logo
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಎಸ್‌ಐಟಿ ಸಿಎಂ, ಡಿಸಿಎಂ ಏಜೆಂಟ್‌, ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಕ್ರಮ ಏಕಿಲ್ಲ: ಎಚ್‌ಡಿಕೆ ಗಂಭೀರ ಪ್ರಶ್ನೆ

Hassan Scandal: ಎಸ್‌ಐಟಿ ಸಿಎಂ, ಡಿಸಿಎಂ ಏಜೆಂಟ್‌, ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಕ್ರಮ ಏಕಿಲ್ಲ: ಎಚ್‌ಡಿಕೆ ಗಂಭೀರ ಪ್ರಶ್ನೆ

Umesha Bhatta P H HT Kannada

May 07, 2024 04:03 PM IST

google News

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ

    • ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ರಚಿಸಿರುವ ವಿಶೇಷ ತನಿಖಾ ತಂಡವು ಸಿಎಂ ಹಾಗೂ ಡಿಸಿಎಂ ಏಜೆಂಟ್‌ ರೀತಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ

ಬೆಂಗಳೂರು: ಹಾಸನದಲ್ಲಿ ನಡೆದಿರುವ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ದದ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ( SIT) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಏಜೆಂಟರಂತೆ ಕೆಲಸ ಮಾಡುತ್ತಿದೆ. ಪೆನ್‌ಡ್ರೈವ್‌ ಇಲ್ಲವೇ ವಿಡಿಯೋ ತುಣುಕುಗಳನ್ನು ಹಂಚುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳುವ ವಿಶೇಷ ತನಿಖಾ ತಂಡ ಈಗಾಗಲೇ ಲಕ್ಷಕ್ಕೂ ಅಧಿಕ ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಕ್ರಮ ಕೈಗೊಂಡಿಲ್ಲ. ಇಡೀ ಪ್ರಕರಣವನ್ನು ಸಿಬಿಐ ಇಲ್ಲವೇ ಎಸ್‌ಐಟಿ ಬದಲು ನ್ಯಾಯಮೂರ್ತಿಗಳೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಹಾಸನದ ಪ್ರಕರಣವಾಗಿ ವಿವರವಾಗಿ ಮಾತನಾಡಿದರು.

ದೊಡ್ಡ ಪಿತೂರಿ

ಹಾಸನದ ಪೆನ್‌ಡ್ರೈವ್‌ ಪ್ರಕರಣದ ಹಿಂದೆ ದೊಡ್ಡ ಪಿತೂರಿ ಎನ್ನುವ ಅನುಮಾನ ನನಗೆ ಇತ್ತು. ಈ ಪ್ರಕರಣ ಹೊರ ಬರುತ್ತಿದ್ದಂತೆ ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ ಹೊರಡಿಸಿತು. ಆಗ ಎಸ್‌ಐಟಿಯಿಂದ ನ್ಯಾಯ ಸಿಗಬಹುದು. ಸರಿಯಾಗಿ ತನಿಖೆಯಾಗಬಹುದು ಎಂದುಕೊಂಡಿದ್ದೆ. ಆದರೆ ಎಸ್‌ಐಟಿ ತನಿಖೆ ಎನ್ನುವುದು ನಾವು ಅಂದುಕೊಂಡಂತೆ ಆಗುತ್ತಿಲ್ಲ. ಇಡೀ ತನಿಖೆಯು ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಅವರ ತನಿಖಾ ತಂಡವಾಗಿ ಮಾರ್ಪಟ್ಟಿದೆ. ಇದರಿಂದ ನಾವು ನ್ಯಾಯಯುತ ತನಿಖೆ ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ಆರೋಪಿಸಿದರು.

ಮಂಡ್ಯದಲ್ಲೂ ಹಂಚಿಕೆ

ಮಂಡ್ಯ, ಹಾಸನ, ರಾಮನಗರ ಭಾಗದಲ್ಲಿ ಚುನಾವಣೆಗೆ ಮುನ್ನವೇ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಲಾಗಿದೆ. ಈ ಅವಧಿಯಲ್ಲಯೇ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಮಾಹಿತಿ ಇದೆ. ಇಷ್ಟೇ ಅಲ್ಲದೇ ಪೆನ್ ಡ್ರೈವ್ ಹಂಚಿಕೆಗೆ ಡಿಸಿ ಹಾಗೂ ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಪೆನ್ ಡ್ರೈವ್ ಹಂಚಿದವವರಿಗೆಲ್ಲಾ ಕೋಟಿಗಟ್ಟಲೇ ಹಣ ಹೋಗಿದೆ. ಹಂಚಿಕೆ ಪ್ರಮುಖ ಸೂತ್ರಧಾರಿ ಎನ್ನಿಸಿರುವ ಹಾಸನದ ನವೀನ್ ಗೌಡ, ಹಾಗೂ ಹಂಚಿಕೆ ಮಾಡಿದ್ದ ಕಾರ್ತಿಕ್ ಗೌಡ ವಿರುದ್ದ ದೂರು ನೀಡಿದರೂ ಕ್ರಮ ಯಾಕೆ ಕೈಗೊಂಡಿಲ್ಲ. ತಡೆಯಾಜ್ಞೆ ತಂದರೂ ಹಂಚಿಕೆ ಮಾಡಲು ಕುಮ್ಮಕ್ಕು ನೀಡಿದವರು ಯಾರು? ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ ಈಗ ಎಲ್ಲಿದ್ದಾನೆ. ಕೇವಲ ರೇವಣ್ಣ, ಪ್ರಜ್ವಲ್ ರೇವಣ್ಣ ಮಾತ್ರ ತನಿಖೆ ಮಾಡುತ್ತೀರಾ.? ಕಾರ್ತಿಕ್ ಗೌಡನನ್ನೂ ಅರೆಸ್ಟ್ ಮಾಡಲಿಲ್ಲ. ಸರಿಯಾಗಿ ತನಿಖೆ ಮಾಡಿ ನ್ಯಾಯ ನೀಡುತ್ತೀರಾ ಎಂದು ಎಸ್‌ಐಟಿ ಅಧಿಕಾರಿಗಳನ್ನು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿಎಂ ಡಿಸಿಎಂ ಸಂಚುಗಾರರು

ನನ್ನ ತಂದೆ ದೇವೇಗೌಡರು ಹಾಗೂ ತಾಯಿ ಅವರ ಆರೋಗ್ಯ ಹಿನ್ನೆಲೆಯಲ್ಲಿ ನಾನು ಮನೆಗೆ ಮೂರು ದಿನದ ಹಿಂದೆ ಭೇಟಿ ಕೊಟ್ಟಿದ್ದೆ.ನಾನು ದೇವೇಗೌಡರ ಬಳಿ ಯಾವ ವಕೀಲರನ್ನು ಕರೆದುಕೊಂಡು ಹೋಗಿದ್ದೇನೆ ಎನ್ನುವುದನ್ನು ಹೇಳಲಿಲ್ಲ. ಎಚ್ ಡಿ ಕೆ, ರೇವಣ್ಣ ಕುಟುಂಬದ ಸಂಘಟಿತ ಪಾಪ ಕೃತ್ಯ ಎಂದು ಸಿಎಂ ಆರೋಪಿಸಿರುವುದನ್ನು ಗಮನಿಸಿದ್ದೇನೆ. ಡಿಕೆ ಶಿವಕುಮಾರ್ ಕೂಡ ಇಂತಹ ಸಂಚು ರೂಪಿಸುವಲ್ಲಿ ನಿಸ್ಸೀಮರು. ದೇವೇಗೌಡರ ಕುಟುಂಬವನ್ನೇ ಮುಗಿಸಬೇಕು ಎನ್ನುವ ಉದ್ದೇಶದೊಂದಿಗೆ ನಡೆಸಿರುವ ಸಂಚಿನ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಎಸ್ ಐ ಟಿ ಅಧಿಕಾರಿಗಳು ಸಿಎಂ, ಡಿಸಿಎಂ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ‌ ಎಂದು ಆಪಾದಿಸಿದರು.

ನ್ಯಾಯಾಂಗ ತನಿಖೆಯಾಗಲಿ

ಇಡೀ ಪ್ರಕರಣವನ್ನು ಎಸ್‌ಐಟಿ, ಸಿಬಿಐ ಬದಲು ನ್ಯಾಯಾಂಗ ತನಿಖೆಗೆ ಒಪ್ಪಿಸುವುದು ಒಳಿತು. ಆಗ ಮಾತ್ರ ಈ ಪ್ರಕರಣದ ಸರಿಯಾಗಿ ತನಿಖೆಯಾಗಲು ಸಾಧ್ಯ ಎಂದು ಎಚ್‌ಡಿಕೆ ಹೇಳಿದರು.

ಇದೇ ವೇಳೆ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋ ಬಗ್ಗೆ ಪೆನ್‌ ಡ್ರೈವ್‌ ಹಂಚಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ನವೀನ್ ಗೌಡ ಮತ್ತು ಆತನ ಸ್ನೇಹಿತರು ಮಾತನಾಡಿರುವ ಆಡಿಯೋ ಹಾಗೂ ನವೀನ್ ಗೌಡ ಕಾಂಗ್ರೆಸ್ ನಾಯಕರ ಜೊತೆಗಿದ್ದ ಫೋಟೊವನ್ನು ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ