ಅಪ್ಪಿ ತಪ್ಪಿಯೂ ಈ ಫಿಲ್ಮ್ ನೋಡೋ ಪ್ರಯತ್ನ ಕೂಡ ಮಾಡ್ಬೇಡಿ ಅಂದ್ರು ಅಕ್ಷತಾ ಪಾಂಡವಪುರ, ಯಾವುದೀ ಸಿನಿಮಾ, ನೀವು ನೋಡಿದ್ರ
May 08, 2024 01:16 PM IST
ಅಪ್ಪಿ ತಪ್ಪಿಯೂ ಈ ಫಿಲ್ಮ್ ನೋಡೋ ಪ್ರಯತ್ನ ಕೂಡ ಮಾಡ್ಬೇಡಿ ಅಂದ್ರು ಅಕ್ಷತಾ ಪಾಂಡವಪುರ
- ಕನ್ನಡ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ಮುಂತಾದ ಪ್ರಮುಖ ಕಲಾವಿದರು ನಟಿಸಿದ್ದ ಸೈತಾನ್ ಸಿನಿಮಾದ ಕುರಿತು ತನ್ನ ಅಸಮಧಾನವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕನ್ನಡ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ಸೇರಿದಂತೆ ಖ್ಯಾತ ನಟರು ನಟಿಯರು ಇರುವ ಸೈತಾನ್ ಸಿನಿಮಾದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅಪ್ಪಿ ತಪ್ಪಿಯೂ ಈ ಫಿಲ್ಮ್ ನೋಡೋ ಪ್ರಯತ್ನ ಕೂಡ ಮಾಡ್ಬೇಡಿ" ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ಮೂಲಕ ಬಹುನಿರೀಕ್ಷಿತ ಸೈತಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿದೆ ಸೈತಾನ್ ಸಿನಿಮಾ
ಅಜಯ್ ದೇವಗನ್ ಮತ್ತು ಆರ್ ಮಾಧವನ್ ನಟನೆಯ ಸೈತಾನ್ ಸಿನಿಮಾವು ಇದೇ ಮೇ 4ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣವಲ್ಲದೆ ಇದ್ದರೂ ಒಂದಿಷ್ಟು ಗಳಿಕೆ ಮಾಡಿರುವ ಈ ಸಿನಿಮಾವು ಗುಜರಾತಿ ಸಿನಿಮಾ ವಾಸ್‌ನ ರಿಮೇಕ್ ಆಗಿದೆ. ಬ್ಲ್ಯಾಕ್ ಮ್ಯಾಜಿಕ್ ಕುರಿತ ಕಥೆಯನ್ನು ಹೊಂದಿದೆ. ಚಿತ್ರಮಂದಿರಗಳಲ್ಲಿ ಸೈತಾನ್ ಸಿನಿಮಾ ನೋಡದವರು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಆದರೆ, ಅಕ್ಷತಾ ಪಾಂಡವಪುರ ಮತ್ತು ಒಂದಿಷ್ಟು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಸಿನಿಮಾ ಚೆನ್ನಾಗಿಲ್ಲ "ಡಬ್ಬಾ" ಎಂಬರ್ಥದ ಕಾಮೆಂಟ್ ಮಾಡಿದ್ದಾರೆ.
ಮೇ 4ರಂದು ನೆಟ್‌ಪ್ಲಿಕ್ಸ್‌ನಲ್ಲಿ ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ ನಟನೆಯ ಸೈತಾನ್ ರಿಲೀಸ್ ಆಗಿತ್ತು. ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆ 149.49 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಬ್ಲ್ಯಾಕ್ ಮ್ಯಾಜಿಕ್ ಕಥೆ ಹೊಂದಿರುವ ಈ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಹಲವು ಕಡೆ ಕತ್ತರಿ ಪ್ರಯೋಗ ಮಾಡುವಂತೆ ಸೂಚಿಸಿತ್ತು. ಜತೆಗೆ, ಈ ಚಿತ್ರವು ಬ್ಲ್ಯಾಕ್ ಮ್ಯಾಜಿಕ್‌ಗೆ ಬೆಂಬಲ ನೀಡುವುದಿಲ್ಲ ಎಂದು ಡಿಸ್‌ಕ್ಲೈಮರ್‌ನಲ್ಲು ಬರೆಯುವಂತೆ ಸೂಚಿಸಿತ್ತು ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಇದೇ ಸಮಯದಲ್ಲಿ ಬಾಯಲ್ಲಿ ರಕ್ತ ಸುರಿಯುವ ಪ್ರಮಾಣವನ್ನು ಶೇಕಡ 25ರಷ್ಟು ಕಡಿಮೆ ಮಾಡುವಂತೆಯೂ ಸೂಚಿಸಿತ್ತು. ಈ ಸಿನಿಮಾವು ಮದ್ಯಪಾನದ ದುಷ್ಪರಿಣಾಮದ ಕುರಿತೂ ಮಾತನಾಡುತ್ತದೆ. ಸೆನ್ಸಾರ್ ಮಂಡಳಿಯ ಸೂಚನೆಯ ಬಳಿಕ ಈ ಸಿನಿಮಾದ ಒಟ್ಟಾರೆ ರನ್‌ಟೈಮ್ 132 ನಿಮಿಷಗಳಿಗೆ ತಲುಪಿದೆ.
ಅಕ್ಷತಾ ಪಾಂಡವಪುರ ಅಭಿಪ್ರಾಯ
"ಅಪ್ಪಿ ತಪ್ಪಿಯೂ ಈ ಫಿಲ್ಮ್ ನೋಡೋ ಪ್ರಯತ್ನ ಕೂಡ ಮಾಡ್ಬೇಡಿ... ನೆಟ್‌ಫ್ಲಿಕ್ಸ್‌ನಲ್ಲಿ ಬಂತ ಅತ್ಯಂತ.......... ಫಿಲ್ಮ್ ಎಂದು ಆಕ್ರೋಶದ ಇಮೋಜಿ ಹಾಕಿದ್ದಾರೆ. ಈ ಬಿಟ್ಟಸ್ಥಳವನ್ನು ತುಂಬುವ ಪ್ರಯತ್ನವನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಮಾಡಿದ್ದಾರೆ. ಇವರ ಅಭಿಪ್ರಾಯವನ್ನು ಸಾಕಷ್ಟು ಜನರು ಒಪ್ಪಿದ್ದಾರೆ. "ಅಯ್ಯೋ ನಾನು ನೋಡಿ ಇದೇ ಅನ್ಕೊಂಡೆ.. ಡಬ್ಬಾ ಚಿತ್ರ" ಎಂದು ಸವಿತಾ ಎಂಬವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಅಕ್ಷತಾ ಪಾಂಡವಪುರ "ಜಗತ್ಪ್ರಸಿದ್ಧ ಡಬ್ಬ ಅಕ್ಕಾ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ಅಷ್ಟು ಒಳ್ಳೆ ನಟರಿದ್ದು.. ಚಿತ್ರ ಸೂಪರ್ ಇರಬಹುದು ಅಂತ ಕುತೂಹಲದಿಂದ ನೋಡುದ್ರೆ.. ಯಪ್ಪಾ" ಎಂದು ಸವಿತಾ ಪ್ರತಿಕ್ರಿಯೆ ನೀಡಿದ್ದಾರೆ. "ಇವ್ರೇ ಡಬ್ಬ ಮಾಡ್ಕೊಂಡು ಕನ್ನಡ ಸಿನಿಮಾ ಗೆ ಗೇಟ್ ಪಾಸ್ ಕೊಡ್ತಾರೆ" ಎಂದು ಅಕ್ಷತಾ ಹೇಳಿದ್ದಾರೆ.
"ನಾನು ಬರಿ ಟ್ರೈಲರ್ ನಲ್ಲಿ ನೋಡಿ ಶಾಕ್ ಅದೇ ಒಂದೇ ಮನೆ ಒಂದೇ ಡ್ರೆಸ್" ಎಂದು ಸಂತೋಷ್ ಕುಮಾರ್ ಎಂಬವರು ಕಾಮೆಂಟ್ ಮಾಡಿದ್ದಾರೆ. "ನೀವು ಸಿನಿಮಾ ದವರೇ ಆಗಿದ್ದು.. ಡಬ್ಬ ಸಿನಿಮಾ ನೋಡ್ಬೇಡಿ ಅಂತ ಪ್ರಮೋಷನ್ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ಸುತ್ತೆ " ಎಂದು ಆನಂದ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅಕ್ಷತಾ ಪಾಂಡವಪುರ "ಆಯ್ತು ನೀವೇ ನೋಡಿ ಮೂವಿ ನಾ, ಆಮೇಲೆ ವಾಪಸ್ ಇಲ್ಲಿಗೆ ಬಂದು ನೀವೇ ಹೇಗಿತ್ತು ಎಂದು ರಿವ್ಯೂ ಬರೆಯಿರಿ. ನೋಡಿ ನಿಮ್ಮ ಹಣೆಬರಹ" ಎಂದು ಅಕ್ಷತಾ ಪಾಂಡವಪುರ ಚಾಲೆಂಜ್ ಮಾಡಿದ್ದಾರೆ.
ಕೆಲವರು ಅಕ್ಷತಾ ಪಾಂಡವಪುರ ಅಭಿಪ್ರಾಯವನ್ನು ಒಪ್ಪಿಲ್ಲ. "ಸೂಪರ್ ಮೂವಿ... ಒಳ್ಳೆ ಥ್ರಿಲಿಂಗ್ ಆಗಿದೆ. ಯಾರೋ ದ್ರಾಬೆಗಳು ಹೇಳಿದರು ಅಂತ ಮಿಸ್ ಮಾಡಿಕೋಬೇಡಿ" ಎಂದು ಗೋವರ್ಧನ್ ಎಂಬ ಬಳಕೆದಾರರು ಹೇಳಿದ್ದಾರೆ. "ಕೆಟ್ಟದ್ದಾಗಿಲ್ಲ. ಬೋರಿಂಗ್ ಇಲ್ಲ" ಎಂದು ಆಶಾ ಎಂಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ಏನಕ್ಕೆ ನೋಡಬಾರದು ಹೇಳಿ ನಾನು ಮೊದಲು ಹಿಂದಿ ಪಿಕ್ಚರ್ ನೋಡಲ್ಲ ಆದರೂ ನೀವು ಹಿಂದಿ ಪಿಕ್ಚರ್ ಬಗ್ಗೆ ಹಾಕಿದಿರಾ ಇದರಲ್ಲಿ ಅಂತ ಕೆಟ್ಟದೇನಿದೆ" ಎಂದು ನರೇಂದ್ರ ಬಾಬು ಕಾಮೆಂಟ್ ಮಾಡಿದ್ದಾರೆ. ಹೀಗೆ, ಅಕ್ಷತಾ ಪಾಂಡವಪುರ ಅಭಿಪ್ರಾಯಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿದ್ದು, ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ವಿಭಾಗ