Ugadi 2024: ಯುಗಾದಿ ಹಬ್ಬಕ್ಕೆ ಖರೀದಿ ಭರಾಟೆ, ಹೂವು, ಹಣ್ಣು, ತರಕಾರಿ ಬೆಲೆ ಹೇಗಿದೆ
Apr 08, 2024 07:09 PM IST
ಬೆಂಗಳೂರಿನಲ್ಲಿ ಖರೀದಿ ಭರಾಟೆ ಜೋರು.
- ಯುಗಾದಿ ಹಬ್ಬದ ಮುನ್ನಾ ದಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ. ಬೆಂಗಳೂರು ಸಹಿತ ಯಾವ ಊರಿನಲ್ಲಿ ಖರೀದಿ ಹೇಗಿತ್ತು.. ಇಲ್ಲಿದೆ ವಿವರ..
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಹಬ್ಬಗಳು ಬಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಮುಖಿಯಾಗುತ್ತದೆ. ಈ ಬಾರಿ ಎರಡು ಕಾರಣಗಳಿಗಾಗಿ ಬೆಲೆ ಮತ್ತಷ್ಟು ಏರಿಕೆಯಾಗಿದೆ. ನಾಳೆ ಆಚರಿಸುವ ಯುಗಾದಿ ಒಂದು ಕಾರಣವಾದರೆ ನೀರಿನ ಅಭಾವದಿಂದಾಗಿ ಹೂ, ಹಣ್ಣು ಮತ್ತು ತರಕಾರಿ ಇಳುವರಿ ಕಡಿಮೆಯಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಹಕರ ಪಾಲಿಗೆ ಸಿಹಿಗಿಂತ ಕಹಿಯೇ ಹೆಚ್ಚು ಎನ್ನುವಂತಾಗಿದೆ.
ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್, ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಸಂಚರಿಸಿದಾಗ ಹೂ ಹಣ್ಣು ತರಕಾರಿ ಬೆಲೆ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿರುವುದು ಕಂಡು ಬಂದಿದೆ. ಮಳೆ ಇಲ್ಲದೆ ನೀರಿನ ಕೊರತೆ ಉಂಟಾಗಿರುವುದು. ಅಂತರ್ಜಲ ಕುಸಿತ, ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ಬೆಲೆ ವಿಪರೀತ ಹೆಚ್ಚಳವಾಗಿದೆ ಎಂದು ಮಾರಾಟಗಾರರರು ಹೇಳುತ್ತಾರೆ.
ಬೆಂಗಳೂರಿಗೆ ಹೂ, ಹಣ್ಣು ತರಕಾರಿ ಕೋಲಾರ, ಹೊಸಕೋಟೆ, ಮಂಡ್ಯ, ಮೈಸೂರು ಮತ್ತು ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಸರಬರಾಜಾಗುತ್ತದೆ. ಆದರೆ ಮಳೆಯ ಅಭಾವದಿಂದ ಅಷ್ಟಾಗಿ ಸರಬರಾಜಾಗುತ್ತಿಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.
ಹಬ್ಬ ಎಂದರೆ ಮಾರುಕಟ್ಟೆಗಳಲ್ಲಿ ಜನಜಂಗುಳಿ ಗಿಜಗುಡುತ್ತಿರುತ್ತದೆ. ಕಾಲಿಡಲೂ ಜಾಗ ಇರುವುದಿಲ್ಲ. ಆದರ ಈ ಬಾರಿ ಮಾರುಕಟ್ಟೆಗಳು ಬಣಗುಡುತ್ತಿವೆ. ಗ್ರಾಹಕರಿಗೆ ವ್ಯಾಪಾರಿಗಳು ಗ್ರಾಹಕರಿಗಾಗಿ ಕಾಯ್ದು ಕುಳಿತಿರುವ ದೃಶ್ಯಗಳೂ ಸಾಮಾನ್ಯವಾಗಿದ್ದವು.
ಸಾಲು ಸಾಲು ರಜಾ ದಿನಗಳು ಇರುವುದರಿಂದ ಬಹುತೇಕ ನಿವಾಸಿಗಳು ಬೆಂಗಳೂರು ಖಾಲಿ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಬೆಂಗಳೂರಿನಿಂದ ಜನ ಹೋಗಲು ನೀರಿನ ಕೊರತೆ ಪ್ರಮುಖ ಕಾರಣ.
ಬೆಲೆ ಏರಿಕೆ
ಹಬ್ಬಕ್ಕೆ ಅಗತ್ಯವಾಗಿರುವ ಬಾಳೆ ಹಣ್ಣು, ಮಾವು ಮತ್ತು ಬೇವಿನ ಸೊಪ್ಪು, ತೆಂಗಿನ ಕಾಯಿ, ನಿಂಬೆಹಣ್ಣು ಬೆಲೆ ಏರಿಕೆಯಾಗಿದೆ.
ನಾಲ್ಕೈದು ದಿನಗಳ ಹಿಂದೆ 100 ರೂಪಾಯಿ ಇದ್ದ 1 ಕೆಜಿ ಗುಲಾಬಿ ಬೆಲೆ ಈಗ 400 ರೂ.ಗೆ ಏರಿಕೆಯಾಗಿದೆ. ಒಂದು ಕೇಜಿ ಸೇವಂತಿಗೆಗೆ 300 ರೂ ಆಸುಪಾಸು ಇದ್ದ ದರ ಇದೀಗ 500 ರಿಂದ 600 ರೂ ವರೆಗೆ ಏರಿಕೆಯಾಗಿದೆ. ಚೆಂಡು ಹೂವಿನ ಬೆಲೆ ಕೆಜಿಗೆ 100 ರೂ.ಗೆ ಹೆಚ್ಚಳವಾಗಿದೆ. ಸುಗಂಧರಾಜ ಹೂವಿನ ಬೆಲೆ 150 ರೂ ಗಡಿ ದಾಟಿದೆ. ಕನಕಾಂಬರ ಕೆಜಿಗೆ600 ಮಾರಾಟವಾಗುತ್ತಿತ್ತು. ಈಗ 800 ರೂ.ಗೆ ಹೆಚ್ಚಳವಾಗಿದೆ. ಕಾಕಡ ಕೆಜಿಗೆ 500 ರೂ, ತುಳಸಿ ಒಂದು ಮಾರಿಗೆ 100 ರೂ, ಬೇವು ಕಟ್ಟಿಗೆ 30 ರೂ, ಮಾವು 40 ರೂ ನಿಗದಿಯಾಗಿದೆ.
ಹಣ್ಣುಗಳ ದರದಲ್ಲೂ ಹೆಚ್ಚಳವಾಗಿದೆ. ಕೆಜಿಗೆ 70 ರೂ ಇದ್ದ ಕಿತ್ತಲೆ ಹಣ್ಣಿನ ಬೆಲೆ 120 ರೂ, ಪಪ್ಪಾಯ 50 ರೂ, ಮಾವಿನ ಹಣ್ಣು ಕೆಜಿಗೆ 150 ರೂ, ದ್ರಾಕ್ಷಿ 120 ರೂ, ಗೆ ಏರಿಕೆಯಾಗಿದೆ. ಇದ್ದುದರಲ್ಲಿ ಬಾಳೆ ಹಣ್ಣಿನ ಬೆಲೆ ಕಡಿಮೆ ಎಂದೇ ಹೇಳಬಹುದು. 40 ರಿಂದ 50 ರೂ ಗೆ ಲಭ್ಯವಾಗುತ್ತಿದೆ. ಸಪೋಟ 100 ರೂ, ಕಿವಿ ಹಣ್ಣು 3ಕ್ಕೆ 100 ರೂ, ದಾಳಿಂಬೆ ಕೆಜಿಗೆ 200 ರೂ, ಆಪಲ್ ಕೆಜಿಗೆ 220 ರೂ ಗೆ ಮಾರಾಟವಾಗುತ್ತಿದೆ.
ತರಕಾರಿ ಬೆಲೆಯೂ ಗಗನ ಮುಖಿ
ಇನ್ನು ತರಕಾರಿ ಬೆಲೆ ಮಾತನಾಡಿಸಲೂ ಭಯವಾಗುತ್ತದೆ. ಹಬ್ಬಕ್ಕೆ ಎಂದು ಬೆಲೆ ಏರಿಕೆಯಾಗಿರುವುದು ನಿಜವಾದರೂ ಮಳೆಯ ಅಭಾವದಿಂದಾಗಿ ಎರಡು ಮೂರು ತಿಂಗಳಿಂದ ತರಕಾರಿ ಬೆಲೆ ತುಸು ಹೆಚ್ಚೇ ಇದೆ. ಹುರಳಿಕಾಯಿ 120 ರೂ, ಬೆಂಡೆಕಾಯಿ 60 ರೂ, ಬದನೆಕಾಯಿ 40 ರೂ, ಟೊಮಟೊ 25 ರೂ, ಆಲೂಗೆಡ್ಡೆ 25 ರೂ, ಮೆಣಸಿನ ಕಾಯಿ 80 ರೂ, ಬಟಾಣಿ 60 ರೂ, ನುಗ್ಗೆಕಾಯಿ 2ಕ್ಕೆ 10 ರೂಗೆ ಮಾರಾಟವಾಗುತ್ತಿದೆ. ಮತ್ತೊಂದು ಕಡೆ ಗ್ರಾಹಕರ ಕೊರತೆಯೂ ವ್ಯಾಪಾರಿಗಳನ್ನು ಆತಂಕಕ್ಕೀಡು ಮಾಡಿದೆ.
ಸಾಲು ಸಾಲು ರಜೆ, ಬಿಸಿಲ ಬೇಗೆ ಮತ್ತು ನೀರಿನ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಜನರೇ ಇಲ್ಲವಾಗಿದೆ. ಮಾರುಕಟ್ಟೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹಾಕಿರುವ ಬಂಡವಾಳ ಬಂದರೆ ಸಾಕಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಮೈಸೂರು, ಮಂಗಳೂರು, ಧಾರವಾಡ, ಶಿವಮೊಗ್ಗ, ಬೆಳಗಾವಿ, ಕಲಬುರಗಿ, ದಾವಣಗೆರೆ, ತುಮಕೂರು ಸಹಿತ ಪ್ರಮುಖ ನಗರಗಳಲ್ಲೂ ಇದೇ ರೀತಿ ಹಣ್ಣು, ಹೂವು, ತರಕಾರಿ ಬೆಲೆ ಏರಿಕೆಯಾಗಿದೆ.
ಹಬ್ಬ ಬಂದಾಗ ಬೆಲೆ ಸಹಜವಾಗಿ ಏರಿಕೆಯಾಗುತ್ತದೆ. ಈ ಬಾರಿ ಹಿಂದಿನ ಯುಗಾದಿಗಿಂತ ದರಗಳು ಹೆಚ್ಚಾಗಿವೆ. ಹಬ್ಬ ಆಚರಿಸಲೇಬೇಕಲ್ಲವೇ. ಖರೀದಿ ಮಾಡಲೇಬೇಕು. ಎಷ್ಟು ಹಣವಾದರೂ ಯೋಚಿಸುವುದಿಲ್ಲ ಎಂದು ಗ್ರಾಹಕರು ಅಸಹನೆಯಿಂದಲೇ ಹೇಳುತ್ತಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)