Chetan Ahimsa: ವೀಸಾ ರದ್ದು ಪ್ರಕರಣ; ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾಗೆ ರಿಲೀಫ್, ಜೂನ್ 2ವರೆಗೆ ಕ್ರಮ ಜರುಗಿಸದಂತೆ ಕೋರ್ಟ್ ಆದೇಶ
Apr 25, 2023 12:07 PM IST
ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾ
- ಚೇತನ್ ಪರ ವಾದ ಮಂಡಿಸಿದ್ದ ಅವರ ವಕೀಲರು ತಮ್ಮ ಕಕ್ಷಿದಾರರ ವಾದ ಆಲಿಸದೆ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾಯಾಲಯ, ಜೂನ್ 2 ರವರೆಗೆ ನಟ ಚೇತನ್ ವಿರುದ್ಧ ಕ್ರಮ ಜರುಗಿಸುವುದು ಬೇಡ ಎಂದು ಆದೇಶಿಸಿದೆ.
ಗಡಿಪಾರು ಭೀತಿ ಎದುರಿಸುತ್ತಿರುವ ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ವೀಸಾ ರದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 2 ವರೆಗೂ ಚೇತನ್ ವಿರುದ್ಧ ಕ್ರಮ ಜರುಗಿಸದಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಪ್ರಯತ್ನ, ಭಾರತ ವಿರೋಧ ಚಟುವಟಿಕೆ ಆರೋಪದ ಹಿನ್ನೆಲೆ ಕೇಂದ್ರ ಸರ್ಕಾರವು ನಟ ಚೇತನ್‌ಗೆ ನೀಡಲಾಗಿದ್ದ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ರದ್ದುಗೊಳಿಸಿತ್ತು. ಈ ಹಿನ್ನೆಲೆ ಚೇತನ್ ಕೋರ್ಟ್ ಮೆಟ್ಟಿಲೇರಿದ್ದರು. ಚೇತನ್ ಪರ ವಾದ ಮಂಡಿಸಿದ್ದ ಅವರ ವಕೀಲರು ತಮ್ಮ ಕಕ್ಷಿದಾರರ ವಾದ ಆಲಿಸದೆ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾಯಾಲಯ, ಜೂನ್ 2 ರವರೆಗೆ ನಟ ಚೇತನ್ ವಿರುದ್ಧ ಕ್ರಮ ಜರುಗಿಸುವುದು ಬೇಡ ಎಂದು ಆದೇಶಿಸಿದೆ. ಜೊತೆಗೆ ನ್ಯಾಯಾಲಯದ ಬಗ್ಗೆ ಆಗಲೀ, ವಿಚಾರಣೆಗೆ ಬಾಕಿ ಇರುವ ಕೇಸ್‌ಗಳ ಬಗ್ಗೆ ಕೂಡಾ ಅವರು ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳುವಂತಿಲ್ಲ ಎಂದು ಸೂಚಿಸಿದೆ.
ಹಿಂದುತ್ವದ ಬಗ್ಗೆ ಪೋಸ್ಟ್ ಮಾಡಿ ಅರೆಸ್ಟ್ ಆಗಿದ್ದ ಚೇತನ್
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಚೇತನ್ ಅಹಿಂಸಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಬರೆದುಕೊಂಡಿದ್ದರು. ಜೊತೆಗೆ ಬಾಬರಿ ಮಸೀದಿ, ರಾಮ ಜನ್ಮಭೂಮಿ, ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿದ್ದ ಉರಿಗೌಡ ಹಾಗೂ ನಂಜೇಗೌಡನ ಬಗ್ಗೆ ಬರೆದುಕೊಂಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಶಿವಕುಮಾರ್ ಎಂಬುವವರು ಚೇತನ್ ಅಹಿಂಸಾ ವಿರುದ್ಧ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ನಟ ಚೇತನ್ ಅವರನ್ನು ಅರೆಸ್ಟ್ ಮಾಡಿ ಎಫ್‌ಐಆರ್ ದಾಖಲಿಸಿದ್ದರು.
ನ್ಯಾಯಾಂಗ ನಿಂದನೆ ಮಾಡಿ ಕಳೆದ ವರ್ಷವೂ ಅರೆಸ್ಟ್ ಆಗಿದ್ದ ನಟ
ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಹಾಗೂ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ವಿರುದ್ಧ ಚೇತನ್ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ನ್ಯಾಯಾಂಗ ನಿಂದನೆ ಮಾಡುವ ಮೂಲಕ ಚೇತನ್ ಆಗ ಅರೆಸ್ಟ್ ಆಗಿದ್ದರು. ಐಪಿಸಿ ಸೆಕ್ಷನ್ 505 (2), 504 ಅಡಿ ಚೇತನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ನ್ಯಾಯಾಂಗ ಬಂಧನದ ನಂತರ ಚೇತನ್‌ಗೆ ಜಾಮೀನು ದೊರೆತು ಬಿಡುಗಡೆ ಆಗಿದ್ದರು.
ಚೇತನ್ ಪರ ನಿಂತ ನಟ ಕಿಶೋರ್
ಚೇತನ್ ಅಹಿಂಸಾ ವೀಸಾ ರದ್ದಾಗಿದೆ ಎಂದು ತಿಳಿಯುತ್ತಿದ್ದಂತೆ ಕೇಂದ್ರ ಸರ್ಕಾರದ ನಿರ್ಧಾರ ಸರಿ ಇದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಚೇತನ್ ಪರ ನಿಂತಿದ್ದಾರೆ. ಸ್ಯಾಂಡಲ್‌ವುಡ್ ನಟ ಕಿಶೋರ್ ಕೂಡಾ ಚೇತನ್ ಪರ ನಿಂತಿದ್ದು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಿಶೋರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸುದೀರ್ಘವಾಗಿ ಬರೆದುಕೊಂಡಿದ್ದರು.