logo
ಕನ್ನಡ ಸುದ್ದಿ  /  ಮನರಂಜನೆ  /  Anju Prabhakar: ಅವರನ್ನು ಬಿಟ್ಟು ಬರುವಾಗ ಒಂದು ನಯಾ ಪೈಸೆ ಕೂಡಾ ನನ್ನೊಂದಿಗೆ ತರಲಿಲ್ಲ..‌ ಅಂಜು ಪ್ರಭಾಕರ್‌ ಎಕ್ಸ್‌ಕ್ಲೂಸಿವ್‌ ಇಂಟರ್‌ವ್ಯೂ

Anju Prabhakar: ಅವರನ್ನು ಬಿಟ್ಟು ಬರುವಾಗ ಒಂದು ನಯಾ ಪೈಸೆ ಕೂಡಾ ನನ್ನೊಂದಿಗೆ ತರಲಿಲ್ಲ..‌ ಅಂಜು ಪ್ರಭಾಕರ್‌ ಎಕ್ಸ್‌ಕ್ಲೂಸಿವ್‌ ಇಂಟರ್‌ವ್ಯೂ

Rakshitha Sowmya HT Kannada

Feb 17, 2023 06:35 PM IST

ಅರ್ಜುನ್‌ ಜೊತೆ ಅಂಜು ಪ್ರಭಾಕರ್‌

    • ಪ್ರಭಾಕರ್‌ ಅಭಿಮಾನಿಗಳು ಹಿಂದಿನ ಇಂಟರ್‌ ವ್ಯೂ ನೋಡಿ ನನ್ನ ಬಗ್ಗೆ ಕೋಪಗೊಂಡಿದ್ದರು ಎಂಬ ವಿಷಯ ತಿಳಿದುಬಂತು. ಆದರೆ ನಾನು ಅನುಭವಿಸಿದ ನೋವುಗಳನ್ನು ಹೇಳಿಕೊಂಡೆ, ಸುಳ್ಳು ಹೇಳುವ ಅವಶ್ಯಕತೆ ಇಲ್ಲ‌, ಹಾಗೇ ಅವರನ್ನು ಬಿಟ್ಟು ಬರುವಾಗ ಹಣ, ಆಸ್ತಿ ತೆಗೆದುಕೊಂಡು ಬಂದೆ ಎಂದು ಎಲ್ಲರೂ ನನ್ನನ್ನು ಬ್ಲೇಮ್‌ ಮಾಡುತ್ತಿದ್ದಾರೆ. ನಾನು ಅವರ ಮನೆಯಿಂದ ಮಗನನ್ನು ಹೊರತುಪಡಿಸಿ ಒಂದು ಪೈಸೆ ಕೂಡಾ ತರಲಿಲ್ಲ.
ಅರ್ಜುನ್‌ ಜೊತೆ ಅಂಜು ಪ್ರಭಾಕರ್‌
ಅರ್ಜುನ್‌ ಜೊತೆ ಅಂಜು ಪ್ರಭಾಕರ್‌ (PC: Anju Prabhakar)

ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಸ್ಟಾರ್‌ ನಟರಲ್ಲಿ ಟೈಗರ್‌ ಪ್ರಭಾಕರ್‌ ಕೂಡಾ ಒಬ್ಬರು. ತಮ್ಮ ಖಡಕ್‌ ಧ್ವನಿ, ವಿಬಿನ್ನ ಮ್ಯಾನರಿಸಂ, ನಟನೆ, ಆಕ್ಷನ್‌ನಿಂದಲೇ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಪಡೆದಿದ್ದರು. 1967 ರಲ್ಲಿ ತೆರೆ ಕಂಡ 'ಕಾಡಿನ ರಹಸ್ಯ' ಚಿತ್ರದ ಮೂಲಕ ಪ್ರಭಾಕರ್‌ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಭಾಕರ್‌, ನಂತರ ಖಳನಟನಾಗಿ ಗುರುತಿಸಿಕೊಂಡರು. ಕ್ರಮೇಣ ನಾಯಕ ನಟನಾಗಿ ಕೂಡಾ ಸಕ್ಸಸ್‌ ಕಂಡರು.

ಟ್ರೆಂಡಿಂಗ್​ ಸುದ್ದಿ

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ಮಂಗ್ಲಿ ಕಂಠಕ್ಕೆ ಹುಚ್ಚೆದ್ದು ಕುಣಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಕಿಟ್ಟಿ, ರಚ್ಚು; ಇದು ಸಂಜು ವೆಡ್ಸ್ ಗೀತಾ-2 ಅಪ್‌ಡೇಟ್‌

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಬೆಂಗಳೂರಿನಲ್ಲಿ ಭರ್ಜರಿ ರೇವ್‌ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್‌ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ

ವೃತ್ತಿ ಜೀವನದಲ್ಲಿ ಹಂತ ಹಂತವಾಗಿ ಮೇಲೇರಿ ಬಂದು ಹಣ, ಹೆಸರು ಸಂಪಾದಿಸಿದ ಟೈಗರ್‌ ಪ್ರಭಾಕರ್‌, ವೈಯಕ್ತಿಕ ಜೀವನದಲ್ಲಿ ಮಾತ್ರ ಸೋಲು ಕಂಡರು. 1974 ರಲ್ಲಿ ಪ್ರಭಾಕರ್‌ ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾದರು. ಈ ದಂಪತಿಗೆ ಭಾರತಿ, ಗೀತಾ ಹಾಗೂ ವಿನೋದ್‌ ಪ್ರಭಾಕರ್‌ ಎಂಬ ಮಕ್ಕಳಿದ್ದಾರೆ. ವಿನೋದ್‌ ಪ್ರಭಾಕರ್‌ ಎಲ್ಲರಿಗೂ ಗೊತ್ತು. ಕನ್ನಡ ಚಿತ್ರರಂಗದಲ್ಲಿ ಅವರು ಮರಿ ಟೈಗರ್‌ ಎಂದೇ ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ನಂತರ ಮೇರಿ ಹಾಗೂ ಪ್ರಭಾಕರ್‌ ಡಿವೋರ್ಸ್‌ ಪಡೆದು ದೂರಾದರು. 1985ರಲ್ಲಿ ಪ್ರಭಾಕರ್‌, ನಟಿ ಜಯಮಾಲಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಇವರಿಗೆ ಸೌಂದರ್ಯ ಎಂಬ ಪುತ್ರಿ ಇದ್ದಾರೆ. ಆದರೆ ಕೆಲವು ವರ್ಷಗಳ ನಂತರ ಈ ಸಂಬಂಧ ಕೂಡಾ ಮುರಿದುಬೀಳುತ್ತದೆ. ಜಯಮಾಲಾ ಅವರಿಂದ ದೂರಾದ ನಂತರ ಒಬ್ಬಂಟಿಯಾಗಿದ್ದ ಪ್ರಭಾಕರ್‌ ಜೀವನದಲ್ಲಿ ಮೂರನೇ ಪತ್ನಿಯಾಗಿ ಬಂದಿದ್ದೇ ಅಂಜು.

ಚೆನ್ನೈಗೆ ಸೇರಿದ ಅಂಜು ಬಾಲನಟಿಯಾಗಿ, ನಾಯಕಿಯಾಗಿ ಗುರುತಿಸಿಕೊಂಡಿದ್ದರು. ವಿಪರ್ಯಾಸ ಎಂದರೆ ಪ್ರಭಾಕರ್‌ ಅವರ ಕೈ ಹಿಡಿದಾಗ ಅಂಜು ಅವರಿಗೆ 17, ಪ್ರಭಾಕರ್‌ ಅವರಿಗೆ 48 ವರ್ಷ. ಹಾಗೇ ಇಬ್ಬರೂ ಜೊತೆಗೆ ಇದ್ದದ್ದು ಒಂದೂವರೆ ವರ್ಷ ಮಾತ್ರ. ಅಂಜು ಹಾಗೂ ಪ್ರಭಾಕರ್‌ಗೆ ಜನಿಸಿದ ಮಗನೇ ಅರ್ಜುನ್.‌ ಪ್ರಭಾಕರ್‌ ಮೂರನೇ ಪತ್ನಿ ಹಾಗೂ 5ನೇ ಪುತ್ರನ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ಗೆ ನಟಿ ಅಂಜು ನೀಡಿರುವ ಎಕ್ಸ್‌ಕ್ಲೂಸಿವ್‌ ಸಂದರ್ಶನ ಇಲ್ಲಿದೆ.

ನೀವು ಹುಟ್ಟಿ ಬೆಳೆದದ್ದು ಎಲ್ಲಿ..?

ಬಹಳಷ್ಟು ಜನರು ನಾನು ಮಲಯಾಳಿ ಎಂದುಕೊಂಡಿದ್ದಾರೆ. ಆದರೆ ನಾನು ತಮಿಳಿನವಳು. ಹುಟ್ಟಿ ಬೆಳೆದದ್ದು ಚೆನ್ನೈನಲ್ಲೇ. ಟಿ. ನಗರದ ವಿದ್ಯೋದಯ ಶಾಲೆಯಲ್ಲಿ ಪ್ಲಸ್‌ ಟು (ಪಿಯುಸಿ) ಮುಗಿಸಿದ್ದೇನೆ. ತಂದೆ ಹೆಸರು ರಾಜಾ, ತಾಯಿ ಹೆಸರು ರತ್ನ. ಅಪ್ಪ-ಅಮ್ಮನಿಗೆ ಮೂವರು ಮಕ್ಕಳು. 2007 ರಲ್ಲಿ ಅಮ್ಮ ನಿಧನರಾದರು. ಈಗ ನಾನು ತಂದೆ ಹಾಗೂ ಮಗನೊಂದಿಗೆ ನೆಲೆಸಿದ್ದೇನೆ. ಅಣ್ಣ ಚೆನ್ನೈನಲ್ಲಿದ್ದಾರೆ. ತಮ್ಮ ಲಂಡನ್‌ನಲ್ಲಿ ಸೆಟಲ್‌ ಆಗಿದ್ದಾರೆ.

ಚಿತ್ರರಂಗಕ್ಕೆ ಬಂದಿದ್ದು ಹೇಗೆ..?

ನಮ್ಮ ಕುಟುಂಬದಲ್ಲಿ ಅನೇಕ ಮಂದಿ ಚಿತ್ರರಂಗದಲ್ಲಿದ್ದರು. ಈ ನಂಟು ನನ್ನನ್ನು ಚಿತ್ರರಂಗಕ್ಕೆ ಕರೆತಂದಿತು. ಒಂದೂವರೆ ವರ್ಷದಲ್ಲೇ ನಾನು ನಟಿಸಿದ್ದೆ. 'ಉದಿರಿಪೂಕ್ಕಳ್‌' ನಾನು ನಟಿಸಿದ ಮೊದಲ ಸಿನಿಮಾ. ತಂದೆ ತಾಯಿಗೆ ನಾನು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೆ ನನ್ನ ಅಜ್ಜಿ ಹಾಗೂ ಕುಟುಂಬದ ಇತರ ಸದಸ್ಯರು ಒತ್ತಾಯ ಮಾಡಿದ್ದರಿಂದ ನಾನು ನಟಿಸಬೇಕಾಯ್ತು. ನನಗೆ ನೇವಿ ಆಫೀಸರ್‌ ಆಗಬೇಕೆಂಬ ಆಸೆ ಇತ್ತು. ಸಿನಿಮಾಗಳಲ್ಲಿ ಅವಕಾಶ ಬಂದಾಗ ಒಂದು ಸಿನಿಮಾ ತಾನೇ, ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿ ಓದಿನ ಕಡೆ ಗಮನ ಹರಿಸೋಣ ಎಂದುಕೊಂಡೆ. ಆದರೆ ನಾನು ಚಿತ್ರರಂಗದಲ್ಲೇ ಮುಂದುವರೆಯಬೇಕೆಂದು ವಿಧಿ ನಿರ್ಧರಿಸಿತ್ತೇನೋ, ಆದ್ದರಿಂದ 4 ಭಾಷೆಗಳಲ್ಲಿ ನನಗೆ ಅವಕಾಶಗಳು ಬರುತ್ತಿದ್ದವು. ಬಾಲನಟಿಯಾಗಿ, ನಾಯಕಿಯಾಗಿ ಇದುವರೆಗೂ ಸುಮಾರು 150 ಸಿನಿಮಾಗಳಲ್ಲಿ ನಟಿಸಿದ್ದೇನೆ.

ಮಲಯಾಳಂನ 'ರುಗ್ಮಿಣಿ' ( ರುಕ್ಮಿಣಿ) ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ನಟಿಸಿದೆ. ಆಗ ನನಗೆ 10 ವರ್ಷ ವಯಸ್ಸು. ಈ ಚಿತ್ರದ ನಟನೆಗೆ ಕೇರಳ ಸ್ಟೇಟ್‌ ಅವಾರ್ಡ್‌ ದೊರೆತಿತ್ತು. ಇದಾದ ನಂತರ 6ನೇ ತರಗತಿಯಲ್ಲಿರುವಾಗ ರಮೇಶ್‌ ಅರವಿಂದ್‌ ಜೊತೆ 'ಕೇಳಡಿ ಕಣ್ಮಣಿ' ಚಿತ್ರದಲ್ಲಿ ನಟಿಸಿದೆ. ಆ ಸಿನಿಮಾದ ಜೊತೆಗೆ ಮಲಯಾಳಂನಲ್ಲಿ ಮೋಹನ್‌ ಲಾಲ್‌ ಅವರೊಂದಿಗೆ 'ತಾಳವರಂ' ಸಿನಿಮಾದಲ್ಲಿ ನಟಿಸಿದೆ. ಈ ಎರಡೂ ಸಿನಿಮಾಗಳಿಂದ ನನಗೆ ಬ್ರೇಕ್‌ ದೊರೆಯಿತು. ಕನ್ನಡದಲ್ಲಿ ಅನಂತ್‌ನಾಗ್‌ ಹಾಗೂ ಇತರ ನಟರೊಂದಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಪ್ರೇಮರಾಜ್ಯ, ರೇಂಜರ್‌, ಕಿಂಗ್‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಪ್ರತಿಯೊಂದು ಚಿತ್ರದಲ್ಲೂ ಸಾಕಷ್ಟು ಕಲಿತಿದ್ದೇನೆ. ದೊಡ್ಡ ನಟರೊಂದಿಗೆ ನಟಿಸಿದ್ದು ನೆನಪಿಸಿಕೊಂಡರೆ ಈಗಲೂ ಖುಷಿ ಎನಿಸುತ್ತದೆ.

ಇಷ್ಟೆಲ್ಲಾ ಹೆಸರು ಗಳಿಸಿ ಚಿತ್ರರಂಗದಿಂದ ದೂರ ಹೋಗಿದ್ದೇಕೆ..?

ತೆಲುಗು, ತಮಿಳು, ಮಲಯಾಳಂನಲ್ಲಿ ಸಾಕಷ್ಟು ಹೆಸರು ಮಾಡಿದ್ದೆ. ಕನ್ನಡದಲ್ಲಿ 'ರೇಂಜರ್‌' ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆಯಿಂದ ಅಲ್ಲಿಗೆ ಬಂದೆ. ಮೊದಲ ಸಿನಿಮಾದಲ್ಲೇ ಪ್ರಭಾಕರ್‌ ಪರಿಚಯವಾದರು. ಆಗ ನನಗೆ 17 ವರ್ಷ ವಯಸ್ಸು. ಯಾವುದು ತಪ್ಪು, ಯಾವುದು ಸರಿ ಅನ್ನೋದು ಗೊತ್ತಿರಲಿಲ್ಲ. ಪ್ರಭಾಕರ್‌ ಅವರೊಂದಿಗೆ ಒಂದೂವರೆ ವರ್ಷ ಇದ್ದೆ. ಸರಿಗಮ ವಿಜಿ ಹಾಗೂ ಇನ್ನಿತರರ ಸಮ್ಮುಖದಲ್ಲಿ ಚರ್ಚ್‌ನಲ್ಲಿ ಉಂಗುರ ಬದಲಿಸಿಕೊಂಡೆವು. ಮಗ ಕೂಡಾ ಹುಟ್ಟಿದ. ಆರಂಭದಲ್ಲಿ ಎಲ್ಲಾ ಸರಿ ಇತ್ತು. ಆದರೆ ನಂತರ ನನಗೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ಎಲ್ಲವೂ ಸರಿ ಆಗುತ್ತೆ ಎಂದು ಕಾಯುತ್ತಿದ್ದೆ, ಸಾಕಷ್ಟು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೆ, ಉಸಿರು ಕಟ್ಟುವ ವಾತಾವರಣದಿಂದ ಹೊರ ಬರಬೇಕು ಎನ್ನಿಸಿತು. ಕೊನೆಗೂ ನಿರ್ಧಾರ ಮಾಡಿ ಅಲ್ಲಿಂದ ಚೆನ್ನೈಗೆ ವಾಪಸ್‌ ಬಂದೆ.

ಆ ಸಮಯದಲ್ಲಿ ನನಗೆ ಸಿನಿಮಾಗಳಿಗಿಂತ ಮಗನ ಭವಿಷ್ಯ ಮೊದಲ ಆಯ್ಕೆ ಆಗಿತ್ತು. ಆದ್ದರಿಂದ ಅವನಿಗಾಗಿ ಚೆನ್ನೈ ತೊರೆದು ವೈನಾಡಿಗೆ ಹೋದೆ. ಅಲ್ಲಿ ನಮ್ಮದೇ ರಬ್ಬರ್‌, ಕಾಫಿ ಪ್ಲಾಂಟೇಷನ್‌ ಇತ್ತು, ಆ ಉದ್ಯಮದಲ್ಲಿ ತೊಡಗಿಸಿಕೊಂಡೆ. ಜೀವನದಲ್ಲಿ ನಡೆದ ಘಟನೆಗಳಿಂದ ಬಹಳ ಕುಂದು ಹೋಗಿದ್ದೆ. ಆದರೆ ಅಪ್ಪ-ಅಮ್ಮ‌ ಬಹಳ ಪ್ರೋತ್ಸಾಹ ನೀಡಿದರು. ಧೈರ್ಯ ಹೇಳಿ ಎಲ್ಲವನ್ನೂ ಎದುರಿಸುವಂತೆ ದಾರಿ ತೋರಿಸಿದರು. ಮಗನ ವಿದ್ಯಾಭ್ಯಾಸ ಮುಗಿದ ನಂತರವಷ್ಟೇ ನಾನು ಚೆನ್ನೈಗೆ ವಾಪಸ್‌ ಬಂದೆ. 2018 ರಿಂದ ಮತ್ತೆ ನಟನೆ ಆರಂಭಿಸಿದೆ. ಸದ್ಯಕ್ಕೆ ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಿದ್ಯಾ ನಂ 1' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಒಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭವಾಗುತ್ತಿದೆ.

ಮತ್ತೆ ಕನ್ನಡದಲ್ಲಿ ನಟಿಸುತ್ತೀರ..?

ಖಂಡಿತ ನಟಿಸುತ್ತೇನೆ. ಕಲಾವಿದರಿಗೆ ಭಾಷೆಯ ಹಂಗಿಲ್ಲ. ನಾನು ಅಲ್ಲಿಗೆ ಬಂದಿದ್ದೇ ಕನ್ನಡದಲ್ಲಿ ಹೆಸರು ಮಾಡುವ ಉದ್ದೇಶದಿಂದ. ಆದರೆ ವಿಧಿ ಅವಕಾಶ ಮಾಡಿಕೊಡಲಿಲ್ಲ. ಪ್ರಭಾಕರ್‌ ಅವರೊಂದಿಗೆ ನಾನು ಇದ್ದದ್ದು ಕೇವಲ ಒಂದೂವರೆ ವರ್ಷ ಅಷ್ಟೇ. ನನ್ನ ಜೀವನದಲ್ಲಿ ಕಹಿ ಘಟನೆ ನಡೆದದ್ದು ನಿಜ. ಹಾಗೆಂದ ಮಾತ್ರಕ್ಕೆ ನನಗೆ ಅಲ್ಲಿ ನಟಿಸಬಾರದು ಎಂಬ ಉದ್ಧೇಶ ಇಲ್ಲ. ಒಳ್ಳೆ ಪಾತ್ರ ದೊರೆತರೆ ಖಂಡಿತ ನಟಿಸುತ್ತೇನೆ.

ಪ್ರಭಾಕರ್‌ ಪುತ್ರ ಅರ್ಜುನ್‌ ಹಾಗೂ ಪತ್ನಿ ಅಂಜು ‌

ಅರ್ಜುನ್‌ ಬಗ್ಗೆ ಹೇಳಿ, ಮಗನನ್ನು ಚಿತ್ರರಂಗಕ್ಕೆ ಕರೆ ತರುತ್ತೀರಾ..?

ಅರ್ಜುನ್‌ಗೆ ಈಗ 22 ವರ್ಷ. ಅವನು ಜನಿಸಿದ್ದು 10 ಜೂನ್‌ 2000. ಆತ ಡಿಸ್ಟ್ರಿಕ್ಟ್‌ ಲೆವೆಲ್‌ ಫುಟ್‌ಬಾಲ್‌ ಪ್ಲೇಯರ್.‌ ಅಮೆರಿಕದ ಕಂಪನಿಯೊಂದಕ್ಕೆ ತರಬೇತಿ ನೀಡುತ್ತಿದ್ದಾನೆ. ಶೀಘ್ರದಲ್ಲೇ ಹೈಯರ್‌ ಸ್ಟಡೀಸ್‌ಗಾಗಿ ವಿದೇಶಕ್ಕೆ ಹೋಗುತ್ತಿದ್ದಾನೆ. ಜೊತೆಗೆ ಗೇಮ್‌ ಡಿಸೈನಿಂಗ್‌ ಕೂಡಾ ಮಾಡುತ್ತಿದ್ದಾನೆ. ಇನ್ನು ಆತನ ಆಸಕ್ತಿಯೇ ಬೇರೆ. ಆತನಿಗೆ ಕ್ರೀಡೆಯಲ್ಲೇ ಮುಂದುವರೆಯಬೇಕೆಂಬ ಆಸೆ ಇದೆ. ಈಗಾಗಲೇ ಅನೇಕ ನಿರ್ದೇಶಕರು ಆತನನ್ನು ಸಿನಿಮಾಗೆ ಕರೆ ತರುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಆತ ನಟಿಸಲು ಒಪ್ಪಿದರೆ ನಾನು ಸಪೋರ್ಟ್‌ ಮಾಡುತ್ತೇನೆ. ಹಾಗೇ ಮತ್ತೊಂದು ವಿಚಾರ ಹೇಳಬೇಕು. ಅರ್ಜುನ್‌ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ಬಹಳ ಎಮೋಶನಲ್‌ ಆದಾಗ ಮಾತ್ರ ಅಮ್ಮ ಎನ್ನುತ್ತಾನೆ.

ಪ್ರಭಾಕರ್‌ ಅವರನ್ನು ಮಗ ಹೇಗೆ ನೆನಪಿಸಿಕೊಳ್ಳುತ್ತಾರೆ..?

ಅರ್ಜುನ್‌ 3 ತಿಂಗಳ ಮಗುವಾಗಿದ್ದಾಗಲೇ ನಾನು ಅವರನ್ನು ಬಿಟ್ಟು ಬಂದೆ. ಅವನಿಗೆ ಅಪ್ಪನೊಂದಿಗೆ ಯಾವುದೇ ನೆನಪು ಇಲ್ಲ. ಆದರೂ ಪ್ರತಿ ವರ್ಷ ಪ್ರಭಾಕರ್‌ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯಂದು ಅರ್ಜುನ್‌, ಚರ್ಚ್‌ಗೆ ತೆರಳಿ ಕ್ಯಾಂಡಲ್‌ ಹಚ್ಚಿ, ಪ್ರಾರ್ಥನೆ ಮಾಡಿ ಬಡವರಿಗೆ ಊಟ ನೀಡಿ ಬರುತ್ತಾನೆ. ಇದೆಲ್ಲವೂ ಅವನಿಗೆ ಕಲಿಸಿದ್ದು ನನ್ನ ತಾಯಿ.

ಪ್ರಭಾಕರ್‌ ಕುಟುಂಬ ಅಥವಾ ಬೆಂಗಳೂರಿನಲ್ಲಿ ಯಾರೊಂದಿಗಾದರೂ ಕಾಂಟಾಕ್ಟ್‌ನಲ್ಲಿದ್ದೀರಾ?

ನನಗೆ ಜಯಮಲಾ ಹಾಗೂ ಅವರ ಪುತ್ರಿ ಸೌಂದರ್ಯ ಬಗ್ಗೆ ಗೊತ್ತಿತ್ತೇ ಹೊರತು, ಮೊದಲ ಮದುವೆ ಬಗ್ಗೆ ಕೂಡಾ ಗೊತ್ತಿರಲಿಲ್ಲ. ನಂತರ ಎಲ್ಲಾ ತಿಳಿದು ಶಾಕ್‌ ಆಗಿದ್ದೆ. ಆಗಲೂ ಯಾರನ್ನೂ ಭೇಟಿ ಮಾಡಿರಲಿಲ್ಲ. ಒಮ್ಮೆ ಮಾತ್ರ ಜಯಮಾಲಾ ಅವರು ಯಾವುದೋ ವಿಚಾರಕ್ಕೆ ಕರೆ ಮಾಡಿದ್ದಾಗ ಫೋನ್‌ ರಿಸೀವ್‌ ಮಾಡಿ ಅವರೊಂದಿಗೆ ಮಾತನಾಡಿದ್ದೆ ಅಷ್ಟೇ. ನಿನಗೆ ಅಣ್ಣ , ಅಕ್ಕಂದಿರು ಇದ್ದಾರೆ ಎಂದು ನಾನು ಅರ್ಜುನ್‌ಗೆ ಆಗ್ಗಾಗ್ಗೆ ಹೇಳುತ್ತಿರುತ್ತೇನೆ. ಅವರ ಫೋಟೋಗಳನ್ನು ಕೂಡಾ ತೋರಿಸಿದ್ದೇನೆ. ಆದರೆ ಅರ್ಜುನ್‌ಗೆ ನಾನೇ ಅಪ್ಪ, ಅಮ್ಮ ಎಲ್ಲಾ. ಮನೆ ಬಿಟ್ಟು ಬರುವಾಗ ಇನ್ನೊಮ್ಮೆ ಕಾಲಿಡುವುದಿಲ್ಲ ಎಂದು ಹೇಳಿಬಂದಿದ್ದೆ. ಏಕೆಂದರೆ ನಾನು ಅಷ್ಟು ನೊಂದಿದ್ದೆ. ಆ ನೋವಿನಿಂದಲೇ ಮತ್ತೆ ಅಲ್ಲಿಗೆ ಹೋಗಲು ಮನಸ್ಸಾಗಲಿಲ್ಲ.

ಪ್ರಭಾಕರ್‌ ಅವರ ಬಗ್ಗೆ ಏನು ಹೇಳಲು ಇಷ್ಟಪಡ್ತೀರ..?

ಪ್ರಭಾಕರ್‌ ನಿಜವಾಗಿಯೂ ಒಳ್ಳೆ ವ್ಯಕ್ತಿ. ಅವರು ಬೇರೆಯವರಿಗೆ ಬಹಳ ಸಹಾಯ ಮಾಡುತ್ತಿದ್ದರು. ಆದರೆ ನನ್ನೊಂದಿಗೆ ನಡೆದುಕೊಂಡ ರೀತಿಗೆ ಅವರನ್ನಾಗಲೀ, ಬೇರೆ ಯಾರನ್ನೂ ದೂಷಿಸಲು ಇಷ್ಟಪಡುವುದಿಲ್ಲ. ಅದು ನನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆ. ನಾನು ಅವರನ್ನು ಬಿಟ್ಟು ಬಂದಾಗ ಒಮ್ಮೆಯೂ ನನ್ನ ಮಗುವನ್ನು ನೋಡಲು ಬರಲಿಲ್ಲ. ಮಗನಿಗೆ ಏನೂ ಮಾಡಲಿಲ್ಲ ಎಂಬ ಬೇಸರ ಇಂದಿಗೂ ಇದೆ.

ಕೊನೆಯ ದಿನಗಳಲ್ಲಿ ಅವರ ಬಳಿ ಆಸ್ಪತ್ರೆಗೂ ಹಣ ಇರಲಿಲ್ಲ ಎಂಬ ಸುದ್ದಿ ಹರಿದಾಡಿತ್ತು ನಿಜಾನಾ?

ಇದರ ಬಗ್ಗೆ ನನಗೆ ಖಂಡಿತ ಗೊತ್ತಿಲ್ಲ. ನಾನು ಅವರೊಂದಿಗೆ ಇದ್ದದ್ದು ಕೆಲವೇ ದಿನಗಳು. ಅವರಿಂದ ದೂರಾದ ನಂತರ ಮತ್ತೆ ಅವರೊಂದಿಗೆ ಮಾತನಾಡಿಲ್ಲ. ಅವರು ನಿಧನರಾದಾಗ ಕನ್ನಡದ ನಿರ್ಮಾಪಕರೊಬ್ಬರು ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಅಲ್ಲಿವರೆಗೂ ಅವರು ಹೇಗಿದ್ದರು..? ಯಾರೊಂದಿಗೆ ಇದ್ದರು..? ಅವರ ಪರಿಸ್ಥಿತಿ ಹೇಗಿತ್ತು ಏನೂ ನನಗೆ ಮಾಹಿತಿ ಇರಲಿಲ್ಲ.

ಕಾಲಿಗೆ ಪೆಟ್ಟಾಗಿದ್ದಾಗ ಪ್ರಭಾಕರ್‌ ಬ್ಯಾಂಡೇಜ್‌ ಜೊತೆ ಮಾಂಸ ಕಟ್ಟುತ್ತಿದ್ದರು ಎಂಬ ಮಾತಿದೆ ಹೌದಾ?

ಖಂಡಿತ ಇಲ್ಲ, ಇದೆಲ್ಲಾ ಸುಳ್ಳು, ನಾನೇ ಅವರಿಗೆ ಎಷ್ಟೋ ಬಾರಿ ಬ್ಯಾಂಡೇಜ್‌ ಕಟ್ಟಿದ್ದೇನೆ. ಇದು ಸುಳ್ಳು.

ಪ್ರಭಾಕರ್‌ ಅಭಿಮಾನಿಗಳಿಗೆ ಏನು ಹೇಳಲು ಇಷ್ಟಪಡುತ್ತೀರ..?

ನಾನು ಕೆಲವು ದಿನಗಳ ಹಿಂದೆ ಚಿತ್ರಲೋಕದ ವೀರೇಶ್‌ ಅವರಿಗೆ ಇಂಟರ್‌ವ್ಯೂ ನೀಡಿದ್ದೆ. ಇದನ್ನು ನೋಡಿ ಪ್ರಭಾಕರ್‌ ಅಭಿಮಾನಿಗಳು ನನ್ನ ಬಗ್ಗೆ ಕೋಪಗೊಂಡಿದ್ದರು ಎಂಬ ವಿಷಯ ತಿಳಿದುಬಂತು. ಆದರೆ ನಾನು ಅನುಭವಿಸಿದ ನೋವುಗಳನ್ನು ಹೇಳಿಕೊಂಡೆ, ಸುಳ್ಳು ಹೇಳುವ ಅವಶ್ಯಕತೆ ಇಲ್ಲ‌, ಹಾಗೇ ಅವರನ್ನು ಬಿಟ್ಟು ಬರುವಾಗ ಹಣ, ಆಸ್ತಿ ತೆಗೆದುಕೊಂಡು ಬಂದೆ ಎಂದು ಎಲ್ಲರೂ ನನ್ನನ್ನು ಬ್ಲೇಮ್‌ ಮಾಡುತ್ತಿದ್ದಾರೆ. ನಾನು ಅವರ ಮನೆಯಿಂದ ಮಗನನ್ನು ಹೊರತುಪಡಿಸಿ ಒಂದು ಪೈಸೆ ಕೂಡಾ ತರಲಿಲ್ಲ. ನನ್ನ ವಸ್ತುಗಳನ್ನೇ ಅಲ್ಲಿ ಬಿಟ್ಟು ಬಂದೆ. ಅಮ್ಮ ಕೊಡಿಸಿದ್ದ ಸುಮಾರು 70 ಸೌರನ್‌ ಚಿನ್ನವನ್ನೂ ಬಿಟ್ಟು ಬಂದೆ. ನನ್ನ ಮೇಲೆ ಕೋಪ ಮಾಡಿಕೊಳ್ಳುವ ಅಗತ್ಯವಿಲ್ಲ.

ಅವರ ಎರಡೂ ಕುಟುಂಬಗಳೂ ಚೆನ್ನಾಗಿವೆ. ಅನುಭವಿಸಿದ್ದು ನಾನು, ಮಗನನ್ನು ಸಾಕಲು ಎಷ್ಟು ಕಷ್ಟಪಟ್ಟೆ ಅನ್ನೋದು ನನಗೆ ಮಾತ್ರ ಗೊತ್ತು. ನನಗೆ ಎಷ್ಟು ನೋವು, ಕೋಪ, ದು:ಖ ಇರಬಹುದು ನೀವೇ ಯೋಚಿಸಿ. ಇಷ್ಟಾದರೂ ಯಾರನ್ನೂ ಒಂದು ಪೈಸೆ ಕೇಳಿಲ್ಲ. ನನ್ನ ಮಗನಿಗೆ ಅಪ್ಪನಾಗಿ-ಅಮ್ಮನಾಗಿ ನೋಡಿಕೊಂಡಿದ್ದೇನೆ. ಕಳೆದ ಇಂಟರ್‌ವ್ಯೂನಲ್ಲಿ ಮಾತ್ರ ನನ್ನ ನೋವನ್ನು ಹೊರ ಹಾಕಿದೆ. ಅದಕ್ಕೂ ಮುನ್ನ ಯಾರೊಂದಿಗೂ ಏನೂ ಹೇಳಿಕೊಂಡಿರಲಿಲ್ಲ. ಅಲ್ಲಿದ್ದವರಿಗೆ ನಾನು ಅನುಭವಿಸುತ್ತಿರುವ ಕಷ್ಟ ಏನೆಂದು ಗೊತ್ತಿತ್ತು. ಆದರೆ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಅಭಿಮಾನಿಗಳಿಗೆ ನಿಜ ಏನೆಂದು ಗೊತ್ತಿಲ್ಲ. ನನ್ನ ಬಗ್ಗೆ ಯಾರು ಏನು ಹೇಳಿದರೂ ನಿಜ ಎಂದು ನಂಬುತ್ತಾರೆ. ನನ್ನೊಳಗಿನ ನೋವು ನನಗೆ ಮಾತ್ರ ಗೊತ್ತು. ನಾನು ಅವರಿಂದ ಏನೂ ತಂದಿಲ್ಲ ಅನ್ನೋದನ್ನು ಮಾತ್ರ ಅವರ ಅಭಿಮಾನಿಗಳಿಗೆ ಅಥವಾ ನನ್ನನ್ನು ದೂಷಿಸುತ್ತಿರುವವರಿಗೆ ಹೇಳಬಹುದು ಅಷ್ಟೇ.

ಚಿಕ್ಕ ವಯಸ್ಸಿಗೆ ಚಿತ್ರರಂಗದಲ್ಲಿ ಸಾಧನೆ ಮಾಡಿ, ವೈಯಕ್ತಿಕ ಬದುಕಲ್ಲಿ ಎಡವಿದ ಅಂಜು ಅವರ ಮುಂದಿನ ಜೀವನ ಸುಖಮಯವಾಗಿರಲಿ. ಪ್ರಭಾಕರ್‌ ಪುತ್ರ ಅರ್ಜುನ್‌ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸೋಣ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ