ಗೆದ್ದಿದ್ದಾರೆ.

ವಿರಾಟ್‌ ನಡೆಗೆ ಅಭಿಮಾನಿಗಳು ಫಿದಾ
ವಿರಾಟ್‌ ನಡೆಗೆ ಅಭಿಮಾನಿಗಳು ಫಿದಾ

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ 16 ರನ್‌ಗಳ ಜಯ ದಾಖಲಿಸಿದ ಟೀಂ ಇಂಡಿಯಾ, ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ರೋಚಕ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ಉಭಯ ತಂಡಗಳಿಂದ ಬೃಹತ್‌ ಮೊತ್ತ ದಾಖಲಾಗಿರುವುದು ಒಂದೆಡೆಯಾದರೆ, ಕೆಲವೊಂದು ಅಪರೂಪದ ಸನ್ನಿವೇಶಗಳಿಗೂ ಈ ಪಂದ್ಯ ಸಾಕ್ಷಿಯಾಯ್ತು.

ಭಾರತದ ಇನ್ನಿಂಗ್ಸ್ ವೇಳೆ ಮೈದಾನದ ಎಲ್ಲಾ ಮೂಲೆಗಳಲ್ಲೂ ಬೌಂಡರಿ ಸಿಕ್ಸರ್‌ಗಳ ಸುರಿಮಳೆಯಾಯ್ತು. ಸ್ಫೋಟಕ್‌ ಆಟಗಾರ ಸೂರ್ಯಕುಮಾರ್ ಯಾದವ್, ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ತಲಾ ಐದು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 61 ರನ್‌ ಸಿಡಿಸಿದರು. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಸೂರ್ಯಕುಮಾರ್ ನಿರ್ಗಮಿಸಿದಾಗ, ಕೊಹ್ಲಿ ಆಕ್ರಮಣಕಾರಿ ಆಟವನ್ನು ಅನುಸರಿಸಿದರು. ಅಂತಿಮವಾಗಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇ ರೀತಿ ಅರ್ಧಶತಕ ವಂಚಿತರಾದರು.

ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಸ್ಟ್ರೈಕ್‌ನಲ್ಲಿದ್ದರು. ಈ ವೇಳೆ ಸಿಂಗಲ್‌ ಪಡೆದು ವಿರಾಟ್‌ ಸ್ಟ್ರೈಕ್‌ಗೆ ಬರಬಹುದಿತ್ತು. ಆ ಮೂಲಕ ಅರ್ಧಶತಕ ಸಿಡಿಸುವ ಅವಕಾಶವಿತ್ತು. ಆದರೆ ಅರ್ಧಶತಕ ವಿರಾಟ್‌ಗೆ ಅಗತ್ಯವಿರಲಿಲ್ಲ. ನನಗೆ ಅರ್ಧಶತಕದ ಅಗತ್ಯವಿಲ್ಲ. ನೀನು ಆಡು ಎಂಬ ರೀತಿಯಲ್ಲಿ ವಿರಾಟ್‌ ದಿನೇಶ್‌ ಕಾರ್ತಿಕ್‌ಗೆ ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಅರ್ಧಶತಕಕ್ಕೆ ಒಂದು ರನ್‌ ಅಗತ್ಯವಿದ್ದರೂ, ಕೊಹ್ಲಿ ಡಿಕೆಗೆ ಸ್ಟ್ರೈಕ್‌ ಉಳಿಸಿಕೊಳ್ಳಲು ಹೇಳಿದ್ದಾರೆ. ಆ ಓವರ್‌ನಲ್ಲಿ ಡಿಕೆ ಬರೋಬ್ಬರಿ 18 ರನ್‌ ಬರುವಂತೆ ಮಾಡಿದ್ದಾರೆ. ಕಗಿಸೊ ರಬಾಡ ಎಸೆದ ಮೊದಲ ಎಸೆತ ಡಾಟ್‌ ಆದರೆ, ಎರಡನೇ ಎಸೆತದಲ್ಲಿ ಬೌಂಡರಿಯೊಂದಿಗೆ ರನ್‌ ಗಳಿಕೆ ಆರಂಭವಾಯ್ತು. ಓವರ್‌ನ ನಾಲ್ಕನೇ ಹಾಗೂ ಐದನೇ ಎಸೆಗಳಲ್ಲಿ ಎರಡು ಸಿಕ್ಸರ್‌ಗಳು ಡಿಕೆ ಬ್ಯಾಟ್‌ನಿಂದ ಸಿಡಿದವು. ಈ ನಡುವೆ ಸಿಂಗಲ್‌ ತೆಗೆಯಬೇಕಾ ಎಂದು ಕೇಳಲು ಡಿಕೆ ಕೊಹ್ಲಿಯ ಬಳಿ ಹೋದರು. ಆದರೆ ಕಿಂಗ್‌ ಕೊಹ್ಲಿ ಮಾತ್ರ ನಿಸ್ವಾರ್ಥವಾಗಿ ಅದನ್ನು ನಿರಾಕರಿಸಿದಾರೆ. ಕಾರ್ತಿಕ್ ಸ್ಟ್ರೈಕ್‌ನಲ್ಲಿ ಉಳಿದು, ಭರ್ಜರಿಯಾಗಿ ಇನ್ನಿಂಗ್ಸ್ ಮುಗಿಸಲು ಕೇಳಿಕೊಂಡಿದ್ದಾರೆ. ಕೊಹ್ಲಿಯ ಉದಾರತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಅಂತಿಮ ಓವರ್‌ನಲ್ಲಿ ಕಾರ್ತಿಕ್‌ ಬ್ಯಾಟ್‌ನಿಂದ 16 ರನ್‌ ಸಿಡಿಯುವ ಮೂಲಕ ಭಾರತದ ಮೊತ್ತ 237 ಆಯ್ತು. ವಿಶೇಷವೆಂದರೆ, ಅಂತಿಮ ಓವರ್‌ನಲ್ಲಿ ಕಾರ್ತಿಕ್‌ ಸಿಡಿಸಿದ ಈ 16 ರನ್‌ಗಳ ಅಂತರದಿಂದಲೇ ಭಾರತ ನಿನ್ನೆಯ ಪಂದ್ಯ ಗೆದ್ದಿತು.

ಭಾರತ ನೀಡಿದ 238 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ, ಆರಂಭದಲ್ಲೇ ಎರಡೆರಡು ವಿಘ್ನ ಎದುರಾಯ್ತು. ನಾಯಕ ಬವುಮಾ 7 ಎಸೆತಗಳನ್ನು ವ್ಯರ್ಥ ಮಾಡಿ ಶೂನ್ಯಕ್ಕೆ ನಿರ್ಗಮಿಸಿದರೆ, ರಿಲಿ ರೋಸೋ ಕೂಡಾ ಇವರ ಹಿಂದೆಯೇ ಡಕೌಟ್‌ ಆದರು. ಅಬ್ಬರಿಸುವ ಸುಳಿವು ನೀಡಿದ ಏಡನ್‌ ಮರ್ಕ್ರಾಮ್‌ 33 ರನ್‌ ಸಿಡಿಸಿ ಔಟಾದರು. 6.2 ಓವರ್‌ಗಳಲ್ಲಿ 47 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಹರಿಣಗಳ ಬಳಗಕ್ಕೆ ಕ್ರೀಸ್‌ಕಚ್ಚಿ ಆಡುವ ಅವಶ್ಯಕತೆ ಇತ್ತು. ಆಗ ಒಂದಾಗಿದ್ದೇ ಕಾಕ್‌ ಮತ್ತು ಮಿಲ್ಲರ್‌ ಜೋಡಿ. ಇವರಿಬ್ಬರೂ ಭಾರತದ ಬೆವರಿಳಿಸಿದ್ರು. ಭರ್ಜರಿ ಜತೆಯಾಟ ನೀಡಿ, ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದ್ರು. ಕ್ವಿಂಟನ್‌ 69 ರನ್‌ ಸಿಡಿಸಿದರೆ, ಮಿಲ್ಲರ್‌ ಶತಕ ಸಿಡಿಸಿದರು.

ಅಕ್ಟೋಬರ್ 5 ರಂದು ಇಂದೋರ್‌ನಲ್ಲಿ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಲಿದೆ. ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧಿಸುವ ನಿರೀಕ್ಷೆಯಲ್ಲಿ ಭಾರತವಿದೆ. ಮತ್ತೊಂದೆಡೆ ವೈಟ್‌ವಾಶ್ ತಪ್ಪಿಸುವ ಪ್ರಯತ್ನವನ್ನು ಹರಿಣಗಳು ಮಾಡಲಿದ್ದಾರೆ.

ವಿಭಾಗ