ಮಾಲ್ಡೀವ್ಸ್ ಪ್ರವಾಸೋದ್ಯಮ ಬಹಿಷ್ಕಾರ ಕರೆಗೆ ಬಾಲಿವುಡ್ ಸೆಲೆಬ್ರಿಟಿಗಳ ಬೆಂಬಲ; ಭಾರತವನ್ನು ಅನ್ವೇಷಿಸಿ ಅಂದ್ರು ಸಿನಿ ತಾರೆಯರು
Jan 07, 2024 05:26 PM IST
ಲಕ್ಷದ್ವೀಪ
ಮಾಲ್ಡಿವ್ಸ್ ಸಚಿವರೊಬ್ಬರ ಹೇಳಿಕೆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ boycott maldives ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಭಾರತದ ಬಾಲಿವುಡ್ ಸಿನಿಮಾ ನಟರಾದ ಅಕ್ಷಯ್ ಕುಮಾರ್, ಜಾನ್ ಅಬ್ರಾಹಂ ಸೇರಿದಂತೆ ಸಾಕಷ್ಟು ಜನರು ಬೈಕಾಟ್ ಮಾಲ್ಡೀವ್ಸ್ ಕರೆಗೆ ಬೆಂಬಲ ಸೂಚಿಸಿದ್ದಾರೆ.
ದ್ವೀಪರಾಷ್ಟ್ರ ಮಾಲ್ಡೀವ್ಸ್‌ನ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಮಾಲ್ಡೀವ್ಸ್ ಮತ್ತು ಅಲ್ಲಿನ ಪ್ರವಾಸಿ ತಾಣಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವ ಆನ್‌ಲೈನ್ ಅಭಿಯಾನಕ್ಕೆ ಭಾರತದ ಹಲವು ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಇದರಿಂದ ಪ್ರವಾಸಿಗರಿಗೆ ಲಕ್ಷದ್ವೀಪದ ಕುರಿತು ಆಸಕ್ತಿ ಹೆಚ್ಚಾಗಿತ್ತು. ಇದೇ ಸಮಯದಲ್ಲಿ ಮೋದಿ ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಲಕ್ಷದ್ವೀಪದ ಸುಂದರ ಕಡಲತೀರಗಳಲ್ಲಿ ಸುತ್ತಾಡಿ, ಫೋಟೋಗಳನ್ನು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಮುದ್ರದಲ್ಲಿ ಸ್ನೋರ್ಕೆಲಿಂಗ್ ಮಾಡುತ್ತಿದ್ದ ಮೋದಿಯವರ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೋದಿಯವರು ಲಕ್ಷದ್ವೀಪದ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಈ ಪ್ರಯತ್ನವು ಮಾಲ್ಡೀವ್ಸ್‌ನ ಕೆಲವು ಜನರನ್ನು ಕೆರಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ನೀಡಿದ ಭೇಟಿಯ ಕುರಿತು ಮಾಲ್ಡೀವ್ಸ್ ಸಚಿವೆ ಮರಿಯಮ್ ಶಿಯುನಾ ಅವರು ಅಪಹಾಸ್ಯ ಮಾಡಿದ್ದರು. ಲಕ್ಷದ್ವೀಪಕ್ಕೆ ಭೇಟಿ ನೀಡುವ ಬದಲು ಮಾಲ್ಡೀವ್ಸ್‌ಗೆ ಬನ್ನಿ ಎಂದು ಪ್ರವಾಸಿಗರನ್ನು ಆಹ್ವಾನಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಜನಾಂಗೀಯ ಕಾಮೆಂಟ್‌ಗಳನ್ನು ಮಾಡಿದ್ದರು. ಬಳಿಕ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಅಳಿಸಿದ್ದರು.
ಈ ರೀತಿ ಮಾಲ್ಡೀವ್ಸ್‌ನಲ್ಲಿ ಹಲವು ಜನಾಂಗೀಯ ನಿಂದನೆಯ, ಅವಹೇಳನಕಾರಿ ಹೇಳಿಕೆಗಳು ಹೊರಬಿದ್ದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಮಾಲ್ಡೀವ್ಸ್ ಟ್ರೆಂಡ್‌ನಲ್ಲಿದೆ. ಸಿನಿ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಹಲವು ಜನರು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. "ಭಾರತೀಯರು ಮಾಲ್ಡೀವ್ಸ್ ಕುರಿತು ಈಗ ನಿರ್ಣಯ ತೆಗೆದುಕೊಳ್ಳಬೇಕಾದ ಸಮಯ. ಮಾಲ್ಡೀವ್ಸ್ ಭಾರತದಿಂದ ಹೊರಗುಳಿಯುವ ಸಮಯ. ಮಾಲ್ಡೀವ್ಸ್ ಇದಕ್ಕೆ ಮತ ಚಲಾಯಿಸಿದೆ. ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವುದು ಭಾರತೀಯರಾದ ನಮಗೆ ಬಿಟ್ಟದ್ದು. ನನ್ನ ಕುಟುಂಬ ಇದನ್ನು ಅನುಸರಿಸುತ್ತದೆ ಎಂದು ನನಗೆ ತಿಳಿದಿದೆ. ಜೈ ಹಿಂದ್" ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದರು.
ನಟ ಅಕ್ಷಯ್ ಕುಮಾರ್ ಹೇಳಿಕೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಮಾಲ್ಡೀವ್ಸ್ ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ. ಜತೆಗೆ ಘನತೆಯ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ಭಾರತೀಯ ಪ್ರವಾಸೋದ್ಯಮವನ್ನು ಬೆಂಬಲಿಸುವ ಮತ್ತು ದೇಶದ ದ್ವೀಪಗಳನ್ನು ಅನ್ವೇಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾಲ್ಡೀವ್ಸ್ ಹೆಸರನ್ನು ಉಲ್ಲೇಖಿಸಲಿಲ್ಲ. ಆದರೆ ಭಾರತೀಯ ಕಡಲತೀರಗಳು ಮತ್ತು ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸುವ ಆನ್ಲೈನ್ ಅಭಿಯಾನಕ್ಕೆ ಸಂಬಂಧಪಟ್ಟಂತೆ ಚಿತ್ರಗಳು ಮತ್ತು ಮಾಹಿತಿಗಳನ್ನು ಟ್ವೀಟ್ ಮಾಡಿದ್ದಾರೆ.
ಜಾನ್ ಅಬ್ರಾಹಂ ಬೆಂಬಲ
ನಟ ಜಾನ್ ಅಬ್ರಹಾಂ #exploreindianislands ಟ್ರೆಂಡ್ ಅಡಿಯಲ್ಲಿ ಟ್ವೀಟ್ ಮಾಡಿದ್ದಾರೆ. ಲಕ್ಷದ್ವೀಪಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಸೋಷಿಯಲ್ ಮೀಡಿಯಾದ ಪ್ರಮುಖ ಇನ್‌ಫ್ಲ್ಯೂನ್ಸರ್ ಸೋನಮ್ ಮಹಾಜನ್ ಟ್ವೀಟ್ ಹೀಗಿದೆ.