ಕನ್ನಡ ಸುದ್ದಿ  /  Sports  /  Wpl 2023: With No Sponsors Kiran Navgire Writes 'Msd 07' On Her Bat Smashes Fifty Vs Gg

Kiran Navgire: ಬ್ಯಾಟ್​​​ಗೆ ಸ್ಪಾನರ್​​​ ಸಿಗದಿದ್ರೆ ಏನಂತೆ, ಧೋನಿ ಹೆಸರಲ್ಲೇ ಈಕೆ ಪವರ್​ಫುಲ್​ ಪ್ರದರ್ಶನ..!

ಕಿರಣ್​ ನವಗಿರೆ ಅವರು ಯುಪಿ ವಾರಿಯರ್ಸ್​ ತಂಡದ ಪರ ಅಬ್ಬರದ ಪ್ರದರ್ಶನ ನೀಡಿದರು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು. ಆದರೆ ಪಂದ್ಯದ ವೇಳೆ ಅವರ ಬ್ಯಾಟ್​​​ನಲ್ಲಿ MSD 07 ಎಂದು ಬರೆದಿರುವುದು ಸಾಕಷ್ಟು ವೈರಲ್​ ಆಗುತ್ತಿದೆ.

ಕಿರಣ್​ ನವಗಿರೆ
ಕಿರಣ್​ ನವಗಿರೆ (Cricktracker/Twitter)

ಮಹಿಳಾ ಪ್ರೀಮಿಯರ್ ಲೀಗ್ (WPL) ರೋಚಕತೆಯಿಂದ ಸಾಗುತ್ತಿದೆ. ಅದರಲ್ಲೂ 3ನೇ ಪಂದ್ಯವಂತೂ ಒಂದು ಕ್ಷಣ ಭೂಮಿಯ ಮೇಲೆ ನಿಲ್ಲದಂತೆ ಮಾಡಿತು. ಅಷ್ಟು ರೋಚಕತೆಯಿಂದ ಕೂಡಿತ್ತು ಯುಪಿ ವಾರಿಯರ್ಸ್​​ - ಗುಜರಾತ್​ ಜೈಂಟ್ಸ್​ (UP Warriorz - Gujarat Gaints) ಪಂದ್ಯ.! ರೋಚಕ ಹಣಾಹಣಿಯಲ್ಲಿ ಯುಪಿ ವಾರಿಯರ್ಸ್ 1 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಇದರೊಂದಿಗೆ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು.

ಗೆಲುವು ಕೊಟ್ಟಿದ್ದು ಗ್ರೇಸ್.. ಟ್ರೆಂಡ್​ ಆಗುತ್ತಿರುವುದು ಕಿರಣ್

ಕೊನೆಯ 4 ಓವರ್​​​ಗಳಲ್ಲಿ ಯಪಿ ತಂಡಕ್ಕೆ ಬರೋಬ್ಬರಿ 63 ರನ್​​ಗಳ ಅಗತ್ಯ ಇತ್ತು. ಆದರಿದು ಅಸಾಧ್ಯವಾದ ಚೇಸ್. ಇಷ್ಟು ರನ್​ ಬೆನ್ನತ್ತುವುದು ಅಷ್ಟು ಸುಲಭವಲ್ಲ. ಇದನ್ನು ಸಾಧ್ಯವಾಗಿಸಿದ್ದು ಗ್ರೇಸ್​​​​​ ಹ್ಯಾರಿಸ್​. (Grace Harries) ಬೌಂಡರಿ - ಸಿಕ್ಸರ್​ಗಳಿಂದಲೇ ಬೌಲರ್​​​ಗಳನ್ನು ಡೀಲ್​ ಮಾಡಿದ ಹ್ಯಾರಿಸ್​, 25 ಎಸೆತಗಳಲ್ಲಿ 59 ರನ್​ ಚಚ್ಚಿದರು. ಪಂದ್ಯಕ್ಕೆ ಅಮೋಘ, ಅದ್ಭುತ ಗೆಲುವನ್ನೂ ತಂದುಕೊಟ್ಟು ಹೀರೋ ಆದರು.

ಆದರೆ ಇಷ್ಟು ದೊಡ್ಡ ಗೆಲುವು ತಂದುಕೊಟ್ಟ ಗ್ರೇಸ್​​​ ಹ್ಯಾರಿಸ್​​​​ ಅವರಿಗಿಂತ ಮಿಡಲ್​ ಆರ್ಡರ್​​​ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದ ಕಿರಣ್​​​​​ ನವಗಿರೆ (Kiran Navgire) ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡ್​ ಆಗುತ್ತಿದ್ದಾರೆ. ಇವರ ಬಗ್ಗೆಯೇ ಹೆಚ್ಚು ಚರ್ಚೆ ನಡೀತಿದೆ. ಅದಕ್ಕೆ ಕಾರಣ ಟೀಮ್​ ಇಂಡಿಯಾ ಮಾಜಿ ನಾಯಕ MS ಧೋನಿ. ಅರೆ ಧೋನಿಗೂ, ಕಿರಣ್​​ ಅವರು ಟ್ರೆಂಡ್​ ಆಗುತ್ತಿರುವುದಕ್ಕೂ ಏನು ಸಂಬಂಧ ನಿಮಗೆ ಅನಿಸಬಹುದು. ಅದಕ್ಕೆ ಉತ್ತರ ನಾವು ಕೊಡುತ್ತೇವೆ.

ಬ್ಯಾಟ್​​ನಲ್ಲಿ ಧೋನಿ ಹೆಸರು..!

170 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಯುಪಿ ವಾರಿಯರ್ಸ್​​​​​, 20 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕಿರಣ್​ ನವಗಿರೆ, ಭರ್ಜರಿ ಪ್ರದರ್ಶನ ನೀಡಿದರು. ಕಿರಣ್ ಒಂದು ತುದಿಯಿಂದ ರನ್ ಗಳ ಸುರಿಮಳೆಗೈದರು. 43 ಎಸೆತಗಳಲ್ಲಿ 53 ರನ್ ಗಳಿಸಿ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಇದು ರನ್​​ ಚೇಸ್​ ಮಾಡಲು ನೆರವಾಯಿತು.

ಆದರೆ ಅವರು ಔಟ್​ ಆಗಿ ಪೆಲಿವಿಯನ್​ ಸೇರಿದ ಬಳಿಕ ಬ್ಯಾಟ್​ ಮೇಲಿನ ಹೆಸರು ಭಾರೀ ವೈರಲ್​ ಆಗುತ್ತಿದೆ. ಆಕೆಯ ಬ್ಯಾಟ್​​ ಮೇಲೆ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಹೆಸರು ಮತ್ತು ಧೋನಿ ಜೆರ್ಸಿ ಸಂಖ್ಯೆ MSD 07 ಬರೆದುಕೊಂಡಿದ್ದಾರೆ. ಅವರ ಬ್ಯಾಟಿಂಗ್​​ಗೆ ಧೋನಿಯೇ ಸ್ಫೂರ್ತಿ ಎಂಬುದುನ್ನು ಆ ಮೂಲಕ ಹೊರ ಹಾಕಿದ್ದಾರೆ. ಬ್ಯಾಟ್​​ಗೆ ಯಾವುದೇ ಸ್ಪಾನ್ಸರ್​​ಶಿಪ್​ ಸಿಗದಿದ್ದರೂ, ಧೋನಿ ಹೆಸರು ಬರೆದೇ ಅಬ್ಬರದ ಅರ್ಧಶತಕ ಸಿಡಿಸಿ, ಫುಲ್​ ಟ್ರೆಂಡಿಂಗ್​​ನಲ್ಲಿದ್ದಾರೆ.

2011ರಿಂದ ಧೋನಿಯನ್ನು ಫಾಲೋ ಮಾಡುತ್ತಿದ್ದೇನೆ!

ಭಾರತ ತಂಡ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಿದ್ದು ಗೊತ್ತೇ ಇದೆ. ಅಂದಿನಿಂದ ಧೋನಿ ಅವರನ್ನು ಹಿಂಬಾಲಿಸಲು ಆರಂಭಿಸಿದ್ದೇನೆ ಎಂದು ಡಬ್ಲ್ಯುಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಕಿರಣ್ ನವಗಿರೆ ಹೇಳಿದ್ದರು. ಆದರೆ ಆಗ ನನಗೆ ಮಹಿಳಾ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಅಲ್ಲಿಯವರೆಗೆ ನಾನು ಕ್ರಿಕೆಟ್ ಆಡುವ ಪುರುಷರನ್ನು ಮಾತ್ರ ನೋಡಿದ್ದೆ ಎಂದಿದ್ದರು.

ಕಿರಣ್ ನಾವಗಿರೆ ಅವರಿಗೆ ಈಗ 27 ವರ್ಷ. ಹುಟ್ಟಿದ್ದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ. ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ನಾಗಾಲ್ಯಾಂಡ್ ತಂಡದ ಪರ ಆಡುತ್ತಿದ್ದಾರೆ. ಕಿರಣ್ ತಂದೆ ಕೃಷಿಕರು ಮತ್ತು ತಾಯಿ ಗೃಹಿಣಿ. ಇದಲ್ಲದೆ ಕಿರಣ್‌ಗೆ ಇಬ್ಬರು ಸಹೋದರರೂ ಇದ್ದಾರೆ. ಕಿರಣ್ 2022 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಇಲ್ಲಿಯವರೆಗೆ ಅವರು 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.