Yugadi 2024: ಯುಗಾದಿ ಹಬ್ಬದಂದು ಮನೆ ಅಲಂಕಾರಕ್ಕಿದೆ ವಿಶೇಷ ಮಹತ್ವ, ಹಬ್ಬದ ಸಂಭ್ರಮ ಹೆಚ್ಚಲು ಹೀಗಿರಲಿ ಮನೆಯ ಸಿಂಗಾರ
Apr 08, 2024 05:18 PM IST
ಯುಗಾದಿ ಹಬ್ಬದ ಸಂಭ್ರಮ ಹೆಚ್ಚಲು ಹೀಗಿರಲಿ ಮನೆಯ ಸಿಂಗಾರ
- ಹಿಂದೂಗಳಿಗೆ ಯುಗಾದಿ ಹಬ್ಬ ಬಹಳ ವಿಶೇಷ. ಈ ಹಬ್ಬದ ದಿನದಂದು ಮನೆಯನ್ನು ಸುಂದರವಾಗಿ ಅಲಂಕರಿಸುವುದಕ್ಕೆ ವಿಶೇಷ ಮಹತ್ವವಿದೆ. ಇದರಿಂದ ಮುಂಬರುವ ದಿನಗಳಲ್ಲಿ ಒಳಿತಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ ಯುಗಾದಿ ದಿನ ಮನೆಯ ಅಲಂಕಾರ ಹೇಗಿರಬೇಕು ನೋಡಿ.
ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪಂಚಾಗದ ಪ್ರಕಾರ ಯುಗಾದಿ ಹಬ್ಬದ ದಿನದಿಂದ ಹೊಸ ಸಂವತ್ಸರ ಅಂದರೆ ಹೊಸ ವರ್ಷ ಆರಂಭವಾಗುತ್ತದೆ. ಈ ಹಬ್ಬದಂದು ಬೇವು ಬೆಲ್ಲ ಹಂಚಿ, ವಿವಿಧ ಖಾದ್ಯಗಳನ್ನು ತಯಾರಿಸುವ ಜೊತೆಗೆ ಮನೆ ಅಲಂಕಾರಕ್ಕೂ ವಿಶೇಷ ಮಹತ್ವವಿದೆ. ಈ ದಿನ ತಳಿರು ತೋರಣಗಳಿಂದ ಮನೆ ಅಲಂಕಾರ ಮಾಡಬೇಕು. ಹೀಗೆ ಅಲಂಕಾರ ಮಾಡುವುದರಿಂದ ಮುಂದಿನ ದಿನಗಳಲ್ಲಿ ಶುಭವಾಗುತ್ತದೆ ಎಂಬ ನಂಬಿಕೆಯೂ ಇದೆ.
ಯುಗಾದಿ ದಿನ ಮನೆಯ ಮುಖ್ಯದ್ವಾರದಲ್ಲಿ ಮಾವಿನ ಎಲೆಗಳ ಜೊತೆಗೆ ಇತರ ಅಲಂಕಾರಿಕ ವಸ್ತುಗಳನ್ನು ಇರಿಸುವ ಮೂಲಕ ಅತಿಥಿಗಳನ್ನು ಸ್ವಾಗತಿಸಬೇಕು.
ರಂಗೋಲಿ ಹಾಕಲು ಮರೆಯದಿರಿ
ಯುಗಾದಿ ಹಬ್ಬದಲ್ಲಿ ಮನೆಯ ಬಾಗಿಲಿಗೆ ತೋರಣ ಕಟ್ಟುವ ಜೊತೆಗೆ ಮನೆಯ ಮುಂದೆ ರಂಗೋಲಿ ಇರಿಸುವುದು ಮುಖ್ಯ. ಹೊಸ ಹೊಸ ವಿನ್ಯಾಸದ ರಂಗೋಲಿಯನ್ನು ಮನೆಯ ಮುಂದೆ ಬಿಡಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ನಿಮಗೆ ರಂಗೋಲಿ ಬಿಡಿಸಲು ಬರುವುದಿಲ್ಲ ಎಂದಾದರೆ ಅಚ್ಚಿನ ಸಹಾಯದಿಂದ ರಂಗೋಲಿ ಬಿಡಿಸಬಹುದು. ಈಗ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಫ್ಲೋರ್ ಆರ್ಟ್ ಸ್ಟೆನ್ಸಿಲ್‌ಗಳು ಲಭ್ಯವಿವೆ. ಈ ಸ್ಟೆನ್ಸಿಲ್ ಅಥವಾ ರಂಗೋಲಿ ಅಚ್ಚಿಗೆ ಬಣ್ಣಗಳನ್ನು ತುಂಬಿದರೆ, ನಿಮ್ಮ ಮನೆ ಬಾಗಿಲಿನಲ್ಲಿ ಸುಂದರ ರಂಗೋಲಿ ಚಿತ್ತಾರ ಮೂಡುತ್ತದೆ. ರಂಗೋಲಿ ಇರಿಸಿಲು ಸಾಧ್ಯವಾದಷ್ಟೂ ನೈಸರ್ಗಿಕ ಬಣ್ಣಗಳನ್ನು ಬಳಸಲು ಮರೆಯಬೇಡಿ. ರಾಸಾಯನಿಕಗಳನ್ನು ಬಣ್ಣಗಳಿಂದ ದೂರ ಇರುವುದು ನಿಮ್ಮ ಆರೋಗ್ಯಕ್ಕೂ ಉತ್ತಮ.
ಡೋರ್ ಹ್ಯಾಂಗಿಂಗ್ಸ್
ಮನೆಯ ಮುಂಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟುವ ಜೊತೆಗೆ ಕೊಂಚ ಆಧುನಿಕ ಸ್ಪರ್ಶ ನೀಡಿ. ಇದಕ್ಕಾಗಿ ನೀವು ಬಾಗಿಲಿಗೆ ವೆರೈಟಿ ಹ್ಯಾಗಿಂಗ್‌ಗಳನ್ನು ಜೋಡಿಸಬಹುದು. ಮರದಿಂದ ಮಾಡಿದ ವಿಶೇಷ ರೀತಿಯ ಸಾಂಪ್ರದಾಯಿಕ ಹ್ಯಾಂಗಿಂಗ್‌ಗಳು ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಅದನ್ನು ಮನೆಯ ಮುಂದೆ ನೇತು ಹಾಕಿ. ಅತಿಥಿಗಳು ಮತ್ತು ಸಂಬಂಧಿಕರಿಗೆ ಕಿರಿಕಿರಿಯಾಗದಂತೆ ಮನೆಯನ್ನು ಹ್ಯಾಂಗಿಂಗ್‌ಗಳಿಂದ ಅಲಂಕರಿಸಿ. ಅಲ್ಲದೇ ಇದು ಮನೆಯ ಅಂದವನ್ನು ಹೆಚ್ಚಿಸುವಂತಿರಬೇಕು.
ಮಾವು ಮತ್ತು ಬೇವಿನ ಎಲೆಗಳು
ಯುಗಾದಿ ಎಂದರೆ ಮಾವು ಮೊಳಕೆಯೊಡೆಯುವ ಸಮಯ. ವರ್ಷದ ಮೊದಲ ಹಿಂದೂ ಹಬ್ಬಕ್ಕೆ ಪ್ರಕೃತಿಯೂ ಸಿದ್ಧವಾಗುತ್ತಿರುವ ಸಮಯವಿದು. ಇದೇ ಕಾರಣಕ್ಕೆ ಅನಾದಿ ಕಾಲದಿಂದಲೂ ಮಾವಿನ ಎಲೆಗಳನ್ನು ಮನೆ ಬಾಗಿಲಿಗೆ ಹಾಕುವ ಸಂಪ್ರದಾಯವಿದೆ. ಬೇವಿನ ಸೊಪ್ಪಿನಿಂದ ಅಲಂಕರಿಸುವುದು ಕೂಡ ವಾಡಿಕೆ. ಮಾವು ಮತ್ತು ಬೇವಿನ ಮರವು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ನಕಾರಾತ್ಮಕ ಶಕ್ತಿಯಿಂದ ದೂರವಿರಲು ಇದು ತುಂಬಾ ಒಳ್ಳೆಯದು. ರಂಗವಲ್ಲಿಯಲ್ಲೂ ಮಾವು, ಬೇವಿನ ಸೊಪ್ಪನ್ನು ಬಳಸಬಹುದು. ಇದನ್ನು ಕಮಾನಿನಂತೆ ಮಾಡಿ ಮನೆಯ ಬಾಗಿಲಿಗೆ ತೂಗು ಹಾಕಬಹುದು. ಇದು ವಾಸ್ತುಪ್ರಕಾರವೂ ತನ್ನದೇ ಆದ ಮಹತ್ವವನ್ನು ಹೊಂದಿದೆ.
ಬಾಳೆ ಗಿಡಗಳಿಂದ ಅಲಂಕಾರ
ಬಾಳೆಗಿಡವು ಧಾರ್ಮಿಕ ಆಚರಣೆಗಳ ಭಾಗವಾಗಿರದೆ ಸಾಂಪ್ರದಾಯಿಕ ಯುಗಾದಿ ಆಚರಣೆಗಳ ಭಾಗವಾಗಿದೆ. ನಿಮ್ಮ ಮನೆಯ ಮುಂಭಾಗವನ್ನು ಕೃತಕ ಬಾಳೆ ಮರದಿಂದ ಕೂಡ ಅಲಂಕರಿಸಬಹುದು. ಕೃತಕ ಬಾಳೆ ಮರಗಳಿಂದ ಅಲಂಕರಿಸಿದರೆ ಇನ್ನೂ ಉತ್ತಮವಾಗಿರುತ್ತದೆ, ಯಾಕೆಂದರೆ ಅವು ಒಣಗುವುದಿಲ್ಲ.
ತಾಮ್ರದ ಬಾಗಿಲು ಗಂಟೆಗಳು
ಯುಗಾದಿ ಅಲಂಕಾರಕ್ಕೆ ಮತ್ತೊಂದು ಉತ್ತಮ ಉಪಾಯವೆಂದರೆ ಬಾಗಿಲಿನ ಮೇಲೆ ಸಣ್ಣ ತಾಮ್ರದ ಗಂಟೆಗಳನ್ನು ನೇತುಹಾಕುವುದು. ತಾಮ್ರದ ಡೋರ್ ಬೆಲ್‌ಗಳನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವು ಮನೆಗಳಲ್ಲಿ ಅಲಂಕಾರಕ್ಕಾಗಿ ತಾಮ್ರದ ದೀಪಗಳನ್ನೂ ಕೂಡ ಬಳಸುತ್ತಾರೆ. ತಾಮ್ರದ ಗಾಳಿಗಂಟೆಗಳು ಮನೆಯ ಅಂದ ಹೆಚ್ಚಿಸುವ ಜೊತೆಗೆ ವಾಸ್ತುಪ್ರಕಾರ ಮನೆಗೆ ಶುಭವನ್ನ ತರುತ್ತದೆ.