ಕ್ಷಮಿಸಿ ಸಿದ್ಧಾರ್ಥ್.. ಇಂಡಸ್ಟ್ರಿ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ಮತ್ತೆ ಹೀಗಾಗದು; ನಟ ಶಿವರಾಜ್‌ಕುಮಾರ್
Sep 29, 2023 04:12 PM IST
ಕ್ಷಮಿಸಿ ಸಿದ್ಧಾರ್ಥ್.. ಇಂಡಸ್ಟ್ರಿ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ಮತ್ತೆ ಹೀಗಾಗದು; ನಟ ಶಿವರಾಜ್‌ಕುಮಾರ್
- ಚಿಕ್ಕು ಸಿನಿಮಾ ಪ್ರಚಾರದ ವೇಳೆ ತಮಿಳು ನಟ ಸಿದ್ಧಾರ್ಥ್‌ಗೆ ಕನ್ನಡಪರ ಹೋರಾಟಗಾರರು ಸುದ್ದಿಗೋಷ್ಠಿ ತಡೆದು ಅರ್ಧಕ್ಕೆ ಕಳುಹಿಸಿದ್ದರು. ಈ ವಿಚಾರವಾಗಿ ನಟ ಶಿವರಾಜ್‌ಕುಮಾರ್ ಸಿದ್ಧಾರ್ಥ್ ಅವರಿಗೆ ಬಹಿರಂಗ ವೇದಿಕೆಯಲ್ಲಿ ಕ್ಷಮೆ ಕೋರಿದ್ದಾರೆ.
Shivarajkumar: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರು ಬಂದ್ ಬಳಿಕ ಇಂದು (ಸೆ. 29) ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಚಿತ್ರೋದ್ಯಮವೂ ಶೂಟಿಂಗ್ ಸ್ಥಗಿತಗೊಳಿಸಿ ಸಾಥ್ ನೀಡಿದೆ. ಹೀಗಿರುವಾಗಲೇ ಗುರುವಾರ ಬೆಂಗಳೂರಿನಲ್ಲಿ ನಡೆದ ಘಟನೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.
ತಮಿಳು ನಟ ಸಿದ್ಧಾರ್ಥ್ ಅವರ ಚಿಕ್ಕು ಸಿನಿಮಾ ಕನ್ನಡ ಭಾಷೆಗೆ ಡಬ್ ಆಗಿ ಬಿಡುಗಡೆ ಆಗಿದೆ. ಈ ಸಿನಿಮಾ ಪ್ರಚಾರಕ್ಕೆಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್‌ಆರ್‌ವಿ ಥಿಯೇಟರ್‌ಗೆ ಆಗಮಿಸಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ವಿಶೇಷ ಏನೆಂದರೆ, ತಮಿಳು ನಟನಾದರೂ, ಕನ್ನಡದಲ್ಲಿಯೇ ಮಾತು ಆರಂಭಿಸಿ ಕನ್ನಡ ಪ್ರೇಮವನ್ನು ಹೊರಹಾಕಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಕನ್ನಡಪರ ಹೋರಾಟಗಾರರು ಪತ್ರಿಕಾಗೋಷ್ಠಿ ಸ್ಥಗಿತಗೊಳಿಸಿ ನಟನನ್ನು ಹೊರಕ್ಕೆ ಕಳಿಸಿದ್ದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದಷ್ಟೇ ಅಲ್ಲದೆ, ಕರವೇ ಕಾರ್ಯಕರ್ತರ ನಡೆಯ ಬಗ್ಗೆ ಟೀಕೆಗಳೂ ಕೇಳಿಬಂದಿದ್ದವು. ಅದೇ ರೀತಿ ನಟನಿಗಾದ ಈ ಅವಮಾನವನ್ನು ನಟ ಶಿವಣ್ಣ ಖಂಡಿಸಿದ್ದಾರೆ. ಸಂಘಟನೆಯವರು ಈ ರೀತಿ ಮಾಡುವುದು ತಪ್ಪೆಂದು ಹೇಳಿ, ನಟ ಸಿದ್ಧಾರ್ಥ್ ಬಳಿ ಕಾವೇರಿ ಹೋರಾಟದ ವೇದಿಕೆ ಮೇಲೆಯೇ ನಟ ಶಿವರಾಜ್‌ಕುಮಾರ್ ಕ್ಷಮೆ ಕೇಳಿದ್ದಾರೆ.
ಸಮಸ್ಯೆಯನ್ನು ಹೃದಯದಿಂದ ಆಲಿಸಿ ತಲೆಯಿಂದಲ್ಲ..
"ಸಮಸ್ಯೆಗಳನ್ನು ನುಂಗಬೇಕು. ಸಮಸ್ಯೆ ಇದೆ. ಅದನ್ನು ಮೊದಲು ಕುಳಿತು ಯೋಚನೆ ಮಾಡಬೇಕು. ಕುಳಿತು ಮಾತನಾಡಬೇಕು. ಪರಿಸ್ಥಿತಿ ನೋಡಿ ನಾವು ಅಡ್ವಾಂಟೇಜ್ ತೆಗೆದುಕೊಳ್ಳಬಾರದು. ಆ ಸಮಸ್ಯೆಯನ್ನು ಹೃದಯದಿಂದ ಆಲಿಸಬೇಕು. ತಲೆಯಿಂದಲ್ಲ. ಸಮಸ್ಯೆ ಬಂತು ಅಂತ ಎದೆಕೊಟ್ಟು ನಿಂತು ಬಿಡುವುದು ಹೋರಾಟ ಅಲ್ಲ. ಏನೇ ಮಾಡಿದರೂ, ಇನ್ನೊಬ್ಬರಿಗೆ ಹರ್ಟ್ ಆಗಬಾರದು. ಇನ್ನೊಬ್ಬರ ಭಾವನೆಗಳಿಗೆ ದಕ್ಕೆ ತರಬಾರದು"
ದಯವಿಟ್ಟು ಕ್ಷಮಿಸಿ ಸಿದ್ಧಾರ್ಥ್
ನಿನ್ನೆ ನಡೆದ ಈ ವಿಚಾರ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥ್ ಅವರಿಗೆ ನಾವು ಕ್ಷಮೆ ಕೇಳುತ್ತೇವೆ. ಸಿದ್ಧಾರ್ಥ್ ವಿ ರಿಯಲಿ ಸಾರಿ. ನಮಗೆ ಬಹಳ ನೋವಾಗಿದೆ. ಈ ತಪ್ಪು ಮತ್ಯಾವತ್ತೂ ಆಗುವುದಿಲ್ಲ. ಕನ್ನಡ ಜನ ತುಂಬ ಒಳ್ಳೆಯವರು, ಅವರು ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ಎಲ್ಲ ಭಾಷೆಯ ಸಿನಿಮಾಗಳನ್ನೂ ನೋಡುವ ಜನ ಅಂದ್ರೆ ಅದು ಕರ್ನಾಟಕದವರು. ಈ ವಿಚಾರವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಮರ್ಯಾದೆಯನ್ನು ನಾವು ಕಾಪಾಡಿಕೊಳ್ಳಬೇಕು.
ನಾವೆಲ್ಲರೂ ಒಂದೇ..
ಕಾವೇರಿ ನಮಗೂ ತಾಯಿ ಇದ್ದಂತೆ, ಈ ಹೋರಾಟಕ್ಕೆ ಚಿತ್ರರಂಗದಿಂದ ಅವರ್ಯಾಕೆ ಬರಲಿಲ್ಲ. ಇವರ್ಯಾಕೆ ಬರಲಿಲ್ಲ ಎನ್ನಬೇಡಿ. ಇದೀಗ ನಾವೆಲ್ಲರೂ ಬಂದಿದ್ದೇವೆ. ನಾವೆಲ್ಲರೂ ಒಂದೇ. ಮನಸ್ತಾಪಗಳು ಇರಬಹುದು. ಎಲ್ಲಿ ಜಗಳ ಇರುತ್ತೋ ಅಲ್ಲಿ ಪ್ರೀತಿ ಇದ್ದೇ ಇರುತ್ತದೆ. ಹಾಗಾಗಿ ಸಮಸ್ಯೆಗೆ ಪರಿಹಾರ ಹುಡುಕಿ. ಒಳ್ಳೆಯ ಮನಸ್ಸಿನಿಂದ ಮಾಡಿ, ಎಲ್ಲರೂ ಕಾವೇರಿ ಜತೆ ಇದ್ದೇ ಇರುತ್ತೇವೆ. ಸರ್ಕಾರಗಳು ಒಟ್ಟಿಗೆ ಕುಳಿತು ಮಾತನಾಡಲಿ" ಎಂದಿದ್ದಾರೆ ಶಿವರಾಜ್‌ಕುಮಾರ್.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ